ಅಂಕೋಲಾ: ಕಲಾಭಾರತಿ ಟ್ರಸ್ಟ್ (ರಿ) ಅಂಕೋಲಾ ಇದರ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಚೈತ್ರ ಉತ್ಸವ–2026 ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಹುಬ್ಬಳ್ಳಿಯ ಪರಮಪೂಜ್ಯ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “‘ನಾನು’ ಎನ್ನುವ ಅಹಂಕಾರವನ್ನು ತೊರೆದು ಬದುಕಿದಾಗ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ. ಬದುಕಿನ ಅವಧಿ ಮುಖ್ಯವಲ್ಲ, ಆ ಅವಧಿಯಲ್ಲಿ ಮಾಡಿದ ಸತ್ಕಾರ್ಯಗಳೇ ನಿಜವಾದ ಮೌಲ್ಯ. ಪ್ರೀತಿ ಮತ್ತು ಹಂಚಿಕೆಯ ಜೀವನದ ಮಹತ್ವವನ್ನು ವಿವರಿಸಿದ ಅವರು, “ಸ್ವರ್ಗಕ್ಕೆ ಹೋಗಲು ‘ಪುಣ್ಯ’ ಎಂಬ ಕರೆನ್ಸಿ ಅಗತ್ಯ; ಅದು ಸತ್ಕಾರ್ಯಗಳಿಂದಲೇ ಸಿಗುತ್ತದೆ” ಎಂದರು. ಹಾಗೂ ಸಾಂಸ್ಕ್ರತಿಕ ಪರಂಪರೆಯ ರಾಯಭಾರಿಯಾಗಿದ್ದ ಡಾ. ರಾಜಕುಮಾರರನ್ನು ಕೊಂಡಾಡಿ, “ಮಾತು ಮತ್ತು ನಡೆ ಒಂದಾಗಿದ್ದ ಮಹಾನ್ ವ್ಯಕ್ತಿತ್ವ” ಎಂದು ಶ್ಲಾಘಿಸಿದರು.
ಜೈವಿಕ ಪರಂಪರೆ, ಸಾಂಸ್ಕ್ರತಿಕ ಪರಂಪರೆ ಜೀವಂತವಾಗಿರಬೇಕು. ಧ್ಯಾನದಿಂದ ಉತ್ತಮ ಆರೋಗ್ಯ ಸಂಪಾದಿಸಬಹುದು ಮುಂದಿನ ದಿನಗಳಲ್ಲಿ ಪ್ರಶಾಂತ ಶೆಟ್ಟಿ ನೇತೃತ್ವದಲ್ಲಿ ಅಂಕೋಲಾದಲ್ಲಿ ‘ಪಿರಮಿಡ್’ ಧ್ಯಾನಮಂದಿರ ನಿರ್ಮಿಸಲು ಎಲ್ಲರೂ ಕೈಜೋಡಿಸಿ ಎಂದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಹಿರಿಯ ಚಲನಚಿತ್ರ ನಟ ರಾಮಕೃಷ್ಣ ನೀರ್ನಳ್ಳಿಯವರು ಕೃಷಿ ಹಿನ್ನೆಲೆಯಿಂದ ಕಲೆಯತ್ತ ಬೆಳೆದ ತಮ್ಮ ಪಯಣವನ್ನು ಹಂಚಿಕೊಂಡರು. ಡಾ. ರಾಜಕುಮಾರರೊಂದಿಗೆ ನಟಿಸಿದ ಅನುಭವವನ್ನು ಸ್ಮರಿಸಿದರು, ಪುಟ್ಟಣ್ಣ ಕಣಗಾಲ್, ಹುಣಸೂರು ಕೃಷ್ಣಮೂರ್ತಿ, ಕೆ. ಬಾಲಚಂದರ್, ಉದಯಕುಮಾರ್, ಮೊದಲಾದ ಹಿರಿಕಿರಿಯ ಕಲಾವಿದರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಸ್ಮರಿಸಿ ಗುಬ್ಬಿ ವೀರಣ್ಣ ಕಂಪನಿಯಿಂದ ಸಿನಿಮಾಗೆ ಕರೆದು ಕೃಷ್ಣನ ಪಾತ್ರಕ್ಕೆ ಮೇಕಪ್ ಹಾಕಿಸಿದ ಸಂದರ್ಭವನ್ನು ಅವರು ಸ್ಮರಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಮಾತನಾಡಿ,
“ಕೆಲಸದ ಒತ್ತಡದ ನಡುವೆ ಮನಸ್ಸಿಗೆ ಹಿತ ನೀಡುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು. ಸಂಸ್ಕೃತಿ ಮತ್ತು ಸಂಗೀತ ಮನುಷ್ಯನಿಗೆ ನಿಜವಾದ ಸಂತೋಷ ನೀಡುತ್ತವೆ. ಮನಸ್ಸು ಹಗುರವಾಗಿಸಲು, ಬದುಕು ಹರ್ಷವಾಗಿಸಲು ಇವುಗಳ ಪಾತ್ರ ಅಪಾರ ಎಂದರು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಪ್ರಶಾಂತ ಶೆಟ್ಡಿಯವರ ಕುಟುಂಬವೇ ಒಂದು ಕಲಾ ಕುಟುಂಬವಾಗಿದೆ. ಈ ಕಲಾವಿದರನ್ನು ಇನ್ನೂ ಎತ್ತರಕ್ಕೆ ಬೆಳೆಯುವಂತಾಗಬೇಕು. ಕಲಾವಿದರಿಗೆ ರಾಜಾಶ್ರಯದಲ್ಲಿದ್ದ ಪ್ರೋತ್ಸಾಹ ಇಂದಿನ ಸರಕಾರದಲ್ಲಿ ಇಲ್ಲದಿರುವುದು ಬೇಸರದ ಸಂಗತಿ. ಸರಕಾರ ಮಠ ಮಸೀದಿಗಳಿಗೆ ಸಹಾಯಧನ ನೀಡುವಂತೆಯೇ ಕಲೆ ಹಾಗೂ ಸಾಹಿತ್ಯದ ಸಂಸ್ಥೆಗಳಿಗೂ ನೀಡುವಂತಾಗಬೇಕು ಎಂದು ಹೇಳಿ ಪಾಲಕರಾದವರು ಮಕ್ಕಳಲ್ಲಿ ಸಾಂಸ್ಕೃತಿಕ ಅಭಿರುಚಿ ಮೂಡಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಹಿರಿಯ ಪತ್ರಕರ್ತ ವಿಠ್ಠಲದಾಸ್ ಕಾಮತ್, ಹಿರಿಯ ನ್ಯಾಯವಾದಿ ನಾಗರಾಜ ನಾಯಕ, ಚಲನಚಿತ್ರ ಕಲಾವಿದೆ ಜ್ಯೋತ್ಸ್ನಾ ನಾರ್ವೇಕರ್ ಮಾತನಾಡಿದರು. ವೇದಿಕೆಯಲ್ಲಿ ಬೆಳಂಬಾರದ ನಾಟಿ ವೈದ್ಯ ಹನುಮಂತ ಗೌಡ, ಬೆಂಗಳೂರಿನ ಉದ್ಯಮಿ ಶಂಕರ ಗೋಕರ್ಣ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ರಾಜೀವ್ ಗಾಂಧಿ ಶ್ರೇಷ್ಠ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಮಹೇಶ್ ನಾಯಕ ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಕಲಾವಿದ, ಸಂಗೀತ ನಿರ್ದೇಶಕ ನಾಗರಾಜ ಜಾಂಬಳೇಕರ, ನಿವೃತ್ತ ಉಪನ್ಯಾಸಕರಾದ ಅನಂತ ವಿ. ಶೆಟ್ಟಿ, ಉಪನ್ಯಾಸಕ ಮಹೇಶ ನಾಯಕ, ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ, ಚಲನಚಿತ್ರ ಕಲಾವಿದೆ ಜ್ಯೋತ್ಸ್ನಾ ನಾರ್ವೇಕರ, ಲೇಖಕ ಕೃಷ್ಣ ನಾಯ್ಕ, ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಎನ್. ಶೆಟ್ಟಿ ಬಾಳೆಗುಳಿ, ಡಾ.ರಾಜಕುಮಾರ ಹಿರಿಯ ಅಭಿಮಾನಿ ದಿಗಂಬರ ಲಕ್ಷೇಶ್ವರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಲಾಭಾರತಿ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸಂಗೀತ ಹಾಗೂ ಧ್ಯಾನದ ಮಹತ್ವವನ್ನು ವಿವರಿಸಿ ‘ಪಿರಮಿಡ್’ ನಿರ್ಮಿಸುವ ಆಶಯವನ್ನು ವ್ಯಕ್ತಪಡಿಸಿದರು. ದರ್ಶಿನಿ ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಸುಧಾ ಪ್ರಶಾಂತ ಶೆಟ್ಟಿ ಡಾ. ಎ.ಸಿ.ವಾಲಿ ಮಹಾರಾಜರನ್ನು ಹಾಗೂ ನಿತಿನ್ ನಾಯ್ಕ ನೀರ್ನಳ್ಳಿ ರಾಮಕೃಷ್ಣರನ್ನು ಪರಿಚಯಿಸಿದರು. ವರ್ಷಿಣಿ ಪ್ರಶಾಂತ ಶೆಟ್ಟಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಜ್ಯೂನಿಯರ್ ರಾಜಕುಮಾರ ಅವರು ಡಾ.ರಾಜಕುಮಾರ ಅವರ ಅಭಿನಯ, ಹಾಡುಗಳು ಮತ್ತು ಮಿಮಿಕ್ರಿ ಮೂಲಕ ರಂಜಿಸಿದರು. ತಾಲೂಕಿನ ಉದಯೋನ್ಮಖ ಗಾಯಕ ಗಾಯಕಿಯರಿಂದ ಸಂಗೀತ ಮನರಂಜನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಡುವೆ ಪ್ರೇಕ್ಷಕರಿಗಾಗಿ ಡಾ.ರಾಜಕುಮಾರ ಅವರ ಜೀವನದ ಕುರಿತ ರಸಪ್ರಶ್ನೆಗಳನ್ನು ಕೇಳಲಾಯಿತು. ಹಾಗೂ ಬಹುಮಾನ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ವನಿತಾ ಶೇಟ್ ಕಾರವಾರ, ಮನರಂಜನಾ ಕಾರ್ಯಕ್ರಮವನ್ನು ನಿತೀನ್ ನಾಯ್ಕ ಮತ್ತು ಮೋಹಿತ್ ಹೊನ್ನಾವರ ರವರು ನಿರೂಪಿಸಿದರು. ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರ ತಿಮ್ಮಣ್ಣ ಭಟ್ ವಂದಿಸಿದರು.
Be the first to comment