ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಜಾರಿಗಾಗಿ ಆಗ್ರಹಿಸಿ ದಾಂಡೇಲಿ ಕಾರ್ಮಿಕರ ಸಂಘದಿಂದ ಮನವಿ

ದಾಂಡೇಲಿ : ಕನಿಷ್ಠ ವೇತನವನ್ನು ಪರಿಷ್ಕರಿಸಿ ಹೆಚ್ಚಳ ಮಾಡಿ ಅಂತಿಮ ಅಧಿಸೂಚನೆ ಜಾರಿಗಾಗಿ ಆಗ್ರಹಿಸಿ ದಾಂಡೇಲಿ ಕಾರ್ಮಿಕರ ಸಂಘವು ನಾಡಕಚೇರಿಯ ಮೂಲಕ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿಯನ್ನು ಶುಕ್ರವಾರ ಸಲ್ಲಿಸಿದರು.

ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ, ರಾಜ್ಯದಲ್ಲಿ ಹಲವಾರು ವಲಯಗಳಲ್ಲಿ ದುಡಿಯುವ ಕಾರ್ಮಿಕರಿಗೆ 2017ರಲ್ಲಿ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಹೆಚ್ಚಳ ಮಾಡಲಾಗಿದೆ. ಅದೇ ದರಗಳನ್ನು ಈವರೆಗೂ ನೀಡುತ್ತಾ ಬರಲಾಗಿದೆ. ನಿಯಮದಂತೆ ಪ್ರತಿ ಐದು ವರ್ಷಗಳಿಗೊಮ್ಮೆ ಕನಿಷ್ಠ ವೇತನ ದರಗಳು ಪರಿಷ್ಕರಣೆಯಾಗಬೇಕು. ಆ ಪ್ರಕಾರ 2022ರಲ್ಲಿ ಕನಿಷ್ಠ ವೇತನ ಪನಿಷ್ಕರಣೆಯಾಗಬೇಕಿತ್ತು. ಆದರೆ 2025 ರಲ್ಲಿ ಕಾರ್ಮಿಕ ಇಲಾಖೆಯು ಕನಿಷ್ಠ ವೇತನ ಪರಿಷ್ಕರಣೆಯ ಕರಡು ಅಧಿಸೂಚನೆ ಜಾರಿ ಮಾಡಿದೆ. ಈ ಕರಡು ಅಧಿಸೂಚನೆ ಜಾರಿಯಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಆದರೆ ಈವರೆಗೆ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಜಾರಿಯಾಗಿರುವುದಿಲ್ಲ. ಸರಕಾರದ ಈ ವಿಳಂಬ ಧೋರಣೆಯು ಖಂಡನೀಯವಾಗಿದೆ. ಆದ್ದರಿಂದ 2022 ನೇ ಸಾಲಿನಿಂದ ಕನಿಷ್ಠ ವೇತನ ಹೆಚ್ಚಳಕ್ಕಾಗಿ ಕಾಯುತ್ತಿರುವ ಬಡ ಕಾರ್ಮಿಕರ ದೈನಂದಿನ ಕಷ್ಟದ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಇನ್ನೂ ತಡ ಮಾಡದೆ ರಾಜ್ಯದಲ್ಲಿ ಕನಿಷ್ಠ ವೇತನ ಹೆಚ್ಚಳ ಮಾಡಿ ಅಂತಿಮ ಅಧಿಸೂಚನೆಯನ್ನು ಜಾರಿ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಸಾಬ ಕೇಸನೂರ ಮನವಿ ವಾಚಿಸಿದರು.

ಈ ಸಂದರ್ಭದಲ್ಲಿ ದಾಂಡೇಲಿ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಎಸ್.ಎಸ್.ಪೂಜಾರ, ಪ್ರಧಾನ ಕಾರ್ಯದರ್ಶಿ ರಾಜೇಸಾಬ ಕೇಸನೂರ, ಸಂಘದ ಪ್ರಮುಖರಾದ ಶರಣಪ್ಪ ಬಾಗಲಿ, ಶಿವಪ್ಪ.ಎಚ್, ಬಾಬು ಆಲೂರು, ಶೇಖರ ನಾಯ್ಕ, ಜಾಕೀರ ಶೇಖ, ರಾಜಶೇಖರ.ಎನ್, ಮಹೇಶ, ಸಿ.ಡಿ.ಬೈಲಾ ಹಾಗೂ ಸಂಘಟನೆಯ ಸದಸ್ಯರು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*