ಗಂಗಾಧರ ಕೊಳಗಿಯವರ ಕಥಾಲೋಕದ ಎರಡನೇ ಪಯಣ…. ಮೇ 01 ರಂದು ಪುಸ್ತಕಾವಲೋಕನ

ಸಿದ್ದಾಪುರ: ಎಲ್ಲೆಡೆ ಬೇಸಿಗೆಯ ಬಿರು ಬಿಸಿಲಿನ ತಾಪ, ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳ ಬರಪೂರ ಪರೀಕ್ಷಾ ಫಲಿತಾಂಶ. ತಮ್ಮ ಮಕ್ಕಳನ್ನು ಯಾವ ಊರಿನ ಯಾವ ಕಾಲೇಜು ಸೇರಿಸಬೇಕೆಂಬ ಪಾಲಕರ ತವಕ. ಇನ್ನೊಂದೆಡೆ ಮದುವೆ ಮನೆಗಳ ಗೌಜಿ ಗದ್ದಲ . ಇದರ ನಡುವೆ ಸಿದ್ದಾಪುರದಲ್ಲೊಂದು ವಿಶೇಷವಾದ ಸಾಹಿತ್ಯಕ ಕೃತಿಗಳ ಮರು ಅವಲೋಕನ ಕಾರ್ಯಕ್ರಮ…

ಜಿಲ್ಲೆಯ ಹಿರಿಯ ಪತ್ರಕರ್ತರು, ಕಥೆಗಾರ, ಕಾದಂಬರಿಕಾರರೆಂದೇ ಹೆಸರಾದ ಗಂಗಾಧರ ಕೊಳಗಿಯವರು ಈಗಾಗಲೇ ಒಂಬತ್ತು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇವರು ಬಹು ವರ್ಷಗಳ ಹಿಂದೆ ಬರೆದ ‘ಮನಸ್ಸು ಆಕಾಶದ ನೀಹಾರಿಕೆ’ ಹಾಗೂ ಕಾಡಂಚಿನ ಯಾನ ಮರುಮುದ್ರಣ ಕಂಡಿರುವುದು ಆಶ್ಚರ್ಯವಾದರೂ ಸತ್ಯವೆ. ಈ ಹಾಳು ಮೊಬೈಲ್ ಬಂದ ಮ್ಯಾಲೆ ಅಷ್ಟೊಂದು ಉದ್ದುದ್ದ ನೀಳ್ಗತೆ, ಕಾದಂಬರಿಗಳನ್ನ ಯಾರು ಓದ್ತಾ ಕೂತಿರ್ತಾರೆ ಎಂದು ಹಂಗಿಸುವವರನ್ನೇ ಈ ಕೃತಿಗಳು ಅಣಕಿಸುವಂತೆ ಮಾಡಿದ್ದಂತೂ ಸುಳ್ಳಲ್ಲ. ನಿಜ ಓದುಗರಿಗೆ ಬರವಿಲ್ಲ.

ಇದಕ್ಕೆ ನಿದರ್ಶನವೆಂಬಂತೆ ಈ ಎರಡೂ ಪುಸ್ತಕಗಳು ಎರಡನೇ ಮುದ್ರಣ ಕಂಡು ಮೂರರತ್ತ ಮುನ್ನುಗ್ಗುತ್ತಿರುವುದು. ಇವಲ್ಲದೆ ಇವರೇ ಬರೆದ ಕಾಡಂಚಿನ ಯಾನ, ಗಾಂಜಾಗ್ಯಾಂಗ್, ಕತ್ತಲೆಕಾನು ಸೇರಿದಂತೆ ಇದುವರೆಗೆ ಇವರ ಒಂಬತ್ತು ಕೃತಿಗಳಿದ್ದು ಎಲ್ಲವೂ ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿವೆ. ಮನಸ್ಸು ಆಕಾಶದ ನೀಹಾರಿಕೆ ಕೃತಿಯ ಬಹುತೇಕ ಎಲ್ಲ ಪುಟಗಳ ಪದಗಳು ಎಂದೂ ಮರೆಯದ ಹಳೆಯ ಕನ್ನಡ ಸಿನೆಮಾ ಕಥೆ, ಹಾಡುಗಳಂತೆ ಕಣ್ಮುಂದೆ ಸುಳಿಯುತ್ತಿವೆ. ಶರಾವತಿ ನದಿಯ ಹಿನ್ನೀರಿನ ತೆಪ್ಪದ ಪಯಣವಂತೂ ಈಗಲೂ ಭಯವನ್ನು ಹುಟ್ಟಿಸುತ್ತದೆ. ಗಾಂಜಾ ಗ್ಯಾಂಗ್ ನ ಕಾಡುಕೋಣಗಳ ಸಾಮೂಹಿಕ ಹತ್ಯೆಯ ಜಾಡು ಹಿಡಿದು ಕರಡದ ಬೇಣದಲ್ಲಿ ಹೊರಟ ಲೇಖಕರ ನೈಜ ಅನುಭವಗಳು ಕುತೂಹಲ ಕೆರಳಿಸುತ್ತವೆ. ಹೀಗೆ ಗಂಗಾಧರ ಕೊಳಗಿಯವರ ಕೃತಿಗಳನ್ನು ಓದುಗರು ಅವಲೋಕಿಸಲಿದ್ದಾರೆ.

ಇದೀಗ ಇದೇ ಬರುವ ಮೇ -,1- 2026 ರ ಶುಕ್ರವಾರ ಸಂಜೆ 4 ಗಂಟೆಗೆ ಸಿದ್ದಾಪುರದ ಲಯನ್ಸ್ ಕ್ಲಬ್ ಬಾಲಭವನದಲ್ಲಿ ಇವರ ಮೆಚ್ಚಿನ ಕೃತಿಗಳಾದ ‘ಕಾಡಂಚಿನ ಯಾನ’ ಕೃತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ, ಚಿಂತಕ ಎಮ್. ಎಚ್. ನಾಯ್ಕ ಅವಲೋಕಿಸಿದರೆ, ‘ಮನಸ್ಸು ಆಕಾಶದ ನೀಹಾರಿಕೆ’ ಕೃತಿಯನ್ನು ಉಪನ್ಯಾಸಕ, ವಿಮರ್ಶಕ ರತ್ನಾಕರ ನಾಯ್ಕ ಅವಲೋಕಿಸಲಿದ್ದಾರೆ.

ಇವರೊಂದಿಗೆ ಸಿದ್ದಾಪುರದ ಸಂಸ್ಕೃತಿ ಸಂಪದದ ಮುಖ್ಯಸ್ಥರಾದ ವಿಜಯ ಹೆಗಡೆ ದೊಡ್ಮನೆ, ಕಸಾಪ ತಾಲೂಕು ಅಧ್ಯಕ್ಷ ಚಂದ್ರಶೇಕಜರ ಕುಂಬ್ರಿಗದ್ದೆ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್, ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಅತಿಥಿಗಳಾಗಿರಲಿದ್ದಾರೆ. ಕಸಾಪ ಮಾಜಿ ಅಧ್ಯಕ್ಷ, ಪೌರ್ಣಿಮಾ ಸಾಹಿತ್ಯ ವೇದಿಕೆ ಅಧ್ಯಕ್ಷ ಗೋಪಾಲ ಭಾಶಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ‌ಮಾಡಿದ್ದಾರೆ‌

About ಬಿ.ಎನ್‌. ವಾಸರೆ 677 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*