ತನ್ನರಿವೇ ತನಗೆ ಗುರುವೆಂದರಿತ ಆದರ್ಶ ಶಿಕ್ಷಕಿ ಗೀತಾ ಸೈರು ಕೊಚರೆಕರ್

ಬಡತನಕ್ಕೆ ಒಂದೇ ಚಿಂತೆ. ಸಿರಿತನಕ್ಕೆ ಸಾವಿರ ಚಿಂತೆ! ಹಣದಿಂದ ಮನಶಾಂತಿಯನ್ನಾಗಲಿ, ಶುಭ ಸಂತೋಷಗಳನ್ನಾಗಲಿ, ಕೊಳ್ಳಬಹುದಾಗಿದ್ದರೆ ಶ್ರೀಮಂತರೇ ಹೆಚ್ಚು ಸುಖಿಗಳಾಗಿರುತ್ತಿದ್ದರು. ಆದರೆ ಸತ್ಯ ಹಾಗಿಲ್ಲ. ಸುಖ- ಸಂತೋಷಗಳು ಖರೀದಿಯ ವಸ್ತುಗಳಲ್ಲ. ಕೊಂಡುಕೊಳ್ಳಬಹುದಾದ ದುಬಾರಿ ವಸ್ತುಗಳಲ್ಲಿ ಸಂತೋಷವಿರುವುದಿಲ್ಲ ಎಂಬ ಕಟು ವಾಸ್ತವ ಅರಿತು ಪ್ರಾಮಾಣಿಕ ಸೇವೆಗೆ ಹೆಸರಾದವರು ಶ್ರೀಮತಿ ಗೀತಾ ಸೈರು ಕೊಚರೆಕರ್ ರವರು. ಮಾತೃ ಸ್ವರೂಪಿ ಶಿಕ್ಷಕಿಯಾಗಿ ಎಲ್ಲರ ನಡುವೆಯೂ ಭಾಂದವ್ಯದ ಸೇತುವೆಗಳನ್ನು ಕಟ್ಟಿ ವಿದ್ಯಾರ್ಥಿಗಳ ಭವಿಷ್ಯತ್ತನ್ನು ರೂಪಿಸಿದವರು. ಇನ್ನೊಬ್ಬರಿಗೆ ನೆರವಾಗುವ ಹಸ್ತ, ಪ್ರಾರ್ಥಿಸುವ ತುಟಿಗಳಿಗಿಂತಲೂ ಹೆಚ್ಚು ಪವಿತ್ರವೆಂಬ ಮಹಾತ್ಮರ ಮಾತಿನಂತೆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿದ ಸರಳ ಸಜ್ಜನರು.

೧೯೯೬ರಲ್ಲಿ ಕೂವೆ೯ಯಂತಹ ನಡುಗಡ್ಡೆಯ ಗ್ರಾಮೀಣ ಪರಿಸರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಬದುಕನ್ನು ಆರಂಭಿಸಿ ಸುಮಾರು ೧೦ ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ಮಕ್ಕಳ ಪಾಲಿನ ಆರಾಧ್ಯ ಶಿಕ್ಷಕಿಯಾಗಿ ಇನ್ನೊಂದು ಶಾಲೆಗೆ ವರ್ಗವಾಗಿ ಹೋಗುವಾಗ ಎಸ್ಡಿಎಂಸಿ ಮತ್ತು ಊರ ನಾಗರಿಕರೆಲ್ಲರೂ ಸೇರಿ ಶಾಶ್ವತ ನೆನಪಿಗಾಗಿ ಚಿನ್ನದ ಉಂಗುರವನ್ನು ಉಂಗುರ ಬೆರಳಿಗೆ ತೊಡಿಸಿ ಬೀಳ್ಕೊಟ್ಟಿರುವುದು ಇವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.

ನಿನಗಾರು ಗುರುವಹರು? ದಾರಿ ತೋರುವವರಾರು?
ಗುರಿಯನ್ನು ಅರಿತವರಾರು? ಎಲ್ಲರೂ ಗುರುಗಳೇ- ಮಾರ್ಗದರ್ಶಿಗಳು
ದಾರಿನಡೆವಾಗ ನಿನಗೆ ನೀನೇ ಗುರುವು
ಸರಿದಾರಿ ಕರುಣಿಪುದು ಸರಿಗುರಿಯ ಭಾಗ್ಯ!
ಗುರುಗಳು ತಾವು ನಿಂತಲ್ಲಿ ನಿಂತು ಕೈಮರವಾದರೆ ಏನು ಪ್ರಯೋಜನ? ಇಂತಹ ಗುರು ನಡೆಯನ್ನು ಮೀರಿ ನಡೆವ ಶ್ರೀಮತಿ ಗೀತಾರವರು ಎಲ್ಲರನ್ನು ಗುರುಗಳೆಂದು ನಂಬಿ ಅವರ ಮಾರ್ಗದರ್ಶನಕ್ಕೆ ಸದಾ ಹಾತೊರೆಯುತ್ತ, ಅವರನ್ನು ಗೌರವಿಸುತ್ತಾ ಮಕ್ಕಳ ಭವಿಷ್ಯದ ಜೊತೆಗೆ ಅವರ ಯಶಸ್ಸಿನ ಸಾಕ್ಷಾತ್ಕಾರಕ್ಕೆ ಹಿಡಿಸೂಡಿಯಾಗಿ ಬೆಳಕು ತೋರಿದವರು, ಬೆಳಕು ಹಂಚಿದವರು.

ಮೂಲತಃ ಹೊನ್ನಾವರ ತಾಲೂಕಿನ ಹೆರಂಗಡಿ ಗ್ರಾಮದಲ್ಲಿ ತಂದೆ ಸೈರು ಕೊಚರೆಕರ್, ತಾಯಿ ರುಕ್ಮಿಣಿ ಕೊಚರೆಕರ್ ಅವರ ಮುದ್ದಿನ ಮಗಳಾಗಿ ೧೯೬೬ ರಲ್ಲಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರಂಗಡಿಯಲ್ಲಿಯೂ, ಪ್ರೌಢ ಶಿಕ್ಷಣ ಜನತಾ ವಿದ್ಯಾಲಯ ಅನಿಲ್ ಗೊಡದಲ್ಲಿಯೂ, ಪದವಿ ಪೂರ್ವ ಮತ್ತು ವೃತ್ತಿ ಬದುಕಿನ ಶಿಕ್ಷಣ ಶಿರಾಲಿಯಲ್ಲಿಯೂ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸವು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರೈಸಿ ೧೯೬೬ ರಲ್ಲಿ ತಮ್ಮ ಮೊದಲ ಸೇವೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೂವೆ೯ಯಲ್ಲಿ ಪ್ರಾರಂಭವಾಯಿತು. ಸ್ವಂತ ಕಟ್ಟಡವಿಲ್ಲದ ತಾತ್ಕಾಲಿಕ ಕಟ್ಟಡದ ಅಡಿಯಲ್ಲಿ ಆರು ಮಕ್ಕಳಿರುವ ಶಾಲೆಯಲ್ಲಿ ವೃತಿ ಬದುಕನ್ನು ಆರಂಭಿಸಿದರು. ನಂತರ ಮಾಗೋಡ ಶಾಲೆಯಿಂದ ನಾಲ್ಕು ವಿದ್ಯಾರ್ಥಿಗಳು ಈ ಶಾಲೆಗೆ ಸೇರಿಕೊಂಡಾಗ ಶಾಲೆಯ ಭೌತಿಕ ಸ್ಥಿತಿ ಸ್ಥಿತ್ಯಂತರಗೊಂಡು ಹತ್ತು ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಇವರ ಪ್ರಾಮಾಣಿಕ ಸೇವೆ ಆರಂಭವಾಯಿತು. ನಂತರ ಎರಡು ವರ್ಷದೊಳಗೆ ಆ ಶಾಲೆಗೆ ಸ್ವಂತ ಕಟ್ಟಡ ಮತ್ತು ಮಕ್ಕಳ ದಾಖಲಾತಿಯನ್ನು ಹತ್ತರಿಂದ ಇಪ್ಪತ್ತಕ್ಕೆ ಹೆಚ್ಚಿಸಿ ಊರಿನ ಪ್ರೀತಿಗೆ ಪಾತ್ರರಾದರು. ಸುಮಾರು ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಬಂಗಾರದ ಉಡುಗೊರೆಯನ್ನು ಪಡೆದು, ೨೦೦೬ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪೊಣಿಗೆ ವರ್ಗವಾಗಿ ಹೋದರು. ಅಲ್ಲಿ ಸುಮಾರು ೧೩ ವರ್ಷಗಳ ಕಾಲ ಸೇವೆ ಸಲ್ಲಿಸಿ, ೨೦೧೯ ರಿಂದ ದೂರದ ನಗರಬಸ್ತಿ ಕೇರಿಯಲ್ಲಿ ಸುಮಾರು ಏಳು ವರ್ಷಗಳ ಕಾಲ ಸೇವೆಯನ್ನು ಮುಂದುವರೆಸಿ ಇತ್ತೀಚೆಗೆ ನಿವೃತ್ತಿಯಾಗಿರುತ್ತಾರೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಂದು ಸಾಧಕ ಶಿಕ್ಷಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಇವರು ಮಹಿಳೆಯರ ಪುಗಡಿ ತಂಡ ರಚಿಸಿ ಕರಾವಳಿ ಉತ್ಸವದಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರಿಗಿದೆ.

ಸಂತೋಷ ಎನ್ನುವುದು ಮನಸ್ಸಿನ ಒಂದು ಸ್ಥಿತಿ! ಇದು ನಮ್ಮ ಮಂದಿರದಲ್ಲಿ ಬೀಸುವ ಸುಗಂಧ ಭರಿತ ತಂಗಾಳಿಯಂತೆ. ಬದುಕು ನಮಗೆ ಪ್ರತಿದಿನವೂ ಯಾವ ಬಹುಮಾನವನ್ನು ತಾನಾಗಿ ನೀಡಲಾರದು. ನಾವೇ ಅದನ್ನು ಕಂಡುಕೊಳ್ಳಬೇಕು, ಪಡೆದುಕೊಳ್ಳಬೇಕು. ನಂತರ ಅನುಭವಿಸಬೇಕು. ಅನುಭವ ಹಂಚಿಕೆಯಾದಾಗ ಅದು ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯ. ಸುಮಾರು ಮೂರು ದಶಕಗಳ ಕಾಲ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಅಧ್ಯಾಪಕಿಯಾಗಿ ತನ್ನ ವೃತ್ತಿ ಬದುಕನ್ನು ಪ್ರೀತಿಸಿ ಬೆಳಕಾದವರು. “ಮನಸ್ಸು ಬೆಳೆಯಲಿ ಭುಜಿಸಿ ನೂರು ನೂರನುಭವವ” ಎಂದಿದ್ದಾರೆ ಡಿವಿಜಿ. ಇಂಥ ಬದುಕಿನ ನೂರಾರು ಅನುಭವಗಳನ್ನು ತನ್ನದಾಗಿಸಿಕೊಂಡು ಊರಿಗೆ ಊರೇ ಹೆಮ್ಮೆಪಡುವ ಶಿಕ್ಷಕಿಯಾಗಿ ನಿವೃತ್ತಿಯಾದ ಶ್ರೀಮತಿ ಗೀತಾ ರವರ ಪತಿ ಶ್ರೀಕಾಂತ ಅಂಕೋಲೆಕರ್ ವೃತ್ತಿಯಲ್ಲಿ ಉದ್ಯಮಿದಾರರು. ಮಗ ಸೂರಜ್ ಎಂಜಿನಿಯರಾದರೆ, ಇನ್ನೋರ್ವ ಮಗ ಗಣೇಶ್ ಡಿಪ್ಲೋಮಾ ಪದವೀಧರರು. ತುಂಬು ಕುಟುಂಬದೊಂದಿಗೆ ಜೀವನ ಸಾಗಿಸುವ ಇವರ ಬದುಕು ಸದಾ ಹಸಿರಾಗಿರಲಿ ಎಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

~ಪಿ.ಆರ್. ನಾಯ್ಕ, ಹೊಳೆಗದ್ದೆ
ನಲಿ-ಕಲಿ ಶಿಕ್ಷಕ, ಹೊನ್ನಾವರ

About ಬಿ.ಎನ್‌. ವಾಸರೆ 681 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*