ತವರು ಮನೆಗೆ ಬಂದ ಹಿರಿಮಗಳು ಗೌರಮ್ಮ

“ಅಣ್ಣಾ ಚೌತಿ ಹಬ್ಬಕ್ಕೆ ಯಾವಾಗ ಕರ್ಯಾಕ ಬರತೀಯಾ? ಬರೋಕಿಂತ ಮುಂಚೆ ಎರಡು ದಿನ ಮೊದಲೇ ಪೋನ್ ಮಾಡಿಕೊಂಡು ಬಾ. ಯಾಕೆಂದರೆ ನಾವಿಬ್ರೂ ಗದ್ದೆ,ತೋಟಕ್ಕೋ, ಮುರಿಯಾಳ ಕೆಲಸಕ್ಕೆ ಅಂತಾ ಹೋದರೆ ನೀ ಬಂದ್ರೆ ‘ಬಾಗಣ್ಣ ಬೀಗಣ್ಣ’ ! ತಿಳಿತಾ ?” ಎಂದು ಮದುವೆಯಾಗಿ ಗಂಎನ ಮನಗೆ ಹೋದ ಗ್ರಹಿಣಿಯರು ತಮ್ಮ ಅಣ್ಣ,ಅಪ್ಪನಿಗೆ ಎಚ್ಚರಿಸೋದು ಸಹಜ. ಇದಕ್ಕೆ ಮುಖ್ಯವಾಗಿ ಎರಡು ಕಾರಣ. ಒಂದು ಹೆಣ್ಣಿಗೆ ತವರಿನ ಭಾವನಾತ್ಮಕ ಸೆಳೆತ. ಎರಡನೇದು ಅಣ್ಣ-ತಮ್ಮ- ಅಪ್ಪ ಹೀಗೆ ತವರಿನ ಕಡೆಯವರು ಬಂದಾಗ ಅವರಿಗೆ ಗಂಡನ ಮನೆಯ ಯಾವ ದೋಷಗಳೂ ತವರಿಗೆ ತೋರದಂತೆ ತಮ್ಮ ಮಗಳು ಸುಖಸಂತೃಪ್ತಿಯಿಂದ ಇದ್ದಾಳೆಂಬ ಭಾವನೆಯನ್ನು ತೋರಿಸ್ಕೊಳ್ಳುವ ಆಸೆ.
ಬಂದುರೋ ಅಣ್ಣಾ , ಅಪ್ಪನಿಗೆ ವಿಶೇಷ ಕಜ್ಜಾಯ ಕೋಳಿಸಾರು, ಜೊತೆಗೆ ಸಿಹಿನೂ ಮಾಡಿ ಉಣಿಸಿ ಜೊತೆಗೆ ಮಾಡಿರೋ ಕಜ್ಜಾಯ, ಬಜೆ , ಮನೆ ಹಿತ್ಲಾಗ ಬೆಳೆದ ನಾಲ್ಕಾರು ಸೌತೆಮಿಡಿ ನೂ ತಂದು ಒಂದು ಚೀಲಕ್ಕೆ ತುಂಬಿ “ಅವ್ವನ ಕೈಲಿ ಕೊಡು.ಪಾಪ ಮಕ್ಕಳು ಕೈ ಬಾಯ ನೋಡ್ತಾವೆ. ಎಷ್ಟೇ ಆದರೂ ನನ್ನ ಮುದ್ದಿನ ಅಳಿದೀರ ಅಲ್ವಾ” ಅಂತಾ ಹೆಮ್ಮೆಬೇರೆ. ಇವಳು ಚೀಲ ತುಂಬಿ ಖುಷಿಪಡಿಸಿ ಕಳಿಸೊ ಆತಿಥ್ಯ ಸತ್ಕಾರ. ಹಾಗೇ ಅವನನ್ನು ದಾರಿ ತನಕ ಕಳಿಸಿ ಅಕ್ಕ ಪಕ್ಕದವರಿಗೆ ಕೇಳುವಂತೆ ದೊಡ್ಡದಾಗಿ “ಹುಶಾರು, ಮನೆಗೆ ಹೋದ ಮ್ಯಾಲ ಫೊನ್ ಮಾಡು ಆಯ್ತಾ” ಈ ಸಂಭ್ರಮ ಕೇಳಿ ಅಕ್ಕಪಕ್ಕದ ಮನೆ ಅಜ್ಜಿ “ಏನ್ ಹುಡುಗಿ, ಚೌತಿ ಹಬ್ಬದ ಕರೆನಾ” ಯಾರ ಬಂದಿದ್ರು ಅಣ್ಣಾನಾ? ಅದಕ್ಕೆ ಊರಗಲ ಮುಖ ಮಾಡಿ ಕೊಂಡು ಹೆಮ್ಮೆಯಿಂದ ” ಹೌದತ್ತೇರು, ನಮ್ಮಣ್ಣ ಗೌರಮ್ಮನ ಹಬ್ಬ ಕರ್ಯಾಕ ಬಂದಿದ್ದ, ಅದಕ್ಕೆ ಕೋಳಿಸಾರು ಹೊಸಕರೆ ಕಜ್ಜಾಯ ಮಾಡಿದ್ದೆ. ತಡಿ ನಿಂಗೂ ಎರಡು ಕೊಡ್ತೇನೆ” ಎಂದು ಒಳ ಹೋಗಿ ನಾಲ್ಕಾರ ಕಜ್ಜಾಯ ಒಂದು ಬಟ್ಲು ಕೋಳಿಸಾರು ಪಕ್ಕದ ಮನೆಗೆ ರವಾನೆ ಮಾಡಿಸಿ ಹಂಚಿ ತಿನ್ನುವ ಖುಷಿ…😋 ಇದು ಬಹುತೇಕ ಮಲೆನಾಡಿನ ಹೆಂಗಳೆಯರ ನಿಷ್ಠೆ.

ಹೀಗೆ ಮನೆಗೆ ಕರೆ ಮಾಡಾಕ ಬಂದಾಗ ನೀರು ಕೈಗಿಟ್ಡು ಕೈಕಾಲ ತೊಳೆಸಿ “ಅಪ್ಪಾ ಅವ್ವ ಆರಾಮೈದಾಳ, ಅಪ್ಪಿ , ಪಾಪು ಆರಾಮಿದ್ರಾ,? ಒಂದೇ ಉಸಿರಿಗೆ ಎಲ್ರದ್ದೂ ಸಮಾಚಾರ ಕೇಳೋ ಆತುರ. ಒಳಗೋಗಿ ಬೇಗ ಬೇಗ ಸಿರಾ ಮಾಡಿ ತಟ್ಟೆಲಿಟ್ಟು ಒಂದು ದೊಡ್ಡ ಲೋಟದಾಗ ಬಿಸಿ ಚಾ ಹಾಕೊಂಡು ಅಣ್ಣನ ಕೈಲಿಡೊ ಖುಷಿ ನೋಡತಿದ್ರೆ ಆ ದ್ಯಾವ್ರಿಗೂ ಅಚ್ಚರಿ ಆಗಬೇಕು! ಯಾಕಂತಿರಾ ಈ ಅಣ್ಣ ತಂಗಿ ಮದ್ವೆಗೂ ಮುಂಚೆ ಸಣ್ಣಪುಟ್ಟ ಕಾರಣಕ್ಕೂ ಜಗಳಾಡ್ಕೊಂಡು ವಾರ,ತಿಂಗಳಗಟ್ಲೆ ಮುಖ ನೋಡದೆ ಮಾತೇ ಬಿಟ್ಟಿರತಾರೆ. ಒಬ್ಬರಿಗೊಬ್ಬರು ನಿತ್ಯ ಹಾವು ಮುಂಗುಸಿಗಳ ತರಾ ಹೊಡದಾಡಕೊಂಡಿದ್ದವರು ಹೆಣ್ಣು ಮಕ್ಕಳಿಗೆ ಮದುವೆ ಆದ ಮ್ಯಾಗ ಅದೆಲ್ಲಿಂದ ಬರುತ್ತೊ ಏನಪ್ಪ ಅಣ್ಣತಂಗೀರ ಕರುಳ ಗಟ್ಟಿತನ ! ನಿಮಗೊತ್ತಾ. ನಿಜವಾಗಿಯೂ ತುಂಬಾ ಭಾವನಾತ್ಮಕ ವಾಗಿರತಾರೆ. ಅಂತಾ ಅವ್ಯಕ್ತ ಸಂಬಂಧ ಅವರನ್ನು ಕಟ್ಟಿಹಾಕ್ಬಿಡುತ್ತೆ. ಒಬ್ರಿಗೊಬ್ರು ಕಾಣದಂತೆ ಕಣ್ತುಂಬಾ ನೀರು ಬಂದ್ರೂ ಮರೆ ಮಾಚತಾರೆ. ಬಹುಶಃ ಈ ಸಂಬಂಧ ಇನ್ನೂ ನಮ್ಮ ಗ್ರಾಮೀಣರಲ್ಲಿ ಮಾತ್ರ ಕಾಣಲು ಸಾದ್ಯ.

‌‌ ಇದಾದ ನಂತರ ಈ ಮಹಿಳೆಯರು ದಿನಕ್ಕೆ ಹತ್ತಾರು ಭಾರಿ ಕ್ಯಾಲೆಂಡರ ನೋಡುತ್ತಲೇ ಇರುತ್ತಾರೆ. ಚೌತಿಹಬ್ಬ ಬಂತೆಂದರೆ ತವರಿನ ಕಡೆಗೆ ಏನೋ ಒಂದು ರೀತಿಯ ಅವ್ಯಕ್ತ ಭಾವದ ಸೆಳೆತ ತೀವ್ರ ಹೆಚ್ಚುತ್ತಲೇ ಇರುತ್ತದೆ.. ಯಾವುದೇ ಸಮುದಾಯದ ಜನರಿಗೂ ತವರಿನ ಕರುಳಿನ ಆಳವಾದ ತಾಯಿಬೇರಿನ ಸಂಬಂಧ. ಅದೇ ರಕ್ತ ಸಂಬಂಧ. ಅದು ಬಿಡಿಸಲಾರದ ಅನುಬಂಧ. ಆದರೆ ಇತ್ತೀಚೆಗೆ ನಿರ್ಜೀವ ಹಣ,ಆಸ್ತಿ ಅಂತಸ್ತಿನ ವ್ಯಾಮೋಹ ಕೆಲವು ಕುಟುಂಬಗಳ ಭಾವನಾತ್ಮಕ ಸಂಬಂಧವನ್ನು ಕಡಿಮೆ ಮಾಡಿರಬಹುದು. ಆದರೆ ಅವೆಲ್ಲವನ್ನೂ ಮೀರಿದ ಸಂಬಂಧವೇ ಈ ದೈವಿಕ ಶಕ್ತಿಯ ರೂಪದಲ್ಲಿ ಆಚರಿಸುವ ಹಬ್ಬ- ಹರಿದಿನಗಳ ಆಚರಣೆ.

ನಮ್ಮ ಮಲೆನಾಡಿನ ಕೃಷಿ ಪರಂಪರೆಯ ಶ್ರಮ ಸಂಸ್ಕ್ರತಿಯ ಜನರ ಪಾಲಿಗೆ ಈ ಗೌರಿ ಗಣೇಶ ಹಬ್ಬವೆಂದರೆ ಒಂದು ವಿಶೇಷ ಆಚರಣೆ. ಕೆಲವು ಹಿಂದುಳಿದ, ದಲಿತ ಜನಾಂಗದವರು ತಮ್ಮ ನೆಯ ಹೆಣ್ಣುಮಕ್ಕಳನ್ನು ತವರಿಗೆ ಕರೆಸಿಕೊಂಡು ಅವರಿಂದಲೇ ಗೌರಿ ತರುವ ಸಂಪ್ರದಾಯ ಇದೆ. ತಮ್ಮ ಸೊಸೆಯಂದಿರು ಅವರವರ ತವರಿಗೆ ಹೋಗಿ ಗೌರಿ ಗಣೇಶ ಹಬ್ಬ ಮಾಡುವುದು ಸಂಪ್ರದಾಯ. ಮಲೆನಾಡಿಗರ ದೃಷ್ಟಿಯಲ್ಲಿ ಗೌರಮ್ಮ ಮನೆಯ ಮೊದಲ ಹೆಣ್ಣು ಮಗಳು. ಶಿವನಿಗೆ ಮದುವೆ ಮಾಡಿಕೊಟ್ಟ ಮೇಲೆ ಒಮ್ಮೆ ಕೈಲಾಸದಲ್ಲಿ ಮೊದಲ ಬಾರಿಗೆ ಗೌರಮ್ಮ ತನ್ನ ಪತಿ ಶಿವನ ಬಳಿ ತನ್ನ ತವರಿಗೆ ದಂಪತಿಗಳಿಬ್ಬರೂ ಹೋಗೋಣ ವೆಂಬುದಾಗಿ ವಿನಂತಿ ಇಡುತ್ತಾಳೆ. ಅದಕ್ಕೆ ಲೋಕಚಿಂತಕನಾದ ಶಿವ “ತನಗೆ ಬರಲು ಅಸಾಧ್ಯ. ಬೇಕಿದ್ದರೆ ನಮ್ಮ ಮುದ್ದಿನ ಮಗ ಗಣೇಶನೊಂದಿಗೆ ಹೋಗಿ ಬಾ” ಎಂದು ಅಣತಿ ಮಾಡುತ್ತಾನೆ. “ಹಾ ಒಂದು ಮಾತು ಮೊದಲೇ ನಿಮ್ಮ ತವರಿನವರು ಬಡವರು, ಕಾಡುಮೇಡು ವಾಸಿ ಕೃಷಿಕರು. ಅಕಾಲಿಕ ಮಳೆಬೆಳೆಯಿಂದ ಜೀವನ ನಿರ್ವಹಣೆಯೂ ಕಷ್ಟ. ನೀನಾದರೂ ಹೇಗೋ ಸಹಿಸಿಕೊಳ್ಳುವೆ. ನಮ್ಮ ಮಗ ಗಣಪತಿ ಮೊದಲೇ ಹೊಟ್ಟೆಬಾಕ.! ಅವನಿಗೆ ಎಷ್ಟು ಉಂಡರೂ ಉದರ ತುಂಬಿಸೋದು ಅವರಿಗೆ ಕಷ್ಟ. ಆದ್ದರಿಂದ ಅವನಿಗೆ ಎಲ್ರ ಮನೆಗೂ ಹೋಗಿ ಹಠಮಾಡದೆ ಅನುಕೂಲಸ್ಥ ಕೆಲವರ ಮನೆಯಲ್ಲಿ ಮಾತ್ರ ನಾಲ್ಕು ದಿನ ಇದ್ದು ಬನ್ನಿ” ಎನ್ನುವನು.
ಇಷ್ಟು ಅನುಮತಿ ಸಿಗುವುದೊಂದೇ ತಡ. ಪುತ್ರ ಗಣೇಶನೊಂದಿಗೆ ಭುವಿಯತ್ತ ಹೊರಟೇ ಬಿಟ್ಟಳು. ಅದೇ ದಿನವನ್ನು ಭೂಲೋಕದಲ್ಲಿ ‘ಗೌರಿ ಗಣೇಶ ಚತುರ್ಥಿ’ ಹಬ್ಬವನ್ನಾಗಿ ಆಚರಿಸಿ ಆನಂದಿಸುತ್ತಾರೆ.
ಇತ್ತ ಮನೆಯ ಸೊಸೆಯಂದಿರು ವಾರದ ಮೊದಲೇ ಮನೆ,ಹಿತ್ತಲು ಎಲ್ಲಾ ಕಸ,ಕರಿ ಸ್ವಚ್ಛಂದ ಮಾಡಿ ಹಾಸಿಗೆ ಹೊದಿಕೆ ಸಮೇತ ಬಟ್ಟೆ ತೊಳೆದು ಮನೆಯನ್ನು ಒಪ್ಪ ಓರಣವಾಗಿ ಅತ್ತಿಗೆಯರಿಗೆ(ಮನೆ ಹೆಣ್ಮಕ್ಕಳಿಗೆ) ಅನುಕೂಲ ಮಾಡುವುದು. ಜೊತೆಗೆ ಯಾವ್ಯಾವ ಸಾಮಗ್ರಿಗಳನ್ನು ಎಲ್ಲೆಲ್ಲಿ ಇಟ್ಟಿದ್ದೇವೆ ಅನ್ನೋ ವರದಿಯನ್ನು ಪೋನ್ ಸಂಭಾಷಣೆಯಲ್ಲೇ ಮುಟ್ಟಿಸಿಬಿಟ್ಟಿರತಾರೆ. ಇದು ಅತ್ತಿಗೆ ನಾಧಿನಿಯರ ವೈ ಮನಸ್ಸು ದೂರಮಾಡಿ ತವರುಮನೆ ಗಂಡನ ಮನೆಯವರನ್ನು ಬೆಸೆಯುವ ಭದ್ರ ಸಂಬಂಧದ ಹಬ್ಬವೆಂಬುದು ಹಿರಿಯರ ಆಶಯ.

ಹೀಗೆ ತವರಿಗೆ ಬಂದ ಊರಿನ ಎಲ್ಲಾ ಸಹೋದರಿಯರು ಹಬ್ಬದ ದಿನ ಬೆಳಿಗ್ಗೆ
ಸಮೀಪದ ಬಾವಿಯಿಂದ ಶುದ್ದ ನೀರನ್ನು ಬಿಂದಿಗೆಯಲ್ಲಿ ತುಂಬಿ ಬಾಳೆಯೆಲೆಯ ಮೇಲೆ ಹಾಕಿದ ಅಕ್ಕಿಯ ಮೇಲಿಟ್ಟು ಐದು ಕಲ್ಲಿನ ಹರಳನ್ನು, ಅದರಲ್ಲಿ ಹಾಕುತ್ತಾರೆ. ಅವುಗಳು ಗೌರಿ ಗಣೇಶನ ರಕ್ಷಣೆಗೆ ಶಿವನು ಕಳಿಸಿದ ಪಂಚ ಗಣಗಳು. ಇದನ್ನೆಲ್ಲ ಕಳಸ ಸಮೇತ ಬಾವಿಯ ಸಮೀಪದಲ್ಲಿ ಇಟ್ಟು ಪೂಜಿಸಿ ಮನೆಯ ಹೆಣ್ಣು ಮಕ್ಕಳೇ ಮನೆಗೆ ಕರೆತರುತ್ತಾರೆ. (ಸೊಸೆಯಂದಿರು ಅವರ ತವರಿಗೆ ಹೋಗಿ ಅವರವರ ಮನೆ ಗೌರಿ ಕರೆತರಲು ಹೋಗಿರುತ್ತಾರೆ.)
ಗಣೇಶ ಗೌರಮ್ಮನಿಗೆ ಇಷ್ಟವಾದ ಚಕ್ಕುಲಿ, ಮೋದಕ, ಪಂಚಕಜ್ಜಾಯ ಸಕಲ ಭಕ್ಷ್ಯಭೋಜ್ಯಗಳನ್ನು ತಯಾರಿಸಿ ಅಣ್ಣ ಅಪ್ಪ, ಮಕ್ಕಳು ಮರಿಗಳೊಂದಿಗೆ ಹಬ್ಬ ಮಾಡುವ ಖುಷಿ ಸ್ವರ್ಗಕ್ಕೆ ಮೂರೇ ಮೂರು ಗೇಣು. !
ಮಕ್ಕಳ ಕೈಲಿನ ಪಟಾಕಿ, ಸುರ್ ಸುರ್ ಬತ್ತಿ , ಚಕ್ಕುಲಿ, ಪಂಚಗಜ್ಜಾಯದ ಸವಿ ಹಬ್ಬದ ಸಾಗರವನ್ನು ಇಮ್ಮಡಿಗೊಳಿಸುತ್ತದೆ. ಜೊತೆಗೆ ಊರಿನ ಯುವಕರು ದೇವಸ್ಥಾನ, ಶಾಲಾ ಆವರಣ, ಊರಿನ ಹೆಬ್ಬಾಗಿಲ ಬಳಿ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪಿಸಿ ಹಾಡು,ಕುಣಿತಗಳ ಸಂಭ್ರಮ ಊರಿನ ಕಳೆ ಹೆಚ್ಚಿಸುವುದು ವಿಶೇಷ. ಒಟ್ಟಾರೆ ಈ ಹಬ್ಬ ಹರಿದಿನಗಳು ವರ್ಷವಿಡೀ ದುಡಿದು ದಣಿದ ಕೃಷಿಕರು, ಕೂಲಿಕಾರರು ಈ ಹಬ್ಬದ ಕಾರಣಕ್ಕಾಗಿ ಸ್ವಲ್ಪ ದಿನ ವಿಶ್ರಾಂತಿಯೊಂದಿಗೆ ಸಂತೋಷವಾಗಿರಲೆಂಬುದು ಹಿರಿಯರ ಆಶಯವಾಗಿದ್ದಿರಬೇಕು.

ಏನೇ ಇರಲಿ ಈ ಹಬ್ಬ ಹರಿದಿನಗಳು ತಂದೆ- ತಾಯಿ, ಅಣ್ಣ-ತಂಗಿ, ಮಕ್ಕಳು ಮೊಮ್ಮಕ್ಕಳು, ಬಂಧು ಬಾಂಧವರನ್ನು ಒಂದುಗೂಡಿಸುವ ಕೌಟುಂಬಿಕ ಸಾಮರಸ್ಯದ ಸೇತುವೆ ಯಾಗಿರುವುದಂತೂ ಸತ್ಯ.

ಗೋಪಾಲ ಭಾಶಿ
ಶಿಕ್ಷಕರು ಸಿದ್ದಾಪುರ ಉ.ಕ.

About ಬಿ.ಎನ್‌. ವಾಸರೆ 705 Articles
ಬಿ.ಎನ್‌. ವಾಸರೆ (ಮೊ-9480043450)

2 Comments

Leave a Reply

Your email address will not be published.


*