ಕೆಲ ದಿನಗಳ ಹಿಂದೆ ಹೊನ್ನಾವರ ತಾಲೂಕಿನ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಎ.ಆರ್.ಎಮ್ ಸೂಪರ್ ಮಾರ್ಕೆಟ್ ನಲ್ಲಿ ನಡೆದಿದ್ದ ಕಳ್ಳತನದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಈತ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸುಮಾರು ಆರು ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದೆ.
ಹೊನ್ನಾವರದ ಎ.ಆರ್.ಎಮ್ ಸೂಪರ್ ಮಾರ್ಕೆಟ್ ಕಳ್ಳತನದ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದರೆ, ಈತ ಸುಲಭಕ್ಕೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ. ಈತ ಮೊಬೈಲ್ ಬಳಕಯನ್ನೆ ಮಾಡುತ್ತಿರಲಿಲ್ಲ. ಕಳ್ಳತನ ಮಾಡಿದ ನಂತರ ಗೋವಾಕ್ಕೆ ಹೋಗಿದ್ದ, ಅಲ್ಲಿಂದ ವಾಪಾಸ್ ಬಂದು ತನ್ನ ಪ್ರೇಯಸಿಯೊಂದಿಗೆ ಇದ್ದಾಗ ಪೊಲೀಸರಿಗೆ ತಗುಲಿಕೊಂಡಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಪೊಲೀಸರನ್ನೇ ಕಚ್ಚಿ ಗಾಯ ಗೊಳಿಸಿದ್ದಾನೆ. ತಪ್ಪಿಸಿಕೊಳ್ಳಲು ಎಷ್ಟೇ ಹಾರಾಡಿದರೂ ಬಿಡದೆ ಪೊಲೀಸರು ಆತನ ಹೆಡೆ ಮುರಿ ಕಟ್ಟಿ, ಕಂಬಿ ಎಣಿಸುವಂತೆ ಮಾಡಿದ್ದಾರೆ.
ದಾಂಡೇಲಿಯ ಸುಭಾಷನಗರದ ಮುಜಾಫರ್ ಶೇಖ್ ಮಹಮ್ಮದ ಸಾಬ್ ಶೇಖ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಬೆಳಗಾವಿ, ದಾಂಡೇಲಿ ಸೇರಿದಂತೆ ಸುಮಾರು ಆರಕ್ಕೂ ಹೆಚ್ಚು ಕಳ್ಳತನದಲ್ಲಿ ಪೊಲೀಸರಿಗೆ ಬೇಕಾಗಿದ್ದವನಾಗಿದ್ದಾನೆ ಎನ್ನಲಾಗಿದ್ದು, ಬೆಳಗಾವಿಯ ಕಳ್ಳತನ ಪ್ರಕರಣದಲ್ಲಿ ಈತನ ಮೇಲೆ ಗುಂಡಿನ ದಾಳಿ ಕೂಡಾ ನಡೆದಿತ್ತು ಎಂಬ ಮಾಹಿತಿಯಿದೆ.

ಹೊನ್ನಾವರದಲ್ಲಿ ಕಳ್ಳತನ ಮಾಡಿದ ಆರೋಪಿ ಯಾವುದೇ ಕುರುಹು ಬಿಟ್ಟಿರಲಿಲ್ಲ. ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಆತನ ಪ್ರೇಯಸಿಯ ಮೊಬೈಲ್ ನಂಬರ್ ಆದರಿಸಿ ಪ್ರೇಯಸಿ ಜೊತೆ ಇರುವಾಗಲೆ ಬಂಧನ ಮಾಡಲಾಗಿದೆ. ಕಳ್ಳತನ ನಡೆದಲ್ಲಿನ ಬೆರಳಿನ ಗುರುತಿನ ಆಧಾರ ಮೇಲೆ ಇತನೇ ಕಳ್ಳ ಎಂದು ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲವು ಮಾಹಿತಿಯಂತೆ ಪ್ರಾರಂಭದಲ್ಲಿ ಆರೋಪಿ ಮುಜಾಫರ್ ಯಾವುದೋ ಉದ್ಯೋಗ ಮಾಡಿಕೊಂಡಿದ್ದ, ಉದ್ಯೋಗದಲ್ಲಿ ನಷ್ಟ ಆದ ನಂತರ ಕಳ್ಳತನ ಮಾಡಲಾರಂಭಿಸಿದ್ದಾನೆ. ಇಲ್ಲಿಯ ತನಕ ಇತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಆರು ಕಳ್ಳತನ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಮಲಮಾರುತಿ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣ, ಹಳಿಯಾಳದಲ್ಲಿ ಎರಡು ಪ್ರಕರಣ, ಕುಮಟಾದಲ್ಲಿ ಎರಡು ಪ್ರಕರಣ, ಈಗ ಹೊನ್ನಾವರಲ್ಲಿ ಕಳ್ಳತನ ಪ್ರಕರಣ ಸೇರಿ ಒಟ್ಟು ಏಳು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಬೆಳಗಾವಿ ಕೋ ಆಪರೇಟಿವ್ ಸೊಸೈಟಿ ಕಳ್ಳತನ ಮಾಡುವಾಗ ಇತನ ಕಾಲಿಗೆ ಶೂಟ್ ಔಟ್ ಮಾಡಲಾಗಿತ್ತು.
ಈತ ಕಳ್ಳತನ ಮಾಡುವುದು, ಅದೇ ಹಣದಲ್ಲಿ ದರ್ಬಾರ್ ಮಾಡುವುದು, ಖರ್ಚಾದ ಮೇಲೆ ಮತ್ತೆ ಕಳ್ಳತನ ಮಾಡುವುದೇ ಸದ್ಯದ ಉದ್ಯೋಗ ಮಾಡಿಕೊಂಡಿದ್ದ. ಇದರ ಜೊತೆಗೆ ಶೋಶಿಯಲ್ ಮೀಡಿಯಾ ಮೂಲಕ ಪರಿಚಯವಾದ ಕುಮಟ ತಾಲೂಕಿನ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ, ಕಳ್ಳತನ ಮಾಡಿದ ನಂತರ ಆಕೆಯ ಜೊತೆ ಸಮಯ ಕಳೆಯುತ್ತಿದ್ದ ಎನ್ನಲಾಗುತ್ತಿದೆ. ಪ್ರಾರಂಭದಲ್ಲಿ ಪ್ರೇಯಸಿಗೆ ಈತ ಕಳ್ಳತನ ಮಾಡುವುದು ಗೊತ್ತಿತ್ತು, ನ್ಯಾಯಾಲಯದಲ್ಲಿ ಜಾಮೀನು ಕೊಡಿಸಲು ಸಹಕಾರ ನೀಡಿದ್ದಳು. ಅದರ ನಂತರ ಕಳ್ಳತನ ಬಿಟ್ಟಿದ್ದೇನೆ, ಗೋವಾದಲ್ಲಿ ಕೆಲಸ ಮಾಡಿಕೊಂಡಿದ್ದೇನೆ ಎನ್ನುತ್ತಿದ್ದ. ಮದುವೆ ಆಗುವುದಾಗಿ ಆತ ನಂಬಿಸಿದ್ದ. ಅದನ್ನೆ ನಂಬಿಕೊಂಡು ಆತನ ಜೊತೆ ಪ್ರೀತಿ ಮುಂದುವರಿಸಿದ್ದಳು.
ಹೊನ್ನಾವರದ ಎ.ಆರ್.ಎಮ್ ಸೂಪರ್ ಮಾರ್ಕೆಟ್ ಕಳ್ಳತನದ ನಂತರ ಆತನಪ್ರೇಯಸಿಯನ್ನು ಠಾಣೆಗೆ ತಂದು ವಿಚಾರಣೆ ಮಾಡಲಾಗಿದೆ. ಆಗ ಆಕೆ ಈತ ಈರೀತಿ ಮಾಡುತ್ತಿರುವುದು ಗೊತ್ತಿಲ್ಲ. ಗೋವಾದಲ್ಲಿ ಕೆಲಸಕ್ಕೆ ಇದ್ದ ಎಂದಿದ್ದ. ನಾನು ಅದನ್ನೆ ನಂಬಿದ್ದೆ ಎಂದಿದ್ದಾಳೆ. ಅವನಿಗೆ ಬೈದಿದ್ದಾಳೆ. ನಿನ್ನ ಸಹವಾಸ ಬೇಡ ಎಂದಿದ್ದಾಳೆ. ಆತನೂ ಕೂಡ ಪೊಲೀಸರ ಹತ್ತಿರ ವ್ಯವಹಾರಿಕ ಸೋಲು ಇನ್ನಿತರ ಅಸಾಯಕ ಪರಿಸ್ಥಿತಿ ಹೇಳಿಕೊಂಡಿದ್ದಾನೆ. ಒಂದು ಅವಕಾಶ ಕೊಡಿ, ಉದ್ಯೋಗ ಕೊಡಿ ಬದಲಾಗುತ್ತೇನೆ ಎಂದಿದ್ದಾನೆ. ಆತ ಹೇಳಿದಂತೆ ಕಳ್ಳತನ ಮಾಡಬೇಕು ಅಂತ ಮಾಡುತ್ತಿರುವುದಲ್ಲ. ಸರಿಯಾದ ಉದ್ಯೋಗ ಇಲ್ಲ, ಹಾಗಾಗಿ ಹೀಗೆ ಮಾಡುತ್ತಿದ್ದೇನೆ ಎನ್ನುವುದು ಅವನ ಹೇಳಿಕೆ ಎಂದು ಹೇಳಲಾಗುತ್ತಿದೆ.
Be the first to comment