ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿಕಾರಿದ್ದು, ತಿಂದ ಮನೆಗೆ ಕನ್ನ ಹಾಕಬೇಡಿ, ಗಂಟು ಮೂಟೆ ಕಟ್ಟಿ ಹೊರಡಿ ಎಂದು ರಾಜ್ಯಪಾಲರಿಗೆ ಆಗ್ರಹಿಸಿದ್ದಾರೆ.
ನೀವು ಹಿಂದಿ ಸಾಮ್ರಾಜ್ಯಶಾಹಿಯ ಲಾಬಿಯ ಪರವಾಗಿ ಮಾತನಾಡುತ್ತಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಕನ್ನಡಿಗರು ಔದಾರ್ಯವಂತರು. ನಮ್ಮ ನೆಲದಲ್ಲಿ ನಿಮಗೆ ಐಶಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜಭವನ ನಡೆಯುತ್ತಿದೆ. ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ. ಇದೇ ಅಧಿಕಪ್ರಸಂಗವನ್ನು ಮುಂದುವರೆಸಿದರೆ ರಾಜ್ಯಪಾಲರೇ, ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ನಾವು ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರಕ್ಕೆ ನೀವು ಬರೆದ ಪತ್ರದ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿದೆ. ನೀವು ಹೇಳಿದ್ದೀರಿ. ನಿಮ್ಮ ಈ ಪತ್ರ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತೆ ಇದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ ಎಂದು ಕಿಡಿಕಾರಿದ್ದಾರೆ.
Be the first to comment