ವಿದ್ವಾಂಸ ಏವ ಲೋಕೇಸ್ಮಿನ್, ಚಕ್ಷುಷ್ಮಂತ: ಪ್ರಕೀತಿ೯ತಾ:!
ಅನ್ಯೇಷಾಂ ವದನೇ ಯೇ ತುತೇ ಚಕ್ಷುನಾಮನಿ ಮತೇ!
ಜ್ಞಾನಿಗಳೇ ಲೋಕದಲ್ಲಿ ಕಣ್ಣುಳ್ಳವರು. ಮನುಷ್ಯನಿಗೆ ನಿಜವಾದ ಕಣ್ಣುಗಳು ಜ್ಞಾನವೇ ಆಗಿದೆ. ಇಂತಹ ಜ್ಞಾನವನ್ನು ಅರ್ಜಿಸದೆ ಮನುಷ್ಯನ ಜನ್ಮ ಸಾರ್ಥಕವಾಗಲಾರದು. ವಿದ್ಯೆ ಜ್ಞಾನದ ಹೆಬ್ಬಾಗಿಲು. ಗುರು- ಗುರುಗಳಿಲ್ಲದ ಮಾನವ ಸಫಲನಾಗಲಾರ. ಜ್ಞಾನವನ್ನಿಯುವ ವಿದ್ಯೆಯನ್ನು ಧಾರೆ ಎರೆದವರು ಯಲ್ಲಾಪುರದ ಸರಳ ಸಜ್ಜನ, ಶಿಸ್ತಿನ ಸಿಪಾಯಿ ರಾಮಚಂದ್ರ ಈಶ್ವರ ನಾಯ್ಕರವರು. ಗುರುಗಳಿಗೆ ಗುರುವಾಗಿ ದಾರಿ ತೋರಿದ, ತೋರಿಸುತ್ತಿರುವ ಪುಣ್ಯಾತ್ಮರು. ಶಿಕ್ಷಣವೆಂದರೆ ನಾಲ್ಕು ಕೋಣೆಗೆ ಮಾತ್ರ ಸೀಮಿತವಾಗಿರದೇ ಸಮಾಜ ಸಂಘಟನೆಯಲ್ಲಿ, ಸಮಾಜ ಸೇವೆಯಲ್ಲಿ ಶಿಕ್ಷಕರ ಪಾತ್ರವೇನೆನ್ನುವುದನ್ನು ಸಾಕ್ಷಿಕರಿಸಿದ ಅವರ ಕಾರ್ಯತತ್ಪರತೆ ಇಡೀ ಶಿಕ್ಷಕ ಕುಲಕ್ಕೆ ಮಾದರಿಯಾದದ್ದು. ಸುದೀರ್ಘ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ವೃತ್ತಿ ಬದುಕನ್ನು ಪ್ರೀತಿಸಿ ಮಕ್ಕಳು ಪಾಲಿನ ಆರಾಧ್ಯ ದೈವದಂತೆ ಪ್ರಾಮಾಣಿಕತೆಯಿಂದ ಮೆರೆದವರು. ತಮ್ಮ ವೃತ್ತಿ ಬದುಕಿನ ಕೊನೆಯಲ್ಲಿ ಇವರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಅವರ ಮುಡಿಗೇರಿದೆ. ಇದು ಶಿಕ್ಷಕ ಕುಲದ ಸಂತನಿಗೆ ಸಂದ ಗೌರವವಾಗಿದೆ.

ಭಾರತ ದೇಶ ಗುರುವಿಗೆ ಕೊಟ್ಟಷ್ಟು ಉನ್ನತವಾದ ಸ್ಥಾನವನ್ನು ಮತ್ತೆ ಯಾವ ದೇಶವು ಕೊಟ್ಟಿಲ್ಲ. ಗುರು ತನ್ನ ಹಸ್ತ ಸ್ಪರ್ಶದಿಂದ, ಕಣ್ಣೋಟದಿಂದ, ಮಾತಿನಿಂದ ಶಿಷ್ಯನನ್ನು ಪರಮಜ್ಞಾನಿಯನ್ನಾಗಿ ಮಾಡುವ ಸಾಮರ್ಥ್ಯ ಗುರುವಿಗೆ ಇದೆ. ರಾಷ್ಟ್ರೀಯತೆಯ ನಿರ್ಮಾಣದಲ್ಲಿ ಯಲ್ಲಾಪುರದ ರಾಮಚಂದ್ರ ನಾಯ್ಕರು ಸೈದ್ಧಾಂತಿಕ ವಾಸ್ತು ಶಿಲ್ಪಿಗಳಿದ್ದಂತೆ. ರಾಷ್ಟ್ರದ ಬಗೆಗಿನ ಅವರ ಬದ್ಧತೆ ಮತ್ತು ದೇಶಪ್ರೇಮ “ನನ್ನ ದೇಶ ನನ್ನ ಕೊಡುಗೆ” ಘೋಷವಾಕ್ಯಕ್ಕೆ ಮಾದರಿಯಾಗಿದೆ. ಶಿಕ್ಷಣವು ಕೇವಲ ವ್ಯಕ್ತಿಯ ಬದುಕನ್ನು ರೂಪಿಸುವುದಲ್ಲದೆ ಸದ್ರಢ ಮತ್ತು ಸಶಕ್ತ ರಾಷ್ಟ್ರದ ಸೌಧವನ್ನೇ ನಿರ್ಮಿಸುತ್ತದೆ ಎನ್ನುವುದಕ್ಕೆ ಅವರು ದೇಶದ ರಕ್ಷಣಾ ನಿಧಿಗೆ, ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳೆದ ಏಳು ವರ್ಷಗಳಿಂದ ತಮ್ಮ ಸಂಬಳದಲ್ಲಿ ಮಾಸಿಕ ತಲಾ ಐದು ನೂರರಂತೆ, ಒಂದುವರೆ ಸಾವಿರ ರೂಪಾಯಿ ವಿವಿಧ ಖಾತೆಗಳಿಗೆ ಜಮಾ ಮಾಡುತ್ತಿರುವ ಏಕೈಕ ದೇಶಭಕ್ತರು ಎಂದರೂ ತಪ್ಪಲ್ಲ. ಈ ಹಿಂದೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಅವರಿಗೊಲಿದ ಸಂದರ್ಭದಲ್ಲಿ 5,000 ರೂ. ಗೌರವಧನ ನೀಡಲಾಗಿತ್ತು. ಅದನ್ನು ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದು ಅವರ ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ.
ಆಚಾರ್ಯ : ಪೂರ್ವ ರೂಪಮ್! ಅಂತೇ ವಾಸ್ಯತ್ತರರೂಪಮ್! ವಿದ್ಯಾ ಸಂಧಿ: -ಉಪನಿಷತ್ತು, ಇಂತಹ ಗುರುಗಳಿಂದಲೇ ವಿದ್ಯೆಯ ಪೂರ್ವ ಸ್ವರೂಪ. ಶಿಷ್ಯರು ವಿದ್ಯೆಯ ಉತ್ತರ ರೂಪ. ಎಲ್ಲರನ್ನೂ ಕೂಡಿಸುವ ಕೊಂಡಿಯಂತಿರುವ ವಿದ್ಯೆ ರಾಮಚಂದ್ರ ನಾಯ್ಕರವರ ಬದುಕಿನಲ್ಲಿ ಸಾರ್ಥಕತೆ ಕಂಡಿದೆ.

ಕೋವಿಡ್ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಮೂರು ಲಕ್ಷಕ್ಕೂ ಅಧಿಕ ವೆಚ್ಚದಿಂದ “ವಿದ್ಯಾಗಮ ಕಲಾಮಂದಿರ ನಿರ್ಮಿಸಿ” ವಿದ್ಯಾಗಮ ಯೋಜನೆಗೆ ಪುಷ್ಟಿ ನೀಡಿದವರು. ಹಾಗೂ ಕೋವಿಡ್ ಸಮಯದಲ್ಲಿ ಇನ್ನೊಂದು ಮಹತ್ವದ ಹೆಜ್ಜೆ ಗುರುತನ್ನು ಗಮನಿಸಬಹುದು. ಶಾಲಾ ಮಕ್ಕಳ ಮನೆ ಬಾಗಿಲಿಗೆ ಪ್ರತಿನಿತ್ಯ ಹೋಗಿ ಸುಮಾರು 25,000 ಬಾಳೆಹಣ್ಣನ್ನು ಸ್ವಂತ ಖರ್ಚಿನಿಂದ ಬರಿಸಿರುವುದು ಇವರ ಮಕ್ಕಳ ಮೇಲಿನ ಕಕ್ಕುಲತೆಗೆ ಸಾಕ್ಷಿಯಾಗಿದೆ. ಬೆಳಗಿನ ಉಪಹಾರ ಸೇವಿಸದೇ ಹಸಿದು ಬರುವ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಉಪಹಾರವನ್ನು ತಮ್ಮ ಸ್ವಂತ ಖರ್ಚಿನಿಂದ ವಿತರಿಸಿ ಐದೂವರೆ ಸಾವಿರದಷ್ಟು ಉಪಹಾರ ನೀಡಿ ಮಕ್ಕಳ “ತಣ್ಣೀರಿನ ಹೊಟ್ಟೆಗೆ ತಂಪನ್ನಿತ್ತ ಹೃದಯವಂತರು”. ತಂದೆ- ತಾಯಿಯವರಿಂದ ಎಚ್ಐವಿ ಸೋಂಕಿತ ಅನಾಥ ಮಗುವನ್ನು ಹುಬ್ಬಳ್ಳಿಯ ಪೀಸ್ ಹೋಮ್ ಗೆ ಸೇರಿಸಿ ರಕ್ಷಿಸಿ ಅವರ ಬಾಳಿಗೆ ಬೆಳಕು ನೀಡಿದ ರಾಮಚಂದ್ರ ನಾಯ್ಕರು ಪ್ರಚಾರ ಪ್ರಸಿದ್ಧಿ ಬಯಸದ ಕಾಯಕ ಯೋಗಿಗಳು.
ಶಾಲೆಯಿಂದ ಹೊರಗುಳಿದ ಮಗುವನ್ನು ಪುನಃ ಶಾಲೆಗೆ ಸೇರಿಸಿ ಅವಳ ಬದುಕು ಇಡೀ ಸಮುದಾಯಕ್ಕೆ ಮಾದರಿಯಾಗುವಲ್ಲಿ ರಾಮಚಂದ್ರ ನಾಯ್ಕರವರ ಕೃತತ್ವ ಶಕ್ತಿ ಮೆಚ್ಚುವಂಥದ್ದು. ಆರ್ಥಿಕ ಸಂಕಷ್ಟಕ್ಕೊಳಗಾದ ಕುಮಾರಿ ಮಹಾದೇವಿಯವರಿಗೆ ಶಿಕ್ಷಣದ ಮಹತ್ವ ತಿಳಿಸಿ, ಶಾಲೆ ಬಿಡದ ಹಾಗೆ ಮಾರ್ಗದರ್ಶನ ಮಾಡಿ ಪುನಃ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಮಹತ್ ಕಾರ್ಯ ಸಾಧನೆಯ ಫಲವಾಗಿ ಈಗ ಅತಿಥಿ ಉಪನ್ಯಾಸಕಿ. ಹಾಗೂ ಯಲ್ಲಾಪುರ ಮರಾಠ ಸಮಾಜದಲ್ಲಿ ಪಿ.ಎಚ್.ಡಿ ಪದವಿ ಪಡೆದ ಏಕಮೇವ ವ್ಯಕ್ತಿಯಾಗುವಲ್ಲಿ ನಾಯಕರ ಸಾರ್ಥಕ ಶ್ರಮ ಅಡಗಿದೆ.

“ವ್ಯಸನ ಮುಕ್ತ ಮೌಢ್ಯ ಮುಕ್ತ ಸಮಾಜ” ನಿರ್ಮಾಣಕ್ಕಾಗಿ ಕನಸು ಕಂಡು ಅನೇಕ ಚಿಂತನ ಸಭೆಗಳನ್ನು ಆಯೋಜಿಸಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಸುಮಾರು ಸಾವಿರದ ಆರು ನೂರಕ್ಕೂ ಅಧಿಕ ಮಕ್ಕಳಿಗೆ ಪ್ರಮಾಣ ಬೋಧಿಸಿ ದೀಕ್ಷೆ ನೀಡಿರುತ್ತಾರೆ. ಸಂತಸದ ಕಲಿಕೆಯ ಭಾಗವಾಗಿ ಹನ್ನೆರಡು ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ಓ.ಎಚ್.ಪಿ.ಪ್ರೊಜೆಕ್ಟರ್ ತರಿಸಿ ಮಕ್ಕಳಿಗೆ ಪಾಠಕ್ಕೆ ಬಳಸಲಾಗುತ್ತಿದೆ. ಶಾಲೆಗೆ ಸಿಸಿಟಿವಿ ಅಳವಡಿಸಿ ಮಕ್ಕಳ ಸುರಕ್ಷತೆಗೆ ಮತ್ತು ಗುಣಾತ್ಮಕ ಕಲಿಕೆಗೆ ಇವರ ಶಾಲೆ ಮಾದರಿಯಾಗಿದೆ. ಉತ್ತಮ ಪರಿಸರದಲ್ಲಿರುವ ಶಾಲೆ ನಲಿ-ಕಲಿಯಲ್ಲಿಯೂ ರಾಜ್ಯಮಟ್ಟದ ಉತ್ತಮ ಶಾಲೆಯಾಗಿ ಪರಿವರ್ತಿಸುವಲ್ಲಿ ಇವರ ಶ್ರಮ ಹಾಗೂ ಇತರ ಸಹೋದ್ಯೋಗಿಗಳ ಸಹಕಾರ ಅವಿಸ್ಮರಣೀಯವಾದದ್ದು.
ಕವಿ ಕುಲ ಗುರು ಕಾಳಿದಾಸರು, ಗುರುವಿಗೆ ಕೇವಲ ವಿಶೇಷ ಪರಿಜ್ಞಾನ ಮಾತ್ರವಿದ್ದರೆ ಸಾಲದು. ತನ್ನಲ್ಲಿರುವ ಜ್ಞಾನವನ್ನು ಪರಿಣಾಮಕಾರಿಯಾಗಿ ತಿಳಿಸುವ ಕಲೆಯನ್ನು ಮೈಗೂಡಿಸಿಕೊಂಡಿರಬೇಕು ಎಂದಿದ್ದಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವದ ಮೂಲಕ ಯಲ್ಲಾಪುರದ ಗಣಪತಿ ಗಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರ ನಾಯ್ಕರು ಮೂಲತಃ ಅಂಕೋಲಾ ತಾಲೂಕಿನ ಶಿರೂರಿನವರು. ಅವರು ಓದಿದ್ದು, ಬೆಳೆದದ್ದು ಎಲ್ಲವೂ ಯಲ್ಲಾಪುರದಲ್ಲಿ. ಈಗ ಅಲ್ಲಿಯವರಾಗಿಯೇ ಜಿಲ್ಲೆಗೆ ಮಾದರಿಯಾಗಿದ್ದಾರೆ.ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಭೂಷಣವೇ ಶಿಸ್ತು. ಭಾರತ ಸ್ಕೌಟ್ ಮತ್ತು ಸೇವಾದಳ ಶಿಕ್ಷಕರ ಬದುಕಿಗೆ ಮಾರ್ಗದರ್ಶನ ನೀಡುವ ಅಕ್ಷಯ ಪಾತ್ರೆಯಂತೆ. ರಾಮಚಂದ್ರ ನಾಯ್ಕರವರ ವ್ಯಕ್ತಿತ್ವಕ್ಕೆ ಇನ್ನಷ್ಟು ಮೆರಗು ಭಾರತ ಸ್ಕೌಟ್ ಮತ್ತು ಸೇವಾದಳದ ಸಂಘಟನೆ. ಶಿಸ್ತು ಬೆತ್ತ ಬೆದರಿಕೆಯ ಶಿಸ್ತಾಗದೆ ಸಹಜವಾಗಿ ಬದುಕಿನಲ್ಲಿ ಶಿಸ್ತು ಮೂಡಲು ಅನೇಕ ಅವಕಾಶಗಳನ್ನು ಕಲ್ಪಿಸಿದೆ. ವಿದ್ಯಾರ್ಥಿಗಳ ಪಾಲಿಗೆ ಪ್ರೇರಕ ಶಕ್ತಿಯಾಗಿದೆ. ಇವರಿಗೆ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಸ್ಕೌಟ್ ಗೈಡ್ಸ್ ಪ್ರಶಸ್ತಿ, ರಾಜ್ಯ ಮಕ್ಕಳ ಹಕ್ಕು ಆಯೋಗದಿಂದ ಪ್ರಶಂಸನಾಪತ್ರ, ಲೈನ್ಸ್ ಕ್ಲಬ್ ಇವರಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗೌರವಗಳು ಇವರನ್ನರಸಿ ಬಂದಿವೆ.
ದೇವಲೋಕ ಮರ್ತ್ಯ ಲೋಕ ಎಂಬುದು ಬೇರಿಲ್ಲ ಕಾಣಿರೋ ಅವೆಲ್ಲವೂ ನಾವು ಮಾಡುವ ಕರ್ಮವನ್ನ ಅವಲಂಭಿಸಿದೆ ಎಂಬ ನಂಬಿಕೆಯ ಮೇಲೆ ಜಾಗರೂಕವಾದ ಹೆಜ್ಜೆ ಇಡುತ್ತಾ, ಇಡೀ ಸಮಾಜದ ಪ್ರೀತಿಗೆ ಪಾತ್ರರಾದ ರಾಮಚಂದ್ರ ನಾಯ್ಕರವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಅವರನ್ನರಸಿ ಬಂದಿದೆ. ಅವರಿಗೆ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದನೆಗಳು. ಉತ್ಕೃಷ್ಟ ವಿಚಾರಗಳಿಂದ,ಸಮಾಜಮುಖಿ ಚಿಂತನೆಗಳಿಂದ, ಧ್ವನಿ ಇಲ್ಲದ ಬಡ ಕುಟುಂಬದ ವಿದ್ಯಾರ್ಥಿಗಳ ಪಾಲಿಗೆ ಗಟ್ಟಿ ಧ್ವನಿಯಾಗಿ, ಆಸರೆಯಾಗಿ “ವ್ಯಸನ ಮುಕ್ತ ಮೌಢ್ಯ ಮುಕ್ತ ಸಮಾಜ”ದ ನಿರ್ಮಾತೃಗಳಾಗಿ ನೂರ್ಕಾಲ ಬಾಳಿ ಬದುಕಲೆಂದು ಜಿಲ್ಲೆಯ ಸಮಸ್ತ ಗುರುಗಳ, ಗುರುಮಾತೆಯರ ಪರವಾಗಿ ಹಾರೈಸುತ್ತೇನೆ.
Be the first to comment