ಸೇವಾ ನಿವೃತ್ತಿಗೊಂಡ ಆದರ್ಶ ಶಿಕ್ಷಕ ಎಂ.ಎಸ್.ಹೆಗಡೆ

ಒಬ್ಬ ಸಾಮಾನ್ಯ ಶಿಕ್ಷಕ ಆದರ್ಶ ಶಿಕ್ಷಕನಾಗಿ ಹೊರಹೊಮ್ಮುವುದು ಸುಲಭದ ಕೆಲಸವಲ್ಲ. ಹಾಗೆ ಅದು ಕಷ್ಟವೂ ಅಲ್ಲ. ನಮ್ಮೊಳಗೊಂದು ಕ್ರಿಯಾಶೀಲ ಚೈತನ್ಯ ನೆಲೆಗೊಂಡಾಗ ಮಾತ್ರ ಆದರ್ಶ ಶಿಕ್ಷಕನಾಗಲು ಸಾಧ್ಯ.ಈ ರೀತಿಯ ಕ್ರಿಯಾಶೀಲ ಚೈತನ್ಯವನ್ನು ವಿದ್ಯಾರ್ಥಿಗಳ ಕಲಿಕಾ ಸಮಯದಲ್ಲಿಯೇ ಬಿತ್ತಿ ಬೆಳೆದರೆ ಆಗ ಆ ಶಿಕ್ಷಕ ವಿದ್ಯಾರ್ಥಿಯ ಎದೆಯ ಗೂಡಲ್ಲಿ ಶಾಶ್ವತವಾದ ಸ್ಥಾನ ಪಡೆಯುತ್ತಾನೆ. ಇಂತಹ ಅಪರೂಪದ ಓರ್ವ ಶಿಕ್ಷಕ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಅಧ್ಯಾಪಕರಾಗಿ ಎಲ್ಲರ ಪ್ರೀತಿಗೆ ಪಾತ್ರರಾದವರು ಮಹಾಬಲೇಶ್ವರ ಹೆಗಡೆಯವರು. ಎಂ.ಎಸ್.ಹೆಗಡೆ ಅಂತಲೇ ತಾಲೂಕಿನಾದ್ಯಂತ ಪರಿಚಿತರು.

ವಿದ್ಯೆ, ವಿನಯತೆ, ಸಜ್ಜನಿಕೆ, ಸರಳತೆ, ಮಾನವೀಯತೆ, ಅಧ್ಯಾತ್ಮ ಮೊದಲಾದವುಗಳಲ್ಲಿ ಒಂದೊಂದು ಪ್ರತ್ಯೇಕವಾಗಿ ಮಡುಗಟ್ಟಿರುವ ವ್ಯಕ್ತಿಗಳು ಇರುವುದೇನು ಅಪರೂಪವಲ್ಲ. ಆದರೆ ಎಲ್ಲ ಉನ್ನತ ಮೌಲ್ಯಗಳು ಒಬ್ಬ ವ್ಯಕ್ತಿಯಲ್ಲಿ ಕಾಣುವುದು ಬಹಳ ಅಪರೂಪ. ಇಂತಹ ಅಪರೂಪದ ವ್ಯಕ್ತಿತ್ವವನ್ನು ಹೊಂದಿರುವ ಮಹಾಬಲೇಶ್ವರ ಶಂಕರ ಹೆಗಡೆಯವರು ವೃತ್ತಿಯಲ್ಲಿ, ವ್ಯಕ್ತಿತ್ವದಲ್ಲಿ ಆದರ್ಶವನ್ನು ತುಂಬಿಕೊಂಡವರಾಗಿದ್ದು ಶಿಕ್ಷಕ ಸಮುದಾಯಕ್ಕೆ ಆದರ್ಶರಾಗಿರುತ್ತಾರೆ.

ತಮ್ಮ ಅತ್ಯುತ್ತಮ ಜ್ಞಾನದಿಂದ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಮೌಲ್ಯಯುತ ಶಿಕ್ಷಣವನ್ನು ನೀಡುವುದರೊಂದಿಗೆ ಸಾಮಾನ್ಯ ವಿದ್ಯಾರ್ಥಿಗಳನ್ನು ಸಹ ಅತ್ಯುತ್ತಮ ಶ್ರೇಣಿಗೆ ಏರಿಸುವಲ್ಲಿ ಇವರ ಶ್ರಮ ಅಡಗಿದೆ. ಬೋಧನಾ ಕಾರ್ಯಕ್ಕೆ ಮಾತ್ರ ಸೀಮಿತವಾಗಿರದೆ ಶಾಲೆಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ದೃಢ ಸಂಕಲ್ಪದೊಂದಿಗೆ ಪಟ್ಟುಬಿಡದೆ ತಾಳ್ಮೆಯಿಂದ ಪ್ರಯತ್ನಿಸಿ ಯಶಸ್ವಿಯಾಗಿರುತ್ತಾರೆ. ತಾವು ಸೇವೆ ಸಲ್ಲಿಸಿದ ಶಾಲೆಗಳಾದ ಗುಂಡಬಾಳ ಮತ್ತು ಸ್ಥಿತಿಗಾರದಲ್ಲಿ ಮಕ್ಕಳ ಕಾಲಿಗೆ ಹೆಜ್ಜೆ ಕಟ್ಟಿ ಕುಣಿಸಲು ಚಿನ್ನರ ಯಕ್ಷಗಾನ ಮೇಳ ಸ್ಥಾಪಿಸಿ ಮಕ್ಕಳಿಂದ ಯಕ್ಷಗಾನ,ತಾಳಮದ್ದಲೆ ಮಾಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಹಿತ್ಯದ ಗೀಳನ್ನು ರೂಡಿಸಿಕೊಂಡ ಶ್ರೀಯುತರು ಸಂಜೀವಿನಿ ಪತ್ರಿಕೆಯ ಅಂಕಣಕಾರರಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡು ಚೊಚ್ಚಲ ಕೃತಿ “ಸುಗಮ ರಶ್ಮಿ” ಪ್ರಕಟಗೊಂಡಿದೆ. ಸಮಯ ಬದ್ಧತೆ, ಪ್ರಾಮಾಣಿಕ ಸೇವೆ, ದಣಿವರಿಯದ ಶೈಕ್ಷಣಿಕ ದುಡಿಮೆ ಬದುಕಿನ ಜೀವಾಳ ಎಂದು ನಂಬಿ ನಡೆದವರು. ಮ್ಯಾಟ್ರಿಕ್ ಮೇಳ, ಪ್ರತಿಭಾ ಕಾರಂಜಿ, ಬೇಸಿಗೆಯ ರಜಾ ಅವಧಿಯ ಚಿಣ್ಣರ ಅಂಗಳ, ಚೈತ್ರದ ಚಿಗುರು, ಶಿಕ್ಷಕರ ಸಹಪಠ್ಯ ಚಟುವಟಿಕೆ, ಆನ್ಲೈನ್ ಪಾಠ ಎಲ್ಲದಕ್ಕೂ ಸೈ ಎನ್ನುತ್ತಾ ವೃತ್ತಿ ಬದುಕಿನ ಎಲ್ಲಾ ಚಟುವಟಿಕೆಗಳಿಗೆ ಸ್ವ ಪ್ರೇರಣೆಯಿಂದ ತೆರೆದುಕೊಳ್ಳುವ ಹೃದಯವಂತ ಶಿಕ್ಷಕರು ಕೂಡ.

ಮಹಾಬಲೇಶ್ವರ ಶಂಕರ ಹೆಗಡೆಯವರು ಮೂಲತಃ ಹೊಸಕುಳಿ ಗ್ರಾಮದ ಬೊಮ್ಮನಹೋಂಡ ಎಂಬಲ್ಲಿ ೧೯೬೬ ರಂದು ಜನಿಸಿದರು. ತಂದೆ ಶಂಕರ ಹೆಗಡೆ, ತಾಯಿ ಮಹಾಲಕ್ಷ್ಮಿಯವರ ಮುದ್ದಿನ ಮಗನಾಗಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಸ್ಕೆರಿಯಲ್ಲಿಯೂ, ಪ್ರೌಢ ಶಿಕ್ಷಣವನ್ನು ಅರೆಅಂಗಡಿಯ ಎಸ್ ,ಕೆ.ಪಿ.ಜುನಿಯರ್ ಕಾಲೇಜಿನಲ್ಲಿಯೂ, ಪದವಿ ಶಿಕ್ಷಣವನ್ನು ದಾಂಡೇಲಿಯ ಬಂಗುರ ಪದವಿ ಕಾಲೇಜು ಮತ್ತು ಕುಮಟಾ ಎ.ವಿ.ಬಾಳಿಗಾ ಕಾಲೇಜಿನಲ್ಲಿಯೂ, ಧಾರವಾಡದಲ್ಲಿ ಸ್ನಾತಕೋತರ ಪದವಿಯನ್ನು, ಬೋಜ ಯುನಿವರ್ಸಿಟಿಯಲ್ಲಿ ಬಿಎಡ್ ಪದವಿ ಮುಗಿಸಿರುತ್ತಾರೆ.

೧೯೯೪ರಲ್ಲಿ ಬೆಂಗಳೂರಿನ ಹೊಸಹಳ್ಳಿ ತಾಲೂಕಿನ ಕೋತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ೨೦೦೨ ರಲ್ಲಿ ತಾಲೂಕಿನ ಗುಂಡಬಾಳ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದು ಅಲ್ಲಿ ೧೪ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ೨೦೧೬ರಂದು ಸ್ಥಿತಿಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದಾಗ ಇವರ ವೃತ್ತಿ ಬದುಕಿನ ದಾರಿ ಹೆದ್ದಾರಿಯಾಗಿ ವೃತ್ತಿಯೊಂದಿಗೆ ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಗಿಸಿಕೊಂಡು ಮಾದರಿಯಾದರು.

ಚಿಕ್ಕನಕೊಡ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾಗಿಯೂ ಸೇವೆ ಸಲ್ಲಿಸಿದ ಅನುಭವವಿದೆ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲದ ವೃತ್ತಿ ಬದುಕಿನಲ್ಲಿ ಇಲಾಖೆ ಹೇಳಿದ ಯಾವ ಕೆಲಸಕ್ಕೂ ಯಾವುದೇ ಸೊಬಗು ನೀಡದೆ ತಲೆಯಾಡಿಸಿ ಒಪ್ಪಿ, ಅಪ್ಪಿಕೊಳ್ಳುವ ಸೌಜನ್ಯ ಮೂರ್ತಿಗಳು. ಯಾವುದೇ ಗತ್ತು ಗಮ್ಮತಿಲ್ಲದ ನಿಗರ್ವಿಗಳು. ಪಕ್ಕದಲ್ಲಿ ಧರ್ಮಪತ್ನಿ ಉಷಾ ಅಕ್ಕೋರು ಇದ್ದರೆ ಜಗತ್ತನ್ನೇ ಗೆಲ್ಲುವ ಅಧಮ್ಯ ಉತ್ಸಾಹಿಗಳು. ಗುರು ಎಂದರೆ ಕೇವಲ ವ್ಯಕ್ತಿಯಲ್ಲ. ಅದೊಂದು ಶಕ್ತಿ. ತನ್ನ ಪ್ರಾಮಾಣಿಕ ಕರ್ತವ್ಯದ ಮೂಲಕ ಸ್ಥಿತಿಗಾರ ಶಾಲೆಯನ್ನು ಜಿಲ್ಲೆಗೆ ಪರಿಚಯಿಸುವುದರ ಮೂಲಕ ಮಕ್ಕಳಲ್ಲಿ ಹೊಸ ಚೈತನ್ಯ ತುಂಬಿದ ಸಾಹಸಿ ಶಿಕ್ಷಕನಿಗೆ ತಾಲೂಕಾ ಶಿಕ್ಷಕ ಸಂಘದಿಂದ ಸಾಧಕ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಪಾಂಡುರಂಗ ಪ್ರಶಸ್ತಿ, ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನದಿಂದ ವಿದ್ಯಾರತ್ನ ಪ್ರಶಸ್ತಿ, ಅಕ್ಷರ ದೀಪ ಫೌಂಡೇಶನ್ ರವರು ಕರಾವಳಿ ಸಾಹಿತ್ಯ ರತ್ನ ಮುಂತಾದ ಪ್ರಶಸ್ತಿಗಳು ಇವರನ್ನರಸಿ ಬಂದಿದೆ.

ಸುಮಾರು ೩೨ ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಂ.ಎಸ್.ಹೆಗಡೆಯವರು ಆಗಸ್ಟ್ ೩೧ ರಂದು ವೃತ್ತಿಯಿಂದ ನಿವ್ರತ್ತರು. ಸದಾ ಚೈತನ್ಯದ ಚಿಲುಮೆಯಾಗಿ, ಮಾರ್ಗದರ್ಶಕರಾಗಿ ನೂರು ಕಾಲ ಬಾಳಿ ಬದುಕಲೆಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್.ನಾಯ್ಕ
ನಲಿ- ಕಲಿ ಶಿಕ್ಷಕ ಹೊನ್ನಾವರ.

About ಬಿ.ಎನ್‌. ವಾಸರೆ 717 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*