ದಾಂಡೇಲಿಯಲ್ಲಿ ಜನಾಕರ್ಷಿಸಿದ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ

ದಾಂಡೇಲಿ : ಸಣ್ಣ ಉದ್ಯಮಿಗಳನ್ನು ಮತ್ತು ಗೃಹೋತ್ಪನ್ನಗಳನ್ನು ಪ್ರೋತ್ಸಾಹಿಸುವ ಹಾಗೂ ಬೆಂಬಲಿಸುವ ನಿಟ್ಟಿನಲ್ಲಿ ದಾಂಡೇಲಿಯ ರೋಟರಿ ಕ್ಲಬ್, ಕುಂದಾಪುರದ ಬೆನಕ ಇವೆಂಟ್ಸ್ ಮತ್ತು ಅಂಕೋಲಾದ ಶ್ರೀ ಗುರು ರಾಘವೇಂದ್ರ ಇವೆಂಟ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಬೃಹತ್ ಆಹಾರ ಮೇಳ ಮತ್ತು ಸ್ವದೇಶಿ ಮೇಳ ದಾಂಡೇಲಿಯ ಜನರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ.

ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ವಿಶೇಷವಾಗಿ ಇಳಕಲ್ ಹಾಗೂ ಖಾದಿ ಸೀರೆಗಳು, ಅಲಂಕಾರಿಕ ವಸ್ತುಗಳು, ಗೃಹಬಳಕೆಯ ವಸ್ತುಗಳು, ಬಿದಿರಿನ ಉತ್ಪನ್ನಗಳು, ದೀಪಾಲಂಕೃತ ಮಣ್ಣಿನ ಮಡಕೆಗಳು, ಹಲಸಿನ ಹಣ್ಣಿನ ಜಾಮ್, ಹಲಸಿನ ಉಪ್ಪಿನಕಾಯಿ, ಹುಣಸೆ ಹುಳಿ ಚಟ್ನಿ, ಅಪ್ಪೆ ಮಿಡಿ ಚಟ್ನಿ, ಹಲಸಿನ ಸ್ವಾಪ್ಟಿ, ನ್ಯಾಚುರಲ್ ಐಸ್ ಕ್ರೀಮ್, ಮಣ್ಣಿನ ಆಭರಣಗಳು, ಉತ್ತರ ಭಾರತದ ಆಹಾರಗಳು, ಗೋವಾದ ಹೆಸರಾಂತ ಚಾಕಲೇಟ್, ಸ್ಟ್ರಾಬೆರಿ ತಿನಿಸುಗಳು ಮಾವಿನ ಹಣ್ಣಿನ ಸ್ವೀಟ್ ಉಪ್ಪಿನಕಾಯಿ, ಸುಂದರ ಶಿಲಾಮೂರ್ತಿಗಳು, ಬ್ಯೂಟಿ ಪ್ರಾಡಕ್ಟ್ & ಬ್ಯಾಗ್, ಸದಭಿರುಚಿಯ ಪುಸ್ತಕಗಳ ಮಳಿಗೆಗಳು ಎಲ್ಲರ ಗಮನ ಸೆಳೆಯುತ್ತಿದೆ. ಈ ಮೇಳದಲ್ಲಿ ಹಲಸಿನ ಹಣ್ಣಿನ ಜಿಲೇಬಿ ಹಾಗೂ ಹೋಳಿಗೆ ಮತ್ತು ಇನ್ನಿತರ ತಿಂಡಿ ತಿನಿಸುಗಳನ್ನು ಲೈವ್ ಆಗಿ ತಯಾರು ಮಾಡಿ ಕೊಡಲಾಗುತ್ತಿದ್ದು ಜನರು ಇದರ ಸವಿಯನ್ನು ಸವೆಯುತ್ತಿದ್ದಾರೆ. ಮೇಳದಲ್ಲಿ ಹಲಸು, ಮಾವಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು ಮಾವು ಹಾಗೂ ಹಲಸಿನ ಹಣ್ಣುಗಳು ಹಾಗೂ ಅನೇಕ ಗಿಡಗಳು ಕೂಡ ದೊರೆಯುತ್ತಿದ್ದು ಜಾತ್ರೆಯೋಪಾದಿಯಲ್ಲಿ ಜನ ಸೇರುತ್ತಿದ್ದಾರೆ.

ಉದ್ಘಾಟನೆ :
ಈ ಬೃಹತ್ ಆಹಾರ ಹಾಗೂ ಸ್ವದೇಶಿ ಮೇಳವನ್ನು ತಹಶೀಲ್ದಾರ್ ಶೈಲೇಶ್ ಪರಮಾನಂದವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೊಂದು ಉತ್ತಮವಾದ ಕಾರ್ಯಕ್ರಮ ಹಾಗೂ ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸುವ ಕಾರ್ಯಕ್ರಮವಾಗಿದೆ. ಇವತ್ತು ಸ್ವದೇಶಿ ಉತ್ಪನ್ನ ಹಾಗೂ ಗೃಹೋತ್ಪನ್ನಗಳ ಬಳಕೆಯೇ ಮನಸ್ಸಿಗೆ ಮುದ ನೀಡುತ್ತದೆ ಎಂದರು.

ರೋಟರಿ ಕ್ಲಬ್ ನ ಕಾರ್ಯಕ್ರಮ ಸಂಯೋಜಕ ಎಸ್. ಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ದಾಂಡೇಲಿಯಲ್ಲಿ ಮೊಟ್ಟಮೊದಲ ಬಾರಿಗೆ ಇಂಥದೊಂದು ಮೇಳ ನಡೆಯುತ್ತಿದ್ದು ದಾಂಡೇಲಿಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಕಾರ್ಯಕ್ರಮ ಸಂಘಟಕರಾದ ಬೆನಕ ಇವೆಂಟ್ಸನ ಗಣೇಶ್ ಶೆಟ್ಟಿ ಕಾರ್ಯಕ್ರಮ ಸಂಘಟನೆಯ ವಿಶೇಷತೆ ಬಗ್ಗೆ ತಿಳಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಅಶುತೋಶಕುಮಾರ್ ರಾಯ್ ಸ್ವಾಗತಿಸಿದರು. ರೋಟರಿ ಹಿರಿಯ ಸದಸ್ಯ ಆರ್‌.ಪಿ. ನಾಯ್ಕ್ ರೋಟರಿ ಪ್ರತಿಜ್ಞಾವಿಧಿ ಬೋಧಿಸಿದರು. ರೋಟರಿ ಕಾರ್ಯದರ್ಶಿ ಮಿಥುನ್ ನಾಯಕ ವಂದಿಸಿದರು. ಸೋಮಕುಮಾರ್ ಎಸ್. ನಿರೂಪಿಸಿದರು. ವೇದಿಕೆಯಲ್ಲಿ ವಿದ್ಯಾಧಿರಾಜ ಸಭಾಭವನ ಸಮಿತಿಯ ಅಧ್ಯಕ್ಷ ಜನಾರ್ಧನ ಪ್ರಭು, ಅಂಕೋಲಾದ ಶ್ರಿ ಗುರು ರಾಘವೇಂದ್ರ ಇವೆಂಟ್ಸನ ಮುಖ್ಯಸ್ಥರಾದ ಗಣೇಶ್ ಗುನುಗಾ ಮುಂತಾದವರಿದ್ದರು.

ರೋಟರಿ ಪ್ರಮುಖರಾದ ಡಾ. ಎಸ್. ಎನ್. ದಪೇದಾರ, ಸುಧಾಕರ್ ಶೆಟ್ಟಿ, ಶೇಖರ್ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*