‘ನವಿಲುಗರಿ ಮತ್ತು ಹುಡುಗಿ’. – ಅಪರ್ಣಾ ಹೆಗಡೆಯವರ ಕವಿತೆ…

ದುಪ್ಪಟ್ಟಾದ ತುದಿಯಲ್ಲಿ ಒಂದು,
ನವಿಲುಗರಿಯ ಚಿತ್ರ ಚಿತ್ರಿಸಿಕೊಂಡ ಹುಡುಗಿ
ಮೆಲ್ಲ ಮೆಲ್ಲನೆ ಇರುವೆ ಸರಿದಷ್ಟು ಸಶಬ್ಧವಾಗಿ
ಉಸಿರು ತಾಕಿದಷ್ಟು ನವಿರಾಗಿ
ಅತಿ ಮೃದುಮಧುರವಾಗಿ ಆಗಾಗ,
ಆ! ನವಿಲುಗರಿ
ಕಿರುಬೆರಳ ದಾರಿಯ ಗುಂಟ ಸರಿದು
ಕತ್ತಿನಿಂದ ಏರಿ ಕೆನ್ನೆಗೆ ಚುಂಬಿಸುತ್ತದೆ
ಆ ಕ್ಷಣ! ಪ್ರೀತಿಯ ಬಸಿರೊಡೆದು ಮರಿಹಾಕುತ್ತದೆ

ಕಣ್ಣು ಮುಚ್ಚಿ
ರೆಪ್ಪೆಯ
ಮೇಲೆ
ಗರಿಯ ಹೊದಿಕೆಯ ಇಟ್ಟು
ಇಳಿಯುತ್ತಾಳೆ,
ಆ! ನಿನ್ನೆಯ ಕನಸ ಕೋಟೆಗೆ
ಏಳು ಸಮುದ್ರವ ದಾಟಿ
ಚಂದ್ರ ತಾರೆಯರ ಕಿತ್ತು ತರುವ ರಾಜಕುಮಾರನ ಊರಿಗೆ
ಗರಿಯ ಅಂಚು ತುಸು ಅಲುಗಿದಾಗ
ಒಂದೊಂದು ಕದಿರಲ್ಲೂ ಸಪ್ತವರ್ಣದ ಬಿಲ್ಲು ಮೂಡಿ
ಬಿಲ್ಲುಗಳ ಮೆಟ್ಟಿ ಇಳಿದು ಬರುತ್ತಾನೆ
ಆ ಅವನು
ಪ್ರೀತಿಯ ಹೂಮಾಲೆಗಳ ಕಟ್ಟಿ ಕೊರಳಿಗೆ ತೊಡಿಸಲು

ಗರಿಯ ಸರಿದಾಟಕ್ಕೆ ಹೊಮ್ಮಿದ ಘಮ
ಸರಿದು ಸರಿಸರಿದ ನವಿಲುಗರಿ ಅದೆನೋ ಪಿಸುಗುಟ್ಟಿ
ಅಂಟಿಕೊಂಡು, ಮತ್ತಿವಳು ಕಣ್ಮುಚ್ಚಿ ಗುಟ್ಟಿಗೆ ಕಿರುನಕ್ಕು
ನವಿಲುಗರಿಯನ್ನು ಅಪ್ಪಿಕೊಳ್ಳುತ್ತಾಳೆ
ಮತ್ತಷ್ಟು ಬಿಗಿಯಾಗಿ
ಅಂಚುತಾಗಿ ಕಚಗುಳಿಯಾಗಿ ನಗುವಿನ ನಾದ ಅಲೆಯಾಗಿ
ಪ್ರೀತಿಯ ಮರಿ ಅಂಬೆಗಾಲಿಕ್ಕಿ
ವಿದ್ಯುತ್ ರೇಖೆಯೊಂದು ಸಂಚರಿಸುವ

ಆ ಸಮಯ,
ಕೋಟೆಯ ಒಡೆಯ ರಾಜಕುಮಾರ
ಮುಗಿಲಾಗಿ ಗುಡುಗಿದರೆ
ನವಿಲುಗರಿಯ ಹುಡುಗಿ
ಮಳೆಹನಿಯಲ್ಲಿ ನೆನೆಯುತ್ತಾಳೆ
ಗರಿಯ ಕದಿರ ಬಿಲ್ಲು ಕಣ್ಣಿನಲ್ಲಿ ಮೂಡುತ್ತದೆ.

  • ಅಪರ್ಣಾ ಹೆಗಡೆ
  • ಶಿರಸಿ

About ಬಿ.ಎನ್‌. ವಾಸರೆ 717 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*