ದಾಂಡೇಲಿಯ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಹ್ಯಾದ್ರಿ ಲಲಿತಕಲಾ ಕೇಂದ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಲಲಿತ ಕಲೆಗಳ ಗುರುಗಳನ್ನು ಸನ್ಮಾನಿಸಿ ಗೌರವಿಸುವ ಹಾಗೂ ವಿದ್ಯಾರ್ಥಿಗಳಿಂದ ಗುರುವಂದನೆ ಸಲ್ಲಿಸುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ್ ರಾಮರಥ ಅವರು, ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಗುರುವನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಶಿಕ್ಷಣಕ್ಕೆ ನಿಜವಾದ ಮೌಲ್ಯ ದೊರೆಯುತ್ತದೆ ಮತ್ತು ಬದುಕು ಸಾರ್ಥಕವಾಗುತ್ತದೆ. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮೂಲಕ ದಾಂಡೇಲಿಯ ವಿದ್ಯಾರ್ಥಿಗಳಿಗೆ ಭರತನಾಟ್ಯ, ಸುಗಮ ಸಂಗೀತ, ಚಿತ್ರಕಲೆ, ತಬಲಾ ಸೇರಿದಂತೆ ವಿವಿಧ ಲಲಿತ ಕಲೆಗಳ ತರಬೇತಿ ನೀಡುತ್ತಿರುವ ಜಲಜಾ ಬಿ. ವಾಸರೆ ಅವರ ಕಾರ್ಯ ಶ್ಲಾಘನೀಯವಾಗಿದೆ. ಪಠ್ಯ ಶಿಕ್ಷಣದ ಜೊತೆಗೆ ಲಲಿತ ಕಲೆಗಳ ಅರಿವು ಮತ್ತು ಅಭ್ಯಾಸವೂ ಪ್ರತಿಯೊಬ್ಬ ವಿದ್ಯಾರ್ಥಿಗೆ ಅಗತ್ಯವಾಗಿದೆ. ಲಲಿತ ಕಲೆಗಳು ಉತ್ತಮ ವ್ಯಕ್ತಿತ್ವ ಮತ್ತು ಸಂಸ್ಕಾರಯುತ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕರಾದ ಸುಧಾಮ ದಾನಗೇರಿ, ಭರತನಾಟ್ಯ ಶಿಕ್ಷಕರಾದ ಕೃಷ್ಣಾ ಭಾಗವತ, ತಬಲಾ ಶಿಕ್ಷಕರಾದ ನಾಗೇಂದ್ರ ವೈದ್ಯ ಹೆಗ್ಗಾರ, ಚಿತ್ರಕಲಾ ಶಿಕ್ಷಕರಾದ ಅಮೃತಾ ಭಟ್ ಹಾಗೂ ಪ್ರಾಚಾರ್ಯ ಅಮೃತ್ ರಾಮರಥ ಅವರನ್ನು ಗುರುಪೂರ್ಣಿಮೆ ಅಂಗವಾಗಿ ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಗುರುಗಳ ಪಾದಕ್ಕೆ ನಮಸ್ಕರಿಸಿ ಗುರುವಂದನೆ ಸಲ್ಲಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುಗಳು, ಗುರುಪೂರ್ಣಿಮೆ ಸಂದರ್ಭದಲ್ಲಿ ತಮ್ಮನ್ನು ಗೌರವಿಸಿರುವುದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಲಲಿತ ಕಲೆಗಳ ಬಗ್ಗೆ ಆಸಕ್ತಿ ಹೊಂದುವುದರಿಂದ ಜೀವನ ಮತ್ತಷ್ಟು ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕಿ ಜಲಜಾ ಬಿ. ವಾಸರೆ ಮಾತನಾಡಿ ಕಳೆದ 15 ವರ್ಷಗಳಿಗೂ ಹೆಚ್ಚಿನ ಕಾಲ ನಮ್ಮ ಸಂಸ್ಥೆಯ ಮೂಲಕ ದಾಂಡೇಲಿಯಲ್ಲಿ ಮಕ್ಕಳಿಗೆ ಭರತನಾಟ್ಯ ಸಂಗೀತ ಚಿತ್ರಕಲೆ ಮುಂತಾದ ತರಗಳನ್ನು ನೀಡುತ್ತ ಬರಲಾಗುತ್ತಿದ್ದು, ಈ ಸಂಸ್ಥೆಯ ಬೆಳವಣಿಗೆಗೆ ವಿದ್ಯಾರ್ಥಿಗಳು ಹಾಗೂ ಪಾಲಕರೆ ಪ್ರೇರಣೆಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ದಾಂಡೇಲಿಯ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ವಿವಿಧ ಲಲಿತ ಕಲೆಗಳ ತರಬೇತಿಯನ್ನು ನೀಡಲಾಗುತ್ತಿದೆ. ಪಠ್ಯದ ಜೊತೆಗೆ ಸಾಂಸ್ಕೃತಿಕ ಮತ್ತು ಕಲಾತ್ಮಕ ಶಿಕ್ಷಣವೂ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸವನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವು ಅಭ್ಯಾಸ ಮಾಡಿದ ಸಂಗೀತ, ತಬಲಾ ಹಾಗೂ ಇತರ ಲಲಿತ ಕಲಾ ಪ್ರದರ್ಶನಗಳನ್ನು ನೀಡಿ ಮೆಚ್ಚುಗೆ ಗಳಿಸಿದರು. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕರಾದ ಜಲಜಾ ಬಿ. ವಾಸರೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Be the first to comment