ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸತೀಶ ನಾಯಕ, ಬಾವಿಕೇರಿ

ಹಳಿಯಾಳ : ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಹಳಿಯಾಳದ ಕ್ರಿಯಾಶೀಲ ಸಂಘಟಕ, ಆದರ್ಶ ಶಿಕ್ಷಕ ಸತೀಶ ನಾಯಕ, ಭಾವಿಕೇರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಬಿರುಸುಗಳಿತ್ತಾದ್ದಾದರೂ ಅಂತಿಮವಾಗಿ ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಇವರ ಜೊತೆಗೆ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಇವರ ನಾಯಕತ್ವದ ಇಡೀ ತಂಡ ಅವಿರೋಧವಾಗಿ ಆಯ್ಕೆಯಾಗಿದ್ದು, ಶನಿವಾರ ಅಧಿಕೃತವಾಗಿ ಘೋಣೆಯಾಗಲಿದೆ.

ಮೂಲತಹ ಅಂಕೋಲಾ ತಾಲೂಕಿನ ಬಾವಿಕೇರಿಯವರಾಗಿರುವ ಸತೀಶ ನಾಯಕರ ಪ್ರಾಥಮಿಕ, ಪ್ರೌಢ, ಪದವಿ ಶಿಕ್ಷಣ ಅಂಕೋಲೆಯಲ್ಲಿ. 2002 ರಲ್ಲಿ ಶಿಕ್ಷಕರಾಗಿ ಚಿಕ್ಕೋಡಿ ತಾಲೂಕಿನಲ್ಲಿ ಸೇವೆಗೆ ನಿಯೋಜನೆಗೊಂಡ ಸತೀಶ ನಾಯಕ, 2006ರಲ್ಲಿ ಹಳಿಯಾಳದ ಡೊಂಕನಾಳ ಶಾಲೆಗೆ ವರ್ಗಾವಣೆಯಾಗಿ ಬರುತ್ತಾರೆ. 2010ರಲ್ಲಿ ಹಳಿಯಾಳದ ಮದ್ನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವರ್ಗಾವಣೆಗೊಂಡ ಇವರು ಇಲ್ಲಿಯವರೆಗೂ ಅದೇ ಶಾಲೆಯಲ್ಲಿ ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘಟನೆಯಲ್ಲಿ ಸಕ್ರಿಯ ರಾಗಿರುವ ಸತೀಶ ನಾಯಕ ತನ್ನ ವೃತ್ತಿ ಜೀವನದಲ್ಲಿಯೂ ಕೂಡ ಅಷ್ಟೇ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಉಳಿಸಿಕೊಂಡವರು.

ಕಾಲೇಜು ದಿನದಲ್ಲಿಯೇ ನಾಯಕತ್ವದ ಗುಣವನ್ನು ಹೊಂದಿದ್ದ ಸತೀಶ ನಾಯಕ ಕಾಲೇಜಿನ ಕ್ರೀಡಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದವರು. ಹಳಿಯಾಳದ ಶಿಕ್ಷಕರ ಸಂಘದಲ್ಲಿ ನಾಲ್ಕು ಬಾರಿ ಆಯ್ಕೆಯಾಗಿರುವ ಸತೀಶ ಎರಡು ಬಾರಿ ಹಳಿಯಾಳ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಗಮನಾರ್ಹ ಕಾರ್ಯ ಮಾಡಿದ ಇವರು ಹಳಿಯಾಳದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿಯೂ ನೇತೃತ್ವ ವಹಿಸಿದ್ದಾರೆ. ಅಂಕೋಲೆಯಲ್ಲಿರುವ ಟೀಚರ್ಸ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿರುವ ಸತೀಶ ನಾಯಕ ಹಳಿಯಾಳದಲ್ಲಿ ಅದರ ಶಾಖೆ ಆರಂಭಿಸಲು‌ ಕಾರಣೀಕರ್ತರಾದವರು.

ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲ ಪದಾಧಿಕಾರಿಯಾಗಿರುವ ಸತೀಶ ನಾಯಕ ಇದೀಗ ಶಿಕ್ಷಕರ ನಡುವೆ ತಾನಿಟ್ಟುಕೊಂಡ ಸ್ನೇಹಪರತೆ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟ ರೀತಿರಿವಾಜುಗಳಿಂದಾಗಿ ಹಾಗು ಸಂಘಟನೆ ಚಾತುರ್ಯದಿಂದಾಗಿ ಶಿರಸಿ ಶೈಕ್ಷಣಿಕ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಶಿಕ್ಷಕರ ಹಿತಕ್ಕಾಗಿ ನಿರಂತರ ಧ್ವನಿಯಾಗಿ, ಸಂಘಟನೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸತೀಶ ನಾಯಕ ಶಿಕ್ಷಕರ ಸಮಸ್ಯೆಗಳ ಪರಿಹಾರ, ಶಿಕ್ಷಣದ ಗುಣಮಟ್ಟದ ಅಭಿವೃದ್ಧಿ ಹಾಗೂ ವಿದ್ಯಾರ್ಥಿ ಕೇಂದ್ರಿತ ಕಾರ್ಯಗಳಿಗೆ ಆದ್ಯತೆ ನೀಡುತ್ತ ಬಂದವರಾಗಿದ್ದಾರೆ. ಅವರ ಸರಳ ವ್ಯಕ್ತಿತ್ವ ಸ್ನೇಹಪರ ನಡೆ ಹಾಗೂ ಸಂಘಟನಾ ಸಾಮರ್ಥ್ಯದಿಂದ ಶಿಕ್ಷಕರ ವಿಶ್ವಾಸವನ್ನು ಗಳಿಸುವ ಮೂಲಕ ಜಿಲ್ಲೆಯ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ತನ್ನ ಈ ನೇಮಕಕ್ಕೆ ಸಹಕರಿಸಿರುವ ಎಲ್ಲ ಶಿಕ್ಷಕ ವೃಂದದವರನ್ನ, ಎಲ್ಲ ತಾಲೂಕುಗಳ ಶಿಕ್ಷಕ ಪ್ರತಿನಿಧಿಗಳ ಸಹಕಾರವನ್ನು ಸ್ಮರಿಸುವ ಸತೀಶ ನಾಯಕ ತಮ್ಮ ಸಾಧನೆಯಲ್ಲಿ ಮಡದಿ ಜ್ಯೋತಿ ನಾಯಕರ ಸಹಕಾರವನ್ನು ಸ್ಮರಿಸುತ್ತಾರೆ.

About ಬಿ.ಎನ್‌. ವಾಸರೆ 695 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*