ಒಡನಾಡಿ ಜೊತೆ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮುಕ್ತ ಮಾತುಕತೆ
ಕಳೆದ ಮೂರ್ನಾಲ್ಕು ದಶಕಗಳಿಂದ ಬೇಕು ಬೇಡಗಳ ಜೊತೆಯಲ್ಲಿಯೇ, ಧರಣಿ ಹೋರಾಟಗಳ ನಡುವೆಯೇ ಜೀವಂತವಾಗಿದ್ದ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ವಿಚಾರ ಕೊನೆಗೂ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಅವರು ಸಲ್ಲಿಸಿದ ವರದಿಯನ್ನು ಸಚಿವ ಸಂಪುಟ ಅಂಗೀಕಾರ ಮಾಡಿದೆ. ನಾಗಮೋಹನದಾಸ್ ಅವರು ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದಂತೆಯೇ ಆಡಳಿತ ಹಾಗೂ ವಿರೋಧ ಪಕ್ಷದ ಎರಡು ವಲಯದಲ್ಲಿ ಹಾಗೂ ಕೆಲ ಪರಿಶಿಷ್ಟ ಮುಖಂಡರದಲ್ಲಿ ಒಂದಿಷ್ಟು ಆಕ್ಷೇಪಗಳು ಹಾಗೂ ಕೇಳಿ ಬಂದಿದ್ದವು. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ವರದಿಯಲ್ಲಿ ಒಂದಿಷ್ಟು ಮಾರ್ಪಾಡುಗಳನ್ನು ತಂದು ಸಚಿವ ಸಂಪುಟದಲ್ಲಿ ಈ ವರದಿಯನ್ನು ಅಂಗೀಕಾರ ಮಾಡಿದೆ. ಒಳ ಮೀಸಲಾತಿ ವರದಿಯನ್ನು ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದರಾದರೂ ಕೂಡ ಈವರೆಗೂ ಬಹಿರಂಗವಾಗಿ ಯಾವ ಹೇಳಿಕೆಯನ್ನೂ ಮಾಧ್ಯಮದವರಿಗೆ ನೀಡಿರಲಿಲ್ಲ. ಈ ವರದಿ ಸಚಿವ ಸಂಪುಟದಲ್ಲಿ ಅಂಗೀಕಾವಾರದ ನಂತರದಲ್ಲಿ ಮೊಟ್ಟಮೊದಲ ಸಂದರ್ಶನವನ್ನ ‘ಒಡನಾಡಿ.ಕಾಂ’ ಗೆ ನೀಡಿದ್ದು ಗಮನಾರ್ಹ. ಒಳ ಮೀಸಲಾತಿಯ ವರದಿ, ಸರ್ಕಾರ ಅಂಗೀಕಾರ, ಬದಲಾವಣೆ ಹಾಗೂ ಇನ್ನಿತರ ವಿಚಾರಗಳ ಕುರಿತಂತೆ ನಾಗಮೋಹನದಾಸ್ ಅವರು ಮುಕ್ತವಾಗಿ ಒಡನಾಡಿಯ ಬಿ.ಎನ್. ವಾಸರೆಯವರ ಜೊತೆ ಮಾತನಾಡಿದ್ದಾರೆ.
ಒಡನಾಡಿ : ಸರ್, ನಮಸ್ಕಾರ, ನೀವು ಒಳ ಮೀಸಲಾತಿ ಆಯೋಗದ ಅಧ್ಯಕ್ಷರಾಗಿ ಒಂದು ವರದಿಯನ್ನು ಸಿದ್ಧಪಡಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಿದಿರಿ. ಈಗ ಸರ್ಕಾರದ ಸಚಿವ ಸಂಪುಟ ಅದನ್ನ ಅಂಗೀಕಾರ ಮಾಡಿದೆ. ಹಲವು ವಿರೋಧ, ವೈರುಧ್ಯಗಳ ನಡುವೆ ಒಳ ಮೀಸಲಾತಿ ಜಾರಿಯ ಅವಶ್ಯಕತೆ ಇತ್ತೇ? ಎಂಬ ಪ್ರಶ್ನೆಯೊಂದಿದೆಯಲ್ಲಾ?
ಎಚ್. ಎನ್. ನಾಗಮೋಹನದಾಸ : ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಪರಿಶಿಷ್ಠ ಜಾತಿ-ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಕೊಡಲಾಯಿತು. 1950 ರಲ್ಲಿ ಪ. ಜಾತಿ ಬೇರೆ ಪರ. ಪಂಗಡ ಬೇರೆ ಮೀಸಲಾತಿಯನ್ನು ಕೂಡ ಕೊಡಲಾಯಿತು. ಕಳೆದ 75 ವರ್ಷಗಳಲ್ಲಿ ಈ ಪರಿಶಿಷ್ಟರು ಮೀಸಲಾತಿಗಳನ್ನ ಅನುಭವಿಸಿದ್ದಾರೆ. ಇಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಔದ್ಯೋಗಿಕವಾಗಿ ಉತ್ತಮ ಸ್ಥಿತಿಯಲ್ಲಿರುವವವರು ಹೆಚ್ಚು ಮೀಸಲಾತಿ ಸೌಲಭ್ಯ ಪಡೆದಿದ್ದಾರೆ. ಆದರೆ ಹಲವಾರು ಸಮುದಾಯಗಳು ಮೀಸಲಾತಿಯನ್ನು ಪಡೆಯುವಲ್ಲಿ ವಿಫಲವಾಗಿದ್ದವು. ಅಂತಹ ಸಮುದಾಯದವರು ಒಳ ಮೀಸಲಾತಿಯ ಹೋರಾಟ ಮಾಡುತ್ತಿದ್ದರು. ‘ನೀವು ಇಟ್ಟುಕೊಳ್ಳಿ, ನಮ್ಮ ಪಾಲನ್ನು ನಮಗೆ ಕೊಡಿ’ ಎಂದು ಒತ್ತಾಯಿಸುತ್ತಿದ್ದರು. 30 ವರ್ಷಗಳ ಹೋರಾಟದ ನಂತರ ಸರ್ವೋಚ್ಚ ನ್ಯಾಯಾಲಯ 2024 ಆಗಸ್ಟ್ 1 ರಂದು ದ್ರುವೀಂದ್ರ ಸಿಂಗ್ ಪ್ರಕರಣದಲ್ಲಿ ಒಳ ಮೀಸಲಾತಿ ಕಲ್ಪಿಸಬಹುದು. ಅದು ಸಾಮಾಜಿಕ ನ್ಯಾಯದ ವಿಸ್ತರಣೆಯಾಗಿದೆ. ಇದನ್ನು ಮಾಡಲು ಸರ್ಕಾರ ಅಧಿಕಾರ ಹೊಂದಿದೆ ಎಂದು ಸ್ಪಷ್ಟಪಡಿಸಿತ್ತು. ಆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪರಿಷ್ಟ ಜಾತಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷನನ್ನಾಗಿ ನನ್ನನ್ನ ಮಾಡಿತ್ತು. ನಾನು ಅತ್ಯಂತ ಪ್ರಾಮಾಣಿಕವಾಗಿ, ನಿಷ್ಪಕ್ಷಪಾತವಾಗಿ ಹಲವಾರು ಕಾನೂನು ತೊಡಕುಗಳನ್ನ ಪರಿಗಣಿಸಿ, ಪರಿಶಿಷ್ಟ ಸಮುದಾಯದ ಪ್ರಮುಖರು ಹಾಗೂ ತಜ್ಞರೊಂದಿಗೆ ಸಮಾಲೋಚಿಸಿ, ಮುಂದಾಲೋಚನೆಯನ್ನಿಟ್ಟುಕೊಂಡು ಈ ವರದಿ ಸಲ್ಲಿಸಿದ್ದೇನೆ.

ಒಡನಾಡಿ: ಈ ಒಳ ಮೀಸಲಾತಿ ವರದಿಯಲ್ಲಿರುವ ಪ್ರಮುಖ ಶಿಫಾರಸುಗಳೇನು?
ನಾಗಮೋಹನದಾಸ: ನಮ್ಮಲ್ಲಿರುವ ಪರಿಶಿಷ್ಟರ 101 ಜಾತಿಗಳನ್ನು ಎಬಿಸಿಡಿಇ ಎಂದು ಐದು ಪ್ರವರ್ಗಗಳನ್ನು ಮಾಡಲಾಗಿದೆ. ಎ-1, ಬಿ-6, ಸಿ-5, ಡಿ- 4, ಇ- 1 ಪ್ರತಿಶತದಂತೆ ವರದಿಯಲ್ಲಿ ಶಿಫಾರಸ್ಸು ಮಾಡಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ, ಮಾನವ ಅಭಿವೃದ್ಧಿಯ ದೃಷ್ಟಿಯಿಂದ ಯಾರ್ಯಾರು ಯಾವ್ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನ ಅಧ್ಯಯನಮಾಡಿ ಅಧ್ಯಯನ ಮಾಡಿ ವರ್ಗೀಕರಣ ಮಾಡಿ ಮೀಸಲಾತಿ ಹಂಚಿದೆವು. ಇದರ ಜೊತೆಗೆ ರಾಜ್ಯದಲ್ಲಿ 101 ಜಾತಿಗಳಲ್ಲಿ 71 ಜಾತಿಗಳು 10 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವುದು ಕಂಡುಬರುತ್ತದೆ. ಇವರು ಒಂದು ಸ್ಥಳದಲ್ಲಿ ಇಲ್ಲ. ಹರಿದು ಹಂಚಿಹೋಗಿದ್ದಾರೆ. ಕನಿಷ್ಠ ಗ್ರಾಮ ಪಂಚಾಯತ್ ಸದಸ್ಯರಾಗುವಷ್ಟು ಕೂಡ ಬಲ ಇವರಲ್ಲಿ ಇಲ್ಲ. ಕೆಲವು ಪರಿಶಿಷ್ಟರ ಜಾತಿಯ ಹೆಸರುಗಳು ಅಪಮಾನಕರವಾಗಿವೆ. ‘ಹಲಾಲಕೋರ’ ‘ಗಂಟಿಚೋರ’ ಎಂಬ ಹೆಸರಿನ ಜಾತಿಗಳಿರುವುದು ವಿಪರ್ಯಾಸ. ಇವು ಅವರಿಟ್ಟುಕೊಂಡಿದ್ದಲ್ಲ. ಒಂದು ಸಂದರ್ಭದಲ್ಲಿ ಮೇಲ್ವರ್ಗದವರು ನಾಮಕರಣ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಅವರಿಗೂ ಸಹ ತಮ್ಮ ಹೆಸರಿನ ಮುಂದುಗಡೆ ಅಂತಹ ಹೆಸರಿನ ಜಾತಿ ಬಳಸಿಕೊಳ್ಳಲು ಮುಜುಗರವೆನಿಸುತ್ತಿದೆ. ಮುಂದೊಂದು ದಿನ ಅವರು ತಮ್ಮ ಜಾತಿ ಸೂಚಕ ಪದವನ್ನ ಬದಲಾಯಿಸಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದರೆ ಅದಕ್ಕೆ ಅವಕಾಶ ನೀಡಬೇಕೆಂದು ಕೂಡ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕಳೆದ ನೂರು ವರ್ಷಗಳಲ್ಲಿ ಆದಿ ಆಂಧ್ರ (AA), ಆದಿ ಕರ್ನಾಟಕ (AK) ಆದಿ ದ್ರಾವಿಡ (AD) ಎಂಬ ಸರ್ಟಿಫಿಕೇಟ್ ಪಡೆದು ಹಲವಾರ ಮೀಸಲಾತಿ ಅನುಭವಿಸುತ್ತಿದ್ದಾರೆ. ಆದರೆ ಅವರಿಗೆ ಮೂಲ ಜಾತಿಯ ಹೆಸರುಗಳು ನೆನಪಿಲ್ಲ. 101 ಜಾತಿಗಳ ಪಟ್ಟಿಯಲ್ಲಿಯೂ ಇವರಿಲ್ಲ. ಹಾಗಾಗಿ ಇಂಥವರ ಕುಲಶಾಸ್ತ್ರ ಅಧ್ಯಯನ ಮಾಡಿ ಪರಿಶಿಷ್ಟ ಜಾತಿ ಅಂಗೀಕೃತ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಲಾಗಿದೆ. ಒಳಮೀಸಲಾತಿಯ ಜೊತೆಗೆ ಇಂತಹ ಹಲವು ಜೀವಪರ ಶಿಫಾರಸ್ಸುಗಳಿವೆ.
ಒಡನಾಡಿ : ನಿಮ್ಮ ವರದಿಯ ಬಗ್ಗೆ ಒಂದಿಷ್ಟು ಆಕ್ಷೇಪಗಳಿವೆಯಲ್ಲ? ಅವುಗಳ ಬಗ್ಗೆ ಏನಂತೀರಿ?
ನಾಗಮೋಹನದಾಸ: ನಮ್ಮ ವರದಿಯನ್ನ ಆಕ್ಷೇಪಿಸಿದವರ ಬಗ್ಗೆ ಬೇಸರವಿಲ್ಲ. ಆದರೆ ಆಕ್ಷೇಪಗಳಲ್ಲಿ ತಾತ್ವಿಕ ಸತ್ಯ ಇರೋದು ನನಗೆ ಕಂಡು ಬಂದಿಲ್ಲ. ವೈಯಕ್ತಿಕ ಹಿತ, ಜಾತಿ ಹಿತ, ರಾಜಕೀಯ ಹಿತಕ್ಕಾಗಿ ಕೆಲವರು ನ್ಯಾಯ ಸಮ್ಮತವಲ್ಲದ ಆಕ್ಷೇಪಣೆಗಳನ್ನು ಮಾಡುತ್ತಿದ್ದಾರೆ. ರಾಜಕೀಯ ಪ್ರೇರಿತ ವಿರೋಧಗಳೂ ಇವೆ ಅನ್ನುವುದನ್ನು ಅಲ್ಲಗಳೆಯಲಾರೆ. ಇನ್ನು ಕೆಲವು ಸ್ಥಿತಿವಂತರೂ ಕೂಡ ಒಳ ಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಈಗ ಬಹುತೇಕರು ವರದಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಒಡನಾಡಿ: ಒಳ ಮೀಸಲಾತಿಯಿಂದ ಮೇಲ್ವರ್ಗದವರು, ಹಿಂದುಳಿದವರಿಗೆ ಏನಾದರೂ ಸಮಸ್ಯೆ ಇದೆಯಾ?
ನಾಗಮೋಹನದಾಸ: ಇಂತಹದೊಂದು ಮಾತು ನನಗೂ ಕೇಳಿ ಬಂದಿದೆ. ಇದು ಅರ್ಥವಿಲ್ಲದ್ದು. ಒಳ ಮೀಸಲಾತಿಯ ವಿಚಾರಕ್ಕೂ ಮೇಲ್ವರ್ಗದವರಿಗೂ, ಹಿಂದುಳಿದವರಿಗೂ ಯಾವುದೇ ಸಂಬಂಧವಿಲ್ಲ. ಅವರು ಅನುಭವಿಸುವ ಮೀಸಲಾತಿಯಲ್ಲಿ ಎಳ್ಳಷ್ಟು ಕಡಿತ ಆಗೋದಿಲ್ಲ.
ಒಡನಾಡಿ: ನಿಮ್ಮ ವರದಿಯಲ್ಲಿ ವರ್ಗೀಕರಣ ಗೊಂದಲ ಇದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲ ?
ನಾಗಮೋಹನದಾಸ: ವರದಿಯಲ್ಲಿ ಯಾವ ಗೊಂದಲವೂ ಇಲ್ಲ. ಕೆಲವರು ಸೃಷ್ಟಿ ಮಾಡುತ್ತಿದ್ದಾರೆ ಅಷ್ಟೇ. ಯಾರಿಗೆ ಯಾವ ಕೆಲಸ ತಿಳಿದಿದೆಯೋ ಅವರನ್ನು ಅಲ್ಲಿ ಸೇರಿಸಬೇಕು. ಮಂಡಲ್ ಆಯೋಗ ಕೂಡ ಅದನ್ನೇ ಮಾಡಿದೆ. ಮಂಡಲ್ ಆಯೋಗದ ಕೆಲವೊಂದು ಸೂತ್ರವನ್ನು ನಾವೂ ಕೂಡ ಇಲ್ಲಿ ಪಡೆದಿದ್ದೇವೆ. ರಾಜಕೀಯವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ಮಾನವ ಅಭಿವೃದ್ಧಿಯ ದೃಷ್ಟಿಯಿಂದ ಯಾರು ಹೆಚ್ಚು ಸ್ಥಿತಿವಂತರಿದ್ದಾರೋ, ಯಾರೂ ಕಡಿಮೆಯಲ್ಲಿದ್ದಾರೋ ಎಂದು ಆಯಾ ರೀತಿ ವರ್ಗಕ್ಕೆ ಸೇರಿಸಲಾಗಿದೆ.
ಒಡನಾಡಿ: ಒಳ ಮೀಸಲಾತಿಯಿಂದ ಯಾರ್ಯಾರಿಗೆ ಹೆಚ್ಚಿನ ಪ್ರಯೋಜನ ?
ನಾಗಮೋಹನದಾಸ: ಸ್ವಾತಂತ್ರ್ಯ ಬಂದ ನಂತರದಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಇದ್ದರೂ ಕೂಡ ಅನೇಕ ಅಶಕ್ತ ಪರಿಶಿಷ್ಟರು ಮೀಸಲಾತಿ ಸೌಲಭ್ಯ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಇದೀಗ ಅಂತಹ ಚಿಕ್ಕ ಜಾತಿಯವರು ಕೂಡ ಮೀಸಲಾತಿಯ ಸೌಲಭ್ಯ ಪಡೆಯಬಹುದಾಗಿದೆ. ಅಂತಹ ಸಮುದಾಯದ ಅನೇಕರಿಗೆ ಉದ್ಯೋಗಾವಕಾಶ ಸಿಗಲಿದೆ. ಮತ್ತೆ ಉದ್ಯೋಗ ಮಾಡುತ್ತಿದ್ದವರಿಗೆ ತಕ್ಷಣ ಪದೋನ್ನತ್ತಿಯ ಸ್ಥಾನಮಾನ ಕೂಡ ಸಿಗಲಿದೆ.
ಒಡನಾಡಿ : ಒಟ್ಟಂದದಲ್ಲಿ ತಮ್ಮ ಒಳ ಮೀಸಲಾತಿ ವರದಿ, ಅಂಗೀಕಾರ, ಬದಲಾವಣೆ ಇವುಗಳ ಬಗ್ಗೆ ತಮ್ಮ ಅಭಿಪ್ರಾಯವೇನು?
ನಾಗಮೋಹನದಾಸ್: ನಮ್ಮ ಆಯೋಗ ಸಿದ್ಧ ಪಡಿಸಿದ ವರದಿಯನ್ನು ಸರ್ಕಾರ ಹಾಗೂ ಸಚಿವ ಸಂಪುಟ ಒಪ್ಪಿಕೊಂಡು ಅಂಗೀಕಾರ ಮಾಡಿರುವುದು ಸಂತೋಷ ತಂದಿದೆ. ಆದರೆ ಪರಿಶಿಷ್ಟ ಜಾತಿಗಳ ವರ್ಗೀಕರಣ ಲಭ್ಯ ಇರುವ ಮೀಸಲಾತಿಗೆ ಹಂಚಿಕೆ ಮಾಡುವ ವಿಚಾರದಲ್ಲಿ ಕೆಲವು ಮಾರ್ಪಾಡು ಮಾಡಿರುವುದು ಸಮಂಜಸಲ್ಲ. ಇದರ ಬಗ್ಗೆ ವೈಯಕ್ತಿಕವಾಗಿ ನನಗೆ ಬೇಸರವಿದೆ. ಈ ಮಾರ್ಪಾಡು ಕೆಲವರಿಗೆ ಬಹಳ ತೊಂದರೆ ಆಗಲಿದೆ. ಮುಖ್ಯವಾಗಿ ಅಲೆಮಾರಿಗಳಿಗೆ ಸಮಸ್ಯೆಯಾಗಲಿದೆ. ಇದೇ ಪರಿಶಿಷ್ಟರಲ್ಲಿರುವ 101 ಜಾತಿಗಳಲ್ಲಿ 59 ಜಾತಿಗಳು ಸಣ್ಣ ಸಣ್ಣ ಜಾತಿಗಳು. ಹಾಗೂ ಅಲೆಮಾರಿ ಜನಾಂಗದವರು. ಇವರು ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಎಲ್ಲ ರೀತಿಯಲ್ಲಿಯೂ ಬಹಳ ಹಿಂದುಳಿದವರು. ಅವರಿಗೆ ಪ್ರತ್ಯೇಕ ಒಂದು ಪರ್ಸೆಂಟ್ ಮೀಸಲಾತಿ ನೀಡಲು ವರದಿಯಲ್ಲಿ ಹೇಳಿದ್ದೆ. ಆದರೆ ಸರ್ಕಾರ ಅವರನ್ನ ಭೋವಿ, ಬಂಜಾರ ಜೊತೆ ಸೇರಿಸಿದೆ. ಇದು ನನಗೆ ಸರಿ ಕಾಣಲಿಲ್ಲ. ಅಸಮಂಜಸ ಕೂಡಾ.
ಒಡನಾಡಿ: ನೀವು ವರದಿಯಲ್ಲಿ ಹೇಳಿದ ರೀತಿಯಲ್ಲಿಯೇ ಶೇಕಡವಾರು ಮೀಸಲಾತಿ ಹಂಚಿಕೆಯಾಗಿದೆಯಾ ?
ನಾಗಮೋಹನದಾಸ: ನಾನು ನನ್ನ ವರದಿಯಲ್ಲಿ ಶೇ. 17ರಷ್ಟು ಮೀಸಲಾತಿ ಹಂಚಿಕೆ ಮಾಡಿದ್ದೆ. ಆಗ ರಾಜ್ಯದಲ್ಲಿ ಅಷ್ಟು ಮೀಸಲಾತಿ ಇತ್ತು. ಅದು ಸರಿಯಲ್ಲ ಎಂದು ನ್ಯಾಯಾಲಯಕ್ಕೆ ಹೋದರು ನ್ಯಾಯಾಲಯ ಶೇ. 15ರಷ್ಟು ಮೀಸಲಾತಿ ಪಡೆದುಕೊಳ್ಳಿ. ನಂತರ ನೋಡೋಣ ಎಂಬ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. 15 ರಷ್ಟು ಮೀಸಲಾತಿಯನ್ನು ಮೂರು ಪ್ರವರ್ಗಗಳಿಗೆ ಹಂಚಿಕೆ ಮಾಡಲಾಗಿದೆ. ಭೋವಿ, ಬಂಜಾರ ಜೊತೆ ಅಲೆಮಾರಿಗಳನ್ನು ಸೇರಿಸಿದ್ದು ಅಲೆಮಾರಿಗೆ ಬಹಳಷ್ಟು ಅನ್ಯಾಯವಾಗಿದೆ. ಈಗಾಗಲೇ ಅಲೆಮಾರಿಗಳು ನ್ಯಾಯಾಲಯದಲ್ಲಿ ಹೋರಾಟ ಮಾಡ್ತಾ ಇದ್ದಾರೆ ಹಾಗೂ ಹೊರಗಡೆಯೂ ಕೂಡ ನ್ಯಾಯಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಅವರ ಹೋರಾಟ ನ್ಯಾಯ ಸಮ್ಮತವಾದುದಾಗಿದೆ.

shaking: 0.000000; highlight: 0; algolist: 0;
multi-frame: 1;
brp_mask: 0;
brp_del_th: 0.0000,0.0000;
brp_del_sen: 0.0000,0.0000;
delta:1;
bokeh:1;
module: photo;hw-remosaic: false;touch: (-1.0, -1.0);sceneMode: 4;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather:null, icon:null, weatherInfo:100;temperature: 34;zeissColor: bright;
ಒಡನಾಡಿ: ನೀವು ಈಗ ಗಣಿ ಮತ್ತು ನದಿ ರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದೀರಿ. ಸದ್ಯ ಯಾವ ಚಟುವಟಿಕೆಗಳು ನಡೆಯುತ್ತಿವೆ?
ನಾಗಮೋಹನದಾಸ: ರಾಜ್ಯದ ಗಡಿ ಮತ್ತು ನದಿಯ ವಿಚಾರದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳು ಇನ್ನೂ ಬಾಕಿ ಇದ್ದು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವ ದೋಷಗಳಿವೆ ಅದನ್ನ ಅಧ್ಯಯನ ಮಾಡಿ ಸರ್ಕಾರಕ್ಕೆ ಸರಿಯಾದ ಸೂಚನೆಯನ್ನು ನೀಡಬೇಕಾದ ಜವಾಬ್ದಾರಿ ನಮ್ಮ ಈಗಿನ ಆಯೋಗದ್ದಾಗಿದೆ. ನಮ್ಮ ಆಯೋಗ ಕೆಲಸವನ್ನು ಈಗಾಗಲೇ ಮಾಡುತ್ತಿದೆ.
ಒಡನಾಡಿ : ನದಿಯ ವಿಚಾರ ಬಂದಾಗ ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿ ತಿರುವು ಯೋಜನೆ, ನಿಮ್ಮ ವ್ಯಾಪ್ತಿಗೆ ಬರುತ್ತದೆಯೇ?
ನಾಗಮೋಹನದಾಸ: ಯಾವುದೇ ಯೋಜನೆ ಜಾರಿಗೂ ಮುನ್ನ ಅಧ್ಯಯನವಾಗಬೇಕು. ಶರಾವವತಿ ನದಿ ತಿರುವು ಯೋಜನೆಯ ಬಗ್ಗೆ ನಮಗೆ ಸರಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ. ಆಗೊಂದು ವೇಳೆ ಸರ್ಕಾರದಿಂದ ಈ ಪ್ರಕರಣವನ್ನು ನಮ್ಮ ಆಯೋಗಕ್ಕೆ ಒಪ್ಪಿಸಿದರೆ ಅಥವಾ ಈ ನದಿ ತಿರುವು ಯೋಜನೆಯ ಹೋರಾಟಗಾರರು ಈ ವಿಚಾರವಾಗಿ ನಮಗೆ ದೂರನ್ನು ನೀಡಿದರೆ ಅಥವಾ ಮನವಿಯನ್ನ ಮಾಡಿದರೆ ನಾವು ಕೂಡ ಈ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬಹುದು.
ಒಡನಾಡಿ: ಒಳ ಮೀಸಲಾತಿ ವರದಿಯ ವಿಚಾರವಾಗಿ ಹಾಗೂ ಒಂದಿಷ್ಟು ನಮ್ಮ ಜಿಲ್ಲೆಯ ನದಿಯ ಕುರಿತಾಗಿ ತಾವು ಅಮೂಲ್ಯವಾದ ಸಂಗತಿಗಳನ್ನ ನೀಡಿದ್ದೀರಿ. ತಮಗೆ ತುಂಬಾ ಧನ್ಯವಾದಗಳು.
ನಾಗಮೋಹನದಾಸ: ಒಡನಾಡಿ ಸಮಾಜಮುಖಿಯಾದ ಹಾಗೂ ಜೀವಪರವಾದ ಸುದ್ದಿಗಳನ್ನು ನೀಡುತ್ತಿದೆ. ಒಡನಾಡಿಯಲ್ಲಿ ನನ್ನ ಸಂದರ್ಶನವನ್ನು ಮಾಡುವ ಮೂಲಕ ಒಂದಿಷ್ಟು ವಿಚಾರವನ್ನು ಜನರಿಗೆ ತಿಳಿಸಲು ಪ್ರಯತ್ನ ಮಾಡಿದ ತಮಗೂ ಕೂಡ ವಂದನೆಗಳು.
ನಾಗಮೋಹನದಾಸ ಹತ್ತು ವರದಿ ನೀಡಿದವರು
ಎಚ್.ಎನ್. ನಾಗಮೋಹನದಾಸರವರು ಉಚ್ಚ ನ್ಯಾಯಾಲಯದ ನ್ಯಾಮೂರ್ತಿಗಳಾಗಿ ನಿವೃತ್ತರಾದವರು. ನಿವೃತ್ತಿಯ ನಂತರದಲ್ಲಿ ಹಲವಾರು ಪ್ರಗತಿಪರ, ಸಮಾಜಮುಖಿ, ಜೀವಪರ ಕೆಲಸಗಳಲ್ಲಿ ತೊಡಗಿಸಿಕೊಂಡು, ಇಡೀ ರಾಜ್ಯದಲ್ಲಿ ಸಂವಿಧಾನ ಓದು ಕಾರ್ಯಕ್ರಮದ ಮೂಲಕ ಪರಿಚಿತರಾದವರು. ತಮ್ಮ ನಿವೃತ್ತಿಯ ನಂತರ ಹೆಚ್. ಎನ್. ನಾಗಮೋಹನದಾಸ್ ಅವರು ವೀರಶೈವ ಲಿಂಗಾಯತ ವರದಿ, ಬಾಬಾಬುಡನ್ ಗಿರಿ ವಿವಾದದ ವರದಿ, 2012ರ ಬಿಬಿಎಂಪಿ ಭ್ರಷ್ಟಾಚಾರದ ವರದಿ, ಮೀಸಲಾತಿ ಹೆಚ್ಚಳದ ವರದಿ, ಹಿಂದಿನ ಸರ್ಕಾರದ ಮೇಲಿನ ಆರೋಪವಾಗಿದ್ದ 40 ಪರ್ಸೆಂಟ್ ಕಮಿಷನ್ ವರದಿ , ನಾರಾಯಣಪುರ ಅಂದಾಜು ಪಟ್ಟಿ ಅವ್ಯವಹಾರದ ವರದಿ, 2019 ರಿಂದ 23ರವರೆಗಿನ ಬಿಬಿಎಂಪಿ ಅವ್ಯವಾರದ ವರದಿ, ನೈಸ್ ರೋಡ್ ಗೆ ಸಂಬಂಧಪಟ್ಟಂತಹ ಸಮಿತಿಯಲ್ಲಿ ಸಲಹೆಗಾರರಾಗಿ ವರದಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಅದರ ಮಾನದಂಡಗಳ ಕುರಿತಂತೆ ವರದಿ, ಇದೀಗ ಒಳ ಮೀಸಲಾತಿ ವರದಿ ಸೇರಿದಂತೆ ಇಲ್ಲಿಯವರೆಗೂ ಸರಕಾರಕ್ಕೆ ಹತ್ತಕ್ಕೂ ಹೆಚ್ಚು ವರದಿಗಳನ್ನು ಸಲ್ಲಿಸಿ ದಾಖಲೆ ಬರೆದವರಾಗಿದ್ದಾರೆ. ಇದೀಗ ಗಡಿ ಮತ್ತು ನದಿ ರಕ್ಷಣೆಯ ಆಯೋಗದ ಅಧ್ಯಕ್ಷರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದು ಸರಕಾರಕ್ಕೆ ಕಾನೂನು ಸಲಹೆಗಳನ್ನು ನೀಡುತ್ತಿದ್ದಾರೆ.
Be the first to comment