ಶಾಲಾ ಕೆಲಸಕ್ಕೂ ಸೈ, ಇಲಾಖೆಯ ಆದೇಶಕ್ಕೂ ಜೈ ಎಂದ ಎಸ್.ಎಂ.ಭಟ್ಟ ಸೇವೆಯಿಂದ ನಿವೃತ್ತಿ

ನಿನಗಾರು ಗುರುವಹರು? ದಾರಿ ತೋರುವವರಾರು?
ಗುರಿಯನರಿತವರಾರು? ಎಲ್ಲರೂ ಗುರುಗಳೇ- ಮಾರ್ಗದರ್ಶಿಗಳು
ದಾರಿ ನಡೆವಾಗ ನಿನಗೆ ನೀನೇ ಗುರುವು
ಸರಿದಾರಿ ಕರುಣಿಪುದು ಸರಿ ಗುರಿಯ ಭಾಗ್ಯ!

ಗುರಿಯರಿತು, ದಾರಿಯನ್ನು ಅರಿತು, ಆ ದಾರಿಯಲ್ಲಿ ನಡೆಯದಿದ್ದರೆ ಏನು ಪ್ರಯೋಜನ? ಕವಲು ದಾರಿಯಲ್ಲಿ ಸುಮ್ಮನೆ ನಿಂತರೆ ಏನು ಸಾಧಿಸಿದಂತಾದೀತು? ದಾರಿಯನ್ನು ಅರಿಯುವುದಕ್ಕಿಂತಲೂ ಅರಿತ ದಾರಿಯಲ್ಲಿ ಹೆಜ್ಜೆ ಹಾಕುವುದು, ನಡೆವಾಗ ಧೈರ್ಯದಿಂದ ಮುನ್ನುಗ್ಗಿ ವೃತ್ತಿ ಬದುಕಿನಲ್ಲಿ ಹೊಸ ಪಥ ಸೃಷ್ಟಿಸಿ, ಸಮಸ್ಯೆಗಳೆಲ್ಲವನ್ನು ಸವಾಲಾಗಿ ಸ್ವೀಕರಿಸಿ ಶೈಕ್ಷಣಿಕ ಸೇವೆಯಲ್ಲಿ ಹೆಜ್ಜೆ ಗುರುತೊಂದನ್ನು ಮೂಡಿಸಿದವರು ತಲಗೇರಿಯ ಸುಬ್ರಾಯ ಮಹಾಬಲೇಶ್ವರ ಭಟ್ ರವರು.

ಏಕಕಾಲಕ್ಕೆ ಖವಾ೯, ಹೆರಂಗಡಿ, ನಾಗಂತೂರು, ಉಪ್ಪೋಣಿ ಈ ನಾಲ್ಕು ಕ್ಲಸ್ಟರ್ನಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಇಲಾಖೆ ಒಪ್ಪಿಸಿದ ಕೆಲಸಕ್ಕೆ ಒಲ್ಲೆ ಎಂಬ ಪದ ಬಳಸದೆ,ಬಲ್ಲಿರೇನಯ್ಯ ಎನ್ನ ಪರಾಕ್ರಮ! ಎಂಬಂತೆ ಇಲಾಖೆಯ ಆದೇಶಕ್ಕೆ ಜೈ ಎಂದು ಸಾಧಿಸಿ ತೋರಿಸಿದವರು. ಗುರುಗಳಾದ ನಾವು ನಿಂತಲ್ಲೇ ನಿಂತ ಕೈಮರವಾದರೆ ಏನು ಪ್ರಯೋಜನವೆಂದು ತಮ್ಮೊಳಗೆ ತಾವೇ ಪ್ರಶ್ನಿಸಿಕೊಂಡು ತನರಿವೇ ತನಗೆ ಗುರುವೆಂದು,ಆದಾರಿಯಲ್ಲಿ ನಡೆದು ಗುರಿ ತಲುಪಿದ ಪುಣ್ಯಾತ್ಮರು. ಒಂದೇ ಒಂದು ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಇಲಾಖೆಗೆ ಮಾಹಿತಿ ನೀಡಿ ನೀಡಿ ಹೈರಾಣಾಗುವ ಅದೆಷ್ಟೋ ಸಂಪನ್ಮೂಲ ವ್ಯಕ್ತಿಗಳು ನಮ್ಮೊಂದಿಗಿರುವಾಗ ಸುಮಾರು ಐದು ವರ್ಷಗಳ ಖಾಲಿ, ಖಾಲಿ, ಖಾಲಿಯಾಗಿದ್ದ ಸಂಪನ್ಮೂಲ ಕೇಂದ್ರಕ್ಕೆಲ್ಲ ಸುಬ್ರಾಯ ಭಟ್ಟರೆ ಸಾರಥ್ಯ ವಹಿಸಿ ಇಲಾಖೆಯ ಘನತೆ, ಗೌರವ ಹೆಚ್ಚಿಸಿದ ಸಜ್ಜನರು.

ನಮ್ಮ ತಲೆಗೆ ನಮ್ಮ ಕೈ” ಎಂಬುದೊಂದು ಮಾತಿದೆ. ನಮ್ಮ ಸುಖ- ದುಃಖಗಳಿಗೆ ನಾವೇ ಹೊಣೆ. ಇಲಾಖೆ ಹೊರಿಸಿದ ಹೆಗಲಿನ ಹೊರೆಯನ್ನು ದೈವ ಭುಜಕ್ಕೇರಿಸುವ ಸಾಹಸ ಮಾಡದ ಸುಬ್ರಾಯ ಭಟ್ಟರು ನಮಗೆ ನಾವೇ ಶಿಲ್ಪಿಗಳೆಂಬ ಸತ್ಯದ ದಾರಿ ತೋರಿಸಿ ತಾಲೂಕಿನಾದ್ಯಂತ ಚಿರಪರಿಚಿತರು. ಇಲಾಖೆಯ ಮಾಹಿತಿಗಳಿಗೆಲ್ಲ ಫಾರ್ಮೆಟ್ ಹಾಕಿ ಇಡೀ ಶಿಕ್ಷಕ ಕುಲಕ್ಕೆ ಮಾಹಿತಿ ಒದಗಿಸುವ ಕಂಪ್ಯೂಟರ್ ಶಿಕ್ಷಕರು ಕೂಡ.

ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ತಲಗೇರಿಯಲ್ಲಿ ತಂದೆ ಮಹಾಬಲೇಶ್ವರ ಭಟ್ಟ, ತಾಯಿ ಸರಸ್ವತಿ ಅವರ ಮುದ್ದಿನ ಮಗನಾಗಿ ೧೯೬೬ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಯಲಗುಪ್ಪಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ, ಕೊಳಗದ್ದೆ ಸಿದ್ಧಿ ವಿನಾಯಕ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಅರೇ ಅಂಗಡಿ ಜೂನಿಯರ್ ಕಾಲೇಜಿನಲ್ಲಿ ವೃತ್ತಿ ಬದುಕಿನ ಶಿಕ್ಷಣವನ್ನು, ಎಸ್. ಡಿ. ಎಂ. ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ೧೯೯೮ ರಂದು ಸಿದ್ದಾಪುರ ತಾಲೂಕಿನ ಬಾಳೆಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಬದುಕನ್ನು ಆರಂಭಿಸಿ ಸುಮಾರು ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಹೊನ್ನಾವರ ತಾಲೂಕಿನ ಬೈಲಗದ್ದೆ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದರು. ಸುಮಾರು ೯ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ೨೦೦೭ ರಿಂದ ೨೦೧೬ರವರೆಗೆ ಅಂದರೆ ಸುಮಾರು ೯ ವರ್ಷಗಳ ಕಾಲ ಹೆರಂಗಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿರುತ್ತಾರೆ. ಸುಮಾರು ಮೂರು ಅವಧಿಗಳ ಕಾಲ ಸಿಆರ್ಪಿಯಾದರೂ ಯಾವುದೇ ಶಿಕ್ಷಕರಿಗೆ ಇವರಿಂದ ಕಿರಿಕಿರಿ ಆಗಿಲ್ಲ. ಎಷ್ಟೇ ಸಾರಿ ಶಾಲೆಗೆ ಬಂದರೂ ಚಡ್ಡೆ ಯಾಗಲಿಲ್ಲ. ಮುಖ ತಿರುಗಿಸದೆ, ಮೌನಕ್ಕೆ ಶರಣಾಗದೆ ಎಲ್ಲರಿಗೂ ಆಪ್ತರಾಗಿರುವುದೇ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅಡಕಾರ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಅಲ್ಲಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಖಾಲಿ ಬಿದ್ದ ಇನ್ನುಳಿದ ನಾಲ್ಕು ಕ್ಲಸ್ಟರ್ ಸಿ.ಆರ್.ಪಿ.ಹುದ್ದೆಯನ್ನು ಹೆಗಲಿಗೇರಿಸಿಕೊಂಡು ಸ್ವಲ್ಪವೂ ನಿತ್ರಾಣರಾಗದೇ ಕಾಲಕಾಲಕ್ಕೆ ಇಲಾಖೆಗೆ ಮಾಹಿತಿ ನೀಡಿ ಮಾನವ ಸಂಪನ್ಮೂಲದ ಮಾಹಿತಿ ಕೇಂದ್ರವಾದರು. “ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ” ಎಂಬಂತೆ ಪಾಲಿಗೆ ಬಂದುದು ಪಂಚಾಮೃತವೆಂದು ಸ್ವೀಕರಿಸಿ ಧನ್ಯತೆಯಿಂದ ಮೆರೆದರು. ಇವರ ಬದುಕಿನ ಲಲಿತ ಕಲೆ ಎಲ್ಲಾ ಶಿಕ್ಷಕರಿಗೂ ಮಾದರಿಯಾಯಿತು.ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬೈಲಗದ್ದೆಗೆ ಮುಖ್ಯೋಧ್ಯಾಪಕರಾಗಿ ಮತ್ತೆ ಸೇವೆ ಸಲ್ಲಿಸುವ ಅವಕಾಶ ಇವರ ಪಾಲಿಗೆ ಒಲಿದು ಬಂದಿದೆ. ಜೊತೆಗೆ ಅದೇ ಶಾಲೆಯಲ್ಲಿ ವೃತ್ತಿ ಬದುಕಿನ ಪಯಣಕ್ಕೆ ವಿದಾಯ ಹೇಳುತ್ತಿರುವುದು ಅವರ ಬದುಕಿನ ಅವಿಸ್ಮರಣೆಯ ಸಮಯ.

ಮಡದಿ ಮಂಗಳ ಗೌರಿ ಭಟ್ ವೃತ್ತಿಯಲ್ಲಿ ಶಿಕ್ಷಕಿಯಾಗಿ ಮಕ್ಕಳ ಪಾಲಿನ ಆರಾಧ್ಯರು. ಮಕ್ಕಳಾದ ಚೈತ್ರ ,ಚಂದನ ಇಂಜಿನಿಯರ್ ಪದವಿ ಪಡೆದು ವೃತ್ತಿ ಬದುಕನ್ನು ಆರಂಭಿಸಿ ವಿವಾಹಿತರಾದರೆ, ಕೊನೆಯ ಮಗಳು ಸುಕೃತಾ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿ. ಸದಾ ಸುಖಿ ಕುಟುಂಬದ ಸೂತ್ರಧಾರ ಎಸ್. ಎಂ. ಭಟ್ಟರಿಗೆ ರೋಟರಿ ಎಕ್ಸಲೆಂಟ್ ಅವಾರ್ಡ್ ಪುರಸ್ಕೃತರು. ಬಾಳ ಪಥದಲ್ಲಿ ಸಾಗುವ ತಿಳಿ ಮನದ ಗುರುಗಳು ಇನ್ನುಳಿದವರಿಗೆ ಗುರುವಾಗಿ ಬದುಕು ಕಂಡುಕೊಂಡ ಎಸ್.ಎಂ.ಭಟ್ಟರ ನಿವೃತ್ತಿ ಜೀವನ ಸದಾ ಹಸಿರಾಗಿರಲೆಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ
ನಲಿ-ಕಲಿ ಶಿಕ್ಷಕ ಹೊನ್ನಾವರ.

About ಬಿ.ಎನ್‌. ವಾಸರೆ 707 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*