ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಶಾಂತಿಗೆ ಭಂಗ ತರುತ್ತಿದ್ದ ಐವರು ರೌಡಿ ಶೀಟರ್‌ಗಳನ್ನು ಉತ್ತರ ಕನ್ನಡ ಜಿಲ್ಲೆಯಿಂದ ಆರು ತಿಂಗಳ ಅವಧಿಗೆ ಗಡಿಪಾರು ಮಾಡಿ ಭಟ್ಕಳ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಗಡಿಪಾರು ಶಿಕ್ಷೆಗೆ ಒಳಗಾದವರು ಭಟ್ಕಳ ತಾಲೂಕಿನ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಹಿತ್ತು ಹಾಗೂ ಬೈಲೂರು ನಿವಾಸಿಗಳಾದ ಭಾಸ್ಕರ್ ಮಹಾದೇವ ನಾಯ್ಕ (40), ರಾಜು ಮಹಾದೇವ ನಾಯ್ಕ (36), ಕೇಶವ ಖುತಿಕ್ ಮಹಾದೇವ ನಾಯ್ಕ (27), ಗಣೇಶ್ ಬಾಬು ನಾಯ್ಕ (25) ಮತ್ತು ಗಣೇಶ್ ಬಾಕಪ್ಪ ಜಯಂತ್ ನಾಯ್ಕ (23) ಎಂದು ಗುರುತಿಸಲಾಗಿದೆ.
ಇವರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಈ ಆರೋಪಿಗಳ ಮೇಲೆ ರೌಡಿ ಶೀಟ್ ತೆರೆದು ಇವರ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಲಾಗಿತ್ತು. ಆದರೂ ಸಹ ಇವರು ತಮ್ಮ ಕ್ರಿಮಿನಲ್ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಭಟ್ಕಳ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55 (ಎ) ಮತ್ತು (ಬಿ) ಅಡಿಯಲ್ಲಿ ಗಡಿಪಾರು ಮಾಡಲು ವರದಿ ಸಲ್ಲಿಸಲಾಗಿತ್ತು. ವರದಿಯನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿಗಳು ಏಪ್ರಿಲ್ 2ರಂದು ಈ ಐವರನ್ನು ಜಿಲ್ಲೆಯಿಂದ ಹೊರಹಾಕಲು ಆದೇಶಿಸಿದ್ದರು.

ಆದೇಶದ ಅನ್ವಯ ಈ ಐವರನ್ನು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಭಾಸ್ಕರ್ ಮಹಾದೇವ ನಾಯ್ಕ, ಬಾಗಲಕೋಟೆ ಜಿಲ್ಲೆಯ ನವನಗರ ಠಾಣಾ ವ್ಯಾಪ್ತಿಗೆ, ರಾಜು ಮಹಾದೇವ ನಾಯ್ಕ ಬೀದರ್ ಜಿಲ್ಲೆಯ ನ್ಯೂಟೌನ್ ಠಾಣಾ ವ್ಯಾಪ್ತಿಗೆ, ಕೇಶವ ಮಹಾದೇವ ನಾಯ್ಕ ಗದಗ ಜಿಲ್ಲೆಯ ಬೆಟಗೇರಿ ಠಾಣಾ ವ್ಯಾಪ್ತಿಗೆ, ಗಣೇಶ್ ಬಾಬು ನಾಯ್ಕ ವಿಜಯಪುರ ಜಿಲ್ಲೆಯ ಗಾಂಧಿ ಚೌಕ್ ಠಾಣಾ ವ್ಯಾಪ್ತಿಗೆ, ಗಣೇಶ್ ಬಾಕಪ್ಪ ಜಯಂತ್ ನಾಯ್ಕ ಕಲಬುರಗಿ ಜಿಲ್ಲೆಯ ಚೌಕ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಏಪ್ರಿಲ್ 5 ಮತ್ತು 6ರಂದು ಮುರುಡೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಈ ಐವರು ಆರೋಪಿಗಳನ್ನು ಸಂಬಂಧಪಟ್ಟ ಜಿಲ್ಲೆಗಳ ಪೊಲೀಸ್ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ವ್ಯಕ್ತವಾಗಿದೆ.
Be the first to comment