ವರ್ಷಕ್ಕೆ ಶೇ.36 ಬಡ್ಡಿಯ ಆಸೆಗೆ ಬಿದ್ದು ಶಿವಂ ಅಸೋಸಿಯೇಟ್ಸ್ ನಲ್ಲಿ ಹಣ ತೊಡಗಿಸಿದ ದಾಂಡೇಲಿಗರು!?

ಇಡೀ ದೇಶವೇ ಹುಬ್ಬೇರಿಸುವಂತೆ ಮಾಡಿದ್ದ ಬೆಳಗಾವಿಯ ಶಿವಾನಂದ್ ನೀಲಣ್ಣವರ್ ನೇತೃತ್ವದ ಶಿವಂ ಅಸೋಶಿಯೇಟ್ಸ್ ನ ಹಣ ಹೂಡಿಕೆ ವ್ಯವಹಾರದಲ್ಲಿ ಇದೀಗ ಕೆಲವು ದಾಂಡಲಿಗರು ಕೂಡ ಹಣ ಹೂಡಿಕೆ ಮಾಡಿ ಆತಂಕದಲ್ಲಿರುವ ಮಾಹಿತಿ ಲಭ್ಯವಾಗಿದೆ.

ಬೆಳಗಾವಿಯ ಶಿವಾನಂದ ನೀಲಣ್ಣವರ್ ಶಿವಂ ಅಸೋಸಿಯೇಟ್ಸ ಹೆಸರಲ್ಲಿ ಹೆಚ್ಚಿನ ಬಡ್ಡಿ ನೀಡುವ ಆಮಿಷ ತೋರಿಸಿ, ವಿಶೇಷವಾಗಿ ಸೈನಿಕರು, ಮಾಜಿ ಸೈನಿಕರನ್ನು ಗುರಿಯಾಗಿಸಿಕೊಂಡು ಸುಮಾರು 4,500 ಕೋಟಿಯಷ್ಟು ಹಣ ಸಂಗ್ರಹಿಸಿ, ಇದೀಗ ಸಿಐಡಿ ಕಸ್ಟಡಿಯಲ್ಲಿ ವಿಚಾರಣೆಯಲ್ಲಿದ್ದಾರೆ. ಇವರಲ್ಲಿ 5 ಲಕ್ಷ ಹಣ ತೊಡಗಿಸಿದ್ದ ಕೃಷ್ಣ ಅಪ್ಪಣ್ಣ ಎಂಬವರು ತಮಗೆ ಮೊದಲೇ ಹೇಳಿದಂತೆ ಬಡ್ಡಿಯನ್ನು ನೀಡದೇ ವಂಚನೆ ಮಾಡಲಾಗಿದೆ ಎಂದು ಬೆಳಗಾವಿಯ ಕಾಗವಾಡ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಶಿವಂ ಅಸೋಸಿಯಟ್ಸ್ ನ ಎಲ್ಲಾ ಆಸ್ತಿಗಳ ಮೇಲೆ ದಾಳಿ ನಡೆದು, ಅದೀಗ ತನಿಖೆಯ ಹಂತದಲ್ಲಿದೆ. ನ್ಯಾಯಾಲಯ ಶಿವಾನಂದ್ ನೀಲಣ್ಣವರ ಅವರನ್ನು ಸಿಐಡಿ ಕಸ್ತರಿಗೆ ನೀಡಿದ್ದು, ಹೆಚ್ಚಿನ ವಿಚಾರಣೆಗಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಆರೋಪಿಯನ್ನ ಸ್ಥಳಾಂತರಿಸಿದ್ದಾರೆ.

ಶಿವಂ ಅಸೋಸಿಯೇಟ್ಸ್ ನ ರೂವಾರಿ ಶಿವಾನಂದ ನೀಲಣ್ಣವರ ದಾಂಡೇಲಿಯ ಹಲವು ಜನರೊಟ್ಟಿಗೆ ತಮ್ಮದೇ ಆದ ಸಂಬಂಧವನ್ನು ವಿಸ್ತರಿಸಿಕೊಂಡಿದ್ದನೆನ್ನುವ ಸಂಗತಿ ಇದೀಗ ಬಹಿರಂಗವಾಗುತ್ತಿದೆ. ದಾಂಡೇಲಿಯ ಕೆಲವರು ಈತನನ್ನ ಸುಮಾರು ಒಂದು ವರ್ಷದ ಹಿಂದೆಯೇ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದರು. ಸ್ಥಳೀಯ ಸಭಾಗಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಇದೇ ಶಿವಾನಂದ ನೀಲಣ್ಣವರ್ ‘ನಾನು 2028 ರಲ್ಲಿ ಮುಖ್ಯಮಂತ್ರಿ ಆಗಿ ತೋರಿಸಬೇಕೇ…. ಮುಖ್ಯಮಂತ್ರಿ ಆಗುವುದೇನು ದೊಡ್ಡ ಮಾತು… ನನ್ನ ಹತ್ರ ಇಡೀ ರಾಜ್ಯದಲ್ಲಿ ಜನರಿದ್ದಾರೆ… ಸಾವಿರ ಕೋಟಿ ರೂಪಾಯಿಗಳಿದೆ…. ಯಾರೂ ಹೆಚ್ಚಿಗೆ ಓದಬೇಕಾಗಿಲ್ಲ…. ನಾನು ಕೂಡ ಓದದೆ ಹಣ ಸಂಪಾದನೆ ಮಾಡಿದ್ದೇನೆ…. ನೀವು ಮಾಡಬಹುದು…. ಎಂಬಲ್ಲ ಅತಿರೇಕದ ಮಾತುಗಳನ್ನಾಡಿ, ಸ್ಥಳೀಯ ಶಾಸಕರ ಬಗ್ಗೆಯೂ ವ್ಯತಿರಿಕ್ತವಾದ ಮಾತಾಡಿ ಹೋಗಿದ್ದ. ಇದು ಆ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದರೂ ಕೂಡ ಯಾರು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸದೆ ಆತನ ಮಾನಸಿಕತೆಯ ಬಗ್ಗೆ ವ್ಯಂಗ್ಯವಾಡಿದ್ದರು. ಇದೇ ಮಾತುಗಳನ್ನು ಆತ ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಆಡಿದ್ದ. ಮುಂದುವರಿದು ಆತ ತನ್ನ ಹತ್ತಿರ 15 ಸಾವಿರ ಬಂದೂಕುಗಳಿವೆ ಎಂದಿದ್ದ. ಈಗ ಆತನ ನಡವಳಿಕೆ ಮತ್ತು ಮಾತುಗಳೇ ಆತನಿಗೆ ಉರುಳಾಗಿ ಪರಿಣಮಿಸಿದೆ.

ಈತನನ್ನು ದಾಂಡೇಲಿಗೆ ಪರೀಚಯಿಸಿದವರು ಯಾರೋ ಗೊತ್ತಿಲ್ಲ. ಸ್ಥಳೀಯ ಸುಭಾಂಗಣದಲ್ಲಿ ಭಾಷಣ ಮಾಡಿ ಹೋಗಿದ್ದ ಆತ ತದನಂತರದಲ್ಲಿ ದಾಂಡೇಲಿಯ ರೆಸಾರ್ಟುಗಳಿಗೆ ಆಗಾಗ ಬರುತ್ತಿದ್ದನಂತೆ. ಸ್ಥಳೀಯರ ಜೊತೆ ಸಭೆಗಳನ್ನು ನಡೆಸುತ್ತಿದ್ದನಂತೆ. ಖಚಿತವಾಗಿ ಬಂದಿರುವ ಮಾಹಿತಿಯ ಪ್ರಕಾರ ಕಳೆದ ಆರು ತಿಂಗಳಲ್ಲಿ ದಾಂಡೇಲಿ ಗೆ ಹತ್ತಿರದ ಎರಡರಿಂದ ಮೂರು ರೆಸಾರ್ಟುಗಳಲ್ಲಿ ಈತ ರಾತ್ರಿಯ ವೇಳೆ ಸಭೆ ಮಾಡಿದ್ದಾನೆ. ಕೆಲವರ ಆತನ ಆಪ್ತರು ತಮ್ಮ ಸ್ನೇಹಿತರು, ಆಪ್ತರನ್ನು ಆ ಸಭೆಗೆ ಆಹ್ವಾನಿಸಿದ್ದಾರೆ. ಅಲ್ಲಿಯೂ ಕೂಡ ತಮ್ಮ ಅಸೋಸಿಯೇಟ್ ನಲ್ಲಿ ಹಣ ಹೂಡುವಂತೆ, ತಾನು ವರ್ಷಕ್ಕೆ 36% ಬಡ್ಡಿಯನ್ನು ನೀಡು ತ್ತೇನೆಂದು ಹೇಳಿದ್ದಾನೆ. ಇದು ಕೇವಲ ಹೂಡಿಕೆಯ ಸಭೆಯಾಗಿರದೇ ಅಲ್ಲಿ ಬಂದವರಿಗೆ ಗುಂಡು, ತುಂಡಿನ ಪಾರ್ಟಿಯನ್ನು ಕೂಡ ನೀಡಿದ್ದಾನೆ. ಬೇಕಾದಷ್ಟು ಕುಡಿಯಿರಿ, ತಿನ್ನಿರಿ ಎಂದು ಪ್ರಚೋದಿಸಿದ್ದಾನೆ. ಸಭೆಗಳಲ್ಲಿ ಲಕ್ಷ ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾನೆ.

ಈತನ ಮಾತು, ಬದುಕಿನ ರೀತಿ ರಿವಾಜು, ಐಷಾರಾಮಿ ಜೀವನವನ್ನು ಕಂಡ ದಾಂಡೇಲಿಯ ಕೆಲವರು ಆತನ ಅಸೋಸಿಯೇಟ್ ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಕೆಲವರು 10 ಸಾವಿರದಿಂದ 5 ಲಕ್ಷ ರು.ಗಳವರೆಗೂ ಹಣ ತೊಡಗಿದಿದ್ದಾರಂತೆ. ಹಾಗೆ ಹಣ ಹೂಡಿಕೆ ಮಾಡಿದವರಿಗೆ ಕೆಲ ತಿಂಗಳು ಅವನು ಹೇಳಿದಂತೆಯೇ ಅದೇ ಬಡ್ಡಿ ದರದಲ್ಲಿ ಹಣವನ್ನು ಕೂಡ ನೀಡಿದ್ದಾನೆ. ಅದನ್ನು ಅವರು ತಮ್ಮ ಪಾಸ್ ಬುಕ್ ನಲ್ಲಿ ಖಾತ್ರಿ ಪಡಿಸಿಕೊಂಡಿದ್ದಾರೆ. ಹೆಚ್ಚಿನ ಬಡ್ಡಿ ಬರುತ್ತಿದ್ದಂತೆಯೇ ಅನೇಕರು ಮತ್ತೆ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಾರೆ. ಜೊತೆಗೆ ತಮಗೆ ಬರುತ್ತಿರುವ ಬಡ್ಡಿ ತೋರಿಸಿ ತಮ್ಮ ಸ್ನೇಹಿತರಿಂದಲೂ ಕೂಡ ಹಣವನ್ನು ಹೂಡಿಕೆ ಮಾಡಿಸಿದ್ದಾರೆ. ದಾಂಡೇಲಿ ರೆಸಾರ್ಟ್ ನಲ್ಲಿ ಭಾಗವಹಿಸಿದ ಕೆಲವರು ಹಣ ಹೂಡಲು ಹಿಂಜರಿದಿದ್ದರೆ, ಅನೇಕರು ಹಣ ಹೂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೀಗೆ ಹಣ ಹೂಡಿಕೆ ಮಾಡಿದರಲ್ಲಿ ಅನೇಕರು ಗಣ್ಯರು ಹಾಗೂ ಸುಸಂಸ್ಕೃತರಾಗಿದ್ದು ದೂರು ನೀಡಲು ಹಿಂಜರಿಯುತ್ತಿದ್ದಾರೆ. ದೂರು ನೀಡಿದರೆ ಜನ ತಮ್ಮ ಬಗ್ಗೆ ವ್ಯಂಗ್ಯವಾಗಿ ಮಾತನಾಡಿಕೊಳ್ಳಬಹುದು ಎಂದು ಅಂಜಿಕೆ ಅವರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಜನರು ಈಗ ಶಿವಾನಮನದ ನೀಲಣ್ಣವರ ಹಗರಣ ಬೆಳಕಿಗೆ ಬಂದಿರುವುದರಿಂದ ಹಾಗು ಆತ ಸಿ.ಐ.ಡಿ. ಕಸ್ಟಡಿಯಲ್ಲಿರುವುದರಿಂದ ತಾವು ತೊಡಗಿಸಿದ ಹಣವಾದರೂ ತಮಗೆ ಮರಳಿ ಬಂದೀತೋ… ಅಥವಾ ಗುಳುಂ ಆದೀತೋ ಎಂಬ ಆತಂಕದಲ್ಲಿದ್ದಾರಂತೆ.

About ಬಿ.ಎನ್‌. ವಾಸರೆ 695 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*