ಅಲ್ಲಿ ಅದೆಷ್ಟು ಮೊಸಳೆ ಮರಿಗಳಿವೆಯೆಂದು ಲೆಕ್ಕ ಹಾಕಲು ಹೋದರೆ ಲೆಕ್ಕವೇ ತಪ್ಪಿ ಹೋಗುತ್ತದೆ. ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ 40 ಕ್ಕೂ ಹೆಚ್ಚು ಮೊಸಳೆ ಮರಿಗಳು… ನಂಬ್ತೀರಾ….? ನಂಬಲೇ ಬೇಕು. ಎಲ್ಲಿ ಗೊತ್ತಾ…. ದಾಂಡೇಲಿಯ ಲೋಕೋಪಯೋಗಿ ಪ್ರವಾಸಿಗೃಹದ ಹತ್ತಿರ, ಕಾಳಿ ನದಿ ದಂಡೆಯ ಮೇಲೆ…. ಮೊಸಳೆಯೊಂದು 40ಕ್ಕೂ ಹೆಚ್ಚು ಮೊಟ್ಟೆ ಇಟ್ಟು, ಮರಿ ಮಾಡಿ ಕಾವಲು ಕಾಯುತ್ತಿರುವ ದೃಶ್ಯ ಗಮನಸೆಳೆಯುತ್ತಿದೆ.
ದಾಂಡೇಲಿಯ ಕಾಳಿ ನದಿಯ ಒಂದಿಷ್ಟು ಸ್ಥಳಗಳಲ್ಲಿ ಮೊಸಳೆಗಳು ಸಾಕಷ್ಟು ಕಾಣಸಿಗುತ್ತದೆ. ದಾಂಡೇಲಪ್ಪ ದೇವಸ್ಥಾನದ ಹಾಲಮಡ್ಡಿ ಪ್ರದೇಶದಲ್ಲಂತೂ ನೂರಾರು ಮೊಸಳೆಗಳು ಒಂದೇ ಸ್ಥಳದಲ್ಲಿ ಇರುತ್ತವೆ. ಈ ಬಿಸಿಲಿನ ಜಳಪಿಸುವಿಕೆಗೆ ಮೊಸಳೆಗಳು ನದಿ ದಂಡೆಯ ಮೇಲೆ ಹಾಗೂ ನದಿಯ ನಡುವಿನ ನಡುಗಡ್ಡೆಯ ಮೇಲೆ ಬಂದು ಮಲಗಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಇಲ್ಲಿಯ ಮೊಸಳೆಗಳ ಜೀವನ ಕ್ರಮವೇ ಒಂದು ರೀತಿಯ ವಿಶಿಷ್ಟವಾದದ್ದು. ನದಿಯಲ್ಲಿರುವ ಮೀನು ಹಾಗೂ ಇತರೆ ಸಣ್ಣ ಪುಟ್ಟ ಪ್ರಾಣಿಗಳೇ ಇವುಗಳಿಗೆ ಆಹಾರ. ಆ ಸ್ಥಳದಲ್ಲಿ ಹೆಚ್ಚಿನ ಆಹಾರಗಳಿಲ್ಲದಿದ್ದರೂ ಅದ್ಯಾಕೆ ಈ ಮೊಸಳೆಗಳು ಇದೇ ಒಂದು ಸೀಮಿತ ಸ್ಥಳದಲ್ಲಿ ಇರುತ್ತವೆ ಎನ್ನುವುದು ಈಗಲೂ ಕೂಡ ಖಚಿತವಾಗಿ ಹೇಳಲಾಗದ ಸಂಗತಿ.
ಮೊಸಳೆಗಳಲ್ಲಿಯೂ ಗಂಡು ಹೆಣ್ಣುಗಳನ್ನು ಆಕರ್ಷಿಸುವ ಒಂದು ಕೌಟುಂಬಿಕ ಸಂಬಂಧ ಇರುತ್ತದೆಯಂತೆ. ಗಂಡು ಮತ್ತು ಹೆಣ್ಣು ಮೊಸಳೆ ಮಿಲನವಾಗುವ ಸಂದರ್ಭದಲ್ಲಿ ನದಿಯ ಒಳಗಡೆ ಅರ್ಧ ಗಂಟೆ ಕಾಲ ಕಳಿಯುತ್ತವೆಂತೆ. ನಂತರ ಹೆಣ್ಣು ಮೊಸಳೆ ಮೊಟ್ಟೆಗಳನ್ನ ಇಡಲಾರಂಭಿಸುತ್ತದೆ.

ಮೊಟ್ಟೆ ಇಡುವುದಕ್ಕೂ ಮೊದಲು ಹೆಣ್ಣು ಮೊಸಳೆ ನದಿ ದಂಡೆಯ ಉಸುಕಿನ ಪ್ರದೇಶದಲ್ಲಿ ಅಥವಾ ಮಣ್ಣು ಸಡಿಲ ಇರುವ ಪ್ರದೇಶದಲ್ಲಿ ತನ್ನ ಹಿಂಗಾಲೆನಿಂದ ಸಣ್ಣದಾದ ಗವಿಯ ರೂಪದ ಸ್ಥಳವನ್ನು ಮಾಡಿಕೊಕೊಂಡು ಅಲ್ಲಿ ಮೊಟ್ಟೆಯನ್ನು ಇಡುತ್ತದೆ. ಒಂದು ಮೊಸಳೆ ಸುಮಾರು 20ರಿಂದ 40 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳನ್ನು ಇಟ್ಟ ನಂತರದಲ್ಲಿ ಆ ಮೊಟ್ಟೆಗಳನ್ನ ಯಾರು ಸಹ ಹಾಳು ಮಾಡದ ಹಾಗೆ ಹೆಣ್ಣು ಮೊಸಳೆ ಕಾವಲು ಕಾಯುತ್ತಲೇ ಇರುತ್ತದೆ.

ಮೊಸಳೆ ಮೊಟ್ಟೆಗೆ ಕಾವನ್ನು ನೀಡುವುದಿಲ್ಲ. ಆದರೆ ಆ ಮೊಟ್ಟೆ 60 ರಿಂದ 80 ದಿನಗಳವರೆಗೆ ಮರಿ ಒಡೆದು ಬರುತ್ತದೆ. ಹಾಗೆ ಮರಿಗಳಾಗಿ ಹೊರ ಬಂದಾಗಲೂ ಕೂಡ ಇದೇ ತಾಯಿ ಮೊಸಳೆ ಆ ಮೊಸಳೆಗಳ ರಕ್ಷಣೆಗಾಗಿ ಆ ಸ್ಥಳಕ್ಕೆ ಯಾರೂ ಬಾರದ ಹಾಗೆ ಕಾವಲು ಕಾಯುತ್ತಿರುತ್ತದೆ. ಮರಿಗಳು ಸ್ವಲ್ಪ ದೊಡ್ಡದಾದ ನಂತರದಲ್ಲಿ ತನ್ನ ಬೆನ್ನೆ ಮೇಲೆ ಕೂರಿಸಿಕೊಂಡು ನದಿಯಲ್ಲಿ ಒಯ್ದು ಬಿಡುತ್ತದೆ ಅಥವಾ ಬೇರೊಂದು ಸ್ಥಳಗಳಿಗೆ ಸಾಗಿಸುತ್ತದೆ ಎನ್ನಲಾಗುತ್ತದೆ.

ದಾಂಡೇಲಿಯ ಲೋಕೋಪಯೋಗಿ ಪ್ರವಾಸಿ ಗೃಹದ ಹತ್ತಿರ ಬೃಹದ್ದಾಕಾರದ ಹೆಣ್ಣು ಮೊಸಳೆಯೊಂದು ಸುಮಾರು 40ಕ್ಕೂ ಹೆಚ್ಚು ಮೊಟ್ಟೆಗಳನ್ನ ಇಟ್ಟು ಮರಿಯೊಡೆದ ದೃಶ್ಯ ಈಗ ಎಲ್ಲರನ್ನ ಆಕರ್ಷಿಸುತ್ತಿದೆ. ಈ ಮೊಸಳೆ ಸುಮಾರು ಮೂರು ತಿಂಗಳ ಹಿಂದೆ ಈ ದಂಡೆಯ ಉಸುಕಿನ ಪ್ರದೇಶದಲ್ಲಿ ಗವಿಯಾಕಾರದ ಸ್ಥಳವನ್ನು ಮಾಡಿಕೊಂಡು ಇಲ್ಲಿ ಮೊಟ್ಟೆ ಇಡಲಾರಂಭಿಸಿತ್ತು. ಇದೀಗ ಮೂರು ತಿಂಗಳ ನಂತರ ಆ ಮೊಟ್ಟೆಗಳು ಒಡೆದು ಮರಿಗಳಾಗಿ ಹೊರ ಬಂದಿವೆ. ನದಿ ದಂಡೆಯ ಪ್ರದೇಶದಲ್ಲಿ ದೊಡ್ಡ ಹಲ್ಲಿಯ ಆಕಾರದ ಮೊಸಳೆ ಮರಿಗಳು ಓಡಾಡಿಕೊಂಡಿರುವುದು ಕಂಡುಬರುತ್ತದೆ. ಜನರ ಸದ್ದು ಆಗುತ್ತಿದ್ದಂತೆಯೇ ಅವು ಒಳಗಡೆ ಸೇರಿಕೊಳ್ಳುತ್ತವೆ. ತಾಯಿ ಮೊಸಳೆಯ ಮೈ ಮೇಲೆ ಏರಿಕೊಳ್ಳುತ್ತವೆ. ತಾಯಿ ಮೊಸಳೆ ಮಾತ್ರ ಆ ಸ್ಥಳವನ್ನು ಬಿಟ್ಟು ಎಲ್ಲೂ ಅಲ್ಲಾಡದೆ, ಅಲ್ಲಿ ಯಾರು ಮನುಷ್ಯರು ಹಾಗೂ ಪ್ರಾಣಿಗಳು ಬಾರದ ಹಾಗೆ ಕಣ್ಗಾವಲನ್ನು ಇಟ್ಟುಕೊಂಡು ಕಾಯುತ್ತಿರುವುದು ವಿಶೇಷವಾಗಿ ಕಂಡುಬರುತ್ತದೆ.

ಹೆಚ್ಚುವ ಮೊಸಳೆಗಳ ನಿಯಂತ್ರಣವಾಗಬೇಕಿದೆ: ದಾಂಡೇಲಿ ಕಾಳಿ ನದಿಯಲ್ಲಿ ಈಗಾಗಲೇ 300 ಕ್ಕೂ ಹೆಚ್ಚು ಮೊಸಳೆಗಳಿವೆ. ಈಗ ಇಲ್ಲಿ ಸುಮಾರು 40ಕ್ಕೂ ಹೆಚ್ಚು ಮೊಸಳೆ ಮರಿಗಳು ಕಂಡುಬರುತ್ತಿದ್ದು ಇವುಗಳು ಸ್ವಲ್ಪ ದೊಡ್ಡದಾದ ನಂತರದಲ್ಲಿ ಅದೇ ಕಾಳಿನದಿಯನ್ನ ಸೇರಲಿವೆ. ಮತ್ತೆ ದೊಡ್ಡದಾಗಿ ಬೆಳೆಯಲಿವೆ. ಇಂತಹ ಇನೆಷ್ಟು ಮೊಸಳೆಗಳು ಮರಿ ಹಾಕಿವೆಯೋ ಲೆಕ್ಕವಿಲ್ಲ. ಈ ಮೊಸಳೆಗಳು ಕಾಳಿ ನದಿಯಲ್ಲಿ ಮತ್ತೆ ತಮ್ಮ ಸಂಖ್ಯೆಯನ್ನ ಹೆಚ್ಚಿಸಿಕೊಳ್ಳತ್ತಲೇ ಇವೆ. ಮುಂದೆ ನದಿಯಲ್ಲಿ ಅವುಗಳಿಗೆ ಆಹಾರದ ಕೊರತೆಯೂ ಆಗಲಿದೆ. ಮೊಸಳೆಯೊಂದು 40 ಮರಿಗಳನ್ನು ಹಾಕಿದ್ದು ಗಮನಾರ್ಹ ಸುದ್ದಿಯಾದರೂ ಕೂಡ, ಮತ್ತೆ ಈ 40 ಮೊಸಳೆ ಮರಿಗಳು ನದಿಯಲ್ಲಿ ಸೇರಿ ದೊಡ್ಡ ಮೊಸಳೆಗುತ್ತವೆ ಎಂಬುದೇ ಸ್ಥಳೀಯರ ಆತಂಕವಾಗಿದೆ. ಇವುಗಳನ್ನು ನಿಯಂತ್ರಣಕ್ಕೆ ತರುವ ಕೆಲಸ ಆಗಲೇ ಬೇಕಿದೆ. ಇಲಾಖೆ ಕೂಡಾ ಗಮನಹರಿಸಬೇಕಿದೆ ಎನ್ನುತ್ತಾರೆ ಪ್ರಾಜ್ಞರು.
ಕಳೆದರೆಡು ತಿಂಗಳಿಂದ ನೋಡುತ್ತಿರುವೆ: ನಾನು ಈ ಸ್ಥಳದಲ್ಲಿ ಮೊಸಳೆ ಮೊಟ್ಟೆ ಹಾಕಿದ್ದನ್ನ ಕಳೆದ ಎರಡು , ಮೂರು ತಿಂಗಳಿಂದ ಗಮನಿಸುತ್ತಿರುವೆ. ಇದೀಗ ಮೊಟ್ಟೆಯೊಡೆದು ಮರಿಗಳು ಹೊರ ಬಂದಿವೆ. ಸುಮಾರು 40ಕ್ಕೂ ಹೆಚ್ಚು ಮೊಸಳೆ ಮರಿಗಳು ಈ ತಾಯಿ ಮೊಸಳೆಯ ಹತ್ತಿರವೇ ಹರಿದಾಡುತ್ತಿವೆ. ಈ ಮರಿಗಳನ್ನ ನೋಡಲು ಚಂದವೆನಿಸುತ್ತದೆ. ತಾಯಿ ಮೊಸಳೆ ಹಗಲು ರಾತ್ರಿ ಮರಿಗಳಿಗೆ ಕಾವಲಿರುತ್ತದೆ ಎನ್ನುತ್ತಾರೆ ಸ್ಥಳೀಯರಾದ ನಝೀರಸಾಬ ಮಡಗಾಂವಿಯವರು.
Be the first to comment