CoreMile ಎಂಬ ಸ್ವಂತ ಕಂಪನಿಯ ಮೂಲಕ ಲಾಜಿಸ್ಟಿಕ್ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಶ್ರೀನಿಕೇತನ‌ ನಾಯಕ

300 ಕ್ಕೂ ಹೆಚ್ಚು ಜನರಿಗೆ ಉದ್ಯೋಗ: ವರ್ಷಕ್ಕೆ 12 ಕೋಟಿ ರೂ. ವಹಿವಾಟು

ಇತ್ತೀಚಿನ ವರ್ಷಗಳಲ್ಲಿ ಲಾಜಿಸ್ಟಿಕ್ಸ್ ಕ್ಷೇತ್ರ ಬಹಳ ಸವಾಲು ಮತ್ತು ಶ್ರಮದಾಯಕ ವಾದುದು. ಇದು ಹಿಂದೆ ಒಂದು ಉದ್ಯಮವಾಗಿತ್ತಷ್ಟೇ. ಆದರೆ ಈಗ ಗ್ರಾಹಕರ ಬೇಡಿಕೆ ಮತ್ತು ಬ್ರ್ಯಾಂಡ್ ಪ್ರತಿಷ್ಠೆಗೆ ಪ್ರಮುಖ ಮಾರ್ಗವಾಗಿದೆ. ಇಂದಿನ ವೇಗವಾದ ಡಿಜಿಟಲ್ ಆರ್ಥಿಕತೆಯಲ್ಲಿ, ಲಾಜಿಸ್ಟಿಕ್ಸ್ ಅಂದರೆ ಸರಕುಗಳನ್ನು ಸಾಗಿಸುವುದಷ್ಟೇ ಅಲ್ಲ, ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ಒಂದು ಉದ್ಯಮವಾಗಿದೆ. ಈ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುವ ಕಂಪನಿಗಳು ಸ್ಪರ್ಧಾತ್ಮಕ ಮುನ್ನಡೆಯನ್ನು ಪಡೆಯುತ್ತಿವೆ. ಅಂತಹ ತಂತ್ರಜ್ಞಾನಯುಕ್ತ ಸರಕು ಸಾಗಾಟದ ದಾರಿಯಲ್ಲಿ ಇದೀಗ CoreMile ತನ್ನದೇ ಆದ ಗುರುತು ಮೂಡಿಸುತ್ತಿದೆ.

ಈ CoreMile ಬಗ್ಗೆ ಯಾಕೆ ಇಷ್ಟೊಂದು ಪೀಠಿಕೆ ಅಂತೀರಾ? ಯಾಕೆಂದರೆ ಇದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸಗಡಗೇರಿ ಮೂಲದ ಯುವಕ ಶ್ರೀನಿಕೇತನ ಅವರು ಸ್ಥಾಪಿಸಿದ ಉದ್ಯೋಗ ಒದಗಿಸುವ ಹಾಗೂ ಮಹತ್ವಾಕಾಂಕ್ಷೆಯ ಕಂಪನಿ ಎಂಬ ಕಾರಣಕ್ಕೆ.

ವಿಶ್ರಾಂತ ಪೊಲಿಸ್ ವರಿಷ್ಠಾಧಿಕಾರಿ ಸಗಡಗೇರಿಯ ಬಿ.ವಿ. ನಾಯಕ ಹಾಗೂ ಸೀಮಾ ದಂಪತಿಗಳ ಮಗನಾಗಿರುವ, ಶ್ರೀನಿಕೇತನ ನಾಯಕ, ವಿಶ್ರಾಂತ ಚೀಪ್ ಇಂಜಿನಿಯರ್ ಆಗಿರುವ ಅಗ್ಗರಗೋಣದ ಪಿ.ಎನ್. ನಾಯಕ ಹಾಗೂ ಜಯಲಕ್ಷ್ಮಿ ನಾಯಕರ ಅಳಿಯ. ಬಿಇ, ಎಮ್.ಬಿ.ಎ. ಪದವೀಧರರಾಗಿರುವ ಇವರು ದಾಂಡೇಲಿಯ ಸೆಂಟ್ ಮೈಕಲ್ ಕಾನ್ವೆಂಟ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಬಾಲ್ಯದಿಂದಲೇ ಸಾಧನೆಯ ಕನಸು ಕಾಣುತ್ತಿದ್ದ ಶ್ರೀನಿಕೇತನ ಇಂದು ಲಾಜಿಸ್ಟಿಕ್ ಉದ್ಯಮದಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಬಿಇ, ಎಮ್.ಬಿ.ಎ. ಪದವೀಧರರಾಗಿ ಕಳೆದ ಆರು ವರ್ಷಗಳಿಂದ ಬೆಂಗಳೂರಲ್ಲಿ ಅಮೆಜಾನ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಶ್ರೀನಿಕೇತನ ಕೆಲಸ ಮಾಡುತ್ತಲೇ ಸ್ವಂತ ಉದ್ಯಮದ ಕನಸು‌ ಕಂಡವರು. ಅಮೇಜಾನ್ ಅನುಭವದಿಂದ ಲಾಸ್ಟ್ ಮೈಲ್ ಡೆಲಿವರಿ ಮತ್ತು ಹೈಪರ್‌ಲೋಕಲ್ ಫುಲ್ಫಿಲ್ಮೆಂಟ್ ಕ್ಷೇತ್ರಗಳಲ್ಲಿ ಇರುವ ಅಸಮರ್ಪಕತೆಗಳನ್ನು ಗುರುತಿಸಿದರು. ಇದರಿಂದ CoreMile ಅನ್ನು ಸ್ಥಾಪಿಸಿ, ಈ ಸಮಸ್ಯೆಗಳಿಗೆ ಪರಿಹಾರ ನೀಡುವ ಗುರಿಯನ್ನು ಹೊಂದಿದರು. ಲಾಸ್ಟ್ ಮೈಲ್ ಸೇವೆಯಿಂದ ಪ್ರಾರಂಭವಾದ ಸಂಸ್ಥೆ ಈಗ ಸಂಪೂರ್ಣ ಸರಬರಾಜು ಸರಪಳಿಯನ್ನು ಬೆಂಬಲಿಸುವ ಪ್ಲಾಟ್‌ಫಾರ್ಮ್ ಆಗಿ ಬೆಳೆದಿರುವ CoreMile ಇದೀಗ ಅದೇ ಅಮೇಜಾನ್ ಸಾರಿಗೆ ವಹಿವಾಟಿನ ದಾರಿಯಲ್ಲಿಯೇ ಮುನ್ನಡೆಯುತ್ತಿದೆ.

CoreMile ಎಂಬ ಕಂಪನಿ ಹುಟ್ಟು ಹಾಕಿ, ತನ್ನದೇ ಕಂಪನಿಯ ಸಿ.ಇ.ಓ. ಆಗಿ, ಇದೀಗ ಅಮೆಜಾನ್ ಜೊತೆಯಲ್ಲಿಯೇ ಪಾಲಗಾರಿಕೆಯ ವ್ಯವಹಾರವನ್ನೂ ನಡೆಸುವಷ್ಟರ ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಶ್ರೀನಿಕೇತನ ನಾಯಕ. ಇದು ಅಂಕೋಲೆಯ ಯುವಕನ ಒಂದು ಸಾಹಸಮಯವಾದ ಯಶೋಗಾಥೆ.

ಏನಿದು CoreMile:
CoreMile ಮೂಲತಃ ಕೇವಲ ಲಾಜಿಸ್ಟಿಕ್ಸ್ ಕಂಪನಿಯಷ್ಟೇ ಅಲ್ಲ. ತಂತ್ರಜ್ಞಾನ ಆಧಾರಿತ ಸರಬರಾಜು ಸರಪಳಿ ಸಕ್ರಿಯಗೊಳಿಸುವ ಸಂಸ್ಥೆಯೂ ಆಗಿದೆ. ಲಾಸ್ಟ್ ಮೈಲ್ ಡೆಲಿವರಿ, ಕ್ವಿಕ್ ಕಾಮರ್ಸ್, ಡಾರ್ಕ್ ಸ್ಟೋರ್‌ಗಳು, ಫುಲ್ಫಿಲ್ಮೆಂಟ್ ಸೆಂಟರ್‌ಗಳು ಮತ್ತು ಲೈನ್‌ಹಾಲ್ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಅದರ ವೈಶಿಷ್ಟ್ಯ ತಂತ್ರಜ್ಞಾನ ಮತ್ತು ತಳಮಟ್ಟದ ಕಾರ್ಯಾಚರಣೆಯ ಸಂಯೋಜನೆಯಲ್ಲಿದೆ. ಆರ್ಡಿಫಿಶಿಯಲ್ ಇಂಟಲಿಜನ್ಸಿ ಆಧಾರಿತ ಪ್ಲಾಟ್‌ಫಾರ್ಮನ್ನು ಸಂಯೋಜಿಸುವ ಮೂಲಕ, CoreMile ಸಂಸ್ಥೆ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. 50 ಕ್ಕೂ ಹೆಚ್ಚು ಪಿನ್ ಕೋಡ್‌ಗಳಲ್ಲಿ 500 ಕ್ಕೂ ಹೆಚ್ಚು ಫ್ಲೀಟ್ ಪಾಲುದಾರರೊಂದಿಗೆ ಮುನ್ನಡೆಯುತ್ತಿರುವ ಕಂಪನಿ ಪ್ರಸಕ್ತ ವರ್ಷದಲ್ಲಿ 12 ಕೋಟಿ ರು.ಗಳಷ್ಟರ ಆರ್ಥಿಕ ವ್ಯವಹಾರ ಮಾಡಿ ಲಾಜಿಸ್ಟಿಕ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದವರೂ ಹುಬ್ವೇರಿಸುವಂತೆ ಮಾಡಿದೆ.

ಕಡಿಮೆ ಅವಧಿಯಲ್ಲೇ CoreMile ಗಮನಾರ್ಹ ಸಾಧನೆಗಳನ್ನು ಮಾಡಿದೆ. 50+ ಪಿನ್ ಕೋಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 500+ ಫ್ಲೀಟ್ ಪಾಲುದಾರರು ಮತ್ತು 300 ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದೆ. 15 ಲಾಸ್ಟ್ ಮೈಲ್ ಹಬ್‌ಗಳು ಮತ್ತು 12 ಡಾರ್ಕ್ ಸ್ಟೋರ್‌ ಗಳೊಂದಿಗೆ ವೇಗವಾದ ಸೇವೆಯನ್ನು ಒದಗಿಸುತ್ತದೆ. ಆದರೆ ಈ ಅಂಕಿ-ಅಂಶಗಳಿಗಿಂತ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ತಮ್ಮ ಸಂಸ್ಥೆ ನಿರ್ಮಿಸಿದ ವಿಶ್ವಾಸವೇ ಬಹಳ ಮುಖ್ಯವಾದುದು ಎನ್ನುತ್ತಾರೆ ಕಂಪನಿಯ ಸಿಇಓ ಶ್ರೀನಿಕೇತನ‌ ನಾಯಕ.

CoreMile ತನ್ನ ಬೆಳವಣಿಗೆಯನ್ನು ಜಾಹೀರಾತುಗಳ ಮೂಲಕ ಸಾಧಿಸಿಲ್ಲ. ಬದಲಾಗಿ ವಿಶ್ವಾಸ ಮತ್ತು ಗುಣಮಟ್ಟದ ಸೇವೆಯ ಮೂಲಕ ಸಾಧಿಸಿದೆ. Amazon, Flipkart, Shadowfax, DTDC, LULU ಮುಂತಾದ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿದೆ. ತನ್ನದೇ ಆದ ನಾಯಕತ್ವ, ಹೊಣೆಗಾರಿಕೆ ಮತ್ತು ಕಾರ್ಯನಿಷ್ಠತೆಯ ಮೇಲೆ CoreMile ಕೆಲಸ ಮಾಡುತ್ತಿದೆ. ಡೇಟಾ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಮುಂದೆ, ಸಂಸ್ಥೆ ತನ್ನ ಜಾಲವನ್ನು ವಿಸ್ತರಿಸಿ, ತಂತ್ರಜ್ಞಾನ ಸಾಮರ್ಥ್ಯಗಳನ್ನು ಬಲಪಡಿಸಲು ಯೋಜಿಸಿದೆ. EV ವಾಹನಗಳ ಬಳಕೆಯ ಮೂಲಕ ಪರಿಸರ ಸಂರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡಿದೆ. ಭವಿಷ್ಯದಲ್ಲಿ ಬೇಡಿಕೆಯನ್ನು ಮುಂಚಿತವಾಗಿ ಊಹಿಸುವ ಮುನ್ಸೂಚಕ ಲಾಜಿಸ್ಟಿಕ್ ವ್ಯವಸ್ಥೆಯನ್ನು ನಿರ್ಮಿಸುವ ಗುರಿ ಹೊಂದಿರುವ
CoreMile ಸಾಧನೆ ನಿಜಕ್ಕೂ ಯುವ ಉದ್ಯಮಿಗಳಿಗೆ ಮಾರ್ಗದರ್ಶಿಯಾಗಿದೆ. ತನ್ನ ಅನುಭವ ಮತ್ತು ಸ್ವ ಸಾಮರ್ಥ್ಯದ ಮೂಲಕ ಇಂತಹದ್ದೊಂದು ಸಂಸ್ಥೆ ಹುಟ್ಟು ಹಾಕಿ, ತನ್ನ ದುಡಿಮೆಯ ಜೊತೆಗೆ ನೂರಾರು ಜನರಿಗೆ ಬದುಕು ನೀಡಿರುವ ಶ್ರೀನಿಕೇತನ ನಾಯಕ ಇಂದಿನ ಯುವ ಸಮಾಜಕ್ಕೆ ಖಂಡಿತವಾಗಿಯೂ ರೋಲ್ ಮಾಡೆಲ್ ಆಗಿ ನಿಲ್ಲುತ್ತಾರೆ.

ಇದು ಅನುಭವದ ದಾರಿ
ಇದು ನನ್ನ ಅನುಭವ, ಪ್ರಯತ್ನ ಮತ್ತು ಮಹತ್ವಾಕಾಂಕ್ಷೆಯಿಂದಾಗಿ ಜನ್ಮವೆತ್ತ ಸಂಸ್ಥೆ. ನಾನು ಅಮೇಜಾನ್ ನಲ್ಲಿ ಕಾರ್ಯ ನಿರ್ವಹಿಸುವಾಗ ಅಲ್ಲಿಯ ಸೂಕ್ಷ್ಮ ತೊಡಕುಗಳನ್ನು ಅರಿತು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನೊಳಗೊಂಡು ಸ್ಥಾಪಿಸಿದ ಸಂಸ್ಥೆ. ಇದನ್ನು ಇನ್ನೂ ಪರಿಣಾಮಕಾರಿಯಾಗಿ ಸಾಧ್ಯವಾದರೆ ಜಾಗತಿಕವಾಗಿ ವಿಸ್ತರಿಸುವ ಹಾಗೂ ಈ ಸಂಸ್ಥೆಯ ಮೂಲಕ ಇನ್ನೂ ಹೆಚ್ಚಿನ ಜನರಿಗೆ ಬದುಕು ಕಲ್ಪಿಸುವ ವಿಚಾರವಿದೆ ಎನ್ನುತ್ತಾರೆ CoreMile ಸಿ.ಇ.ಓ. ಶ್ರೀನಿಕೇತನ ನಾಯಕ. ಈ ಸಾಧಕನಿಗೊಂದು ಎಲ್ಲರ ಮೆಚ್ಚುಗೆಯಿರಲಿ.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*