ದಾಂಡೇಲಿ: ಬದುಕಿನ ಭದ್ರತೆಗಾಗಿ ಸೆಣೆಸಾಡಬೇಕಾದ ಈ ದುರಿತ ಕಾಲದಲ್ಲಿ ಯುವಜನರು ಕೇವಲ ಪ್ರೇಕ್ಷಕರಾಗಿ ಉಳಿಯಬೇಕೇ ಅಥವಾ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ದಿಕ್ಕನ್ನು ನಿರ್ಧರಿಸುವ ಸಕ್ರಿಯ ಶಕ್ತಿಯಾಗಬೇಕೇ ಎಂಬ ಪ್ರಶ್ನೆಯನ್ನು ಜನನುಡಿ ಮುನ್ನೆಲೆಗೆ ತರಲಿದೆ. ಯುವಜನರ ಉದ್ಯೋಗ, ಶಿಕ್ಷಣ, ಬದುಕು, ಘನತೆ, ಹಕ್ಕುಗಳು ಮತ್ತು ರಾಜಕೀಯ ಭಾಗವಹಿಸುವಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಸಮಕಾಲೀನ ಭಾರತದ ಸವಾಲುಗಳನ್ನು ವಿವಿಧ ಆಯಾಮಗಳನ್ನ ಇಟ್ಟುಕೊಂಡು ಪ್ರಸ್ತುತ ಜನನುಡಿ ಸಂಘಟಿಸಲಾಗಿದೆ ಎಂದು ಜನನುಡಿ ಸಂಘಟಕರಾದ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ನವೆಂಬರ 28-29 ರಂದು ಮಂಗಳೂರಿನ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ‘ಯುವಜನ ರಾಜಕಾರಣ: ದಿಕ್ಕು – ಭವಿಷ್ಯ – ಸವಾಲು’ ಧ್ಯೇಯದಡಿ ನಡೆಯಲಿರುವ ಜನನುಡಿ-2026 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಜನನುಡಿಯ ಉದ್ದೇಶ ಕೇವಲ ವಿಚಾರ ಸಂಕಿರಣವಲ್ಲ. ವಿಭಿನ್ನ ಅಭಿಪ್ರಾಯಗಳು, ಪ್ರಗತಿಪರ ಚಿಂತನೆಗಳು, ವೈಜ್ಞಾನಿಕ ಮನೋಭಾವ, ಮಾನವೀಯ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಸಂವಾದಗಳಿಗೆ ಮುಕ್ತ ವೇದಿಕೆಯನ್ನು ನಿರ್ಮಿಸುವ ವೇದಿಕೆಯಾಗಿದೆ. ಯುವಜನರು ಇತಿಹಾಸ, ವರ್ತಮಾನ ಮತ್ತು ಭವಿಷ್ಯವನ್ನು ವಿಮರ್ಶಾತ್ಮಕವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವುದು, ಜಾತಿ, ಧರ್ಮ, ಭಾಷೆ, ಲಿಂಗ ಮತ್ತು ವರ್ಗದ ಆಧಾರದಲ್ಲಿ ನಡೆಯುವ ತಾರತಮ್ಯಗಳ ವಿರುದ್ಧ ಸಾಮಾಜಿಕ ಪ್ರಜ್ಞೆ ಬೆಳೆಸುವುದು, ಸಂವಿಧಾನದ ಆಶಯಗಳನ್ನು ಬದುಕಿನಲ್ಲಿ ಜಾರಿಗೊಳಿಸುವ ಹೋರಾಟಗಳಿಗೆ ಬಲ ನೀಡುವುದು, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಹೊಸ ತಲೆಮಾರಿನ ನಾಯಕತ್ವವನ್ನು ರೂಪಿಸುವುದು ಜನ ನುಡಿಯ ಆಶಯವಾಗಿದೆ.
ಯುವಜನರು ಇತಿಹಾಸ, ವರ್ತಮಾನ ಮತ್ತು ಭವಿಷ್ಯವನ್ನು ವಿಮರ್ಶಾತ್ಮಕವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವುದು, ಜಾತಿ, ಧರ್ಮ, ಭಾಷೆ, ಲಿಂಗ ಮತ್ತು ವರ್ಗದ ಆಧಾರದಲ್ಲಿ ನಡೆಯುವ ತಾರತಮ್ಯಗಳ ವಿರುದ್ಧ ಸಾಮಾಜಿಕ ಪ್ರಜ್ಞೆ ಬೆಳೆಸುವುದು, ಸಂವಿಧಾನದ ಆಶಯಗಳನ್ನು ಬದುಕಿನಲ್ಲಿ ಜಾರಿಗೊಳಿಸುವ ಹೋರಾಟಗಳಿಗೆ ಬಲ ನೀಡುವುದು, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಹೊಸ ತಲೆಮಾರಿನ ನಾಯಕತ್ವವನ್ನು ರೂಪಿಸುವುದು ಜನನುಡಿಯ ಪ್ರಮುಖ ಗುರಿಗಳಾಗಿವೆ ಎಂದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ ಮಾತನಾಡಿ, ಶ್ರೀಮಂತರ, ಕಾರ್ಪೋರೇಟ್ ಕಂಪನಿಗಳು ಉಳ್ಳವರ ಪರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಈ ಸಂದರ್ಭದಲ್ಲಿ “ನುಡಿಯು ಸಿರಿಯಲ್ಲ ಬದುಕು” ಧ್ಯೇಯವಾಕ್ಯದಡಿ ಶ್ರಮಿಕ ಜನ ಸಮುದಾಯದ ಧ್ವನಿಯಾಗಿ ಜನನುಡಿ ಕಾರ್ಯಕ್ರಮ ನಡೆಯುತ್ತಿದೆ.
ಇಂದಿನ ಭಾರತವು ಕೇವಲ ರಾಜಕೀಯ ಬದಲಾವಣೆಗಳ ಕಾಲಘಟ್ಟದಲ್ಲಿಲ್ಲ. ಆರ್ಥಿಕ ಅಸಮಾನತೆ, ನಿರುದ್ಯೋಗ, ಖಾಸಗೀಕರಣ, ಶಿಕ್ಷಣದ ವ್ಯಾಪಾರೀಕರಣ, ಜಾತಿ ತಾರತಮ್ಯ, ಕೋಮುವಾದ, ಧರ್ಮಾಧಾರಿತ ಧ್ರುವೀಕರಣ, ಕಾರ್ಪೊರೇಟ್ ಬಂಡವಾಳದ ಪ್ರಭಾವ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಯ ಕುರಿತ ಪ್ರಶ್ನೆಗಳು ದೇಶದ ಭವಿಷ್ಯದ ಬಗ್ಗೆ ಗಂಭೀರ ಆತಂಕಗಳನ್ನು ಹುಟ್ಟುಹಾಕಿವೆ. ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಪ್ರಬಲ ಸಾಧನಗಳಾಗಿರುವಂತೆಯೇ, ಸುಳ್ಳು ಸುದ್ದಿ, ದ್ವೇಷದ ಪ್ರಚಾರ ಮತ್ತು ರಾಜಕೀಯ ಧ್ರುವೀಕರಣದ ವೇದಿಕೆಗಳಾಗಿಯೂ ಬಳಕೆಯಾಗುತ್ತಿವೆ. ಶ್ರಮಿಕರ ಸಾಂಸ್ಕೃತಿಕ ಧ್ವನಿಯಾಗಿ ನಡೆಯುತ್ತಿರುವ ಜನನುಡಿ ಕಾರ್ಯಕ್ರಮದಲ್ಲಿ ಸಮಾನ ಮನಸ್ಕರೆಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದರು.
ಡಿವೈಎಫ್ಐ ಅಖಿಲ ಭಾರತ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಪೂಜಾರ ಮಾತನಾಡಿ ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಬಹುತ್ವದ ಆಶಯಗಳ ಎದುರು ಹಲವು ಬಗೆಯ ಸವಾಲುಗಳು ಎದುರಾಗುತ್ತಿರುವ ದುರಿತ ಕಾಲದಲ್ಲಿ ಯುವಜನರ ರಾಜಕೀಯ ಪ್ರಜ್ಞೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಭವಿಷ್ಯದ ಭಾರತವನ್ನು ಕುರಿತ ಚರ್ಚೆಗಳಿಗೆ ವೇದಿಕೆಯಾಗಲು ‘ಜನನುಡಿ–2026’ ಸಜ್ಜಾಗಿದೆ ಎಂದರು.
ರಾಜಕೀಯವೆಂದರೆ ಕೇವಲ ಚುನಾವಣೆ, ಅಧಿಕಾರ ಮತ್ತು ಪಕ್ಷಗಳ ನಡುವಿನ ಸ್ಪರ್ಧೆಯಲ್ಲ. ಜನರ ಬದುಕು, ಜೀವನೋಪಾಯ, ಶಿಕ್ಷಣ, ಉದ್ಯೋಗ, ಸಂಸ್ಕೃತಿ, ಸ್ವಾತಂತ್ರ್ಯ ಮತ್ತು ಹಕ್ಕುಗಳ ಮೇಲೆ ಪ್ರಭಾವ ಬೀರುವ ಎಲ್ಲವೂ ರಾಜಕಾರಣವೇ ಎಂಬ ವಿಶಾಲ ಅರ್ಥದಲ್ಲಿ ಜನನುಡಿ ಯುವಜನರೊಂದಿಗೆ ಸಂವಾದ ನಡೆಸಲಿದೆ. ವಿಶೇಷವಾಗಿ ಜೆನ್ ಝಿ ತಲೆಮಾರಿನ ಯುವಜನರ ಅನುಭವ, ಪ್ರಶ್ನೆ, ಪ್ರತಿರೋಧ ಮತ್ತು ನಿರೀಕ್ಷೆಗಳಿಗೆ ಈ ಬಾರಿಯ ಜನನುಡಿ ಆದ್ಯತೆ ನೀಡಲಿದೆ ಎಂದರು.
ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ಡಿ. ಸ್ಯಾಮ್ಸನ್ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಜನನುಡಿ ಕಾರ್ಯಕ್ರಮದಲ್ಲಿ ಚರ್ಚೆ, ಸಂವಾದ, ವಿಚಾರ ಮಂಥನ ಹಾಗೂ ನೆಲ ಮೂಲದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರಜಾಪ್ರಭುತ್ವದ ಉಳಿವು, ಸಾಮಾಜಿಕ ನ್ಯಾಯ ಮತ್ತು ಫ್ಯಾಸಿಸಂ ವಿರೋಧಿ ಹೋರಾಟಗಳ ಮುಂದಿನ ದಿಕ್ಕಿನ ಕುರಿತು ಕಾರ್ಯಯೋಜನೆ ರೂಪಿಸುವುದು ಸಮಾರೋಪದ ಪ್ರಮುಖ ಆಶಯವಾಗಿದೆ. ರಾಜ್ಯದ ವಿವಿಧ ಭಾಗಗಳ ಲೇಖಕರು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಯುವಜನರು, ಸಾಮಾಜಿಕ ಹೋರಾಟಗಾರರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜನನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಾಲಿನಿ ಮೆಸ್ತಾ, ತಿಲಕಗೌಡ, ಸಲೀಂ ಸೈಯ್ಯದ್, ಇಮ್ರಾನ್ ಖಾನ್, ಕಾಂತರಾವ್ ಜನಾ, ಸಾಲ್ಮೊನರಾಜ್ ಇಲ್ಲೂರಿ, ಇರ್ಷಾದ್ ರಾಣೆಬೆನ್ನೂರ, ಜಯಶ್ರೀ ಹಿರೇಕರ, ಗಂಗಾನಾಯ್ಕ, ಗೀತಾ ನಾಯ್ಕ, ಗಿರಿಜಾ ಮುಂತಾದವರಿದ್ದರು.
Be the first to comment