ಶಿವ ಭಕ್ತಿಯುಳ್ಳಾತ! ಭವ ಮುಕ್ತಿಯುಳ್ಳಾತ
ಶಿವ ಭಕ್ತಿಯಿಲ್ಲದ ಧಮಂಗೆ- ಎಂದೆಂದು
ಭವ ಮುಕ್ತಿಯಿಲ್ಲ ಸರ್ವಜ್ಞ!ಉ
ಶಿವ ಭಕ್ತಿ ಅಂದರೆ ದೈವ ಭಕ್ತಿ. ದೈವ ಭಕ್ತಿ ಇಲ್ಲದ ವ್ಯಕ್ತಿಗೆ ಭಾವ ಮುಕ್ತಿಯಿಲ್ಲ ಎಂಬ ಸರ್ವಜ್ಞನ ವಚನವನ್ನು ಮೀರಿಸುವ ಶಿವ ಭಕ್ತಿಯೇ ಪರಮ ಭಕ್ತಿ ಎಂದು ಭಾವಿಸಿ, ತಂದೆ- ತಾಯಿಯವರನ್ನು ದೇವರ ಸಮಾನವೆಂದು ಹೃದಯದಲ್ಲಿ ಪೂಜಿಸಿದವರು. ನಿಷ್ಠೆ- ನಿಯಮದಿಂದ ಗುರುಗಳಿಗೆ ಗುರುವಾಗಿ ವೃತ್ತಿ ಬದುಕನ್ನು ಪ್ರೀತಿಸಿದವರು ಮಂಜುನಾಥ ಅಣ್ಣಪ್ಪ ನಾಯ್ಕರವರು. ಸುಧೀರ್ಘ ಮೂರು ದಶಕಗಳ ಕಾಲ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಗೆ ತನ್ನನ್ನು ತಾನು ತೊಡಗಿಸಿಕೊಂಡು, ವಾರ-ವ್ರತದ ಮೂಲಕ ದೈವಿ ಕೃಪೆಗೆ ಪಾತ್ರರಾಗಿದ್ದರು. ಇಷ್ಟ ಲಿಂಗದಿ ಮನವ ನೆಟ್ಟು ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸಾರ್ಥಕ ಬದುಕಿನ ಸರದಾರರೆನಿಸಿಕೊಂಡು ಚಿರಪರಿಚಿತರಾದವರು ಎಂ. ಎ. ನಾಯ್ಕರವರು.
ಜೀವನವೆನ್ನುವುದು ಕಡಲು
ಅನುಭವವೆನ್ನುವುದು ನದಿಯ ನೀರು
ಪುಸ್ತಕವೆನ್ನುವುದು ಬಾವಿಯ ನೀರು!
ಕಡಲು, ಹೊಳೆಗಳಲ್ಲಿ ನೀರು ಎಷ್ಟಿದ್ದರೂ ನಮ್ಮ ಬಾಯಾರಿಕೆ ತಣಿಸಲು ಮನೆ ಬಾವಿಯ ತಿಳಿ ನೀರೇ ಬೇಕು. ಪುಸ್ತಕಗಳೆಂದರೆ ತಿಳಿ ನೀರಿನ ಮನೆಯ ಬಾವಿಯ ಹಾಗೆ! ತನ್ನ ಸುತ್ತಲಿನ ಪರಿಸರ ಪ್ರೀತಿಯ ಜೊತೆಗೆ ದುಂದು ವೆಚ್ಚದ ಜೀವನಕ್ಕೆ ಹಾತೊರೆಯದೇ,ವ್ಯರ್ಥ ಬದುಕಿನ ಆಚೆ ಆಲೋಚಿಸದೇ ತಿಳಿ ನೀರಿನ ಮನೆ ಬಾವಿಯ ನೀರನ್ನು ಬೇಕಾದಾಗ ಬೇಕಷ್ಟು ಉಪಯೋಗಿಸುವ ಸರಳ ಬದುಕಿನ ಸರದಾರ ಶಿಕ್ಷಕನಿಗೆ ಕುಮಟಾ ತಾಲೂಕಿನ ವೃತ್ತಿ ಬದುಕಿನ ಊರಾದ ಮರಾಠಿಕೊಪ್ಪ ಯಲವಳ್ಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜೂನ್ 14,2026 ರವಿವಾರದಂದು ಪಾಲಕ ಪೋಷಕರು, ಊರಿನ ಸಮಸ್ತ ಜನರು ಅಭಿನಂದಿಸುವ ಕಾರ್ಯಕ್ರಮದ ನಿಮಿತ್ತ ಅವರ ಕುರಿತಾದ ಪುಟ್ಟಲೇಖನ.

ಕುಮಟಾ ತಾಲೂಕಿನ ಮೊರಬದಲ್ಲಿ ತಂದೆ ಅಣ್ಣಪ್ಪ ತಿಮ್ಮಪ್ಪ ನಾಯ್ಕ, ತಾಯಿ ಕಾಮಾಕ್ಷಿ ಅಣ್ಣಪ್ಪ ನಾಯ್ಕರ ಮಗನಾಗಿ 1966 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಮೊರಬ ಮತ್ತು ಬೆಟ್ಕುಳಿಯಲ್ಲಿಯೂ,ಪ್ರೌಢ ಶಿಕ್ಷಣ ಹಿರೆಗುತ್ತಿಯಲ್ಲಿಯೂ, ಪದವಿ ಶಿಕ್ಷಣ ಕುಮಟಾದ ಎ. ವಿ. ಬಾಳಿಗಾ ಕಾಲೇಜಿನಲ್ಲಿಯೂ, ವೃತ್ತಿ ಬದುಕಿನ ಶಿಕ್ಷಣ ಉಡುಪಿಯ ಕೊಕ್ಕರಣೆಯಲ್ಲಿಯೂ ಪೂರೈಸಿ, 1996 ರಂದು ಭಟ್ಕಳ ತಾಲೂಕಿನ ಹಲ್ಲಾರಿಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಸುಮಾರು ಏಳು ವರ್ಷಗಳ ಕಾಲ ಅತ್ಯಂತ ದುರ್ಗಮ ಪ್ರದೇಶವಾದರೂ ದೃತಿಗೆಡದೆ ವೃತ್ತಿ ಬದುಕನ್ನು ಪ್ರೀತಿಸಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕರೆನಿಸಿಕೊಂಡರು. ಇದೇ ಶಾಲೆಯಲ್ಲಿರುವಾಗಲೇ “ಜನ ಮೆಚ್ಚಿದ ಶಿಕ್ಷಕ” ಪ್ರಶಸ್ತಿ ಪಡೆದುಕೊಂಡರು. ನಂತರ 2003 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಬಲ್ಸೆಗೆ ವರ್ಗವಾಗಿ ಬಂದರು. ಅಲ್ಲಿ ಸುಮಾರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ 2011 ರಿಂದ ಇಲ್ಲಿಯ ತನಕ ಕುಮಟಾ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರಾಠಿ ಕೊಪ್ಪದಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೇ 31 ರಂದು ನಿವೃತ್ತಿಯಾಗಿರುತ್ತಾರೆ.

ಪತ್ನಿ ಸವಿತಾ ನಾಯ್ಕರೊಂದಿಗೆ ತುಂಬು ಜೀವನ ನಡೆಸುತ್ತಿರುವ ನಾಯಕರಿಗೆ ಪ್ರಜ್ಞಾ, ಪ್ರತಿಕ್ಷಾ ಎಂಬೆರಡು ಹೆಣ್ಣುಮಕ್ಕಳು. ಪ್ರಜ್ಞಾ ವೃತ್ತಿಯಲ್ಲಿ ಎಂಜಿನಿಯರ್ ಆದರೆ, ಪ್ರತಿಕ್ಷಾ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿನಿ.

“ಕಾರಿರುಳ ಆಗಸದಲ್ಲಿ ನೂರು ತಾರೆಗಳಿದ್ದರೇನು? ದಾರಿಗನ ಕಣ್ಗೆ ಒಂದು ಮನೆಯ ಬೆಳಕೇ ಬೇಕಾಗುತ್ತದೆ” ಎಂಬ ಡಿವಿಜಿಯವರ ಮಾತಿನಂತೆ ತನ್ನ ವೃತ್ತಿ ಬದುಕಿನಲ್ಲಿ ಮನೆಯಂತಿರುವ ಶಾಲೆಯನ್ನು, ಮುದ್ದು ವಿದ್ಯಾರ್ಥಿಗಳನ್ನು ಅಕ್ಕರೆಯಿಂದ ಪ್ರೀತಿಸಿ ಇಡೀ ಸಮಾಜ ಒಪ್ಪುವ ಜನ ಮೆಚ್ಚಿದ ಶಿಕ್ಷಕ ಪುರಸ್ಕೃತ ಎಂ.ಎ.ನಾಯ್ಕರವರು ನೂರ್ಕಾಲ ಬಾಳಿ ಬದುಕಲೆಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.
Be the first to comment