ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾದ, ಸುಜ್ಞಾನಿಯಾದ ಶಿಕ್ಷಕ ಮಾತ್ರ ತನ್ನ ಸುತ್ತ ಸ್ವರ್ಗಸದೃಶ ವಾತಾವರಣ ನಿರ್ಮಿಸಬಲ್ಲ. ಅವರೇ ನಿಜವಾದ ಮಾನ್ಯತೆಗೆ, ಅಭಿನಂದನೆಗೆ ಅಹ೯ರು. ಯಾವುದೇ ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಯಂತೆ ಕರ್ತವ್ಯವೇ ದೇವರೆಂದು ನಂಬಿ ಸದಾ ಮಕ್ಕಳ ಒಳಿತಿಗಾಗಿ ದುಡಿಯುವವರು ಗೇರುಸೊಪ್ಪೆ ಪ್ರೌಢಶಾಲೆ ಗಣಿತ ಶಿಕ್ಷಕ ಬಾಬು ಲಚ್ಮಯ್ಯ ನಾಯ್ಕರವರು.
ವ್ಯಕ್ತಿಯೊಬ್ಬನ ಬದುಕು ವೃತ್ತಿಯಲ್ಲಿನ ನಡೆ-ನುಡಿ ಮಾದರಿಯಾದಾಗಲೇ ಅವರ ಅಂತಃಶಕ್ತಿ ಇಮ್ಮಡಿಗೊಂಡು ಮಾಡುವ ಕೆಲಸ ಮಾದರಿಯಾಗಬಲ್ಲದು ಎಂಬುದಕ್ಕೆ ಕನ್ನಡಿಯಂತಿರುವ ಬಾಬು ನಾಯ್ಕರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದ್ದು
೧೯೯೮ ರಲ್ಲಿ. ಹಾನಗಲ್ ತಾಲೂಕಿನ ಸರಕಾರಿ ಪ್ರೌಢಶಾಲೆ ಶಿರಗೋಡದಲ್ಲಿ ಹದಿಮೂರು ವರ್ಷ ಸೇವೆ ಸಲ್ಲಿಸಿ, ೨೦೧೧ ರಂದು ಗೇರುಸೊಪ್ಪೆ ಪ್ರೌಢಶಾಲೆಗೆ ವರ್ಗವಾಗಿ ಬಂದರು. ಕಳೆದು ಕೂಡಿಸಿದರೂ, ಎಲ್ಲೂ ಮುನಿಯದ, ಸಿಕ್ಕವರಿಗೆ ಸಿಹಿಯಾಗುವ ಸಕ್ಕರೆಯಂದದ ವ್ಯಕ್ತಿತ್ವ ಅವರದ್ದಾಗಿದೆ.
ಬಾಲ್ಯದ ಬಡತನ ಜೀವನದ ಪೂರ್ಣ ಬದುಕಿಗೆ ಪೂರಕವಾಗದಿದ್ದರೂ ಕಲಿಯಬೇಕೆನ್ನುವ ಹಂಬಲವೇ ಅಧ್ಯಯನಶೀಲತೆಯತ್ತ ಮುಖ ಮಾಡಲು ಪ್ರೇರೇಪಿಸಿತು. ಬಡಕುಟುಂಬದಿಂದ ಬದುಕನ್ನು ಆರಂಭಿಸಿ ಓದಿನ ಮೂಲಕ ಗುರಿಯೆಡೆಗೆ ಸಾಗಿ, ಸಾಧನೆ ಮಾಡಿ,ನಿಷ್ಕಲ್ಮಶ ಮನಸ್ಸಿನಿಂದ ನೂರಾರು ವಿದ್ಯಾರ್ಥಿಗಳನ್ನು ತಮ್ಮ ಮುಖವಾಣಿಯಂತೆ ರೂಪಿಸಿ, ನಿರೂಪಿಸಿದವರು ಗೇರುಸೊಪ್ಪೆಯ ಗಣಿತ ಶಿಕ್ಷಕರು.
ಮೂಲತಹ ಭಟ್ಕಳ ತಾಲೂಕಿನ ಕೊಣಾರದವರಾದರೂ, ಮುಂಡಳ್ಳಿಯ ಅಜ್ಜಿ ಮನೆಯಲ್ಲಿ ಬದುಕಿನ ಪಯಣವನ್ನು ಆರಂಭಿಸಿದರು. ೧೯೭೪ ರಲ್ಲಿ ತಂದೆ ಲಚ್ಮಯ್ಯ ನಾಯ್ಕ,ತಾಯಿ ಲಕ್ಷ್ಮಿ ನಾಯ್ಕರ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಮಂಡಳ್ಳಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ, ಪ್ರೌಢ ಶಿಕ್ಷಣವನ್ನು ನ್ಯೂ ಇಂಗ್ಲಿಷ್ ಸ್ಕೂಲ್ ಭಟ್ಕಳದಲ್ಲಿಯೂ, ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣವನ್ನು, ಸ್ನಾತಕೋತ್ತರ ಪದವಿಯನ್ನು ಶಿವಮೊಗ್ಗದಲ್ಲಿಯೂ, ಎಂ.ಎಡ್. ಪದವಿಯನ್ನು ಮೈಸೂರಿನಲ್ಲಿ ಪೂರೈಸಿದರು. ಓದಿಗೆ ಎಂದೂ ಅಡ್ಡಿಯಾಗದ ಬಡತನವನ್ನು ಮೆಟ್ಟಿನಿಂತು ಸುತತ ಪ್ರಯತ್ನದ ಮೂಲಕ ಓದು ಮುಗಿಸಿದ ಪ್ರತಿಭಾವಂತರು.
ಬಡತನವನ್ನು ಹಾಸುಂಡು ಬೆಳೆದ ಬಾಬು ನಾಯ್ಕರು ತುಳಿತಕ್ಕೊಳಗಾದವರ, ದಲಿತರ, ಶೋಷಿತರ,ನಿರ್ಗತಿಕರ, ಅಸಹಾಯಕರ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬದುಕನ್ನು ಅರಿತು ಅಂತಹ ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನಹರಿಸುವ ಗಣಿತಜ್ಞರು ಕೂಡ. ಮಕ್ಕಳಿಗೆ ಕಬ್ಬಿಣದ ಕಡಲೆಯಂತಿರುವ ಗಣಿತವನ್ನು ಸುಲಿದ ಬಾಳೆಯ ಹಣ್ಣಿನಂದದಿ ಸುಲಭಿಕರಿಸಿ ಹೇಳುವ ಜಾಣ್ಮೆ ಅರಿತ ಮೋಡಿಗಾರರು ಹೌದು. ಕಳೆದ ಹಲವು ವರ್ಷಗಳಿಂದ ಗೇರುಸೊಪ್ಪೆಯಂತ ಗ್ರಾಮೀಣ ಪ್ರದೇಶದ ನುರಿತ ಗಣಿತ ಶಿಕ್ಷಕರು ತೆರೆದ ಪುಸ್ತಕದಂತೆ ಗಣಿತವನ್ನು ಸುಲಭೀಕರಿಸಿ ಮಕ್ಕಳ ಮನಸ್ಸಿಗೆ ನಾಟಿ, ಹಲವು ವರ್ಷಗಳಿಂದ ಗಣಿತದಲ್ಲಿ ಶೇಕಡಾ ೯೦ ರಷ್ಟು ಸಾಧನೆ ಮಾಡಿರುವುದು ಇವರ ವೃತ್ತಿಗೌರವ ಹೆಚ್ಚಿಸಿದೆ. ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಾಲ್ಕು ವಿದ್ಯಾರ್ಥಿಗಳು ರಾಜ್ಯದ ಗಮನ ಸೆಳೆಯಲು ಇವರ ಗಣಿತ ಲೆಕ್ಕಾಚಾರವು ಮಹತ್ವದ್ದಾಗಿರುತ್ತದೆ.
ತಾಲೂಕ ಗಣಿತ ಸಂಘದ ಕಾರ್ಯದರ್ಶಿಯಾಗಿ, ಪ್ರೌಢಶಾಲಾ ಶಿಕ್ಷಕ ಸಂಘದ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರಿತರೆ ಶರಣ ಮರೆತರೆ ಮಾನವ ಎಂದು ಅರ್ಥಪೂರ್ಣವಾದ ಉಪದೇಶ ಮಾಡಿದ್ದಾರೆ ಬಸವಣ್ಣನವರು. ಅರಿತರೆ ಪ್ರಗತಿ ಮರೆತರೆ ವಿಗತಿ ಎಂದು ತಿಳಿಯಬಹುದಾಗಿದೆ. ಸದಾ ಪ್ರಗತಿಪರ ಚಿಂತನೆಯ ಮೂಲಕ ಮುಂದಡಿಯಿಡುತ್ತಿರುವ ಸರಳ, ಸಜ್ಜನ ಬಾಬು ನಾಯ್ಕರವರು ಶಿಕ್ಷಣದ ಬಗೆಗಿನ ಮೌನಕ್ರಾಂತಿ ಅವರನ್ನು ಜಿಲ್ಲಾ ಪ್ರಶಸ್ತಿ ಪುರಸ್ಕಾರದವರೆಗೆ ತಂದು ನಿಲ್ಲಿಸಿದೆ. ಜ್ಞಾನದ ಮೂಲವೇ ಗುರು ಸೇವೆ ಎಂಬ ಮಹತ ಕಾಯ೯ದ ಮೂಲಕ ವಿದ್ಯಾರ್ಥಿಗಳ ಪಾಲಿಗೆ ಬಂಧುವಾಗಿ, ದೈವವಾಗಿ, ಸ್ನೇಹಜೀವಿಯಾಗಿ, ರಕ್ಷಕರಾಗಿ, ಮಾರ್ಗದರ್ಶಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ‘ಸರ್ವ ದ್ರವ್ಯೇಷು ವಿದ್ಯೈವ’ ಎಲ್ಲ ದ್ರವ್ಯಗಳಿಗಿಂತಲೂ ವಿದ್ಯೆಯೆಂಬ ಅತ್ಯುತ್ತಮ ದ್ರವ್ಯವನ್ನು ಹಂಚುತ್ತಿರುವ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಿಮ್ಮ ಕರ್ತವ್ಯನಿಷ್ಠೆ, ಮಕ್ಕಳ ಮೇಲಿನ ಅಪರಿಮಿತ ಕಾಳಜಿಗೆ ಇನ್ನಷ್ಟು ಪ್ರಶಸ್ತಿ-ಪುರಸ್ಕಾರಗಳು ನಿಮ್ಮನ್ನರಸಿ ಬರಲಿ ಎಂದು ಹಾರೈಸುತ್ತೇನೆ.
Be the first to comment