ದಾಂಡೇಲಿಯ ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಕೆನೋಪಿ ವಾಕ್ ನಿರ್ಮಾಣ ಮಾಡ್ತಾರಂತೆ….!

ದಾಂಡೇಲಿಯ ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಕೆನೋಪಿ ವಾಕ್ ನಿರ್ಮಾಣಕ್ಕೆ ಚಿಂತನೆಯನ್ನು ನಡೆಸಲಾಗಿದೆ ಹಾಗೂ ದಂಡಾಕರಣ್ಯ ಇಕೋ ಪಾರ್ಕಿಗೆ ಮತ್ತಷ್ಟು ವೈಭವದ ಜೊತೆಗೆ ಹೊಸ ಕಾಯಕಲ್ಪವನ್ನು ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ್ ಕೆ.ಸಿ ಅವರು ಹೇಳಿದರು.

ಅವರು ಶುಕ್ರವಾರ ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಇಕೋ ಪಾರ್ಕ್ ಉದ್ಯಾನವನದ ಪ್ರಗತಿ ಹಾಗೂ ನಗರವನ ಯೋಜನೆಯ ಅಡಿಯಲ್ಲಿ ಮುಂದೆ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ದಂಡಕಾರಣ್ಯ ಇಕೋ ಪಾರ್ಕ್ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ನಗರವನ ಯೋಜನೆಯು ಮಂಜೂರಾಗಿದ್ದು. ಈ ಯೋಜನೆಯಡಿ ಈ ಉದ್ಯಾನವನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅತೀ ಎತ್ತರದ ಗೋಪುರ ನಿರ್ಮಾಣ ಕಾರ್ಯ ನಡೆಯಲಿದೆ. ಬಹಳ ಮುಖ್ಯವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗಣಿತ ಮತ್ತು ವಿಜ್ಞಾನ ಪ್ರಯೋಗಾಲಯವನ್ನು ವಿನೂತನ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಆಕರ್ಷಕ ಸಲಕರಣೆಗಳನ್ನು ಜೋಡಿಸಲಾಗುತ್ತದೆ. ವಾಕಿಂಗ್ ಪಾಥ್ ಹಾಗೂ ಸೈಕಲ್ ಸಂಚಾರಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇಲ್ಲಿರುವ ಯಾವುದೇ ಮರ-ಗಿಡಗಳಿಗೆ ಹಾನಿಯಾಗದೆ ಅವುಗಳ ಸಂರಕ್ಷಣೆಯ ಜೊತೆ ಜೊತೆಗೆ ಪರಿಸರ ಸಂರಕ್ಷಣೆ ಜಾಗೃತಿಯನ್ನು ಮೂಡಿಸುವ ವಿವಿಧ ಕಾರ್ಯಗಳು ನಡೆಯಲಿದೆ. ಮರೆಯಾಗುತ್ತಿರುವ ದೇಶಿಯ ಆಟಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿಯೂ ಚಿಂತನೆಯನ್ನು ನಡೆಸಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಇಡೀ ದಿನ ಇಲ್ಲಿ ಇದ್ದು ಇಲ್ಲಿಯ ಮನೋರಂಜನೆ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಉದ್ಯಾನವನ ಸಮಿತಿಯ ಸರ್ವ ಸದಸ್ಯರು ಹಾಗೂ ನಗರದ ಜನತೆಯ ಸಹಕಾರದಲ್ಲಿ ದಂಡಕಾರಣ್ಯ ಇಕೋ ಪಾರ್ಕನ್ನು ವಿಶಿಷ್ಟ ಪಾರ್ಕನಾಗಿ ರೂಪುಗೊಳಿಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದ ಅವರು ಇಲ್ಲಿ ಕೆನೋಪಿ ವಾಕ್ ನಿರ್ಮಾಣಕ್ಕೆ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಲಾಗಿದೆ. ಈ ಕಾರ್ಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಗೂ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಎಂದರು.

ಸಭೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ ಚೌಹ್ವಾಣ್ ಅವರು ಕೇಂದ್ರ ಸರಕಾರದ ನಗರವನ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಕುರಿತು ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ವಲಯಾರಣ್ಯಾಧಿಕಾರಿ ಎನ್.ಎಲ್.ನದಾಫ್ ಉಪಸ್ಥಿತರಿದ್ದರು. ಸಭೆಯಲ್ಲಿ ಸಮಿತಿ ಸದಸ್ಯರು ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಮಿತಿ ಸದಸ್ಯರುಗಳಾದ ಮೋಹನ‌ ಹಲವಾಯಿ,ಕೀರ್ತಿ ಗಾಂವಕರ ಅನಿಲ್ ದಂಡಗಲ್, ಸಂದೇಶ್ ಎಸ್.ಜೈನ್, ಆಹಾರ ನಿರೀಕ್ಷಕ ಗೋಪಿ ಚೌವ್ಹಾಣ್, ಅರಣ್ಯ ಇಲಾಖೆ ಹಾಗೂ ಇಕೋ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯ್ಕ ದಂಡಕಾರಣ್ಯ ಇಕೋ ಪಾರ್ಕಿನ ಪ್ರಗತಿ ವರದಿ ಮತ್ತು ಜಮಾ‌ ಖರ್ಚಿನ ವರದಿಯನ್ನು ಮಂಡಿಸಿದರು. ಗಜಾನನ ಕರಗಾಂವಕರ ಸ್ವಾಗತಿಸಿ, ವಂದಿಸಿದರು.

ಏಸಿಎಪ್ ಚೌಹಾಣರಿಗೆ ಸನ್ಮಾನ
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಡ್ತಿಗೊಂಡು ವರ್ಗಾವಣೆಯಾಗುತ್ತಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್ ಚೌವ್ಹಾಣ್ ಅವರನ್ನು ದಂಡಕಾರಣ್ಯ ಇಕೋ ಪಾರ್ಕ್ ಸಿಬ್ಬಂದಿಗಳ ಪರವಾಗಿ ಸನ್ಮಾನಿಸಿ, ಗೌರವಿಸಿದರು.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*