ಉತ್ತರಕನ್ನಡದ ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದ ಸರಳ ವ್ಯಕ್ತಿತ್ವದ, ಸಜ್ಜನಿಕೆಯ ರಾಜನೀತಿಜ್ಞ ಅಂಕೋಲಾದ ರಮಾನಂದ ನಾಯಕ ಹೃದಯಾಘಾತದಿಂದ ನಿಧನರಾಗಿದ್ದಾರೆ
ತಮ್ಮ ಮಗನ ಮನೆ ಬೆಂಗಳೂರಿನಲ್ಲಿ ವಿಶ್ರಾಂತಿಯಲ್ಲಿದ್ದ ರಮಾನಂದ ನಾಯಕರು ಗುರುವಾರ ನಸುಕಿನ ಜಾವ ಹೃದಯಗತಕ್ಕೊಳಗಾಗಿದ್ದಾರೆ. ಮೃತರು ಮಡದಿ ಹಾಗೂ ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.
ನಾಡಿನ ಕೆಲವೇ ಕೆಲವು ಮುತ್ಸದಿ ರಾಜಕಾರಣಿಗಳ ಹೆಸರಿನ ಸಾಲಿನಲ್ಲಿ ರಮಾನಂದ ನಾಯಕರು ಇದ್ದೇ ಇರುತ್ತಾರೆ. ಅವರ ಬದುಕು, ಹಾಗೂ ವ್ಯಕ್ತಿತ್ವವೇ ಒಂದು ಒಂದು ಆದರ್ಶ. ಜೀವಪರ ಚಿಂತನೆಯ ಕಾಯಕ ಯೋಗಿ. ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಉತ್ತರಕನ್ನಡ ಜಿಲ್ಲೆಗೆ ಅವರು ನೀಡಿದ ಕೊಡುಗೆ ಅಪಾರ. ರಾಜಕಾರಣದಲ್ಲಿ ಏನನ್ನೂ ಬಯಸದ, ಪಡೆಯದ ನಿಸ್ಪ್ರಹ ಮನುಷ್ಯ. ರಾಜನೀತಿಯ ಜೊತೆಗೆ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ವಿಚಾರಗಳಲ್ಲಿಯೂ ಅಪಾರ ಅನುಭವವುಳ್ಳ ಸಂಪನ್ಮೂಲ ವ್ಯಕ್ತಿ. ಎಲ್ಲರೂ ಪ್ರೀತಿಸುವ… ಎಲ್ಲರನ್ನೂ ಪ್ರೀತಿಸುವ ಅಜಾತ ಶತ್ರು…. ಇಂತಹ ಅಪರೂಪದ ಸಜ್ಜನನ ಅಗಲುವಿಕೆ ಉತ್ತರ ಕನ್ನಡ ಜಿಲ್ಲೆಗೊಂದು ತುಂಬಲಾರದ ನಷ್ಟ ಎನ್ನುತ್ತಿದ್ದಾರೆ ಅನೇಕ ಮಹನೀಯರು.

ಜಿಲ್ಲಾ ಪರಿಷತ್ತು (ಈಗಿನ ಜಿಲ್ಲಾ ಪಂಚಾಯತ) ಅಸ್ತಿತ್ವಕ್ಕೆ ಬಂದ ಮೊದಲ ಅವಧಿಯಲ್ಲಿ ಅಂದರೆ 1987ರಲ್ಲಿ ರಮಾನಂದ ನಾಯಕರು ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಅತ್ಯಂತ ಕ್ರಿಯಾಶೀಲತೆಯಿಂದ ಪ್ರಾಮಾಣಿಕತೆಯಿಂದ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು. ಅವರ ಅಂದಿನ ಕಾರ್ಯಕ್ಷಮತೆಯನ್ನು ಹಿಂದಿನ ರಾಜಕಾರಣಿಗಳು ಕೂಡ ಸ್ಮರಿಸುತ್ತಾರೆ. ಒಬ್ಬ ಶಾಸಕನಾಗುವ ಎಲ್ಲಾ ಅರ್ತಯಿದ್ದ, ರಾಜನೀತಿಯ ಅನುಭವವಿದ್ದ ರಮಾನಂದ ನಾಯಕರು ರಾಜಕೀಯವಾಗಿ ಏನನ್ನು ಕೇಳಿದವರಲ್ಲ. ಪಡೆದವರೂ ಅಲ್ಲ. ತಮ್ಮ ರಾಜಕೀಯದ ಅನುಭವಗಳನ್ನು ಅನೇಕ ಹಿರಿ-ಕಿರಿಯರಿಗೆ ಧಾರೆ ಎರದವರು. ರಾಜಕಾರಣದ ಜೊತೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಾಹಿರ್ಯಿಕವಾಗಿಯೂ ಕೂಡ ತಮ್ಮನ್ನ ತೊಡಗಿಸಿಕೊಂಡ ರಮಾನಂದ ನಾಯಕರು ಜೀವಪರ ಚಿಂತನೆಯ ವ್ಯಕ್ತಿತ್ವದವರಾಗಿದ್ದರು. ಅಂಕೋಲೆಯ ನಾಡವರ ಸಂಘದ ಅಧ್ಯಕ್ಷರಾಗಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಶಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮದೇ ಆದ ಸಹಕಾರಿ ಸಂಸ್ಥೆಯೊಂದನ್ನು ಆರಂಭಿಸಿ ಸೇವೆ ನೀಡುತ್ತಿದ್ದ ರಮಾನಂದ ನಾಯಕರು ಹುಬ್ಬಳ್ಳಿ-ಅಂಕೋಲಾ ರೈಲ್ವೆ ಹೋರಾಟ ಸೇರಿದಂತೆ ಅನೇಕ ಹೋರಾಟಗಳ ನೇತೃತ್ವ ವಹಿಸಿದವರು. ಅವರ ಅಗಲುವಿಕೆಗೆ ಜಿಲ್ಲೆಯ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.
Be the first to comment