ಬಸ್ ತಂಗುದಾಣ, ಆಟೋ ನಿಲ್ದಾಣ, ಉದ್ಯಾನವನ, ಬಿಸಿಯೂಟ ಕೊಠಡಿ ಸೇರಿದಂತೆ 10 ಕೋಟಿ ರೂಗಳಿಗೂ ಹೆಚ್ಚು ವೆಚ್ಚ ಮಾಡಿದ ಕಾಗದ ಕಂಪನಿ
ಒಂದು ಸರಕಾರವೋ, ಜನಪ್ರತಿನಿದಿಯೋ ಅಥವಾ ಸ್ಥಳೀಯ ಆಡಳಿತವೋ ಮಾಡಬೇಕಾದ ಅಭಿವೃದ್ಧಿಪರ ಕೆಲಸಗಳನ್ನು ಹಾಗೂ ಸೇವಾ ಕಾರ್ಯಗಳನ್ನು ಒಂದು ಕಂಪನಿ ಮಾಡುತ್ತಿದೆಯೆಂದರೆ ಅದರ ನಿಜವಾದ ಕ್ರೆಡಿಟ್ಟು ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಗೆ ಸಲ್ಲಲೇಬೇಕು. ಪ್ರತಿವರ್ಷ ಕೋಟಿ ಕೋಟಿ ರೂಪಾಯಿಗಳನ್ನು ಸಾರ್ವಜನಿಕ ವಲಯಕ್ಕಾಗಿ ಖರ್ಚು ಮಾಡುವ ಕಾಗದ ಕಂಪನಿ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯ (ಸಿ.ಎಸ್.ಆರ್) ನಿಜವಾದ ಅರ್ಥವನ್ನು ತಿಳಿಸಿಕೊಡುತ್ತಿದೆ ಎಂದರೆ ತಪ್ಪಾಗಲಾರದು.
ಕಳೆದ ಒಂದೆರಡು ವರ್ಷಗಳ ಮಾಹಿತಿಯನ್ನೇ ನೋಡೋಣವೆಂದರೆ ಈ ಕಂಪನಿ ಸುಮಾರು ಹೊತ್ತು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಖರ್ಚು ಮಾಡಿರುವುದು ಕಂಡುಬರುತ್ತದೆ. ಹಳಿಯಾಳ, ದಾಂಡೇಲಿ , ಜೋಯಿಡಾ ಸೇರಿದಂತೆ ವಿವಿಧಡೆ 16 ಅಂಗನವಾಡಿಗಳನ್ನು ನಿರ್ಮಿಸಿರುವ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಒಂದು ಅಂಗನವಾಡಿಗೆ ಕನಿಷ್ಠ ತಲಾ 25 ಲಕ್ಷ ರೂಪಾಯಿಗಳಂತೆ ಒಟ್ಟು 4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಹಳಿಯಾಳ, ದಾಂಡೇಲಿ, ಜೋಯಿಡಾದಲ್ಲಿ 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 5 ಆಟೋ ನಿಲ್ದಾಣಗಳು, ಹಳಿಯಾಳದ ದುಸಗಿಯಲ್ಲಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಗೋಶಾಲೆಗಳು, 30 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಬಸ್ ತಂಗುದಾಣಗಳು, ಹಲವಾರು ಶಾಲೆಗಳಿಗೆ ಸುಮಾರು 1.14 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಿಸಿಯೂಟ ಕೊಠಡಿಗಳ ನಿರ್ಮಾಣ, 1.08 ಕೋಟಿ ರು. ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣ, 13 ಲಕ್ಷ ರು. ವೆಚ್ಚದಲ್ಲಿ ಅಂಬೇವಾಡಿಯ ಗಾರ್ಡನ ನಿರ್ಮಾಣ, 21 ಲಕ್ಷದಲ್ಲಿ ಹಲವು ಗಾರ್ಡನ್ ಗಳಲ್ಲಿ ಜಿಮ್ ವ್ಯವಸ್ಥೆ, ಪ್ರತಿ ವರ್ಷ 6 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಖರ್ಚು ಮಾಡಿ ಬಟ್ಟೆ ಚೀಲ ವಿತರಣೆ, ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಸ್ಮಶಾನಗಳ ಅಭಿವೃದ್ಧಿಗಾಗಿ 30 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.


ದಾಂಡೇಲಿ ಜೋಯಿಡಾದ ಆಸ್ಪತ್ರೆಗಳಿಗೆ 30 ಲಕ್ಷ ರು. ವೆಚ್ಚದಲ್ಲಿ ಹಲವು ಪರಿಕರಗಳ ಕೊಡುಗೆ, ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಕೂಲ ಬ್ಯಾಗ್ ಹಾಗೂ ಛತ್ರಿ ಗಳ ವಿತರಣೆ, ಶಾಲೆ, ಆಸ್ಪತ್ರೆ, ಗ್ರಂಥಾಲಯಗಳಿಗೆ 25 ಲಕ್ಷ ರೂ. ಗಳ ವೆಚ್ಚದಲ್ಲಿ ಕುಡಿಯುವ ನೀರಿನ ವಾಟರ್ ಫಿಲ್ಟರ್ ಕೊಡುಗೆ, ವಿವಿಧ ಶಾಲಾ ಕಾಲೇಜುಗಳಿಗೆ 80 ಲಕ್ಷ ರೂ ವೆಚ್ಚದಲ್ಲಿ ಡೆಸ್ಕ್, ಬೆಂಚ್, ಸೆನಿಟರಿ ಮಷೀನ್ ಸೇರಿದಂತೆ ಹಲವು ಪರಿಕರಗಳ ಕೊಡುಗೆ, ಶಾಲಾ, ಕಾಲೇಜುಗಳಿಗೆ ಕಂಪ್ಯೂಟರ್ ಪ್ರೊಜೆಕ್ಟರ್ ಸೇರಿದಂತೆ ಹಲವು ಸಾಮಗ್ರಿಗಳ ಕೊಡುಗೆ, ಹಲವಾರು ಸಂಘ ಸಂಸ್ಥೆಗಳಿಗೆ ಪೀಠೋಪಕರಣಗಳ ವ್ಯವಸ್ಥೆ ಹೀಗೆ ಹಲವಾರು ರೀತಿಯ ಸಾರ್ವಜನಿಕ ಸೇವಾ ಕೊಡುಗೆಗಳನ್ನ ಕಂಪನಿ ಕಳೆದ ಕೆಲವೇ ವರ್ಷದಲ್ಲಿ ಸುಮಾರು 10 ಕೋಟಿ ರು. ವೆಚ್ಚದಲ್ಲಿ ನೀಡಿದೆ. ಇದರ ಹೊರತಾಗಿಯೂ ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಕೂಡ ಧನಸಹಾಯವನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕುಗಳು ಅಷ್ಟೇ ಅಲ್ಲದೆ ಗೋಕರ್ಣದ ಕೋಟಿ ತೀರ್ಥ ಸ್ವಚ್ಛತೆ ಕಾರ್ಯದಲ್ಲಿ ಧನಸಹಾಯ ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುತ್ತಾ ಬರುತ್ತಿದೆ ಎನ್ನುತ್ತಾರೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ಅಧಿಕಾರಿಗಳಾದ ಜೆ.ಆರ್. ರಾಘವೇಂದ್ರ ಹಾಗೂ ರಾಜೇಶ ತಿವಾರಿಯವರು.

ಮಾದರೀ ಕಾರ್ಯ : ಪ್ರತಿ ವರ್ಷ ಕೋಟಿ ಕೋಟಿ ರೂಪಾಯಿಗಳ ಸಾರ್ವಜನಿಕ ಸೇವಾ ಕಾರ್ಯಗಳನ್ನು ಮಾಡುತ್ತಿರುವ ದಾಂಡೇಲಿಯ ಕಾಗದ ಕಂಪನಿ ಈ ಭಾಗದಲ್ಲಿ ಒಂದು ಮಿನಿ ಆಡಳಿತ ವ್ಯವಸ್ಥೆಯ ರೀತಿಯಲ್ಲಿಯೇ ಕೆಲಸ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಒಂದು ಕಂಪನಿ ತನ್ನ ಲಾಭಾಂಶದಲ್ಲಿ ಒಂದಿಷ್ಟು ಭಾಗವನ್ನು ಸಾರ್ವಜನಿಕ ಸೇವೆಗಾಗಿ ಸಿಎಸ್ಆರ್ ಅಡಿಯಲ್ಲಿ ಖರ್ಚು ಮಾಡಬೇಕೆಂಬ ನಿಯಮವೇ ಇದೆ. ಆದರೆ ಕೆಲವು ಉದ್ಯಮಗಳು ಈ ನಿಯಮವನ್ನು ಪಾಲಿಸದೆ ಸರ್ಕಾರಕ್ಕೆ ವಂಚಿಸುವುದು ಕಂಡುಬರುತ್ತದೆ. ಜಿಲ್ಲೆಯಲ್ಲಿಯೂ ಸಹ ಸಿ.ಎಸ್.ಆರ್. ಹಣವನ್ನು ಸರಿಯಾಗಿ ಬಳಸದೇ ಇರುವ ಉದ್ಯಮಗಳಿವೆ. ಇದು ಅಪರಾಧ ಕೂಡ. ಆದರೆ ದಾಂಡೇಲಿ ಪೇಪರ್ ಮಿಲ್ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಅತ್ಯಂತ ಪರಿಣಾಮಕಾರಿಯಾಗಿ ತನ್ನ ಸೇವಾ ಕಾರ್ಯವನ್ನು ಮಾಡುತ್ತಿರುವುದು ಮಾದರಿಯಾದ ಸಂಗತಿಯಾಗಿದೆ. ಜೊತೆಗೆ ಈ ಸೇವಾ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೂ ಪಾತ್ರವಾಗಿದೆ.

ಸೇವೆ ಪವಿತ್ರವಾದ ಕಾರ್ಯ
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಮಾಲಕರಾದ ಎಸ್. ಕೆ. ಬಂಗುರು ಅವರ ಮಾರ್ಗದರ್ಶನದಲ್ಲಿ ಕಾಗದ ಕಂಪನಿ ತನ್ನ ದುಡಿಮೆಯ ಜೊತೆಗೆ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಪ್ರತಿ ವರ್ಷ ಹಲವಾರು ಸೇವಾ ಕಾರ್ಯಗಳು ಮಾಡುತ್ತ ಬರುತ್ತಿದೆ. ಇದು ನಮ್ಮ ಕರ್ತವ್ಯ ಕೂಡಾ. ಉದ್ಯಮ ಅಂದರೆ ಕೇವಲ ಲಾಭ ಗಳಿಸುವುದು ಒಂದೇ ಅಲ್ಲ. ಗಳಿಕೆಯ ಕೆಲ ಭಾಗವನ್ನು ಸಾರ್ವಜನಿಕ ವಲಯಕ್ಕೆ ಸೇವೆಯ ರೂಪದ ನೀಡುವುದು ಕೂಡ ಆತ್ಮತೃಪ್ತಿಯನ್ನು ನೀಡುತ್ತದೆ. ಸೇವೆ ಪವಿತ್ರವಾದ ಕಾರ್ಯ. ದೇವರು ಕೂಡ ಸೇವೆಯನ್ನು ಮೆಚ್ಚುತ್ತಾನೆ ಎನ್ನುತ್ತಾರೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನರವರು.
–ಒಡನಾಡಿ
Be the first to comment