ಶಾಖಾ ಕಛೇರಿಗಳನ್ನು ಮುಖ್ಯ ಕಚೇರಿಗಳಲ್ಲಿ ವಿಲೀನಗೊಳಿಸಲು ಮುಂದಾದ ಅಂಚೆ ಇಲಾಖೆ

ಕಳೆದ 50 ವರ್ಷಗಳಿಗೂ ಹೆಚ್ಚು ಸಮಯದಿಂದ ನಗರಕ್ಕೆ ಹತ್ತಿರ ಭಾಗದಲ್ಲಿ ಸೇವೆ ನೀಡುತ್ತಿದ್ದ ಅಂಚೆ ಇಲಾಖೆಯ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯೊಂದು ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೆ ನಡೆಯುತ್ತಿದ್ದು, ಇದೀಗ ಈ ವಿಚಾರ ಅಂಚೆ ಇಲಾಖೆಯ ಗ್ರಾಹಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಧಾರವಾಡದ ಉತ್ತರ ಕರ್ನಾಟಕ ವಲಯದ ಅಂಚೆ ಮಹಾನಿರ್ದೇಶಕರು ನಗರಗಳಲ್ಲಿ ಅಂಚೆ ಕಚೇರಿಗಳ ಮರುಸಂರಚನೆಯ ಭಾಗವಾಗಿ ಈ ಆದೇಶ ಹೊರಡಿಸಿದ್ದು , ತಕ್ಷಣವೇ ಕ್ಷೇತ್ರ ಮಟ್ಟದಲ್ಲಿ ಪೂರ್ವ-ಸ್ಥಳಾಂತರ ಅಥವಾ ವಿಲೀನ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಹಾಗೂ ಎಲ್ಲಾ ಕಾನೂನು ಕ್ರಮಗಳನ್ನು ಪಾಲಿಸಿ, ಕಚೇರಿಗಳನ್ನು ಶೀಘ್ರದಲ್ಲೇ ವಿಲೀನಗೊಂಡ ಸ್ಥಳಕ್ಕೆ ವರ್ಗಾಯಿಸಿ, ವಿಲೀನ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದ್ದಾರೆ. ವಿಲೀನಗೊಂಡ ಕಚೇರಿಗೆ ಅಥವಾ ಅಗತ್ಯವಿರುವ ಇತರ ಕಚೇರಿಗಳಿಗೆ ಹುದ್ದೆಗಳ ಮರುಹಂಚಿಕೆಗಾಗಿ, ಪ್ರಚಲಿತ ನಿಯಮಗಳ ಪ್ರಕಾರ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಹಾಗೂ ಗುರುತಿಸಲಾದ ಎಲ್ಲಾ ಅಂಚೆ ಕಚೇರಿಗಳ ಸ್ಥಳೀಯ (on-ground) ಯುಕ್ತೀಕರಣವನ್ನು ತಕ್ಷಣ ಪೂರ್ಣ ಗೊಳಿಸುವಂತೆ ಹಾಗೂ ವಿಲೀನ ಆದೇಶಗಳು ಪೂರ್ಣವಾಗಿ ಜಾರಿಗೆ ಬಂದಿರುವುದನ್ನು ಖಚಿತಪಡಿಸುವಂತೆಯೂ ತಿಳಿಸಿದ್ದಾರೆ. ದೂರ, ಜನಸಂಖ್ಯೆ ಮತ್ತು ಆರ್ಥಿಕ ಮಾನದಂಡಗಳನ್ನು ಪರಿಗಣಿಸಿ, ಅಗತ್ಯವಿರುವ ಇತರ ಪ್ರದೇಶಗಳಲ್ಲಿ ಹೊಸ ಅಂಚೆ ಕಚೇರಿಗಳನ್ನು ತೆರೆಯಲು ಪ್ರತ್ಯೇಕವಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಅಸದೇಶದಲ್ಲಿ ತಿಳಿಸಲಾಗಿದ್ದು, ಎಪ್ರಿಲ್ 15 ರೊಳಗೆ ವಿವರವಾದ ಅನುಷ್ಠಾನ ವರದಿಯನ್ನು ಸಲ್ಲಿಸುವಂತೆ ಅಂಚೆ ಇಲಾಖೆಯ ವಿಭಾಗೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಾಲ್ಕು, ದಾಂಡೇಲಿಯಲ್ಲಿ ಮೂರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ಮತ್ತು ಶಿರಸಿ ಸೇರಿ ಅಂಚೆ ಇಲಾಖೆಯ ಎರಡು ವಿಭಾಗಗಳಿದ್ದು, ಅಂಚೆ ಇಲಾಖೆಯ ಈ ವಿಲೀನಗೊಳಿಸುವ ಪ್ರಕ್ರಿಯೆ ಆದೇಶದ ಪ್ರಕಾರ ಇಡೀ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಅಂಚೆ ಇಲಾಖೆಯ ಶಾಖಾ ಕಚೇರಿಗಳು ಮುಖ್ಯ ಕಚೇರಿಗೆ ವಿಲೀನಗೊಂಡು ಬಾಗಿಲು ಮುಚ್ಚಲಿವೆ. ಕಾರವಾರದ ಮಾರ್ಕೆಟ್ ಏರಿಯಾದಲ್ಲಿರುವ ಉಪ ಅಂಚೆ ಕಾರ್ಯಾಲಯ, ದಾಂಡೇಲಿಯ ವೆಸ್ಟ ಕೋಸ್ಟ್ ಪೇಪರ್ ಮಿಲ್ ಆವರಣದೊಳುಗಿರುವ ಶಾಖಾ ಕಚೇರಿ, ಕಿತ್ತೂರ್ ಚೆನ್ನಮ್ಮ ವೃತ್ತದ ಬಳಿ ಇರುವ ಶಾಖಾ ಕಾರ್ಯಾಲಯ ಹಾಗೂ ಹಳೆ ದಾಂಡೇಲಿ ಇರುವ ಶಾಖಾ ಕಚೇರಿಗಳು ಮುಖ್ಯ ಕಚೇರಿಗೆ ವಿಲೀನಗೊಂಡು ಬಾಗಿಲು ಮುಚ್ಚಲಿವೆ. ಉತ್ತರ ಕರ್ನಾಟಕ ವಲಯದಲ್ಲಿ ಒಟ್ಟು 26 ಕ್ಕೂ ಹೆಚ್ಚು ಶಾಖಾ ಕಾರ್ಯಾಲಯಗಳು ಬಾಗಿಲು ಮುಚ್ಚಿ ಮುಖ್ಯ ಕಚೇರಿಗೆ ವಿಲೀನಗೊಳಲಿವೆ ಎಂದು ಮಾಹಿತಿ ಲಭ್ಯವಾಗಿದೆ. ಮುಖ್ಯ ಕಚೇರಿಯಿಂದ 3 ಕಿಲೋಮೀಟರ್ ಅಂತರದಲ್ಲಿ ಯಾವುದೇ ಉಪ ಕಾರ್ಯಾಲಯಗಳು ಇರಕೂಡದು ಎಂಬ ಮಾನದಂಡಕ್ಕಾಗಿ ಈ ಶಾಖಾ ಕಚೇರಿಗಳನ್ನು ವಿಲೀನಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ವಿಲೀನಕ್ಕೆ ವ್ಯಾಪಕ ವಿರೋಧ

ಯಾವುದೇ ಮುನ್ಸೂಚನೆಯನ್ನು ನೀಡದೇ ಮುಖ್ಯ ಕಚೇರಿಯಿಂದ ದೂರವಿರುವ ಶಾಖಾ ಕಚೇರಿಗಳ ಬಾಗಿಲು ಮುಚ್ಚಿ, ಮುಖ್ಯ ಕಚೇರಿಗೆ ಸ್ಥಳಾಂತರಿಸುವ ಪ್ರಕ್ರಿಯೆಯ ಬಗ್ಗೆ ಸ್ಥಳೀಯವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಶನಿವಾರ ಅಂಚೆ ಇಲಾಖೆಯ ಮೇಲಾಧಿಕಾರಿಗಳು ದಾಂಡೇಲಿಯ ಕಿತ್ತೂರ್ ಚೆನ್ನಮ್ಮ ವೃತ್ತ, ಹಳೆ ದಾಂಡೇಲಿ ಮತ್ತು ಬಂಗೂರನಗರ ಶಾಖಾ ಅಂಚೆ ಇಲಾಖೆಯ ಕಾರ್ಯಾಲಯದ ಸ್ಥಳಾಂತರಕ್ಕೆ ಬಂದಾಗ, ಸ್ಥಳೀಯರು ವಿರೋಧಿಸಿ ಸ್ಥಳಾಂತರವನ್ನು ತಡೆದಿದ್ದಾರೆ. ಹಳೆದಾಂಡೇಲಿ ಮತ್ತು ಕಿತ್ತೂರು ಚೆನ್ನಮ್ಮ ವೃತ್ತದ ಶಾಖಾ ಕಚೇರಿ ಎದುರು ಸ್ಥಳೀಯ ಗ್ರಾಹಕರು ಸಾಂಕೇತಿಕ ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಈ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಗೆ ಸ್ಥಳಾಂತರಗೊಳಿಸ ಬಾರದು. ನಮ್ಮ ಶಾಖಾ ಕಚೇರಿಗಳಲ್ಲಿ ಸಾಕಷ್ಟು ಖಾತೆಗಳಿದ್ದು ವಯೋವೃದ್ಧರಿಗೆ ಹಾಗೂ ಅಂಗವಿಕಲರಿಗೆ ಬಹಳ ಅನುಕೂಲವಾಗುತ್ತದೆ. ಒಂದೊಮ್ಮೆ ಮುಖ್ಯ ಕಚೇರಿಗೆ ಸ್ಥಳಾಂತರಿಸಿದರೆ ವ್ಯವಹಾರಕ್ಕೆ ಬಹಳ ಕಷ್ಟವಾಗುತ್ತದೆ. ಜನಪ್ರತಿನಿದಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಮ್ಮ ನಮ್ಮ ಪ್ರದೇಶದಲ್ಲಿರುವ ಶಾಖಾ ಕಚೇರಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು
ಕಿತ್ತೂರು ಚೆನ್ನಮ್ಮ ವೃತ್ತದ ಶಾಖಾ ಕಚೇರಿಯ ಗ್ರಾಹಕರಾದ ಗಣೇಶ ಹೆಬ್ಬಾರ, ಅಜಿಲೇಶ್ ನಾಯರ್, ಮಹೇಶ ನಾಗಪ್ಪ ಮುಂತಾದವರು
ಒತ್ತಾಯಿಸಿದ್ದಾರೆ.

ಪ್ರತೀ ಶಾಖೆಗಳಲ್ಲಿ ಆರು ಸಾವಿರ ಖಾತೆಗಳು

ದಾಂಡೇಲಿಯಲ್ಲಿ ಮುಖ್ಯ ಅಂಚೆ ಇಲಾಖೆ ಹೊರತಾಗಿ ಕಿತ್ತೂರು ಚೆನ್ನಮ್ಮ ವೃತ್ತ ,ಹಳೆ ದಾಂಡೇಲಿ, ಬಂಗೂರ ನಗರ ಹಾಗು ಅಂಬೆವಾಡಿಯಲ್ಲಿ ಶಾಖಾ ಕಾರ್ಯಾಲಯಗಳಿವೆ. ಅಂಬೇವಾಡಿ ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಕೂಡ ಬಾಡಿಗೆ ಕಟ್ಟಡದಲ್ಲಿ ಇರುವಂತವು. ಹಾಗಾಗಿ ಅಂಬೇವಾಡಿಯಲ್ಲಿರುವ ಶಾಖಾ ಕಚೇರಿಯನ್ನು ಬಿಟ್ಟು ಉಳಿದಿಲ್ಲ ಶಾಖಾ ಕಾರ್ಯಾಲಯಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ಬಾಡಿಗೆ ಕಾರ್ಯಾಲಯದಲ್ಲಿ ಇವುಗಳು ಇರುವುದರಿಂದ ಹಾಗೂ ಸಿಬ್ಬಂದಿಗಳ ಕೊರತೆ ಕಾರಣಕ್ಕೆ ಈ ವಿಲೀನ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಿತ್ತೂರು ಚೆನ್ನಮ್ಮ ವೃತ್ತದ ಶಾಖ ಕಚೇರಿಯಲ್ಲಿ 6000ಕ್ಕೂ ಹೆಚ್ಚು ಗ್ರಾಹಕರು ಖಾತೆಯನ್ನು ಹೊಂದಿದ್ದರೆ, ಹಳೆ ದಾಂಡೇಲಿ ಹಾಗೂ ಬಂಗುರನಗರ ಶಾಖಾ ಕಚೇರಿಯಲ್ಲಿ 5000ಕ್ಕೂ ಹೆಚ್ಚು ಗ್ರಾಹಕರು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಹೊರತಾಗಿ ಮುಖ್ಯ ಕಚೇರಿಯಲ್ಲಿಯೂ ಕೂಡ 20 ಸಾವಿರಕ್ಕೂ ಹೆಚ್ಚು ಖಾತೆಗಳಿದ್ದು , ಅಲ್ಲಿ ನಿತ್ಯ ಗ್ರಾಹಕರು ಹೆಚ್ಚಾಗಿ ಕೆಲಸಕ್ಕೆ ಪರದಾಡುವಂತಾಗುತ್ತಿದೆ.ಈ ಮೂರು ಶಾಖಾ ಕಚೇರಿಗಳು ಮುಖ್ಯ ಕಚೇರಿಗೆ ಸ್ಥಳಾಂತರಿಸಿದರೆ ಜನಸಂದಣಿ ಹಾಗು ಕಾರ್ಯದ ಒತ್ತಡದ ಕಾರಣಕ್ಕಾಗಿ ಕೆಲಸದಲ್ಲಿ ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸಾರ್ವಜನಿಕರು.

ಶಾಸಕರು, ಸಂಸದರು ಗಮನಿಸಲಿ
ಶಾಖಾ ಕಚೇರಿಗಳು ಬಾಡಿಗೆ ಕಟ್ಟದಲ್ಲಿವೆ ಎಂಬ ಕಾರಣಕ್ಕೆ ಹಾಗೂ 3 ಕಿ.ಮೀ ಅಂತರದಲ್ಲಿ ಶಾಖಾ ಕಚೇರಿಗಳು ಇರಬಾರದು ಎಂಬ ಕಾರಣಕ್ಕೆ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಗೆ ವಿಲೀನಗೊಳಿಸುವ ಅವಜ್ಞಾನಿಕವಾದ ಮಾನದಂಡವನ್ನು ಬಿಟ್ಟು 50 ವರ್ಷಗಳಿಂದ ಕಾರ್ಯನಿರ್ಸುತ್ತಿರುವ ಶಾಖಾ ಕಚೇರಿಗಳನ್ನು ಅದೇ ಸ್ಥಳದಲ್ಲಿ ಮುಂದುವರಿಸುವಂತೆ ಇಲಾಖೆ ಕ್ರಮ ಕೈಗೊಳ್ಳಬೇಕು. ಹಾಗೂ ಈ ವಿಚಾರವಾಗಿ ಈ ಭಾಗದ ಶಾಸಕರು ಮತ್ತು ಸಂಸದರು ಪ್ರಯತ್ನಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಇಲಾಖೆಯ ಆದೇಶ ಪಾಲಿಸಬೇಕು

ಮುಖ್ಯ ಕಚೇರಿಯಿಂದ 3 ಕಿ.ಮೀ ಅಂತರದಲ್ಲಿರುವ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಗೆ ವಿಲೀನಗೊಳಿಸಬೇಕೆಂಬುದು ಸರಕಾರ ಹಾಗೂ ಅಂಚೆ ಇಲಾಖೆಯ ಧಾರವಾಡ ವಲಯದ ಆದೇಶ. ಇಲಾಖೆಯ ಆದೇಶ ನಾವು ಪಾಲಿಸಬೇಕು. ಹಾಗಾಗಿ ಶಾಖಾ ಕಚೇರಿಗಳಿಗೆ ಮಾಹಿತಿ ನೀಡಿದ್ದೇವೆ. ವಿಲೀನವಾದ ನಂತರದಲ್ಕಿ ಸ್ಥಳೀಯ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿಯೂ ಕೂಡ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಶಿರಸಿ ವಿಭಾಗದ ಅಧೀಕ್ಷಕ ಜಿ. ಹೂವಪ್ಪ ತಿಳಿಸಿದ್ದಾರೆ.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*