ಆದರ್ಶ ಶಿಕ್ಷಕಿ ಉಷಾ ನಾಯಕರ ಮುಡಿಗೇರಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಶಾಲೆ ಪಾಂಡಿತ್ಯ ಸಂಪಾದನೆಯ ಸ್ಥಳವಷ್ಟೇ ಅಲ್ಲ. ವಿಶಾಲ ವಿಶ್ವಕ್ಕೆ ಅವಶ್ಯಕವಾದ ಶಾಶ್ವತ ಪ್ರಭಾವವುಳ್ಳ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಶಿಸ್ತಿನ ಚಟುವಟಿಕೆ ನೀಡುವ ಸ್ಥಳ. ಶಿಕ್ಷಣ ತಜ್ಞರ ಈ ಮಾತು ವಿದ್ಯಾಮಂದಿರಕ್ಕೆ ಓರ್ವ ಶಿಸ್ತಿನ ಶಿಕ್ಷಕರ ಅಗತ್ಯ ಇದೆ ಎನ್ನುವುದನ್ನು ಸಾರಿ ಹೇಳುತ್ತದೆ. ಮಾನವೀಯತೆ ವಿಕಾಸದೆಡೆಗೆ ದುಡಿಯುವ ಶಿಕ್ಷಕರು ಮಾತ್ರ ಮಕ್ಕಳ ಮನಸ್ಸನ್ನು ಗೆಲ್ಲಬಲ್ಲರು ಎಂಬುದಕ್ಕೆ ನಮ್ಮ ನಡುವಿನ ಶಿಕ್ಷಕಿ ಉಷಾ ವಿಠೋಬ ನಾಯಕರವರೇ ಸಾಕ್ಷಿ. ಉಲ್ಲಾಸಭರಿತ, ಮಂದಸ್ಮಿತ ಮೊಗದ, ಸರಳ ಸಂಪನ್ನ ಭಾವಜೀವಿ ಮಕ್ಕಳ ಜ್ಞಾನದಾಹ ಹೆಚ್ಚಿಸುವಲ್ಲಿ ಶ್ರಮಿಸಿದ ಮೌನ ಸಾಧಕಿಗೆ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ ಮುಡಿಗೇರಿದೆ. ಶಿಕ್ಷಣ ವಂಚಿತ ಪಾಲಕರ ಮನಸ್ಸನ್ನು ಗೆದ್ದು ತನ್ನ ಶಾಲೆಯನ್ನು ಮೇಲ್ದರ್ಜೆಗೇರಿಸಿ ಶಾಲೆ ಬಿಡುವ ಮಕ್ಕಳ ಪಾಲಿಗೆ ಆಶಾ ಕಿರಣರಾದವರು. ವಿದ್ಯೆಯೊಂದಿಗೆ, ವಿನಯ ಸಂಪತ್ತಿನೊಂದಿಗೆ,ಸದಾ ಕ್ರಿಯಾಶೀಲತೆಯೊಂದಿಗೆ ವೃತ್ತಿಯ ಘನತೆ ಗೌರವ ಹೆಚ್ಚಿಸಿದ ಅಪರೂಪದ ಮಾತೃ ಸ್ವರೂಪಿ ಶಿಕ್ಷಕಿಯಾಗಿ ಪಟ್ಟಣದ ನಂಬರ್ ಒಂದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆರಾಧ್ಯ ಶಿಕ್ಷಕಿಯಾಗಿ, ವಿವಿಧ ಸಂಘಟನೆಗಳ ಜವಾಬ್ದಾರಿ ಹೊತ್ತು ಎಲ್ಲರೊಳಗೊಂದಾಗಿ ಬೆರೆತು ಶಾಲೆಯ ಸರ್ವತೋಮುಖ ಅಭಿವೃದ್ಧಿಯತ್ತ ಚಿತ್ತ ಹರಸಿದರು. ಉಪ್ಪಾರ ಹಾಗೂ ಹಾಲಕ್ಕಿ ಸಮುದಾಯದವರೇ ಅಧಿಕವಾಗಿದ್ದರು.ಅವರಲ್ಲಿ ಹೆಚ್ಚಿನವರು ಅನಕ್ಷರಸ್ಥ ಪಾಲಕರಾಗಿದ್ದರು. ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಶೌಚಾಲಯ, ರಂಗ ಮಂದಿರ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿ ಅವಶ್ಯಕತೆ ಪೂರೈಸಿಕೊಂಡರು. ಅನಾರೋಗ್ಯ ಪಿಡಿತ ಮಹಿಳೆಗೆ ವಾಟರ್ ಬೆಡ್ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಸಮವಸ್ತ್ರ ನೀಡಿರುವುದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.

ನಂತರ ೨೦೦೬ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೊಪ್ಪಲಕೇರಿಗೆ ವರ್ಗವಾಗಿ ಬಂದರು. ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲು ಪಣತೊಟ್ಟು ವಿಶೇಷ ಚೇತನ ಮಕ್ಕಳಿಗಾಗಿ ಇಲಾಖೆಯಿಂದ ಹೈಟೆಕ್ ಶೌಚಾಲಯ, ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಎರಡು ಕಂಪ್ಯೂಟರ್ ಪಡೆದು ಕಂಪ್ಯೂಟರ್ ಶಿಕ್ಷಕಿಯಾಗಿ ಮಕ್ಕಳ ಕಂಪ್ಯೂಟರ್ ಜ್ಞಾನ ಹೆಚ್ಚಿಸಿದರು. ದಾನಿಗಳಿಂದ ಶಾಲೆಗೆ ಸ್ಮಾರ್ಟ್ ಕ್ಲಾಸ್, ಕಪಾಟು, ಖುರ್ಚಿ, ಕಲರ್ ಪ್ರಿಂಟರ್ಸ್ ಕೊಡುಗೆಯಾಗಿ ಪಡೆದು ಶಾಲೆಯ ಅಂದ-ಚಂದ ಹೆಚ್ಚಿಸುವಲ್ಲಿ ಇವರ ಶ್ರಮ ಸಾರ್ಥಕವಾಯಿತು.

೨೦೧೬ನೇ ಇಸ್ವಿಯಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಂದೂರಿಗೆ ವರ್ಗವಾದರು. ಆರ್ಥಿಕವಾಗಿ ತೀರ ಹಿಂದುಳಿದ ಕುಟುಂಬದವರೇ ಅಧಿಕವಾಗಿರುವ ಹಳ್ಳಿ ಶಾಲೆಗೆ “ಹಳ್ಳಿ ಹೈದೆ”ಯಾಗಿ ಮಕ್ಕಳ ಪಾಲಕರ, ಪೋಷಕರ, ಊರಿನವರ ಸಹಕಾರದೊಂದಿಗೆ ಶಾಲೆಯ ಶತಮಾನದ ಸಂಭ್ರಮ ಆಚರಿಸುವಲ್ಲಿ ಇವರ ಸಂಘಟನಾ ಶಕ್ತಿ ನಿರಂತರವಾಗಿ ದುಡಿದಿದೆ. ಶಾಲೆಗೆ ಹತ್ತು ಸಾವಿರ ರೂಪಾಯಿ ದೇಣಿಗೆ ನೀಡಿ ಕಾರ್ಯಕ್ರಮದ ಯಶಸ್ವಿಗೆ ಕಾರಣಿಕರ್ತರಾದರು. ಶಾಲೆಯ ಮೂಲಭೂತ ಸೌಕರ್ಯವಿಲ್ಲದೆ ನಲುಗುತ್ತಿರುವ ಸಂದರ್ಭವನ್ನು ಗಮನಿಸಿ ದಾನಿಗಳ ಸಹಕಾರದಿಂದ ಗ್ರೀನ್ ಬೋರ್ಡ್, ಕಪಾಟು, ಖುರ್ಚಿ, ಆಟದ ಸಾಮಗ್ರಿ, ರಾಷ್ಟ್ರ ನಾಯಕರ ಭಾವಚಿತ್ರ, ಊಟದ ತಾಟು, ಕುಡಿಯುವ ನೀರಿನ ಲೋಟ ಪಡೆದರು. ಸ್ಥಳೀಯ ಸರಕಾರದಿಂದ ಎರಡು ಶೌಚಾಲಯ,ಕಲರ್ ಪ್ರಿಂಟ್, ನೀರಿನ ಟ್ಯಾಂಕ್ ಪಡೆದು ಶಾಲೆಯ ಮೂಲ ಸ್ವರೂಪ ಬದಲಾಯಿಸಿ ಎಲ್ಲರ ಪ್ರೀತಿಗೆ ಪಾತ್ರರಾದರು. ಆದರ್ಶದ ನಡೆ, ನುಡಿಯಲ್ಲಿ ಮುನ್ನಡೆಯುತ್ತ ಜಗ್ಗದೆ,ಬಗ್ಗದೆ ದಿಟ್ಟತನದಿಂದ ಶಾಲೆಗಾಗಿ ದುಡಿದು ತಾವು ಹೋದ ಶಾಲೆಯಲ್ಲೆಲ್ಲ ದಟ್ಟವಾದ ಹೆಜ್ಜೆ ಗುರುತೊಂದನ್ನು ಮೂಡಿಸಿದರು.

ನಂತರ ೨೦೨೧ ರಂದು ಪಟ್ಟಣದ ನಂಬರ ಒಂದು ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದರು. ಶಾಲೆಯಲ್ಲಿರುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಯೆಡೆಗೆ ಚಿಂತಿಸಿ ಅದಕ್ಕೊಂದು ರೂಪ ಕೊಟ್ಟ ಪುಣ್ಯಾತ್ಮಗಿತ್ತಿಯಾದರು. ಬೇರೆ ಊರಿನಿಂದ ವ್ಯಾಪಾರ, ವ್ಯವಹಾರಕ್ಕಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅನೇಕ ಪಾಲಕರ ಮಕ್ಕಳು ಈ ಶಾಲೆಯ ಆಸ್ತಿಯಂತಾಗಿದ್ದರು. ಆ ಮಕ್ಕಳ ಭವಿಷ್ಯತ್ತಿನ ನಿರ್ಮಾಣಕ್ಕಾಗಿ ಬದುಕಿನ ಬಹುಪಾಲು ಸಮಯವನ್ನು ಪಟ್ಟಣದ ಹೃದಯ ಭಾಗದಲ್ಲಿರುವ ಶಾಲೆಗಾಗಿ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡರು. ಮೊದಲು ಕೈಗೆತ್ತಿಕೊಂಡದ್ದು “ಜೈಲು ಶಾಲೆಯನ್ನು, ಜನರ ಶಾಲೆ”ಯನ್ನಾಗಿ ಪರಿವರ್ತಿಸಲು ಪಣತೊಟ್ಟ ಗಟ್ಟಿಗಿತ್ತಿಯಾದರು. ಸುಮಾರು ಎರಡು ನೂರು ವರ್ಷಗಳಷ್ಟು ಹಳೆಯದಾದ ಕಟ್ಟಡವು ಈ ಹಿಂದೆ ಅಪರಾಧ ಮಾಡಿದವರನ್ನು ಅಥವಾ ವಿಚಾರಣೆ ಎದುರಿಸುತ್ತಿರುವವರನ್ನು ಬಂಧಿಸಿರುವ ಕಾರಾಗೃಹವಾಗಿತ್ತಂತೆ. ಬದುಕನ್ನು ಚೆನ್ನಾಗಿ ಅರಿತವರ ಬಳಿ ಮಾತ್ರ ತಾಳ್ಮೆ ಇರುತ್ತದೆ ಎಂಬ ಹಿರಿಯರ ಮಾತಿನಂತೆ, ತಾಳ್ಮೆಯಿಂದ ವ್ಯವಹರಿಸಿ ಎಲ್ಲವನ್ನು ತನ್ನ ಶಾಲೆಗಾಗಿ ಪಡೆದು ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಹಗಲಿರಲು ದಣಿವರಿಯದೆ ದುಡಿದು ಹಲವರ ಸಹಕಾರ, ಕೆಲವರ ಹಾರೈಕೆಯೊಂದಿಗೆ ಶಾಲೆಯ ಅಂದ-ಚಂದ ಹೆಚ್ಚಿಸಿದರು. ಕಲಿಸಲು, ಕಲಿಯಲು ಯೋಗ್ಯವಿಲ್ಲದ ಕೋಣೆಯನ್ನು ಕೆಡವಿ ಸ್ಥಳೀಯ ಶಾಸಕರ ನೆರವಿನಿಂದ ಎರಡು ವಿವೇಕ ಕೊಠಡಿಯ ನಿರ್ಮಾಣಕ್ಕೂ ಕಾರಣರಾದರು. ರೋಟರಿ ಕ್ಲಬ್ ನ ನೆರವಿನಿಂದ ರೋಟರಿ ಹ್ಯಾಪಿ ಸ್ಕೂಲಾಗಿ ಆಯ್ಕೆ ಮಾಡಲಾಯಿತು. ಒಂದು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಶಾಲೆಗೆ ಸುಣ್ಣಬಣ್ಣ ಬಡಿದು “ಎಲ್ಲರ ಚಿತ್ತ ಸರಕಾರಿ ಶಾಲೆಯತ್ತ” ಎನ್ನುವ ವಾತಾವರಣ ನಿರ್ಮಿಸಿ ಶಾಲಾ ಹಾಜರಾತಿಯನ್ನು ಹೆಚ್ಚಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಕಲಿಸಲು, ಕಲಿಯಲು ಯೋಗ್ಯವಿಲ್ಲದ ಕೋಣೆಯನ್ನು ಕೆಡವಿ ಸ್ಥಳೀಯ ಶಾಸಕರ

ನೆರವಿನಿಂದ ಎರಡು ವಿವೇಕ ಕೊಠಡಿಯ ನಿರ್ಮಾಣಕ್ಕೆ ಕಾರಣರಾದರು. ರೋಟರಿ ಕ್ಲಬ್ ನೆರವಿನಿಂದ ರೋಟರಿ ಹ್ಯಾಪಿ ಸ್ಕೂಲ್ ಆಯ್ಕೆ ಮಾಡಲಾಯಿತು.ಶಾಲಾ ಗ್ರಂಥಾಲಯಕ್ಕೆ ರೋಟರಿಯಿಂದ ಮಕ್ಕಳ ಮನಸ್ಸಿಗೆ ಮುದು ನೀಡುವ ಪುಸ್ತಕವು ನೀಡಿದರು. ಊಟ ಮಾಡಿ ಕೈ ತೊಳೆಯುವ ಬೇಸಿನ್ ಸಹ ನಿರ್ಮಿಸಿ ಕೊಟ್ಟರು. ಹಳೆ ವಿದ್ಯಾರ್ಥಿಗಳು ಶಾಲೆಗೆ ಅಗತ್ಯವಿರುವ ಗ್ರೀನ್ ಬೋರ್ಡ್, ಕುರ್ಚಿ, ಲೇಖನ ಸಾಮಗ್ರಿ, ಸಮವಸ್ತ್ರ, ಬೆಲ್ಟ್, ಐಡಿ ಕಾರ್ಡ್, ಬ್ಯಾಂಡ್ ಸೆಟ್, ಸೌಂಡ್ ಬಾಕ್ಸ್, ಅಲ್ಮೇರ, ಊಟದ ತಟ್ಟೆ, ಸ್ಮಾರ್ಟ್ ಕ್ಲಾಸ್ ,ಲ್ಯಾಪ್ಟಾಪ್, ಡಯಾಸ್, ಫಿಲ್ಟರ್. ..ಒಂದೋ…ಎರಡೋ..ಎಲ್ಲವೂ ಇವರ ಶಾಲೆಯ ಅಂಗಳ ದಾಟಿ ವರ್ಗದ ಕೋಣೆ ಪ್ರವೇಶಿಸಿತು. ಮಕ್ಕಳ ಕಲಿಕೆಗೆ ಮೆರಗು ನೀಡಿತು. ದಾನಿಗಳು, ಹಳೆ ವಿದ್ಯಾರ್ಥಿಗಳು ಕೈಜೋಡಿಸಿ ಮಾದರಿ ಶಾಲೆಯನ್ನಾಗಿ ನಿರ್ಮಿಸುವಲ್ಲಿ ಸಹಕರಿಸಿದರು. ಇವರೆಲ್ಲರ ಕೊಡುಗೆಗೆ ಧ್ವನಿಯಂತಿರುವ ಉಷಾ ನಾಯಕರವರು ಪ್ರತಿ ವರ್ಷ ನಡೆಯುವ ಶಾಲಾ ಪ್ರಾರಂಭೋತ್ಸವ ದಿನದಂದು ಹತ್ತು ಸಾವಿರಕ್ಕೂ ಹೆಚ್ಚು ಖರ್ಚು ಬರಿಸಿ ಮಕ್ಕಳಿಗೆ ಅನುಕೂಲವಾಗುವ ಕಲಿಕಾ ಸಾಮಗ್ರಿಯನ್ನು ಕಳೆದ ನಾಲ್ಕು ವರ್ಷಗಳಿಂದ ನೀಡುತ್ತಾ ಬಂದಿರುತ್ತಾರೆ.

ಜಿಲ್ಲಾ ಪಂಚಾಯತನಿಂದ ನಾಲ್ಕು ಕೊಠಡಿ, ದೊಡ್ಡದಾದ ವರಾಂಡಕ್ಕೆ ಟೈಲ್ಸ್ ಅಳವಡಿಸಿ ಕಾರಾಗೃಹವನ್ನು, ಶಾಲಾ ಗೃಹವನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆ ಇವರಿದ್ದಾಗಿದೆ.” ಏಳು ಬೆಳಕಿದೆ ನಿನ್ನ ಪಾಲಿಗೆ, ನಿಲ್ಲು ಶಕ್ತಿ ಇದೆ ನಿನ್ನ ಕಾಲಿಗೆ” ಎಂಬ ಕವಿ ವಾಣಿಯಂತೆ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಿನ ಬೀಜವನ್ನು ಬಿತ್ತುತ್ತ, ಮೂಲಭೂತ ಸೌಕರ್ಯಗಳಿಂದ ವಂಚಿತವಾದ ವಿದ್ಯಾಸಂಸ್ಥೆಯನ್ನು ಮಾದರಿ ಸಂಸ್ಥೆಯನ್ನಾಗಿ ರೂಪಿಸಿರುತ್ತಾರೆ. ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ತಮ್ಮ ಯೂಟ್ಯೂಬ್ ನಲ್ಲಿ ಅಳವಡಿಸಿ ಪಾಲಕರಲ್ಲಿ ಜಾಗೃತಿ ಮೂಡಿಸಿರುತ್ತಾರೆ.

ಮೂಲತಃ ಕುಮಟಾ ತಾಲೂಕಿನ ಹಿರೇಗುತ್ತಿಯವರಾದ ಉಷಾ ವಿಠೋಬ ನಾಯಕರವರು ಬಿ.ಎ.,ಬಿಎಡ್, ಎಂ.ಎ.ಪದವೀಧರರು. ಸುದೀರ್ಘ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ತಾವು ಇರುವ ಶಾಲೆಯಲ್ಲೆಲ್ಲಾ ಕಾರ್ಯ ಚಟುವಟಿಕೆಯ ಹೆಜ್ಜೆ ಗುರುತು ಮೂಡಿಸಿ ಎಲ್ಲರೊಳಗೊಂದಾಗಿ ಬೆರೆತು, ಬೆಳೆದವರು. ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗದವರು.

ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಭಾವ ಭರಿತ ಜೋಳಿಗೆ, ಕಾಯಕದೊಳಗಿನ ಕದಿರು, ಜರಿ ಅಂಗಿ, ಮುತ್ತಿನ ಮೀನು ಕೃತಿ ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ಭರವಸೆ ಮೂಡಿಸಿರುತ್ತಾರೆ. ನಕ್ಷತ್ರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಡೂರು ಇವರು ರಾಷ್ಟ್ರ ಪ್ರಶಸ್ತಿ ಹಾಗೂ ೫,000 ರೂಪಾಯಿಯ ದತ್ತಿ ಬಹುಮಾನ ನೀಡಿ ಗೌರವಿಸಿರುತ್ತಾರೆ. ಸರ್ಕಾರಿ ಹಾಗೂ ಅರೆಸರ್ಕಾರಿ ನೌಕರರ ಸಂಘ ಬೆಂಗಳೂರು ಇವರು ಸಾವಿತ್ರಿಬಾಯಿ ಪುಲೆ ರಾಷ್ಟ್ರ ಪ್ರಶಸ್ತಿ ನೀಡಿ ಪುರಸ್ಕರಿಸಿರುತ್ತಾರೆ. ಶಟಲ್, ಬ್ಯಾಡ್ಮಿಂಟನ್ ಹಾಗೂ ಕೇರಂನಲ್ಲಿ ರಾಜ್ಯ ಮಟ್ಟದ ವರೆಗೂ ಇವರ ಪ್ರತಿಭೆ ಪ್ರದರ್ಶಿಸಲ್ಪಟ್ಟಿದೆ .ಉತ್ತರ ಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿಯೊಂದಿಗೆ ಕೈಜೋಡಿಸಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುತ್ತಾರೆ.

ಎಷ್ಟು ಹಣತೆಗಳಿಂದ ಕತ್ತಲೆ ಕರಗುವುದು
ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು
ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು
ಒಂದು ಕವಿತೆಗೆ ಕೂಡ ಮನ ಕರಗುವುದು
ಕಣವಿ ಅವರ ಈ ಕವನದ ಸಾಲಿನಲ್ಲಿ ಮನೆ ಬೆಳಗಲು ಒಂದು ಹಣತೆಯಾದರೂ ಸಾಕೆನಿಸಿದರೆ, ಒಂದು ಕವಿತೆಯಿಂದಾದರೂ ಮನ ಕರಗಿದರೆ ಅಷ್ಟೇ ಸಾಕು ಎನ್ನುತ್ತಾರೆ .ಬದುಕಿನಲ್ಲಿ ಎದುರಾದ ಎಲ್ಲಾ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದ ಉಷಾ ನಾಯಕರವರ ಕವಿ ಹೃದಯದ ಮನಸ್ಸಿನಿಂದ ಮಾಡಿದ ಮಕ್ಕಳ ಸ್ನೇಹಿ ಶಾಲಾ ಕಾರ್ಯಾಗಳೆಲ್ಲವೂ ಅವರ “ಭಾವ ಭರಿತ ಜೋಳಿಗೆ”ಗೆ ಸಾಕ್ಷಿಯಾಗಿದೆ. ಪತಿ ರಮೇಶ ರವರು ತಮ್ಮ ಆರ್. ಯು. ಯೂಟ್ಯೂಬ್ ಚಾನೆಲ್ ಮೂಲಕ ತಾಲೂಕಿನಲ್ಲಿ ಶಿಕ್ಷಕರು ಸಂಘಟಿಸಿದ ಕಾರ್ಯಕ್ರಮವಿರಲಿ ಅಥವಾ ಬೇರೆ ಯಾವುದೇ ಸಂಘಟನೆಯವರು ಸಂಘಟಿಸಿದ ಕಾರ್ಯಕ್ರಮವಿರಲಿ ಅವರ ಯೂಟ್ಯೂಬ್ ನಲ್ಲಿ ಬಿತ್ತರಿಸುವ ವಿಶೇಷ ವರದಿಯು ಇಡೀ ರಾಜ್ಯಕ್ಕೆ ಮಾದರಿಯಾದದ್ದು. ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ ಶಿಕ್ಷಕರ ಕಾರ್ಯ ಚಟುವಟಿಕೆಯನ್ನು, ಅವರ ಸಾಧನೆಯನ್ನು ಪ್ರೋತ್ಸಾಹಿಸುವ ಹೃದಯವಂತ ರಮೇಶರವರಿಗೆ ಎಲ್ಲರ ಪ್ರೀತಿಪೂರ್ವಕ ಅಭಿನಂದನೆಗಳೇ ಅವರ ಅನಾರೋಗ್ಯವನ್ನು ದೂರ ಮಾಡಿದೆ. ಎಚ್. ರಮೇಶ್ ರವರಿಗೆ ಒಡನಾಡಿಯ ಪರವಾಗಿಯೂ ಅಭಿನಂದನೆಗಳು. ಉಷಾ ನಾಯಕ ಅವರ ಕಾರ್ಯಸಾಧನೆಯ ಫಲ ಶೃುತಿಯಿಂದಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿದೆ. ಆ ಕಾರಣಕ್ಕಾಗಿ ತಾಲೂಕಿನ ಸಮಸ್ತ ಗುರು-ಗುರು ಮಾತೆಯರ ಪರವಾಗಿ ಹಾರ್ದಿಕ ಅಭಿನಂದನೆಗಳು. ನಿಮ್ಮ ಸೇವಾ ಮನೋಭಾವದ ಕರ್ತವ್ಯ ನಿಷ್ಠೆ ಮಾದರಿಯಾಗಿ, ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ನಿಮ್ಮನ್ನರಸಿ ಬರಲಿ ಎಂದು ಹಾರೈಸುತ್ತೇನೆ.

ಪಿ. ಆರ್. ನಾಯ್ಕ
ನಲಿ-ಕಲಿ ಶಿಕ್ಷಕ,ಹೊನ್ನಾವರ.

About ಬಿ.ಎನ್‌. ವಾಸರೆ 722 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*