ಕರ್ನಾಟಕ ಪ್ರಕಾಶಕರ ಸಂಘವು ನೀಡುವ ೨೦೨೫-೨೦೨೬ನೆಯ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿವೆ. ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅಧ್ಯಕ್ಷತೆಯ ಸಮಿತಿಯು ಈ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ.
ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶನ ಪ್ರಶಸ್ತಿ ಗೆ ಉತ್ತರಕನ್ನಡದ ಬಂಡಾಯ ಪ್ರಕಾಶನದ ಯಮುನಾ ಗಾಂವಕರ ಹಾಗೂ ಡಾ. ಗೋಪಾಲಕೃಷ್ಣ ಪುಸ್ತಕ ಪರಿಚಾರಕ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣದ ಪಲ್ಲವ ಪ್ರಕಾಶನದ ವೆಂಕಟೇಶ ಆಯ್ಕೆಯಾಗಿದ್ದಾರೆ. ಈ ಎರಡೂ ಪ್ರಶಸ್ತಿಗಳು ರೂ. ೧೫ ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.
ಇದೇ ಸಂದರ್ಭದಲ್ಲಿ ಪ್ರಕಾಶನೋದ್ಯಮಕ್ಕೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ವಿವಿಧ ಕ್ಷೇತ್ರಗಳ ಐವರನ್ನು ಆಯ್ಕೆ ಮಾಡಲಾಗಿದೆ.
ಮುದ್ರಣ ಗೌರವ: ವೆಂಕಟೇಶ್, ರೀಗಲ್ ಪ್ರಿಂಟ್ಸ್, ಬೆಂಗಳೂರು
ಪುಸ್ತಕ ವಿನ್ಯಾಸ ಗೌರವ : ಜಿ. ಅರುಣ್ ಕುಮಾರ್, ಬೆಂಗಳೂರು
ಪುಸ್ತಕ ಪರಿಚಾರಿಕೆ ಗೌರವ ೧ : ಪುರುಷೋತ್ತಮ ರಾವ್, ಕೋಲಾರ
ಪುಸ್ತಕ ಪರಿಚಾರಿಕೆ ಗೌರವ ೨ : ವಿಜಯಲಕ್ಷ್ಮೀ ಕಟ್ಟಿ, ಬೆರಗು ಪ್ರಕಾಶನ, ವಿಜಯಪುರ.
ಪುಸ್ತಕ ಅರಿವಿನ ಗೌರವ : ಕಾನೂನು ಪರಿಣಿತ ಶ್ರೀ ವೈ. ಜಿ. ಮುರಳೀಧರನ್
ಇವರುಗಳು ಆಯ್ಕೆಯಾಗಿದ್ದಾರೆ.

ಎಪ್ರಿಲ್ 23 ರಂದು ಪ್ರಶಸ್ತಿ ಪ್ರಧಾನ: ವಿಶ್ವ ಪುಸ್ತಕ ದಿನಾಚರಣೆ, ಎಪ್ರಿಲ್ ೨೩ ರಂದು ಸಂಜೆ ೫ಕ್ಕೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಅಧಿಕಾರಿಗಳಾಗಿದ್ದ ಐ. ಎಂ. ವಿಟ್ಠಲಮೂರ್ತಿ ಅವರು ಪ್ರಶಸ್ತಿ ವಿತರಿಸಲಿದ್ದಾರೆ. ಸಂಘದ ಅಧ್ಯಕ್ಷರಾದ ಡಾ. ವಸುಂಧರ ಭೂಪತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಾಶಕರ ಸಂಘ ತಿಳಿಸಿದೆ.
ಯಮುನಾ ಗಾಂವ್ಕರ್ ಪರಿಚಯ :
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗುಂದದವರಾಗಿರುವ ಯಮುನಾ ಗಾಂವಕರ ಕಾನೂನು ಪದವಿಧರರು ಮತ್ತು ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರೈಸಿದ್ದಾರೆ. ವಿದ್ಯಾರ್ಥಿ-ಯುವಜನ ಸಂಘಟನೆ ಎಸ್.ಎಫ್.ಐ-ಡಿವೈಎಫೈ ಹಾಗೂ ಸಾಕ್ಷರತೆ ಆಂದೋಲನ ಮತ್ತು ಉತ್ತರ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘಟನೆ ಚಿಂತನ ಮೂಲಕ ಸಾರ್ವಜನಿಕವಾಗಿ ತೊಡಗಿಸಿಕೊಂಡಿರುವರು. ಸಹಯಾನ (ಡಾ. ಆರ್. ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ,) ಕೆರೆಕೋಣ ಟ್ರಸ್ಟಿ. ಪ್ರೀತಿಪದ (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜವಿಜ್ಞಾನ ಅಧ್ಯಯನ ಕೇಂದ್ರ)ದ ಸಂಸ್ಥಾಪಕ ಕಾರ್ಯದರ್ಶಿ, ಬಂಡಾಯ ಪ್ರಕಾಶನ, ಹೊನ್ನಾವರ ಈ ಸಂಸ್ಥೆಯಲ್ಲಿ ನಿರ್ದೇಶಕರಾಗಿ, ವ್ಯವಸ್ಥಾಪಕರಾಗಿ ಕೆಲಸ. ವಿದ್ಯಾರ್ಥಿ ಯುವಜನರಿಗೆ, ಪೌರ ಕಾರ್ಮಿಕರಿಗೆ ಸ್ವಂತ ಗ್ರಂಥಾಲಯ ಹೊಂದಲು ಪುಸ್ತಕ ಸಂಗ್ರಹಿಸಿ ಸಹಾಯ. ಶಾಲೆ ಕಾಲೇಜಿಗೆ ಪುಸ್ತಕ ಜೋಳಿಗೆ ಸಹಾಯ. ನಾಡಿನ ಪ್ರಗತಿಪರ ಪ್ರಕಾಶನಗಳ/ಸಾಹಿತಿಗಳ ಪುಸ್ತಕಗಳನ್ನು ಖರೀದಿಸಿ ಓದುಗರಿಗೆ ತಲುಪಿಸಲು ಸಹಾಯ. ಬಸ್ಸು, ಸಭೆ, ಸಮಾರಂಭ, ಮದುವೆ ಮನೆ ಇತ್ಯಾದಿ ಗಳಲ್ಲಿ ಪುಸ್ತಕ ಪರಿಚಯ ಮತ್ತು ಮಾರಾಟಕ್ಕೆ ಪ್ರಯತ್ನ.
ಉಯಿಲಿಗೆ ಸಹಿ ಹಾಕಿ, ಅಬ್ಬೆ ಮಡಿಲು, ಬೆಂದ ಅಕ್ಕಿಯ ಘಮಲು(ಕವನ ಸಂಕಲನಗಳು) ಕಣ್ಮುಚ್ಚಿದ ಗುಬ್ಬಚ್ಚಿ ಸುತ್ತಮುತ್ತ ಒಂದು ಸುತ್ತ್ತು – (ಲೇಖನಗಳ ಸಂಕಲನ) ಜೋಯ್ಡಾ: ಕಾಡೊಳಗಿನ ಒಡಲು (ಮಾನವಿಕ ಅಧ್ಯಯನ) ಮತ್ತು ಹೋರಾಟದ ಬಾವುಟ ಹಿಡಿದ ಉ ಕ ಅರಣ್ಯಭೂಮಿ ಅತಿಕ್ರಮಣ ಸಾಗುವಳಿದಾರರ ಕತೆ ಮುಂತಾದವು ಇವರ ಕೃತಿಗಳಾಗಿವೆ.
ಹೂವಿನಹಡಗಲಿಯ ಸಿಂಚನ ಕಾವ್ಯ ಪ್ರಶಸ್ತಿ. ಧಾರವಾಡದ ವೀಣಾ ಕುಲ್ಕರ್ಣಿ ಸ್ಮರಣಾರ್ಥ ಸಾಧನಾ ಮಹಿಳಾ ಸಾಹಿತಿ ಪ್ರಶಸ್ತಿ ಪಡೆದಿದ್ದಾರೆ.
ಈಗ ಕರ್ನಾಟಕ ಪ್ರಕಾಶರ ಸಂಘವು ನೀಡುವ ೨೦೨೬ನೆಯ ಸಾಲಿನ ಶ್ರೀಮತಿ ನಂಜನಗೂಡು ತಿರುಮಲಾಂಬ ಪ್ರಕಾಶಕಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದು ೧೫ ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.
ಪಲ್ಲವ ಪ್ರಕಾಶನ, ಪರಿಚಯ:
ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣದಲ್ಲಿ ೨೦೦೫ ರಲ್ಲಿ ಜನ್ಮ ತಳೆದ ಪಲ್ಲವ ಪ್ರಕಾಶನ ಈವರೆಗೆ ೨೨೦ ಪುಸ್ತಕಗಳನ್ನು ಪ್ರಕಟಿಸಿದೆ. ಕಥೆ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ ಹೀಗೆ ಭಿನ್ನ ಪ್ರಕಾರಗಳಿಗೆ ಸೇರಿದ ವೈಚಾರಿಕ ಕೃತಿಗಳನ್ನು ಪ್ರಕಟಿಸುತ್ತಾ ಬಂದಿರುವ ಪಲ್ಲವ ಪ್ರಕಾಶನ, ಪ್ರಕಟಣೆಯನ್ನು ವ್ಯವಹಾರವೆಂದು ತಿಳಿಯದೆ, ಪುಸ್ತಕ ಸಂಸ್ಕೃತಿಯ ಮೂಲಕ ವೈಚಾರಿಕ ಜಗತ್ತನ್ನು ವಿಸ್ತರಿಸುವ ಕೆಲಸವೆಂದು ಭಾವಿಸಿದೆ.
ಹಿರಿಯ ಲೇಖಕರ ಕೃತಿಗಳ ಪ್ರಕಟಣೆಗಳಿಗೆ ತೋರುವ ಕಾಳಜಿಯನ್ನು ಹೊಸ ಬರಹಗಾರರ ಕೃತಿಗಳಿಗೂ ನೀಡಲಾಗುತ್ತದೆ. ಕವನ ಸಂಕಲನಗಳನ್ನು ಪ್ರಕಟ ಮಾಡಲು ಹಿಂದೇಟು ಹಾಕುತ್ತಿರುವ ಇಂದಿನ ದಿನಗಳಲ್ಲಿ ಹೊಸತಲೆಮಾರಿನ ಕವಿಗಳ ಮೊದಲ ಸಂಕಲನಗಳನ್ನು ಪ್ರಕಟಿಸಿ ಕನ್ನಡಕಾವ್ಯದ ಓದುಗರಿಗೆ ಪಲ್ಲವ ನೀಡುತ್ತಿದೆ
ಪಲ್ಲವ ಪ್ರಕಾಶನದ ಕೃತಿಗಳು ವಿಚಾರ, ವಿನ್ಯಾಸ ಮತ್ತು ಸುಂದರ ಮುದ್ರಣದ ಕಾರಣಕ್ಕಾಗಿ ಕನ್ನಡ ನಾಡಿನಾದ್ಯಂತ ಹರಡಿಕೊಂಡಿರುವ ಪುಸ್ತಕಪ್ರಿಯರ ವಿಶ್ವಾಸವನ್ನು ಗಳಿಸಿಕೊಂಡಿವೆ. ಹೀಗಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನಾಲ್ಕುಬಾರಿ ಪಲ್ಲವದ ಪುಸ್ತಕಗಳಿಗೆ ಪುಸ್ತಕ ಸೊಗಸು ಬಹುಮಾನಗಳು ದೊರೆತಿದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಅಂಕಿತ ಪುಸ್ತಕ ಪುರಸ್ಕಾರ ಹಾಗೂ ಕರ್ನಾಟಕ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘವು ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ನೀಡಿ ಗೌರವಿಸಿದೆ. ಪಲ್ಲವದ ಪ್ರಕಟಣೆಗಳಿಗೆ ಕರ್ನಾಟಕ ಸಾಹಿತ್ಯಆಕಾಡಮಿ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪುರಸ್ಕಾರ, ಕರ್ನಾಟಕ ಸಂಘದ ಬಹುಮಾನ, ಬೇಂದ್ರೆ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಪುತಿನಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ದೊರೆತಿವೆ. ಇತ್ತೀಚೆಗೆ ನಾಡಿನ ಹೆಸರಾಂತ ಕತೆಗಾರರಾದ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈಗ ಕರ್ನಾಟಕ ಪ್ರಕಾಶಕರ ಸಂಘವು ೨೦೨೬ನೆಯ ಸಾಲಿನ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿಯು ರೂ ೧೫ ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.
Be the first to comment