ಒಂದು ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಪೊಲೀಸರು: ಸಾರ್ವಜನಿಕರಲ್ಲಿ ಆತಂಕದ ವಾತಾವರಣ

ದಾಂಡೇಲಿ ನಗರದ ಹೃದಯಭಾಗವಾದ ಜೆ.ಎನ್. ರಸ್ತೆಯಲ್ಲಿ ಸೋಮವಾರ ಸಂಜೆ ಜನಸಂದಣಿಯ ನಡುವೆಯೇ ರೌಡಿಶೀಟರ್ ಎನ್ನಲಾದ ವ್ಯಕ್ತಿಯೊಬ್ಬ ತನ್ನ ಸಹಚರರೊಂದಿಗೆ ಕತ್ತಿ ಹಾಗೂ ಕಬ್ಬಿಣದ ರಾಡ್‌ಗಳಿಂದ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪ್ರಮುಖ ಆರೋಪಿಗಳನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಕೇವಲ ಒಂದು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಸೋಮವಾರ ಸಂಜೆ 6.30 ಗಂಟೆ ಸುಮಾರಿಗೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನಗರದ ಜೆ.ಎನ್. ರಸ್ತೆಯಲ್ಲಿರುವ ಸಿನಿಮಾ ಮಂದಿರದ ಎದುರಿನ ಬಾರ್‌ನಿಂದ ಹೊರಬಂದ ನಾಲ್ವರು ವ್ಯಕ್ತಿಗಳ ನಡುವೆ ಮೊದಲು ಮಾತಿನ ಚಕಮಕಿ ನಡೆದಿದೆ. ಅದು ಕೆಲವೇ ಕ್ಷಣಗಳಲ್ಲಿ ತಳ್ಳಾಟ ಮತ್ತು ಹೊಡೆದಾಟಕ್ಕೆ ತಿರುಗಿದೆ. ಬಳಿಕ ಗುಂಪಿನ ಮೂವರು ಆರೋಪಿಗಳು ಜೊತೆಯಲ್ಲಿದ್ದ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಘಟನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗಾಯಾಳು ವ್ಯಕ್ತಿ ಮೆಡ್ ಪ್ಲಸ್ ಅಂಗಡಿಯ ಕಡೆಗೆ ಓಡಿದರೂ, ಆರೋಪಿಗಳು ಆತನನ್ನು ಹಿಂಬಾಲಿಸಿ ಕತ್ತಿ ಮತ್ತು ಕಬ್ಬಿಣದ ರಾಡ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಾಯಾಳುವಿನ ಕೈಯಲ್ಲಿಯೂ ಬಿಯರ್ ಬಾಟಲಿ ಇದ್ದು, ಆತ ಕೂಡ ಪ್ರತಿರೋಧಿಸಲು ಯತ್ನಿಸಿದ್ದಾನೆ. ಆದರೆ, ತಲೆಗೆ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ ಆರೋಪಿಗಳು ಹಲ್ಲೆಯನ್ನು ಮುಂದುವರಿಸಿದ್ದು, ಸ್ಥಳ ರಕ್ತಮಯವಾಗಿದೆ. ಹಲ್ಲೆಗೊಳಾದ ಹಾಗೂ ಹಲ್ಲೆ ಮಾಡಿದವರ ಜರ್ಕಿನ್, ಚಪ್ಪಲಿಗಳು ಅಲ್ಲಿಯೇ ಸಾಕ್ಷಿಯೆಂಬಂತೆ ಬಿದ್ದುಕೊಂಡಿವೆ. ಅಲ್ಲಿದ್ದ ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಹಲ್ಲೆಯ ಬಳಿಕ ಆರೋಪಿಗಳು ಬೈಕ್ ಏರಿ ಕತ್ತಿ ಮತ್ತು ಕಬ್ಬಿಣದ ರಾಡ್‌ಗಳನ್ನು ಬಹಿರಂಗವಾಗಿ ಝಳಪಿಸುತ್ತಾ, ಗಾಯಾಳುವಿಗೆ ಮತ್ತೆ ಜೀವ ಬೆದರಿಕೆ ಹಾಕುತ್ತಾ ಸೋಮಾನಿ ವೃತ್ತದ ಕಡೆಗೆ ಪರಾರಿಯಾಗಲು ಯತ್ನಿಸಿದ್ದಾರೆ. ಈ ದೃಶ್ಯವನ್ನು ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಅಂಗಡಿ ಮುಂಗಟ್ಟುಗಳಲ್ಲಿದ್ದ ಹಲವರು ಆತಂಕದಿಂದ ಓಡಾಡಿದ್ದಾರೆ.


ಇದೇ ವೇಳೆ ಮತ್ತೊಂದು ಮೂವರು ಯುವಕರ ತಂಡ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ರಕ್ಷಿಸಲು ಮುಂದಾಗಿದೆ. ಅವರೂ ಸಹ ಎದುರಾಳಿ ತಂಡದೊಂದಿಗೆ ಘರ್ಷಣೆಗೆ ಸಜ್ಜಾಗಿದ್ದಂತೆ ಕಂಡುಬಂದಿದ್ದು, ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಸಂಪೂರ್ಣ ಘಟನೆ ಸುತ್ತಮುತ್ತಲಿನ ಅಂಗಡಿಗಳ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಹಲ್ಲೆಯ ಬಳಿಕ ಎರಡೂ ತಂಡಗಳು ಬೈಕ್‌ಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ವೇಗವಾಗಿ ಸಂಚರಿಸಿ ತಪ್ಪಿಸಿಕೊಳ್ಳಲು ಯತ್ನಿಸಿವೆ. ಗಾಯಾಳು ವ್ಯಕ್ತಿಯ ತಲೆಯಿಂದ ರಕ್ತ ಹರಿಯುತ್ತಿದ್ದರೂ ಆತ ಆಸ್ಪತ್ರೆಗೆ ತೆರಳದೆ ಅಲ್ಲಿಂದ ದೂರ ಸರಿಯಲು ಪ್ರಯತ್ನಿಸಿದ್ದಾನೆ.
ಇದೇ ವೇಳೆ ಮಾಹಿತಿ ಪಡೆದ ದಾಂಡೇಲಿ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ್ ತಮ್ಮ ಸಿಬ್ಬಂದಿಯೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಪೊಲೀಸ್ ವಾಹನದ ಸೈರನ್ ಕೇಳುತ್ತಿದ್ದಂತೆಯೇ ಎರಡೂ ತಂಡಗಳು ಅಲ್ಲಿಂದ ಚದುರಿಕೊಂಡಿವೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಡಿವೈಎಸ್‌ಪಿ ಶಿವಾನಂದ ಮದರಕಂಡಿ ಹಾಗೂ ಸಿಪಿಐ ಶಿವಾನಂದ ಅಂಬಿಗೇರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪಿಎಸ್ಐ ಅಮೀನ್ ಅತ್ತಾರ್ ಹಾಗೂ ಪಿಎಸ್ಐ ಕಿರಣ್ ಪಾಟೀಲ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧ ಸ್ಥಳಗಳಲ್ಲಿ ಆರೋಪಿಗಳ ಬೆನ್ನಟ್ಟಿ, ಘಟನೆ ನಡೆದ ಒಂದು ಗಂಟೆಯೊಳಗೆ ಪ್ರಮುಖ ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.
ಹಲ್ಲೆಯಲ್ಲಿ ಗಾಯಗೊಂಡಿರುವ ವಿಮಾನ್ವೆಲ್ ಬೈಲಾ ಎಂಬಾತನನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಆರೋಪಿಗಳ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಕತ್ತಿ ಮತ್ತು ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಿದ ಆರೋಪಿಗಳ ಪೈಕಿ ಪ್ರಮುಖರಾದ ಮಾರುತಿ ನಗರದ ಅಶೋಕ ಗುರವ ಹಾಗೂ ಫೈರೋಜ್ ದವಲತ್ತಿ, ಗಾಂಧಿನಗರದ ಅಕ್ಬರ ನರಗುಂದ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಬಂಧಿತರಲ್ಲಿ ಓರ್ವ ರೌಡಿಶೀಟರ್ ಆಗಿರುವುದಾಗಿ ತಿಳಿದುಬಂದಿದೆ. ಮತ್ತೊಂದು ತಮನಡದಲ್ಲಿದ್ದ ವ್ಯಕ್ತಿಗಳೂ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಕೆಲ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.
ಸಾರ್ವಜನಿಕರಲ್ಲಿ ಭೀತಿ: ಹಾಡುಹಗಲೇ ನಗರದ ಮುಖ್ಯ ರಸ್ತೆಯಲ್ಲಿ ಕತ್ತಿ ಮತ್ತು ಕಬ್ಬಿಣದ ರಾಡ್‌ಗಳನ್ನು ಹಿಡಿದು ಗ್ಯಾಂಗ್ ವಾರ್ ಮಾದರಿಯಲ್ಲಿ ನಡೆದ ಈ ದಾಳಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಸಿನಿಮಾ ದೃಶ್ಯಗಳನ್ನು ನೆನಪಿಸುವಂತೆ ನಡೆದ ಈ ಘಟನೆ ನೋಡಿದ ಪ್ರತ್ಯಕ್ಷದರ್ಶಿಗಳು ಬೆಚ್ಚಿಬಿದ್ದಿದ್ದು, ಸುದ್ದಿ ಹರಡುತ್ತಿದ್ದಂತೆಯೇ ನೂರಾರು ಜನರು ಸ್ಥಳಕ್ಕೆ ಜಮಾಯಿಸಿದ್ದಾರೆ. ದಾಂಡೇಲಿಯಂತಹ ಶಾಂತ ಪಟ್ಟಣದಲ್ಲಿಯೂ ಇಂತಹ ರೌಡಿಸಂ ಮತ್ತು ಗ್ಯಾಂಗ್ ಸಂಸ್ಕೃತಿ ತಲೆದೋರುತ್ತಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಘಟನೆ ನಡೆದ ಕೆಲವೇ ಸಮಯದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ ದಾಂಡೇಲಿ ನಗರ ಠಾಣೆ ಪೊಲೀಸರ ಕ್ಷಿಪ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಗೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರಣ ತಿಳಿಯಬೇಕಿದೆ: ಕತ್ತಿಯಿಂದ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ನಿಖರ ಕಾರಣ, ಆರೋಪಿಗಳು ಮತ್ತು ಗಾಯಾಳುವಿನ ನಡುವಿನ ವೈಮನಸ್ಸಿನ ಹಿನ್ನೆಲೆಯ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆಯಲ್ಲಿ ಭಾಗಿಯಾಗಿರುವ ಇತರರ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Be the first to comment