ದಾಂಡೇಲಿ ನಗರದ ರೋಟರಿ ಕ್ಲಬ್ ಆಶ್ರಯದಡಿ ರೋಟರಿ ಶಾಲೆಯ ಸಭಾಭವನದಲ್ಲಿ ಅಂತರ ಜಿಲ್ಲಾ ಚೆಸ್ ಪಂದ್ಯಾವಳಿಗೆ ಚಾಲನೆಯನ್ನು ನೀಡಲಾಯಿತು.
ಪಂದ್ಯಾವಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಶಿರಸಿಯ ಭಟ್ ಚೆಸ್ ಶಾಲೆಯ ಮುಖ್ಯಸ್ಥ ರಾಮಚಂದ್ರ ಹೆಗಡೆ ಅವರು ಚೆಸ್ ಒಂದು ಮೆದುಳಿನ ಆಟವಾಗಿದೆ. ಶುದ್ಧವಾಗಿ ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟವಾಗಿದ್ದು, ಮಕ್ಕಳ ಮಾನಸಿಕ ಸದೃಢತೆಗೆ ಅತ್ಯಂತ ಪರಿಣಾಮಕಾರಿಯಾದ ಆಟವಾಗಿದೆ ಎಂದರು.

ರೋಟರಿ ಕ್ಲಬ್ಬಿನ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಅವರು ರೋಟರಿ ಕ್ಲಬ್ ಪ್ರತಿವರ್ಷವೂ ಅಂತರ ಜಿಲ್ಲಾ ಚೆಸ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯೂ ಈ ಪಂದ್ಯಾವಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚೆಸ್ ಒಂದು ಜನಪ್ರಿಯ ಕ್ರೀಡೆಯಾಗಿದ್ದು, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅತಿ ಉಪಯುಕ್ತವಾದ ಆಟವಾಗಿದೆ ಎಂದರು.

ಭಟ್ ಚೆಸ್ ಶಾಲೆಯ ಆನಂದಸ್ವಾಮಿ ಸಾಂದರ್ಭಿಕವಾಗಿ ಮಾತನಾಡಿ ಸ್ಪರ್ಧೆಗೆ ಶುಭವನ್ನು ಕೋರಿದರು.
ವೇದಿಕೆಯಲ್ಲಿ ರೋಟರಿ ಕ್ಲಬಿನ ಇವೆಂಟ್ ಚೇರ್ಮನ್ ನವೀನ್ ಕಾಮತ್, ರೋಟರಿ ಕ್ಲಬ್ ಪ್ರಮುಖರಾದ ಎಸ್.ಜಿ.ಬಿರದಾರ, ಪ್ರಕಾಶ ಕಣ್ವೆಹಳ್ಳಿ ಮತ್ತು ಅಭಿಷೇಕ್ ಕನ್ಯಾಡಿ ಉಪಸ್ಥಿತರಿದ್ದರು.
ಅಶುತೋಷ್ ಕುಮಾರ್ ರಾಯ್ ಸ್ವಾಗತಿಸಿದರು. ಅಭಿಷೇಕ್ ಕನ್ಯಾಡಿ ವಂದಿಸಿದರು. ಜೋಸೆಫ್ ಗೋನ್ಸಾಲಿಸ್ ನಿರೂಪಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು, ಚೆಸ್ ಸ್ಪರ್ಧಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಐದು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ 70 ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
Be the first to comment