ವೃತ್ತಿ ಬದುಕಿನ ಸಾಧಕ, ಪ್ರಾಧ್ಯಾಪಕ ಹೊನ್ನಾವರದ ಡಾ. ಎಂ. ಆರ್. ನಾಯಕ

ತಮ್ಮ ಪ್ರಾಧ್ಯಾಪಕ ವೃತ್ತಿ ಬದುಕಿನಲ್ಲಿ ಬೆಳ್ಳಿ ತಾರೆಯಂತೆ ಮಿನುಗುತ್ತಾ, ಅಧ್ಯಯನಶೀಲ ಪ್ರವೃತ್ತಿಯಿಂದಾಗಿ ಹೊಸ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತಾ ಒಬ್ಬ ಅತ್ಯುತ್ತಮ ಗುರುಗಳಾಗಿ, ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡವರು ಹೊನ್ನಾವರದ ಎಸ್. ಡಿ.ಎಂ. ಕಾಲೇಜಿನ ಡಾ. ಮಾರುತಿ ರಾಮ ನಾಯಕರವರು. ಮೂಲತ: ಅಂಕೋಲಾ ತಾಲೂಕಿನ ಹಿಚ್ಕಡದ ಸ್ವಾತಂತ್ರ್ಯ ಹೋರಾಟಗಾರ ರಾಮ ವೆಂಕಟ ನಾಯಕ ಮತ್ತು ತಾಯಿ ದುರ್ಗಾಪರಮೇಶ್ವರಿಯವರ ಮಗನಾಗಿ ಜನಿಸಿ, ಪದವಿವರೆಗೆ ಓದಿದ್ದು ಅಂಕೋಲಾದಲ್ಲೆ. ಸ್ನಾತಕೋತ್ತರ ಪದವಿ ರಾಜನೀತಿ ಶಾಸ್ತ್ರ ಎಂಪಿಲ್, ಪಿಎಚ್ ಡಿ ಪದವಿವರೆಗಿನ ಶಿಕ್ಷಣವು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರೈಸಿದರು.

ಡಾ. ಎಮ್. ಆರ್. ನಾಯಕರು ಭೀಷ್ಮನಾಗಿ ಅಭಿನಯಿಸಿದ ಯಕ್ಷಗಾನದ ಒಂದು ತುಣುಕು….. ನೋಡಿ….

ಬಾಲ್ಯದಲ್ಲಿ ಅಧ್ಯಯನದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಯಕ್ಷಗಾನ ನೋಡುವ ಗೀಳನ್ನು ರೂಢಿಸಿಕೊಂಡಿದ್ದರು. ಶಿಸ್ತು, ಸಮಯಪಾಲನೆ,ನೇರ ಮಾತುಗಳ ವ್ಯಕ್ತಿತ್ವ ರೂಢಿಸಿಕೊಂಡ ಡಾ. ಮಾರುತಿ ನಾಯಕರವರು ೧೯೮೮ ರಲ್ಲಿ ಹೊನ್ನಾವರದ ಎಸ್. ಡಿ.ಎಂ. ಕಾಲೇಜಿನ ರಾಜನೀತಿ ಶಾಸ್ತ್ರದ ಪ್ರಾಧ್ಯಾಪಕರಾಗಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. ತಮ್ಮ ಕ್ರಿಯಾಶೀಲ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳನ್ನು ಸಂಘಟಿಸಿ ಸ್ಪೂರ್ತಿ ರಂಗವೇದಿಕೆಯ ಕಾರ್ಯದರ್ಶಿಯಾಗಿ ಮಕ್ಕಳಲ್ಲಿ ಕಲೆ, ಸಾಹಿತ್ಯದ ಅಭಿರುಚಿ ಮೂಡಿಸಿ ನಾಟಕ ಸಪ್ತಾಹ ಮಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಏಳು ವರ್ಷಗಳ ಕಾಲ ಎನ್.ಎಸ್. ಎಸ್. ಅಧಿಕಾರಿಗಳಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿ ಹಲವು ಪ್ರದೇಶಗಳಲ್ಲಿ ಪ್ರದರ್ಶಿಸಿ ಕಲಾರಾಧಕರೆಸಿಕೊಂಡರು.
ತಮ್ಮ ೩೩ ವರ್ಷಗಳ ಸುದೀರ್ಘ ಸೇವೆಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುವುದರ ಮೂಲಕ ಅವರಲ್ಲಿರುವ ಸುಪ್ತ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸಿದ ಗುರುಗಳೆನಿಸಿಕೊಂಡರು.

ರಾಜನೀತಿ ಶಾಸ್ತ್ರದ ಪ್ರಾಧ್ಯಾಪಕರಾದರೂ, ಯಕ್ಷಗಾನ ಕಲೆಯ ಬಗ್ಗೆ ತುಂಬಾ ಆಸಕ್ತಿ ಇರುವುದರಿಂದ ಹೋಸ್ತೋಟ ಮಂಜುನಾಥ ಭಾಗವತ, ಉಮೇಶ ಭಟ್ಟ, ಕೃಷ್ಣ ಭಂಡಾರಿಯವರನ್ನು ಗುರುಗಳನ್ನಾಗಿ ಸ್ವೀಕರಿಸಿ, ಯಕ್ಷಗಾನದ ತಾಳಗಳನ್ನು ಕಲಿತರು.ವೃತ್ತಿ ಕಲಾವಿದರಂತೆ ಕುಣಿತ,ನರ್ತನ,ಗತ್ತುಗಾರಿಕೆ ಮತ್ತು ಉತ್ತಮ ಮಾತುಗಾರಿಕೆಯಿಂದಾಗಿ ಅಲ್ಪಕಾಲದಲ್ಲಿಯೇ ಆ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಯಕ್ಷಗಾನ ದಿಗ್ಗಜ ರಂಗಕಲಾವಿದರೆನಿಸಿಕೊಂಡ ಚಿಟ್ಟಾಣಿ, ಗೋಡೆ ನಾರಾಯಣ ಹೆಗಡೆ,ಜಲವಳ್ಳಿ ವೆಂಕಟೇಶ, ಶ್ರೀಪಾದ ಹೆಗಡೆ ಹಾಡಿನಬಾಳ, ವಿದ್ಯಾಧರವರೊಂದಿಗೆ ವೇಷ ಕಟ್ಟಿ ಸೈ ಎನಿಸಿಕೊಂಡರು.

ಕರಾವಳಿಯ ಸತ್ವಪೂರ್ಣವಾದ ಕಲೆಯೊಂದನ್ನು ತಮ್ಮ ಕಲಾಭಿವ್ಯಕ್ತಿ ಮಾಧ್ಯಮವಾಗಿ ದುಡಿಸಿಕೊಂಡು, ಸತತ ಪರಿಶ್ರಮ, ಅಧ್ಯಯನ ಶೀಲದೊಂದಿಗೆ ಪಾತ್ರಕ್ಕೆ ಜೀವ ತುಂಬಿ ಸಮಾಜಮುಖಿ ಚಿಂತನೆಯ ಮೂಲಕ ಜಿಲ್ಲೆಯ ತುಂಬೆಲ್ಲ ಹೆಸರು ಮಾಡಿದರು.ರಂಗ ಪ್ರವೇಶಿಸಿದಾಗಿನಿಂದ, ನಿರ್ಗಮಿಸುವವರೆಗೆ ಪ್ರೇಕ್ಷಕರನ್ನು ತನ್ನೆಡೆಗೆ ಎಳೆದುಕೊಳ್ಳುತ್ತಾ ಕೌರವನ ಪಾತ್ರಕ್ಕೆ ಜೀವ ತುಂಬಿ ನಮ್ಮನ್ನು ಮಹಾಭಾರತದ ಕಾಲಕ್ಕೆ ಕೊಂಡೊಯ್ಯುವ ಪರಿ ಅವರ ಬಹುಮುಖ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.ಜಾಂಬವಂತ, ಅರ್ಜುನ, ಭೀಮ,ಬಲರಾಮ, ವಾಲಿ ಇನ್ನಾವುದೇ ಪಾತ್ರವಿರಲಿ ಅದನ್ನು ಅರ್ಥೈಸುವ ಪರಿ ನೋಡುಗರನ್ನು ಭಾವುಕರನ್ನಾಗಿ ಮಾಡದಿರಲಾರದು. ಹಿತಮಿತವಾದ ನಿರರ್ಗಳ ಮಾತು,ಅಭಿನಯ ಚಾತುರ್ಯ, ಹೆಜ್ಜೆಹಾಕುವ ಪರಿ ನೋಡಿದಾಗಲೇ ಇವರೊಬ್ಬ ಪರಿಪೂರ್ಣ ಕಲಾವಿದರೆನ್ನುವುದರಲ್ಲಿ ಅನುಮಾನವಿಲ್ಲ.

ಒಬ್ಬ ಕಾಲೇಜು ಪ್ರಾಧ್ಯಾಪಕರಾಗಿ ನಾಲ್ಕು ಗೋಡೆಗೆ ಸೀಮಿತವಾಗಿರದೇ, ತಮ್ಮ ಕ್ರಿಯಾಶೀಲ ಪ್ರವೃತ್ತಿಯಿಂದಾಗಿ ಕುಮಟಾದ ರಂಗ ಸಾಂಸ್ಕೃತಿಕ ಸಂಘಟನೆಯ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಘಟಿಸಿ, ನಾಡಿನ ಅನೇಕ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಕುಮಟಾದ ಕಲಾಗಂಗೋತ್ರಿ ಸಂಘಟನೆಯ ಸದಸ್ಯರು ಕೂಡ.ಕುಮಟಾದ ವಿವೇಕ ನಗರದಲ್ಲಿ ವಿಕಾಸ ಸಂಘದ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುತ್ತಾರೆ. ಲಾಯನ್ಸ್ ಸಂಸ್ಥೆಯ ಸದಸ್ಯರಾಗಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವಿದೆ. ಇವರ ಸಮಾಜಸೇವೆ, ಸಂಘಟನೆ ಮತ್ತು ಯಕ್ಷಗಾನ ಕಲೆಯನ್ನು ಮೆಚ್ಚಿ ಮುರುಡೇಶ್ವರದ ಯಕ್ಷರಕ್ಷೆ, ಯಶೋಧರ ನಾಯ್ಕ ಟ್ರಸ್ಟ್, ಹುಬ್ಬಳ್ಳಿಯ ಮಠಗಲ್ಲಿ, ಹೊನ್ನಾವರದ ಖಾರ್ವಿ ಸಮುದಾಯ, ಬೇಲೆಕೇರಿ ಯುವಕ ಸಂಘ ಇನ್ನು ಹಲವು ಸಂಘಟನೆ ಇವರನ್ನು ಗುರುತಿಸಿ, ಗೌರವಿಸಿದೆ.

ತನ್ನ ವೃತ್ತಿ ಮತ್ತು ಪ್ರವೃತ್ತಿ ಜೀವನದಲ್ಲಿ ಎಳ್ಳಷ್ಟು ಚ್ಯುತಿ ಬಾರದ ರೀತಿಯಲ್ಲಿ ಆರವತ್ತು ವಸಂತಗಳನ್ನು ಪೂರೈಸಿದ ಡಾ. ಎಂ.ಆರ್. ನಾಯಕರವರು ಪ್ರಸಕ್ತ ಸಾಲಿನ ಜುಲೈ ೩೧ ರಂದು ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ. ಆದರೆ ಅವರ ಪ್ರವೃತ್ತಿ ಸಮಾಜಸೇವೆ, ಸಂಘಟನೆಯ ಮೂಲಕ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಬದುಕನ್ನು ಮುನ್ನಡೆಸಲಿದ್ದಾರೆ. ಕುಮಟಾದ ವಿವೇಕನಗರದಲ್ಲಿ ಪತ್ನಿ ವಿದ್ಯಾ ತಲಗೇರಿಯವರೊಂದಿಗೆ ತುಂಬು ಜೀವನ ನಡೆಸುತ್ತಿದ್ದಾರೆ. ಅವರ ಮಗ ಕಿಸಾನ ಎಂಟೆಕ್ ಮುಗಿಸಿ ಉದ್ಯೋಗದಲ್ಲಿದ್ದರೆ, ಮಗಳು ಪ್ರಿಯದರ್ಶಿನಿ ಎಂ.ಬಿ.ಬಿ.ಎಸ್. ವಿದ್ಯಾರ್ಥಿಯಾಗಿರುತ್ತಾರೆ. ಅವರ ಬದುಕು ಸದಾ ಹಸಿರಾಗಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿರಲಿ ಎಂಬುದೇ ಸಾವಿರಾರು ವಿದ್ಯಾರ್ಥಿಗಳ, ಹಿತೈಷಿಗಳ ಹಾರೈಕೆಯಾಗಿದೆ.

ಪಿ.ಆರ್. ನಾಯ್ಕ ಹೊಳೆಗದ್ದೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*