ಶಿಕ್ಷಣ ಇಲಾಖೆಯ ಮಹಾನ್ ಸಾಧಕ ರವೀಂದ್ರ ಆರ್.ಡಿ.ಯವರ ಮಡಿಲಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಪ್ರತಿಯೊಬ್ಬ ಶಿಕ್ಷಕರಿಗೂ ಮಾದರಿ ಇವರ ಸೇವೆ-ಸಾಧನೆ

ಏಳು-ಬೆಳಕಿದೆ ನಿನ್ನ ಪಾಲಿಗೆ

ನಿಲ್ಲು-ಶಕ್ತಿ ಇದೆ ನಿನ್ನ ಕಾಲಿಗೆ

ಎತ್ತು -ತಾಕತ್ತಿದೆ ನಿನ್ನ ಕೈಗೆ

ಮಾತಾಡು- ಧ್ವನಿ ಇದೆ ನಿನ್ನ ಕೊರಳಿಗೆ

ಕವಿ ವಿಷ್ಣು ನಾಯ್ಕ ರವರ ಕವನದ ಒಂದೊಂದು ಅಕ್ಷರವನ್ನು ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಪ್ರತಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದರ ಮೂಲಕ ಅವರಲ್ಲಿರುವ ಹಿಂಜರಿಕೆ, ಕಿಳರಿಮೆ, ಭಯ, ನಿರಾಸೆ ಬದುಕಿನಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಬದಿಗೆ ತಳ್ಳಿ ಸಮಸ್ಯೆಯನ್ನು ಸವಾಲಾಗಿಸುವ ತಂತ್ರದ ಅರಿವು ಮೂಡಿಸಿ ಶಿಕ್ಷಕರ ವೃತ್ತಿ ಬದುಕಿನ ನಡಿಗೆಗೆ ಬಲವನ್ನು ತುಂಬಿದವರು. ಸಾವಿರದ ನಾಳೆಗಳನ್ನು ಕಟ್ಟುವ ಸಂಕಲ್ಪದ ಕನಸನ್ನು ಹೊತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಾಲ್ಯದ ಶಿಕ್ಷಣವನ್ನು ಅಕ್ಕರೆಯಿಂದ ನೀಡಿ ನಲಿ-ಕಲಿ ಶಿಕ್ಷಣದತ್ತ ಒಲವು ಮೂಡಿಸಿ ಸುಮಾರು ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ಮಾನಸಿಕ ಧೈರ್ಯ ತುಂಬಿ, ದೂರ ಸಂಪರ್ಕ ತರಬೇತಿಯನ್ನು ಎರಡು ವರ್ಷಗಳ ಕಾಲ ನಿರಂತರವಾಗಿ ನೀಡಿದವರು ಹಾಗೂ ನಲಿ ಕಲಿಯ ಬ್ರಹ್ಮನೆಂದು ಮನೆ ಮಾತಾದವರು.  ಕೊಪ್ಪ ತಾಲೂಕಿನ ಲೋಕನಾಥಪುರದ ಸರಕಾರಿ ಪ್ರೌಢಶಾಲೆಯ ಭಾಷಾ ಶಿಕ್ಷಕರಾಗಿ  ಸೇವೆ ಸಲ್ಲಿಸುತ್ತಿರುವವರು ರವೀಂದ್ರ ಆರ್.ಡಿ.ಯವರು. ಶಿಕ್ಷಣ ಇಲಾಖೆಯ ಇತಿಹಾಸ ಪುಟದಲ್ಲಿ ದಾಖಲಾದ ಹೆಸರು. ಆಡು ಮುಟ್ಟದ ಗಿಡವಿಲ್ಲ, ರವೀಂದ್ರರವರು ಕೈಯಾಡಿಸಿದ ಕ್ಷೇತ್ರವಿಲ್ಲ. ಎಲ್ಲೆಲ್ಲೂ ಸೊಬಗು ಸೌಂದರ್ಯ. ಹೊಸತನಕ್ಕೆ ಸದಾ ಹಾತೊರೆಯುವ ವಿಶಾಲ ಹೃದಯವಂತರು.

ತಂದೆ ದಿ. ದೇವಪ್ಪ, ತಾಯಿ ದಿ.ರತ್ನಮ್ಮನವರ ಮಗನಾಗಿ ಎನ್. ಆರ್. ಪುರ ತಾಲೂಕಿನ ರಂಭಾಪುರಿ ಮಠದ ಸ್ಕೂಲ್ ಗದ್ದೆಯಲ್ಲಿ  ೧೯೬೬ ರಂದು ಜನಿಸಿದರು. ತಮ್ಮ ೨೩ ನೇ ವಯಸ್ಸಿನಲ್ಲಿ ಅಂದರೆ ೧೯೮೯ ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕ್ಯಾತನಮಾಳೆಯಲ್ಲಿ ಸಹಾಯಕ ಶಿಕ್ಷಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಅತ್ಯುತ್ತಮ ಶಿಕ್ಷಕರಾಗಿ ನಾಡು ಕಂಡ ಅಪರೂಪದ,ಅನಿವಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಹಂತದಲ್ಲಿ ನೂರಕ್ಕೂ ಹೆಚ್ಚು ಸಾಹಿತ್ಯಗಳನ್ನು ಶಿಕ್ಷಣ ಇಲಾಖೆಗೆ ರಚಿಸಿಕೊಡುವಲ್ಲಿ ಇವರ ಕೊಡುಗೆ ವಿಶಿಷ್ಟವಾದುದ್ದು. ಶಿಕ್ಷಣ ಇಲಾಖೆಯ ಮುಖಮುದ್ರೆಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ೨೫ ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿರುವ ಶಿಕ್ಷಕರಿಗೆ ಕನ್ನಡ ಕಲಿಸುವ ತರಬೇತುದಾರರಾಗಿ, ಬರಹಗಾರರಾಗಿ ೧೩ ಪಠ್ಯಪುಸ್ತಕಗಳನ್ನು ನಮ್ಮ ಸರ್ಕಾರಿ ಶಾಲೆಯ ಸುಮಾರು ೩೦ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದರೆ ಇವರ ಕೃತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಭಾರತದ ಸುಮಾರು  ೧೦ ಕ್ಕೂ ಹೆಚ್ಚು ರಾಜ್ಯಗಳಿಗೆ ಕರ್ನಾಟಕದ ಪ್ರತಿನಿಧಿಯಾಗಿ ವಿವಿಧ ಸೆಮಿನಾರ್,ಚರ್ಚೆ, ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಾಡಿಗೆ ನಾಡೇ ಕೊಂಡಾಡುವ ಶಕ್ತಿಯಾಗಿ ರವೀಂದ್ರರವರಿಗೆ ರವೀಂದ್ರನೇ ಸಾಟಿ ಎಂಬಂತಾಗಿದೆ. ೨೦೦೮ ರಲ್ಲಿ ಸರ್ಕಾರಿ ಪ್ರೌಢ ಶಾಲೆಗೆ ಬಡ್ತಿ ಹೊಂದಿ ಕೊಪ್ಪ ತಾಲೂಕಿನ ನಿಲುವಾಗಿಲು ಸರಕಾರಿ ಪ್ರೌಢಶಾಲೆಯ ಭಾಷಾ ಶಿಕ್ಷಕರಾಗಿ ಸೇವೆಯನ್ನು ಮುಂದುವರಿಸಿದರು. ಅಲ್ಲಿ ಸುಮಾರು  ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಲೋಕನಾಥಪುರ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡರು. ಕೊಪ್ಪದ ಬಿ.ಆರ್.ಸಿ.ಯಲ್ಲಿ ಬಿ. ಆರ್. ಪಿ. ಯಾಗಿ, ಪ್ರಭಾರಿ ಸಮನ್ವಯಾಧಿಕಾರಿ ಯಾಗಿ, ಶಿಕ್ಷಣ ಸಂಯೋಜಕರಾಗಿ, ಒಂದು ವರ್ಷಗಳ ಕಾಲ ಡಿಎಸ್ಇಆರ್‌ಟಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಅನುಭವ ಗಳಿಸಿದ ಇನ್ನೊಬ್ಬ ವ್ಯಕ್ತಿ ಶಿಕ್ಷಣ ಇಲಾಖೆಯಲ್ಲಿ ಇಲ್ಲ ಎಂದರೂ ತಪ್ಪಾಗಲಾರದು.

ಒಬ್ಬ ಪ್ರಾಥಮಿಕ ಶಾಲೆ ಶಿಕ್ಷಕರಾಗಿ, ನಂತರ ಬಡ್ತಿ ಹೊಂದಿ ಪ್ರೌಢಶಾಲೆಯ ಅಧ್ಯಾಪಕರಾಗಿ ಇವರು ಸಲ್ಲಿಸಿದ ಸೇವೆ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಲಕ್ಷಾಂತರ ಶಿಕ್ಷಕರಿಗೆ ಜೀವನದಿಯಂತೆ, ಹಲವು ಜೀವಗಳಿಗೆ ಉಸಿರಿನಂತೆ ವೃತ್ತಿ ಬದುಕನ್ನು ಪ್ರೀತಿಸಿ ಇತರರಿಗೆ  ಮಾದರಿಯಾದವರು.

ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು, ಇಲಾಖೆ ಇವರಿಗೆ ವಹಿಸಿದ ಜವಾಬ್ದಾರಿ ಹುದ್ದೆಗಳು

▪️ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಅಡಿಯಲ್ಲಿ ನಿಪುಣ್ ಭಾರತ ಆಧರಿಸಿದ ೨೦೨೩-೨೪ ನೇ ಸಾಲಿನ ಒಂದು,ಎರಡು, ಮೂರನೇ ತರಗತಿಯ ಕನ್ನಡ, ಗಣಿತ, ಆರೋಗ್ಯ ಮತ್ತು ಪರಿಸರ ಪಠ್ಯಪುಸ್ತಕ ರಚನಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ.

▪️ ಒಂದರಿಂದ ಮೂರನೇ ನಲಿ ಕಲಿ ತರಗತಿಗಳಿಗೆ ಸೇತುಬಂಧ ಚಟುವಟಿಕೆಗಳು ಹಾಗೂ ಒಂದನೇ ತರಗತಿಯ ವಿದ್ಯಾ ಪ್ರವೇಶ ಚಟುವಟಿಕೆಗಳ ಶಿಕ್ಷಕರ ಕೈಪಿಡಿಯ ರಚನಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ.

▪️ ಒಂದರಿಂದ ಮೂರನೇ ತರಗತಿ ಕಲಿಕಾ ಚೇತರಿಕೆ ಮರಾಠಿ, ಉರ್ದು, ತಮಿಳು, ತೆಲುಗು ಅಭ್ಯಾಸ ಚಟುವಟಿಕೆಗಳ ರಚನಾ ಸಮಿತಿಯ ಸಂಪನ್ಮೂಲ ವ್ಯಕ್ತಿಯಾಗಿಯೂ, ವಿಡಿಯೋ ಕಾನ್ಫರೆನ್ಸ್ ಮೂಲಕ ಶಾಲಾ ಶಿಕ್ಷಣ ಇಲಾಖೆಯ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ತರಬೇತಿಯ ಸಂಪನ್ಮೂಲ ವ್ಯಕ್ತಿಯನ್ನಾಗಿಯೂ ನೇಮಿಸಿದೆ.

 ಕರ್ನಾಟಕ ಸರ್ಕಾರ ಡಿ.ಎಸ್.ಇ.ಆರ್.ಟಿ.ಸಿ. / ಕೆ. ಟಿ .ಬಿ. ಎಸ್. ಬೆಂಗಳೂರು ವಹಿಸಿದ ಜವಾಬ್ದಾರಿ ಹುದ್ದೆಗಳು.

▪️ ರಾಷ್ಟ್ರ ಹಂತದ ಶಿಕ್ಷಕರ ದೀಕ್ಷಾ ಆನ್ಲೈನ್ ತರಬೇತಿ ಕೈಪಿಡಿ ರಚನೆಯ ಮುಖ್ಯಸ್ಥರನ್ನಾಗಿ ನೇಮಿಸಿದೆ.

▪️ ೨೦೦೭ ರಲ್ಲಿ ಒಂದರಿಂದ ಏಳನೇ ತರಗತಿಯ ಪ್ರಥಮ ಭಾಷೆ, ಐದರಿಂದ ಏಳನೇ ತರಗತಿಯ ದ್ವಿತೀಯ ಭಾಷೆ,ಆರು ಮತ್ತು ಏಳನೇ ತರಗತಿಯ ತೃತೀಯ ಭಾಷಾ ಪಠ್ಯಪುಸ್ತಕ ರಚನಾ ಸಮಿತಿಯ ನಿರ್ವಾಹಕ ಸದಸ್ಯರನ್ನಾಗಿ ನೇಮಿಸಿದೆ.

▪️ ಒಂದು ಮತ್ತು ಎರಡನೇ ತರಗತಿಯ ಕನ್ನಡೇತರ ಮಾಧ್ಯಮದ ಶಾಲಾ ಮಕ್ಕಳಿಗೆ ಸವಿ ಕನ್ನಡ ಪಠ್ಯಪುಸ್ತಕ ರಚನೆ ಮತ್ತು ಶಿಕ್ಷಕರ ಕೈಪಿಡಿ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ಸಿಸಿಇ ಆಧಾರಿತ ಸಾಧನ ಪುಷ್ಠಿ ಸಾಹಿತ್ಯ, ಪರಿಸ್ಕೃತ  ಸಾಧನ ಪುಷ್ಠಿ ಸಾಹಿತ್ಯ ರಚನಾ ಸಮಿತಿ, ಬಹುವರ್ಗ ಬೋಧನೆಯ ಬಗ್ಗೆ ಶಿಕ್ಷಕರ ಕೈಪಿಡಿ, ಕನ್ನಡ ಕುಸುಮ ಆರ್. ಎಂ. ಎಸ್. ಎ. ಶಿಕ್ಷಕರ ತರಬೇತಿ ಸಾಹಿತ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ಎ.ಜಿ. ಟಿ. ಶಿಕ್ಷಕರಿಗೆ ಪ್ರೇರಣಾ ಪರಿಸ್ಕೃತ ಸಾಹಿತ್ಯ ರಚನೆ, ಹೊಸ ಪಠ್ಯಪುಸ್ತಕಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ಸಾಹಿತ್ಯ ರಚನೆ, ಬಹುಮುಖಿ,ಬಹು ವರ್ಗ ಬೋಧನಾ ಸಾಹಿತ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ಎನ್. ಸಿ. ಎಫ್.- ೨೦೦೫ ಸಿಸಿಇ; ಆರ್. ಟಿ.ಇ.-೨೦೦೯ ಆಧಾರಿತ ಪರಿಚಯಾತ್ಮಕ ನಿರಂತರ ಸಾಹಿತ್ಯ ರಚನಾ ಸಮಿತಿ ಹಾಗೂ ಸೇತುಬಂಧ ಸಾಹಿತ್ಯ ರಚನಾ ಸಮಿತಿ,ಐದು ಮತ್ತು ಆರನೇ ತರಗತಿ ಹೊಸ ಪಠ್ಯಪುಸ್ತಕಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ಸಾಹಿತ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ೨೦೧೭ ರಲ್ಲಿ ಒಂದರಿಂದ ಐದನೇ ತರಗತಿಯ ಕಲಿಕಾ ಸೂಚಕಗಳು, ಕರ್ನಾಟಕ ಭಾಷಾ ನೀತಿ ನಿರೂಪಣಾ ಸಮಿತಿ, ಅಧಿಕಾರಿಗಳ ಹಾಗೂ ಮಾರ್ಗದರ್ಶಕರ ಶಾಲಾ ಭೇಟಿ ಮತ್ತು ಶಾಲಾ ಮೌಲ್ಯಮಾಪನ ನಮೂನೆಗಳ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ಪ್ರೌಢಶಾಲಾ ಶಿಕ್ಷಕರಿಗೆ ಪ್ರೇರಣಾ ಸೇವಾ ಪೂರ್ವ ತರಬೇತಿ ಸಂಚಿಕೆಯ ರಚನಾ ಸಮಿತಿ,ಎಸ್‌ಡಿಎಂಸಿ ತರಬೇತಿ ಸಾಹಿತ್ಯ ರಚನಾ ಸಮಿತಿ, ಬೆಳ್ಳಿ ಚುಕ್ಕಿ ೧’೨’೩ ರ ನಲಿ-ಕಲಿ ಸಂಬಂಧಿತ ಶಿಕ್ಷಕರ ತರಬೇತಿ ಸಾಹಿತ್ಯ ರಚನಾ ಸಮಿತಿ, ನಲಿಕಲಿ ಕಲಿಕಾ ಸಾಮಗ್ರಿ ಬಳಕೆ ಕೈಪಿಡಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ೨೦೧೫-೧೬ ನೇ ಸಾಲಿನಲ್ಲಿ ೧,೨,೩ ನೇ ತರಗತಿ ನಲಿ-ಕಲಿ ಕನ್ನಡ, ಗಣಿತ, ಪರಿಸರ ಅಧ್ಯಯನ ಅಭ್ಯಾಸ ಪುಸ್ತಕ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ೨೦೧೮-೧೯ ನೇ ಸಾಲಿನ ಗುರುಚೇತನ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಸಂಬಂಧಿತ  ಮಾಡಿ ಕಲಿಯೋಣ, ಆರಂಭಿಕ ಕಲಿಕೆ, ಯೋಗ- ಆರೋಗ್ಯ- ಮೌಲ್ಯ ಶಿಕ್ಷಣ ಶಿಕ್ಷಕರ ತರಬೇತಿ ಕೈಪಿಡಿ ರಚನೆಯ ಮುಖ್ಯಸ್ಥರನ್ನಾಗಿ ನೇಮಿಸಿದೆ.

▪️ ೨೦೧೮ ರಲ್ಲಿ ನಲಿ- ಕಲಿ ಮೈಕ್ರೋ ಅಧ್ಯಯನ, ನಲಿ-ಕಲಿ ದೂರ ಸಂಪರ್ಕ ತರಬೇತಿ, ನಲಿ-ಕಲಿ ಸಾಹಿತ್ಯ ರಚನೆ, ನಲಿ-ಕಲಿ ಮೈಕ್ರೋ ಅಧ್ಯಯನ, ನಲಿ-ಕಲಿ ತರಬೇತಿ ಸಂಚಿಕೆ ಹಾಗೂ ಸಾಹಿತ್ಯ ರಚನಾ ತಂಡ, ದೂರಸಂಪರ್ಕ ತರಬೇತಿ, ಮೌಲ್ಯಮಾಪನ ಸಿಸಿಇ ಇತ್ಯಾದಿ ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿದೆ.

▪️ ರಾಜ್ಯದ ಎಲ್ಲಾ ಜಿಲ್ಲೆಯ ಡಿ. ಡಿ. ಪಿ. ಐ., ಬಿ.ಇ.ಓ., ಬಿ. ಆರ್. ಸಿ. ಹಾಗೂ ಜಿಲ್ಲಾ, ತಾಲೂಕು ಹಂತದ ಸಂಪನ್ಮೂಲ ವ್ಯಕ್ತಿಗಳಿಗೆ ನಲಿ-ಕಲಿ ತರಬೇತಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿದೆ.

▪️ ಶಿಕ್ಷಕ ಪರ್ವ ರಾಷ್ಟ್ರಸಂಪನ್ಮೂಲ ಶಿಕ್ಷಕರ ಭಂಡಾರ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿದೆ.

▪️ ಟೆಲಿಪಿಲ್ಮ ಗೆ  ಚಿತ್ರಕಥೆ ರಚನೆ, ಆಕಾಶವಾಣಿ ಪಾಠಗಳ ರಚನೆ, ಬಹುವರ್ಗ ಬೋಧನೆಗೆ ಸಂಬಂಧಿಸಿದ ಟೆಲಿಕಾನ್ಪರೆನ್ಸ್, ನಲಿ-ಕಲಿ ಸಂಬಂಧಿತ ದೂರ ಸಂಪರ್ಕ ತರಬೇತಿ,ಸಂಭ್ರಮ ಸಾಹಿತ್ಯದ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿದೆ.

ರಾಜ್ಯದಿಂದ ಹೊರಗೆ ಮಾಡಿರುವ ಸೇವಾ ಕಾರ್ಯಗಳು

▪️ಎನ್.ಸಿ. ಇ.ಆರ್. ಟಿ. ನವದೆಹಲಿ ಇವರು ಗಣಿತ ಪಠ್ಯಪುಸ್ತಕ ವಿಶ್ಲೇಷಣೆಗಾಗಿ ಕರ್ನಾಟಕದ ಪ್ರತಿನಿಧಿಯಾಗಿ ನೇಮಿಸಿರುತ್ತಾರೆ.

▪️ ಎನ್. ಸಿ.ಇ. ಆರ್. ಟಿ. ನವದೆಹಲಿ ಇವರು ಚಟುವಟಿಕಾಧಾರಿತ ಶಿಕ್ಷಣದ ವಿಶ್ಲೇಷಕರಾಗಿ ಕರ್ನಾಟಕದ ಪ್ರತಿನಿಧಿಯಾಗಿ ನೇಮಿಸಿರುತ್ತಾರೆ.

▪️ ಎನ್. ಸಿ.ಇ.ಆರ್. ಟಿ .ನವ ದೆಹಲಿ ಇವರು ರೀಡಿಂಗ್ ಕಾರ್ಡ್ಸ್ ವಿಶ್ಲೇಷಣೆಗಾಗಿ ಕರ್ನಾಟಕದ ಪ್ರತಿನಿಧಿಯಾಗಿ ನೇಮಿಸಿರುತ್ತಾರೆ.

▪️ ಗುಜರಾತ್ ಅಹ್ಮದಾಬಾದ್ ನಲ್ಲಿ ಯುನಿಸೆಫ್ ವತಿಯಿಂದ ನಡೆದ ಶೈಕ್ಷಣಿಕ ಸಮಾವೇಶಕ್ಕೆ ಕರ್ನಾಟಕದ ಪ್ರತಿನಿಧಿಯಾಗಿ ನೇಮಿಸಿದೆ.

▪️ ಕೇರಳ ರಾಜ್ಯದ  ೩,೫,೭ನೇ ತರಗತಿ ಕನ್ನಡ ಪಠ್ಯಪುಸ್ತಕ ಪರಿಶೀಲನೆಗೆ ಕೇರಳ ಸರ್ಕಾರ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿದೆ.

▪️ ಎನ್.ಸಿ.ಇ. ಆರ್. ಟಿ. ನವದೆಹಲಿ ಇವರು NAS ಶೈಕ್ಷಣಿಕ ಅಧ್ಯಯನಕ್ಕಾಗಿ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿದೆ.

ಕೆ. ಎಸ್. ಕ್ಯೂ. ಎ. ಎ.ಸಿ. ಬೆಂಗಳೂರು ಈ ಸಂಸ್ಥೆಯವರು ಇವರಿಗೆ ವಹಿಸಿದ  ಜವಾಬ್ದಾರಿ  ಹುದ್ದೆಗಳು.

▪️ಕೆ.ಎಸ್. ಕ್ಯೂ.ಎ.ಎ. ಸಿ. ಬೇಸ್ ಲೈನ್ ಸ್ಟಡಿ ಸಾಹಿತ್ಯ ಹಾಗೂ ಸಾಮಗ್ರಿ ರಚನಾ ಸಮಿತಿ ಸದಸ್ಯರಾಗಿ ನೇಮಿಸಿದೆ.

▪️ ಕೆ.ಎಸ್.ಕ್ಯೂ.ಎ.ಎ.ಸಿ. ಬಗ್ಗೆ ಮುಖ್ಯ ಶಿಕ್ಷಕರ ತರಬೇತಿ ಕೈಪಿಡಿ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ರಾಜ್ಯದಾದ್ಯಂತ ಕಲಿಕಾ ಮಾನಕಗಳ ಬಗ್ಗೆ, ಮೌಲ್ಯಾಂಕನ ದ ಬಗ್ಗೆ ತರಬೇತಿ ನೀಡುವ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️  ಕೆ.ಎಸ್. ಕ್ಯೂ. ಎ.ಎ.ಸಿ. ರಾಜ್ಯಮಟ್ಟದ ಆಂತರಿಕ ಗುಣಮಟ್ಟ ಅಭಿವೃದ್ಧಿ ಸಮಿತಿ ಸದಸ್ಯರನ್ನಾಗಿ ನೇಮಿಸಿದೆ.

           ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಸಮರ್ಪಕ ಅನುಷ್ಠಾನಕ್ಕಾಗಿ ಇವರಿಗೆ ವಹಿಸಿದ ಜವಾಬ್ದಾರಿ ಹುದ್ದೆಗಳು

▪️ ಓದುವೆ ನಾನು ಕಾರ್ಡುಗಳ ಪರಿಷ್ಕರಣೆ ಸಮಿತಿ, ನಲಿ-ಕಲಿ ಒಂದನೇ ತರಗತಿ ಕನ್ನಡ ಅಭ್ಯಾಸ ಪುಸ್ತಕದ ಪರಿಷ್ಕರಣೆ ಸಮಿತಿ,ಸಾಮರ್ಥ್ಯ ನಿರ್ಣಯಾಂಕ ಕೈಪಿಡಿ ರಚನಾ ಸಮಿತಿ, ಟಿಎಲ್ಎಂ ಕಿಟ್ ಹಾಗೂ ಅದರ ಬಳಕೆ ಕೈಪಿಡಿ ಸಮಿತಿ, ಪರ್ಯಾಯ ಶಿಕ್ಷಣ ಕೈಪಿಡಿ ರಚನಾ ಸಮಿತಿ, ಕೆಜಿಬಿವಿ ಶಾಲಾ ಶಿಕ್ಷಕರಿಗೆ ತರಬೇತಿ ಕೈಪಿಡಿ ಸಮಿತಿ,ಚಿಣ್ಣರ ಅಂಗಳ ಒಂದರಿಂದ ಏಳನೇ ತರಗತಿಯ ವರೆಗಿನ ಶಾಲೆ ಬಿಟ್ಟ ಮಕ್ಕಳಿಗಾಗಿ ತರಬೇತಿ ಸಾಹಿತ್ಯ ರಚನಾ ಸಮಿತಿ ,ಶಿಕ್ಷಣ ಇಲಾಖೆಯ ಶಾಲಾ ಹಂತದಿಂದ ರಾಜ್ಯ ಹಂತದ ಎಲ್ಲಾ ಅಧಿಕಾರಿಗಳು,ಮುಖ್ಯ ಶಿಕ್ಷಕರಿಗೆ, ತರಬೇತಿ ಸಂಚಿಕೆಯ ಧನಾತ್ಮಕ ಚಿಂತನ ಸಮಿತಿ, ಸಮನ್ವಯ ಶಿಕ್ಷಣ ತರಬೇತಿ ಕೈಪಿಡಿ ಸಮಿತಿ,ನಲಿ- ಕಲಿ ಸಂಬಂಧಿತ ಸಂಭ್ರಮ ಸಾಹಿತ್ಯ ರಚನಾ ಸಮಿತಿ ಸದಸ್ಯರಾಗಿ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಶಾಲೆ ಬಿಟ್ಟ ಮಕ್ಕಳಿಗಾಗಿ ಚಿಣ್ಣರ ಅಂಗಳ ಪರಿಷ್ಕರಣೆ ಸಮಿತಿಯ ಸಂಪನ್ಮೂಲ ವ್ಯಕ್ತಿಯಾಗಿಯೂ, ಚಂದನ ವಾಹಿನಿಯಲ್ಲಿ ನಲಿ- ಕಲಿ ಸಂವಾದದ ಫ್ಯಾನ್ ಲಿಸ್ಟ್, ಆಕಾಶವಾಣಿಯಲ್ಲಿನ ನೇರ ಶೈಕ್ಷಣಿಕ ಸಮಾಜ ಕಾರ್ಯಕ್ರಮದಲ್ಲಿ ಫ್ಯಾನ್ ಲಿಸ್ಟ್ ಆಗಿಯೂ, ಒಂದರಿಂದ ಮೂರನೇ ತರಗತಿ ಅಭ್ಯಾಸ ಚಟುವಟಿಕೆ ರಚನಾ ಸಮಿತಿಯ ಮುಖ್ಯಸ್ಥರಾಗಿಯೂ, ಕೇರಳ, ಗೋವಾ,ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಗೆ ಇಲಾಖೆಯ ರಾಜ್ಯ ಹಂತದ ಅಧಿಕಾರಿಗಳ ಜೊತೆ ಕರ್ನಾಟಕದ ಪ್ರತಿನಿಧಿಯಾಗಿ ಶೈಕ್ಷಣಿಕ ಅಧ್ಯಯನ ಪ್ರವಾಸ ಕೈಗೊಂಡಿರುತ್ತಾರೆ.

ಕರ್ನಾಟಕ ಸರಕಾರ ಇವರಿಗೆ ವಹಿಸಿದ ಜವಾಬ್ದಾರಿ ಹುದ್ದೆಗಳು

▪️ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಅಡಿಯಲ್ಲಿ ಇ.ಸಿ. ಸಿ. ಇ.ಪಠ್ಯಕ್ರಮ ರಚನೆಯ ರಾಷ್ಟ್ರಮಟ್ಟದ ಎರಡು ಸಮಿತಿಗಳಿಗೆ ಸದಸ್ಯರನ್ನಾಗಿ ನೇಮಿಸಿದೆ.

▪️ ಕರ್ನಾಟಕ ಸರಕಾರದ ಇ. ಕ್ಯೂ. ಎಂ. ಸಿ. ಶೈಕ್ಷಣಿಕ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️  ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಅಡಿಯಲ್ಲಿ ರಾಜ್ಯ ಸಂಪನ್ಮೂಲ ಗುಂಪು ಎಸ್.ಆರ್. ಜಿ. ಸದಸ್ಯರಾಗಿ ನೇಮಿಸಿದೆ.

▪️ ಎಫ್.ಎಲ್. ಎನ್. ರಾಜ್ಯ ಅನುಷ್ಠಾನ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ಕರ್ನಾಟಕ ರಾಜ್ಯ ಶಿಕ್ಷಣ ಗುಣಮಟ್ಟ ಮೇಲ್ವಿಚಾರಣಾ  ಕೋಶ (ಇ. ಕ್ಯೂ. ಎಂ. ಸಿ.) ಸದಸ್ಯರನ್ನಾಗಿ ನೇಮಿಸಿದೆ.

▪️ ಎಲ್. ಕೆ. ಜಿ./ ಯು. ಕೆ.ಜಿ. ಪಠ್ಯಪುಸ್ತಕ ರಚನಾ ಸಮಿತಿ ಹಾಗೂ ಎಫ್.ಎಲ್. ಎನ್. ಕಲಿಕಾಫಲ ರಚನಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ.

▪️ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಸಂಬಂಧಿತ ಗುರುಚೇತನ, ಬೆಳ್ಳಿಮೋಡ,ನಲಿ-ಕಲಿ ಕನ್ನಡ, ಗಣಿತ, ಪರಿಸರ ಅಧ್ಯಯನ, ನಲಿ-ಕಲಿ ಸಮಗ್ರ ಶಿಕ್ಷಕರ ಕೈಪಿಡಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ.

▪️ ರಾಷ್ಟ್ರ ಹಂತದಲ್ಲಿ ಯೋಗ, ಜೀವನ ವಿಜ್ಞಾನ ತರಬೇತಿಯ   ಜಯಪುರ ,ರಾಜಸ್ಥಾನ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ಪ್ರತಿನಿಧಿಯಾಗಿ ನೇಮಿಸಿದೆ.

▪️ ಪ್ರೌಢಶಾಲಾ ಶಿಕ್ಷಕರಿಗೆ ಕೈ ದೀವಿಗೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದಾರಿದೀಪ ಮಾರ್ಗದರ್ಶಿ ಪುಸ್ತಕದ ಸದಸ್ಯರನ್ನಾಗಿ ನೇಮಿಸಿದೆ.

▪️ ಅಜೀಮ್ ಪ್ರೇಮ್ ಜಿ ಫೌಂಡೇಶನ್ ರವರು ಗುಲ್ಬರ್ಗ, ಯಾದಗಿರಿ,ಬಳ್ಳಾರಿ ಜಿಲ್ಲೆಗಳಲ್ಲಿ ನಲಿ-ಕಲಿ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿದೆ.

▪️ ಸುಮಾರು ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಶಿಕ್ಷಣ ವಾರ್ತೆ ಮಾಸ ಪತ್ರಿಕೆಗೆ ಮಾದರಿಯಾಗುವ ರಾಜ್ಯ ಹಂತದ ಲೇಖನ ಪ್ರಕಟಣೆಗೆ ಶಿಕ್ಷಣ ಇಲಾಖೆ ಇವರಿಗೆ ಜವಾಬ್ದಾರಿ ನೀಡಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದವರು ಇವರಿಗೆ ನೀಡಿದ ಜವಾಬ್ದಾರಿ ಹುದ್ದೆಗಳು

▪️ ೭ನೇ ತರಗತಿ ಕನ್ನಡ ಪಠ್ಯಪುಸ್ತಕ ರಚನೆ ಮತ್ತು ಅಭ್ಯಾಸ ಪುಸ್ತಕ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

▪️ ಒಂದು ಮತ್ತು ಎರಡನೇ ತರಗತಿ ಕನ್ನಡೇತರ  ಮಾಧ್ಯಮದ ಶಾಲಾ ಮಕ್ಕಳಿಗೆ ಸವಿ ಕನ್ನಡ ಪಠ್ಯಪುಸ್ತಕ ಮತ್ತು ಶಿಕ್ಷಕರ ಕೈಪಿಡಿ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇವರಿಗೆ ನೀಡಿದ ಜವಾಬ್ದಾರಿ ಹುದ್ದೆಗಳು

ಫ್ರಾನ್ಸ್,ಅಮೇರಿಕಾ, ಯುರೋಪ್, ಜಪಾನ, ಜರ್ಮನಿ, ಸೌದಿ ಅರೇಬಿಯಾ, ಇಂಗ್ಲೆಂಡ್, ಕೆನಡಾ ಇತ್ಯಾದಿ ಜಗತ್ತಿನ ೨೫ ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿರುವ ಕನ್ನಡಿಗರಿಗೆ ಕನ್ನಡ ಕಲಿಸುವ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ನೇಮಿಸಿದೆ. ಗಡಿ ಭಾಗದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷಾ ಪ್ರಯೋಗಾಲಯ ಸ್ಥಾಪನಾ ಸಮಿತಿಯ ಮುಖ್ಯಸ್ಥರನ್ನಾಗಿಯೂ,ಕನ್ನಡ ಭಾಷಾ ಪ್ರಯೋಗಾಲಯ ಕೈಪಿಡಿ ರಚನಾ ಸಮಿತಿಯ ಮುಖ್ಯಸ್ಥರನ್ನಾಗಿಯೂ ನೇಮಿಸಿದೆ.

ಇತರೇ ಇಲಾಖೆಗಳಿಗಾಗಿ ಮಾಡಿದ ಇವರ ಕಾರ್ಯ ಸಾಧನೆ.

ಮೈಸೂರು ವಿಶ್ವವಿದ್ಯಾಲಯ ಹಾಗೂ ದಕ್ಷಿಣ ಭಾರತ ಪ್ರಾದೇಶಿಕ ಭಾಷಾ ಕೇಂದ್ರದವರು ಏರ್ಪಡಿಸಿದ ಸಮಕಾಲೀನ ಕನ್ನಡ ವ್ಯಾಕರಣ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ತೊಡಗಿಸಿಕೊಂಡ ಅನುಭವ ಇವರಿಗಿದೆ. ರಾಜ್ಯ ಆಯುಷ್ ಇಲಾಖೆಯವರು ಮಕ್ಕಳಿಗಾಗಿ ಯೋಗ ಪುಸ್ತಕ, ಯೋಗ ಸಂಜೀವಿನಿ ಆರೋಗ್ಯ ಪುಸ್ತಕ ಮಾಲೆಯ ಸಮಿತಿ ಸದಸ್ಯರಾಗಿಯೂ ತಮ್ಮ ಅಪರಿಮಿತ ಅನುಭವ ಹಂಚಿಕೆ ಮಾಡಿರುತ್ತಾರೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಯ ಆಯ್ದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಯೋಗ ,ಆರೋಗ್ಯ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿಯೂ ತೊಡಗಿಸಿಕೊಂಡಿರುತ್ತಾರೆ. ಅಂತರಾಷ್ಟ್ರೀಯ ಕಾರ್ಮಿಕ ಇಲಾಖೆ ಆಯೋಜಿಸಿದ ಒಂದರಿಂದ ನಾಲ್ಕನೇ ತರಗತಿಯ ಕನ್ನಡ ಶಿಕ್ಷಕರ ಕೈಪಿಡಿ ರಚನೆಯ ಸಂಪನ್ಮೂಲ ವ್ಯಕ್ತಿಯಾಗಿ, ಅಂತರಾಷ್ಟ್ರೀಯ ಕಾರ್ಮಿಕ ಇಲಾಖೆ ಐಎಲ್ಓ ಗಾಗಿ ಒಂದರಿಂದ ಆರನೇ ತರಗತಿಯ ಅರಳುಮಲ್ಲಿಗೆ ಕನ್ನಡ ಪುಸ್ತಕ ಆಧಾರಿತ ಶಿಕ್ಷಕರ ಕೈಪಿಡಿ ಹಾಗೂ ಪಠ್ಯಪುಸ್ತಕ ರಚನಾ ಸಮಿತಿಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಸದಸ್ಯರಾಗಿ ಬದುಕಿದ್ದಕ್ಕೂ ಮಕ್ಕಳಿಗಾಗಿ ಜೀವತೆತ್ತ ಹಿರಿಯ ಜೀವ ಇದಾಗಿದೆ.

ಮೊದಲು ಆಳಾಗುವುದನ್ನು ಕಲಿ, ಆಗ ನಾಯಕನ ಅರ್ಹತೆ ಬರುತ್ತದೆ. ಒಂದು ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯ ಎಂಬ ಸ್ವಾಮಿ ವಿವೇಕಾನಂದರವರ ಹಿತನುಡಿಯಂತೆ  ಆರ್. ಡಿ. ರವೀಂದ್ರ ಎಂದೇ ನಾಡಿನಾದ್ಯಂತ ಪರಿಚಿತರಾಗಿ ರಾಷ್ಟ್ರ ,ಅಂತರಾಷ್ಟ್ರೀಯ ಮಟ್ಟದ ಸಾಧನೆಗೈದ ಓವ೯ ಪ್ರಾರ್ಥಮಿಕ ಶಾಲಾ ಶಿಕ್ಷಕರಿಂದ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಶಿಕ್ಷಣ ಇಲಾಖೆಯ ದೈತ್ಯ ಶಕ್ತಿ. ತನ್ನ ವೃತ್ತಿ ಬದುಕನ್ನು ಪ್ರೀತಿಸುವುದರ ಮೂಲಕ ಶಿಕ್ಷಣ ಇಲಾಖೆಯ ಮುಖ ಮುದ್ರೆಯಂತೆ ಕೆಲಸ ನಿರ್ವಹಿಸಿ ಅಪಾರ ಅನುಭವದೊಂದಿಗೆ ಸರಳ ಸಜ್ಜನಿಕೆಗೆ ಹೆಸರಾದ ನಾಡು ಕಂಡ ಒಬ್ಬ ಅಪರೂಪದ ಸಾಧಕ ರವೀಂದ್ರ ಅವರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಇಡೀ ನಾಡಿಗೆ ನಾಡೇ ಹೆಮ್ಮೆ ಪಡುವಂತಾಗಿದೆ. ಅವರ ಬದುಕು ನಿತ್ಯ ಹಸಿರಾಗಿ ನಾಡಿನ ಶಿಕ್ಷಕರಿಗೆ ಸದಾ ಮಾರ್ಗದರ್ಶಕರಾಗಿ ಅವರ ಸೇವೆ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.

✍️ಪಿ.ಆರ್. ನಾಯ್ಕ,  ನಲಿ-ಕಲಿ ಶಿಕ್ಷಕ ಹೊನ್ನಾವರ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*