ದಾಂಡೇಲಿಯ ಅಭಿವೃದ್ದಿ ವಿಚಾರ ಹಾಗೂ ಇತರೆ ಸಾಮಾಜಿಕ ಸೇವಾ ಕಾರ್ಯಗಳಿಗೆ ಹಲವಾರು ಕೊಡುಗೆಗಳನ್ನು ನೀಡುತ್ತ ಬಂದಿರುವ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ದಾಂಡೇಲಿಯ ಕಾಮಧೇನು ಇದ್ದಂತೆ ಎಂದು ದಾಂಡೇಲಿಯ ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಅಭಿಪ್ರಾಯ ಪಟ್ಟರು.
ಅವರು ಶನಿವಾರ ರೋಟರಿ ಶಾಲೆಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಸಿಎಸ್ಆರ್ ಯೋಜನೆಯ ಮೂಲಕ ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ತಾಲೂಕಿಗೆ ಹಲವಾರು ಕೊಡುಗೆಗಲಕನ್ನು ನೀಡುತ್ತ ಬಂದಿದೆ. ನಮ್ಮ ರೋಟರಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗೆ ಸದಾ ಬೆಂಬಲವನ್ನು ಹಾಗೂ ಸಹಕಾರವನ್ನು ನೀಡುತ್ತಿದೆ. 15 ಲಕ್ಷ ರೂ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಹಾಗೂ 25 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಸರಿಸುಮಾರು 3.5 ಲಕ್ಷ ರೂ ವೆಚ್ಚದಲ್ಲಿ ಶಾಲೆಗೆ ಅತಿ ಅಗತ್ಯವಾಗಿ ಬೇಕಾಗಿದ್ದ ಬೆಂಚು, ಡೆಸ್ಕ್, ಹೀಗೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದೆ. ರೋಟರಿ ಕ್ಲಬ್ಬಿನ ಬಹುತೇಕ ಸೇವಾ ಕಾರ್ಯಕ್ರಮಗಳಿಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಕೈಜೋಡಿಸುತ್ತಲೇ ಬಂದಿದೆ. ಕೋವಿಡ್ ಸಂದರ್ಭದಲ್ಲಿ ದಾಂಡೇಲಿಯ ಜನ ಸಂಕಷ್ಟಪಟ್ಟಿರುವುದನ್ನು ಗಮನಿಸಿದ ಕಾರ್ಖಾನೆ ಕೋಟಿ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುಸಜ್ಜಿತವಾದ ಆಕ್ಸಿಜನ್ ಪ್ಲಾಂಟನ್ನು ನಿರ್ಮಿಸಿ ಕೊಟ್ಟಿರುವುದನ್ನು ಹಾಗೂ ನಗರದ ಅಭಿವೃದ್ದಿ ಇತರೆ ಸೇವಾ ವಿಚಾರಗಳಿಗೆ ಕೈಜೋಡಿಸಿದ್ದನ್ನು ದಾಂಡೇಲಿಯ ನಾಗರಿಕರು ಸ್ಮರಿಸಲೇ ಬೇಕಿದೆ ಎಂದರು.
ಕಾಗದ ಕಾರ್ಖಾನೆಯ ಜನಪರ ಕಾರ್ಯ ಚಟುವಟಿಕೆಗಳಿಗೆ ಸದಾ ಮಾರ್ಗದರ್ಶನ ನೀಡುತ್ತ ಬಂದಿರುವ ಕಾರ್ಖಾನೆಯ ಮಾಲಕರಾದ ಶ್ರೀಕುಮಾರ್ ಬಾಂಗಾಡ, ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಹಾಗೂ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೆ ಸದಾ ಸಹಕಾರವನ್ನು ನೀಡುತ್ತಾ ಬಂದಿರುವ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ ಜೆ.ಆರ್ ಮತ್ತು ರಾಜೇಶ್ ತಿವಾರಿಯವರ ಕ್ರಿಯಾಶೀಲ ಕಾರ್ಯವೈಖರಿಯನ್ನು ರೋಟರಿ ಕ್ಲಬ್ ಮತ್ತು ರೋಟರಿ ಶಿಕ್ಷಣ ಸಂಸ್ಥೆ ಸದಾ ಶ್ಲಾಘಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಮಿಥುನ್ ನಾಯಕ, ಪ್ರಮುಖರಾದ ಡಾ.ಆಸೀಫ್ ದಫೇದಾರ್, ಶೇಖರ್ ಪೂಜಾರಿ ಮತ್ತು ಅಭಿಷೇಕ ಕನ್ಯಾಡಿ ಉಪಸ್ಥಿತರಿದ್ದರು.
Be the first to comment