ನಿರ್ಮಾಣಗೊಂಡು ನಾಲ್ಕು ತಿಂಗಳುಗಳಾದರೂ ಉದ್ಘಾಟನೆಗೊಳ್ಳದ ದಾಂಡೇಲಿಯ ಅಗ್ನಿಶಾಮಕ ಠಾಣೆ

ದಾಂಡೇಲಿಗೊಂದು ಅಗ್ನಿಶಾಮಕ ಠಾಣೆ ಬೇಕೆಂಬ ದಾಂಡೇಲಿಗರ ಬಹುದಿನಗಳ ಕನಸಿನಂತೆ ಮೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ಯೊಂದು ನಿರ್ಮಾಣಗೊಂಡು ನಾಲ್ಕು ತಿಂಗಳು ಕಳೆದರೂ, ಹಲವು ಕಾರಣಗಳಿಂದಾಗಿ ಉದ್ಘಾಟನೆಗೊಳ್ಳದೆ ಉಳಿದಿದೆ.

ತಾಲೂಕಿಗೊಂದು ಅಗ್ನಿಶಾಮಕ ಠಾಣೆ ಸಾಕು ಎಂಬ ಸರಕಾರದ ನಿಯಮದಂತೆ ದಾಂಡೇಲಿಯಲ್ಲಿ ಇಷ್ಟು ವರ್ಷಗಳ ಕಾಲ ಅಗ್ನಿ ಶಾಮಕ ಠಾಣೆ ತೆರೆದುಕೊಂಡಿರಲಿಲ್ಲ. ದಾಂಡೇಲಿ ತಾಲೂಕಾದ ನಂತರದಲ್ಲಿ ಇಲ್ಲಿಯ ಜನರ ಬೇಡಿಕೆಯಂತೆಯೇ ಇಲ್ಲೊಂದು ಅಗ್ನಿಶಾಮಕ ಠಾಣೆ ತರವಲ್ಲಿ ಶಾಸಕ ಆರ್.ವಿ‌ ದೇಶಪಾಂಡೆಯವರು ಪ್ರಯತ್ನಿಸಿದ್ದರು. ಮೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಂಬೇವಾಡಿಯ ಸರ್ಕಾರಿ ಪದವಿ ಕಾಲೇಜಿನ ಹಿಂಭಾಗದಲ್ಲಿ ಅಗ್ನಿಶಾಮಕ ಠಾಣೆಯ ಬೃಹತ್ ಕಟ್ಟಡವು ನಿರ್ಮಾಣಗೊಂಡಿತು. ಈ ಕಟ್ಟಡ ನಿರ್ಮಾಣಗೊಂಡು ನಾಲ್ಕು ತಿಂಗಳುಗಳ ಕಳೆದು ಹೋಗಿದೆ. ಆದರೆ ಅದು ಲೋಕಾರ್ಪಣೆಗೊಳ್ಳುತ್ತಲೇ ಇಲ್ಲ.

ದಾಂಡೇಲಿ ಇದು ಉದ್ಯಮ ನಗರವಾಗಿ, ಪ್ರವಾಸೋದ್ಯಮ ನಗರವಾಗಿ ಇರುವ ಸಂದರ್ಭದಲ್ಲಿ ಇಲ್ಲಿ ಹಲವಾರು ಅಗ್ನಿ ಅವಘಢಗಳು ಸಂಭವಿಸುತ್ತಿರುತ್ತವೆ. ಹಾಗೆ ಸಂಭವಿಸಿದಾಗ ಇಲ್ಲಿ ತಕ್ಷಣ ಆಪತ್ಪಾಂಧವನಂತೆ ಬರುತ್ತಿದ್ದುದು ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಅಗ್ನಿಶಾಮಕ ದಳದವರು ಮಾತ್ರ. ಇತ್ತೀಚಿನ ವರ್ಷಗಳಲ್ಲಿ ಹಳಿಯಾಳ ಅಗ್ನಿಶಾಮಕ ಠಾಣೆಯವರು ಮತ್ತು ಜೋಯಿಡಾ ಅಗ್ನಿಶಾಮಕ ದಳದವರು ದೊಡ್ಡ ಮಟ್ಟದಲ್ಲಿ ಅಗ್ನಿ ಅವವಘಢಗಳು ಸಂಭವಿಸಿದಾಗ ಧಾವಿಸುತ್ತಿದ್ದರು. ಹಳಿಯಾಳ ಮತ್ತು ಜೋಯಿಡಾದಿಂದ ಅಗ್ನಿಶಾಮಕ ವಾಹನಗಳು ಬರುವವರೆಗೆ ಒಂದು ಗಂಟೆಗೂ ಹೆಚ್ಚಿನ ಸಮಯ ಮೀರುತಿದ್ದುದರಿಂದ ಸಂಭವಿಸಿದ ಅಗ್ನಿ ಅವಗಢಗಳಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿತ್ತು. ಹಾಗಾಗಿ ಸರ್ಕಾರದ ಅಗ್ನಿಶಾಮಕ ಠಾಣೆಯೊಂದು ದಾಂಡೇಲಿಯಲ್ಲಿ ಇರಬೇಕೆಂಬ ಕಾರಣಕ್ಕಾಗಿ ದಾಂಡೇಲಿ ತಾಲೂಕಾದ ನಂತರ ಆದರೆ ಬೇಡಿಕೆ ಹೆಚ್ಚಾಗಿ ಇಲ್ಲೊಂದು ಅಗ್ನಿಶಾಮಕ ಠಾಣೆ ನಿರ್ಮಾಣವಾಗುವಂತಾಯಿತು.

ವಾಹನವಿಲ್ಲ, ಸಿಬ್ಬಂದಿಗಳ ನೇಮಕವಿಲ್ಲ :
ಒಂದು ಅಗ್ನಿಶಾಮಕ ಠಾಣೆಗೆ ಕನಿಷ್ಠ 12 ಫೈಯರ್ ಮ್ಯಾನ್, ಫೈರ್ ಸ್ಟೇಷನ್ ಆಪರೇಟರ್ ಸೀರಿದಂತೆ 25ಕ್ಕೂ ಹೆಚ್ಚು ಸಿಬ್ಬಂದಿಗಳ ಅವಶ್ಯಕತೆ ಇರುತ್ತದೆ. ಆದರೆ ದಾಂಡೇಲಿಯ ಠಾಣೆಗಾಗಿ ಇದುವರೆಗೂ ಈ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಜೊತೆಗೆ ಅಗ್ನಿಶಾಮಕ ಠಾಣೆಯಲ್ಲಿ ಇರಲೇಬೇಕಾದ ಬೆಂಕಿನಂದಿಸುವ ವಾಹನವೂ ಕೂಡ ಮಂಜೂರಾಗಿ ಬಂದಿಲ್ಲ. ಈ ಕಾರಣದಿಂದಾಗಿ ಅಗ್ನಿಶಾಮಕ ಠಾಣೆ ಇದುವರೆಗೂ ಉದ್ಘಾಟನೆಗೊಂಡಿಲ್ಲ ಎನ್ನಲಾಗಿದೆ.

ಮೂಲ ಸೌಕರ್ಯಗಳೇ ಇಲ್ಲ :
ಸುಮಾರು ಮೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ದಾಂಡೇಲಿ ಅಗ್ನಿಶಾಮಕ ದಳದ ಕಟ್ಟಡವೇನು ನಿರ್ಮಾಣಗೊಂಡಿದೆ. ಹೊರಗಿನಿಂದ ನೋಡುವಾಗ ಈ ಕಟ್ಟಡ ಅತ್ಯಂತ ವಿಶಾಲವಾಗಿ ಸುಂದರವಾಗಿ ಕಾಣುತ್ತದೆ ಆದರೆ ಕಟ್ಟಡದ ಒಳಗಡೆ ಎಲ್ಲವೂ ಖಾಲಿ ಖಾಲಿ. ಕಟ್ಟಡದ ಒಳಗಡೆ ಇರಬೇಕಾದ ಫರ್ನಿಚರ್ ಗಳು, ಕುರ್ಚಿ, ಟೇಬಲಗಳು ಹಾಗೂ ಇತರೆ ಅವಶ್ಯಕ ಮೂಲ ಸೌಕರ್ಯಗಳು ಇದುವರೆಗೂ ಸಿದ್ದಗೊಳ್ಳಲೇ ಇಲ್ಲ. ಠಾಣೆ ಸಂಪರ್ಕಿಸುವ ರಸ್ತೆಯೊಂದು ಆಗಬೇಕಿದೆ. ನೀರು ಹಾಗೂ ಬೆಳಕಿನ ವ್ಯವಸ್ಥೆಯು ಆಗಿಲ್ಲ ಎಂಬ ಮಾಹಿತಿ ಇದೆ.

ಕನಿಷ್ಠ ಎರಡು ಕೋಟಿ ರುಗಳ ಅವಶ್ಯಕತೆ:
ದಾಂಡೇಲಿಯ ಅಗ್ನಿಶಾಮಕ ಠಾಣೆ ಉದ್ಘಾಟನೆಗೊಳ್ಳುವ ಮುನ್ನ ವಾಹನ, ಮೂಲಸೌಕರ್ಯ ಸೇರಿದಂತೆ ಒಟ್ಟು ಖರ್ಚುಗಳಿಗೆ ಕನಿಷ್ಠ ಎರಡು ಕೋಟಿ ರೂಪಾಯಿಗಳ ಅವಶ್ಯಕತೆ ಇದೆ ಎಂಬ ಮಾಹಿತಿ ಇದೆ. ಸಿಬ್ಬಂದಿಗಳ ನೇಮಕ ಮೂಲಸೌಕರ್ಯಗಳ ಅಗತ್ಯಕ್ಕೆ ಕುರಿತಂತೆ ಪ್ರಸ್ತಾವನೆ ಹೋಗಿದ್ದರೂ ಕೂಡ ಆದರೆ ಇದುವರೆಗೂ ಸರ್ಕಾರದಿಂದ ಯಾವ ಮಂಜೂರಾತಿ ಆಗಿಲ್ಲ ಎಂದು ತಿಳಿದು ಬಂದಿದೆ. ಮೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಬಳಕೆಯಾಗದೆ ಇದ್ದರೆ ತಿಂಗಳು ಕಳೆದಂತೆ ಪಾಳು ಬೀಳುವ ಸಾಧ್ಯತೆ ಇರುತ್ತದೆ.

ರಾಜ್ಯದ 15ಕ್ಕೂ ಹೆಚ್ಚು ಸ್ಥಳಗಳಲ್ಲಿಯೂ ಇದೇ ಸ್ಥಿತಿ :
ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ಅಗ್ನಿಶಾಮಕ ಠಾಣೆ ಇರಬೇಕೆಂಬ ಸರಕಾರದ ನಿಲುವಿನ ಹಿನ್ನೆಲೆಯಲ್ಲಿ ಕಟ್ಟಡಗಳಿಗೆ ಹಣವನ್ನು ಬಿಡುಗಡೆ ಮಾಡಿ ರಾಜ್ಯದ ಸುಮಾರು 15 ತಾಲ್ಲೂಕುಗಳಲ್ಲಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಇವೆಲ್ಲವೂ ಬಹುತೇಕ ಹೊಸ ತಾಲೂಕುಗಳು ಎಂಬ ಮಾಹಿತಿ ಇದೆ. ಹೀಗೆ 15 ತಾಲ್ಲೂಕುಗಳಲ್ಲಿ ಹೊಸ ಅಗ್ನಿಶಾಮಕ ಠಾಣೆ ಕಟ್ಟಡಗಳು ನಿರ್ಮಾಣಗೊಂಡಿದ್ದರೂ ಕೂಡ ಮೂಲಸೌಕರ್ಯಗಳ ಕೊರತೆ ಮತ್ತು ಸಿಬ್ಬಂದಿಗಳ ನೇಮಕಾತಿ ಇಲ್ಲದೆ ಉದ್ಘಾಟನೆಗೊಳ್ಳದೆ ಕಾಯುತ್ತಿವೆ ಎನ್ನಲಾಗಿದೆ.

ಸದ್ಯದಲ್ಲಿಯೇ ಉದ್ಘಾಟನೆಗೊಳ್ಳಲಿದೆ :
ದಾಂಡೇಲಿಗೊಂದು ಅಗ್ನಿ ಶಾಮಕ ಠಾಣೆ ಬೇಕೆಂಬುದು ಬಹಳ ವರ್ಷಗಳ ಬೇಡಿಕೆ ಇತ್ತು. ಸರ್ಕಾರ ಮೂರು ಕೋಟಿ ರೂಗಳ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಿದೆ. ಸದ್ಯದಲ್ಲಿಯೇ ಸಿಬ್ಬಂದಿಗಳ ನೇಮಕವಾಗಲಿದೆ. ಮೂಲಸೌಕರ್ಯ ಒದಗಿಸುವ ಕೆಲಸವಾಗಲಿದೆ. ಅತಿ ಶೀಘ್ರವಾಗಿ ಅಗ್ನಿಶಾಮಕ ಠಾಣೆಯನ್ನು ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನಿಲ್ ಕುಮಾರ ತಿಳಿಸಿದ್ದಾರೆ.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*