ತಾಳ್ಮೆಯಿಂದ ಕಾರ್ಯ ಪ್ರವೃತ್ತರಾದವರಿಗೆ, ಒಳ್ಳೆಯ ಮನಸ್ಸಿನಿಂದ ಮುಂದಡಿಯಿಡುವವರಿಗೆ, ಶ್ರದ್ಧೆಯಿಂದ ದುಡಿಯುವವರಿಗೆ ಯಶಸ್ಸು ತಾನಾಗೇ ಬರುತ್ತದೆ ಎಂಬುದು ಹಿರಿಯರ ಮಾತು. ಇಂತಹ ಮಾತನ್ನು ತನ್ನ ಎದೆಗವುಚಿಕೊಂಡು ಸದಾ ಮಕ್ಕಳ ಹಿತಕ್ಕಾಗಿ ದಣಿವರಿಯದೇ ದುಡಿದವರು ಲುವೇಜಿನ್ ಸಾವೇರ್ ಪಿಂಟೋರವರು. ಹೊನ್ನಾವರ ಪಟ್ಟಣದ ನಂಬರ್ ಎರಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಈ ತಿಂಗಳು ಅಂದರೆ ಜುಲೈ ೩೧ ರಂದು ನಿವೃತ್ತಿಯಾಗಲಿದ್ದಾರೆ. ಉನ್ನತ ಆಲೋಚನೆಗಳಿಂದ, ಅತ್ಯುತ್ತಮ ಆದರ್ಶಗಳಿಂದ ಸಮಾಜಕ್ಕೆ ಮಾದರಿಯಾಗಿ ಬದುಕು ಕಂಡುಕೊಂಡು ಸುಮಾರು ಮೂರು ದಶಕಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ.ಸ್ನೇಹ ಮತ್ತು ಸದ್ಗುಣಗಳಿಂದ ಎಲ್ಲರ ಪ್ರೀತಿ ಗಳಿಸಿದ ಸರಳ ಸಜ್ಜನರು.
“ಬದುಕು” ಈ ಮೂರಕ್ಷರದ ಪದ ಮಾನವನ ವ್ಯಕ್ತಿತ್ವ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಇವೆರಡರ ಮಧ್ಯದ ಜೀವನವೇ ಬದುಕು. ಈ ಬದುಕು ಹಸನಾಗಬೇಕಾದರೆ,ಒಂದು ಐತಿಹಾಸಿಕ ಮೈಲುಗಲ್ಲಾಗಿ ದಾಖಲಾಗಬೇಕಾದರೆ ಅವರ ವ್ಯಕ್ತಿತ್ವ ದಾರಿದೀಪದಂತೆ ಮುನ್ನಡೆಸುವ ದೀವಿಗೆಯಾಗಿ ಬೆಳಗಬೇಕು. ಅವರಲ್ಲಿ ಹುದುಗಿರುವ ಅಂತ:ಶಕ್ತಿ ಬೆಳಕಿಗೆ ಬರಬೇಕು. ಇಂತಹ ಅಪರೂಪದ ವ್ಯಕ್ತಿತ್ವಕ್ಕೆ ಸಾಕ್ಷಿಯಾದ ಲುವೇಜಿನ ಪಿಂಟೊರವರು ಪ್ರಚಾರ ಪ್ರಸಿದ್ಧಿ ಬಯಸಿದ ಕಾಯಕಯೋಗಿಯಂತೆ ಪ್ರಾಮಾಣಿಕ ಸೇವೆ ಸಲ್ಲಿಸಿದವರು.
ಗುಣಕ್ಕೆ ಮತ್ಸರವಿಲ್ಲ. ಗುಣ, ಪ್ರತಿಭೆ ಯಾರಲ್ಲಿದ್ದರೂ ಅಂತವರನ್ನು ಗೌರವಿಸುವ ವಿಶಾಲ ಹೃದಯವಂತ ಶಿಕ್ಷಕಿ ಲುವೇಜಿನ ಪಿಂಟೊರವರು ಮಂಕಿಯ ದೊಡ್ಡಹಿತ್ಲುವಿನಲ್ಲಿ ೧೯೬೬ ರಲ್ಲಿ ಜನಿಸಿದರು. ತಂದೆ ಸಾವೆರ್ ಪಿಂಟೊ, ತಾಯಿ ಆನಾ ಪಿಂಟೊರವರ ಮುದ್ದಿನ ಮಗಳು ಪ್ರಾಥಮಿಕ ಶಿಕ್ಷಣವನ್ನು ಮಂಕಿಯ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಗುಂದದಲ್ಲಿಯೂ, ಸರಕಾರಿ ಪ್ರೌಢಶಾಲೆ ಮಂಕಿಯಲ್ಲಿ ಪ್ರೌಢ ಶಿಕ್ಷಣವನ್ನು, ಅರೇ ಅಂಗಡಿಯಲ್ಲಿ ವೃತ್ತಿ ಬದುಕಿನ ಶಿಕ್ಷಣವನ್ನು ಮತ್ತು ಪದವಿ ಶಿಕ್ಷಣವನ್ನು ಎಸ್. ಡಿ.ಎಂ.ಕಾಲೇಜಿನಲ್ಲಿ ಪೂರೈಸಿ ೧೯೯೮ ರಂದು ಕಾರವಾರದ ಮಲ್ಲಾಪುರದಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಸುಮಾರು ನಾಲ್ಕು ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ನಂತರ ೨೦೦೪ ರಂದು ಹೊನ್ನಾವರ ತಾಲೂಕಿನ ಕುಲಕೋಡು ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದರು.

ಜೀವನ ಒಂದು ಕಲೆ, ಕಲೆಯ ಕಲಿಸುವುದೆಂತು?
ಸಾವಿರದ ನಿಯಮ ಯುಕ್ತಿಗಳ ನೊರೆದೊಡೆಯುಂ
ಆವುದೋ ಕುಶಲತೆಯದೊಂದಿರದೆ ಜಯ ವಿರದು
ಆ ವಿವರ ನಿನ್ನೊಳಗೆ ಮಂಕುತಿಮ್ಮ!
ಡಿವಿಜಿಯವರು ಜೀವನ ಒಂದು ಕಲೆಯಿದ್ದಂತೆ. ಅದನ್ನು ಸೂಕ್ತ ಸಮಯದಲ್ಲಿ, ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ಎಚ್ಚರಿಸಿದ್ದಾರೆ. ಮನುಷ್ಯನ ಜೀವನವೆಂಬುದು ಒಂದು ಹರಿಯುವ ನದಿ ಇದ್ದಂತೆ. ನೋವ ನುಂಗಿ ನಕ್ಕು ಹಗುರವಾಗುವುದೇ ಜೀವನ.ಸದಾ ಲವಲವಿಕೆಯಿಂದ ನೋವಿರದ ನಗುವನ್ನು ಹಂಚುತ್ತ ಎಲ್ಲರೊಳಗೊಂದಾಗಿ ವೃತ್ತಿ ಬದುಕನ್ನು ಪ್ರೀತಿಸಿದವರು.
ಸುಮಾರು ೨೦ ವರ್ಷಗಳ ಕಾಲ ಕುಲಕೋಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಮಕ್ಕಳ ಪ್ರೀತಿಗೆ ಪಾತ್ರರಾದ ಲುವೇಜಿನ್ ಪಿಂಟೋರವರು ೨೦೨೨ ರಿಂದ ಹೊನ್ನಾವರ ಪಟ್ಟಣದ ನಂಬರ್ ಎರಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಸದಾ ಸದ್ ವಿಚಾರಕ್ಕೆ ತೆರೆದುಕೊಳ್ಳುವ ಸ್ನೇಹ ಮತ್ತು ಸದ್ಗುಣಗಳಿಂದ ಮನುಷ್ಯತ್ವವನ್ನೇ ಗೆಲ್ಲಬಲ್ಲ ವಿಶಾಲ ಹೃದಯವಂತಿಕೆಗೆ ಹೆಸರಾದ ಲುವೇಜಿನ ಪಿಂಟೊರವರ ಪತಿ ಇನಾಸ್ ಬಿ. ಗೊನ್ಸಾಲ್ವಿಸರವರು ಸರಳ ಸಜ್ಜನ ವ್ಯಕ್ತಿಗಳಾಗಿ ಎಲ್ಲರಲ್ಲೂ ಬಂಧುತ್ವದ ಬೆಸುಗೆಗೆ ಸದಾ ಆ ಹಾತೋರೆಯುವ ನಿಗವಿ೯ಗಳು. ಮಕ್ಕಳಾದ ವಿಜಯ್, ವಿನೀತ್ ಗೊನ್ಸಾಲ್ವಿಸ್ ಇಬ್ಬರು ವೃತ್ತಿಯಲ್ಲಿ ಇಂಜಿನೀಯರಾಗಿರುತ್ತಾರೆ.
ಮಕ್ಕಳಿದ್ದರೆ ನಗುವು ಮಕ್ಕಳಿದ್ದರೆ ಮಾತು
ಮಕ್ಕಳೆಂಬುವ ಹೂವು ಬಾಡದಿದ್ದರೆ ಸಾಕು- ಮಕ್ಕಳ ಒಡನಾಡಿಯಾಗಿ, ಮಕ್ಕಳ ಒಳಿತಿಗಾಗಿ ಸದಾ ದುಡಿಯುವವರಾಗಿ ,ಮಕ್ಕಳ ಭವಿಷ್ಯ ರೂಪಿಸುವ ಮಾತೆಯಾಗಿ ದೃಷ್ಟಿಯಂತೆ ಸೃಷ್ಟಿ ರಚಿಸುವ ಮಾದರಿ ವ್ಯಕ್ತಿತ್ವಕ್ಕೆ ಹೆಸರಾದ ಲುವೇಜಿನ ಪಿಂಟೊರವರು ನೂರ್ಕಾಲ ಬಾಳಿ ಬದುಕಲೆಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.
Be the first to comment