ಭಾಸ್ಕರ ನಾಯ್ಕರ ಮುಡಿಗೆ ರಾಜ್ಯ ಉತ್ತಮ ಶಿಕ್ಷಕ ಪುರಸ್ಕಾರದ ಗರಿ

ವಿದ್ಯೆಯೊಂದಿಗೆ, ವಿನಯ ಸಂಪತ್ತಿನೊಂದಿಗೆ, ಸಜ್ಜನರ ಸಹವಾಸ ದೊಂದಿಗೆ, ಸದಾ ಕ್ರಿಯಾಶೀಲತೆಯೊಂದಿಗೆ ವೃತ್ತಿಯ ಘನತೆ, ಗೌರವ ಹೆಚ್ಚಿಸಿದವರು ಯಲ್ಲಾಪುರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಭಾಸ್ಕರ ನಾಯ್ಕರು. ಈ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.

ಮೂಲತಃ ಕುಮಟಾ ತಾಲೂಕಿನ ಅಘನಾಶಿನಿ ಕೋಟಿಮನೆ ಕುಟುಂಬದಲ್ಲಿ ತಂದೆ ಗಣಪತಿ ನಾಯ್ಕ, ತಾಯಿ ಗೌರಿ ನಾಯ್ಕ ರ ಮಗನಾಗಿ ಜನಿಸಿದ ಭಾಸ್ಕರ ನಾಯ್ಕರಿಗೆ ಬಾಲ್ಯದಲ್ಲಿ ಕ್ರೀಡೆಯ ಬಗ್ಗೆ ತುಂಬಾ ಆಸಕ್ತಿ , ಓದಿನಲ್ಲೂ ತುಂಬಾ ಚುರುಕು. ಸರ್ವಜ್ಞನೆಂಬುವನು ಗರ್ವದಿಂದಾದನೆ ಸರ್ವರೊಳಗೊಂದೊಂದು ವಿದ್ಯೆ ಕಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ ಎಂಬಂತೆ, ಸರ್ವರೊಳಗೆ ಒಂದೊಂದು ವಿದ್ಯೆ ಕಲಿತು ಯಾವುದೇ ವಿಷಯದ ಬಗ್ಗೆಯಾದರೂ ನಿರರ್ಗಳವಾಗಿ ಮಾತನಾಡುವ ವಾಕ್ಚಾತುರ್ಯ ವಿನಯಶೀಲತೆ ಇವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹಿರಿ-ಕಿರಿಯರನ್ನು ಪ್ರೀತಿ, ಗೌರವದಿಂದ ಕಾಣುವ ಸರಳ ಸಜ್ಜನ ಸ್ವಭಾವದವರು ಇವರು.

1989 ರಲ್ಲಿ ವಿಜಯಪುರದಲ್ಲಿ ಶಿಕ್ಷಕ ಸೇವೆ ಪ್ರಾರಂಭಿಸಿ ಇಲಾಖೆ ನೀಡುವ ಎಲ್ಲಾ ಕೆಲಸವನ್ನು ಅತ್ಯಂತ ಪ್ರೀತಿಯಿಂದ ನಿಭಾಯಿಸಿ ಶಿಕ್ಷಕರ ಮೆಚ್ಚುಗೆ ಗಳಿಸಿದರು. ಇವರೊಬ್ಬ ಅತ್ಯುತ್ತಮ ವಾಲಿಬಾಲ್ ಕ್ರೀಡಾಪಟುವೂ ಆಗಿರುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿ ಕ್ರೀಡಾಪಟುವನ್ನಾಗಿಸಿದ ಹೆಗ್ಗಳಿಕೆ ಇವರದ್ದು. ಶಿಕ್ಷಣವೆಂದರೆ ಕೇವಲ ಪುಸ್ತಕದ ಓದಲ್ಲ, ಬರೀ ಪುಸ್ತಕದ ಜ್ಞಾನವೂ ಅಲ್ಲ, ಅದು ವಿಶಾಲ ವ್ಯಕ್ತಿತ್ವಕ್ಕೆ ದಾರಿಮಾಡಿಕೊಡುವ ದಾರಿದೀಪವಾಗಬೇಕು ಎನ್ನುವ ಭಾಸ್ಕರ್ ನಾಯ್ಕರ ವಿಶಾಲ ದೃಷ್ಟಿಕೋನ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಯಿತು.

ಮುಂಡಗೋಡ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಊರ ಜನರ ಸಹಕಾರದಿಂದ ಆಟದ ಮೈದಾನ ನಿಮಿ೯ಸಿ ಅಲ್ಲಿಯೂ ಸೈ ಅನಿಸಿಕೊಂಡು ಭಾಸ್ಕರ್ ಇನ್ನಷ್ಟು ಪ್ರಜ್ವಲಿಸತೊಡಗಿದರು. ಶಿಕ್ಷಣವಂಚಿತ ಪಾಲಕರ ಮನಸ್ಸನ್ನು ಗೆದ್ದು ತನ್ನ ಶಾಲೆಯನ್ನು ಮೇಲ್ದರ್ಜೆಗೇರಿಸಿ ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳ ಪಾಲಿಗೆ ಆಶಾಕಿರಣವಾದರು. ರಜಾ ಅವಧಿಯಲ್ಲಿ ಇಂಗ್ಲೀಷ್ ಶಿಬಿರ ನಡೆಸಿ ಮಕ್ಕಳಿಗೆ ಇಂಗ್ಲಿಷ್ನಲ್ಲಿ ಆಸಕ್ತಿ ಮೂಡಿಸಲು ಶ್ರಮಿಸಿದರು .ಐದು ವರ್ಷಗಳ ಕಾಲ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಯಾಗಿ ತಾಲೂಕಿನಾದ್ಯಂತ ಪರಿಚಿತರಾದರು .

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಅನುಭವ ಪಡೆದ ಬಹುಮುಖ ಪ್ರತಿಭಾವಂತರು. ಯಲ್ಲಾಪುರದ ನಂದೊಳ್ಳಿ ಶಾಲೆಯನ್ನು ಮಕ್ಕಳ ನಂದನವನವನ್ನಾಗಿ ಪರಿವರ್ತಿಸಿ ತಾಲೂಕಿನ ಆದರ್ಶ ಶಾಲೆ, ಹಸಿರು ಶಾಲೆ, ಉತ್ತಮ ಪ್ರಾಯೋಗಿಕ ಶಾಲೆ, ಸ್ವಚ್ಛ ವಿದ್ಯಾಲಯ ಪುರಸ್ಕಾರ ಈ ಶಾಲೆಯನ್ನು ಅರಸಿ ಬಂದವು. ಮಕ್ಕಳ ಭವಿಷ್ಯತ್ತನ್ನು ರೂಪಿಸುವ ನಾಯ್ಕರಿಗೆ 2014 ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕಾರಗಳು ಅರಸಿ ಬಂದವು. ಅಂತರಂಗದ ಅಪ್ಪಟ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡ ಆದರ್ಶ ಶಿಕ್ಷಕ ಇಂದು ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ.

ಉಲ್ಲಾಸಭರಿತ ,ಮಂದಸ್ಮಿತ ಮೊಗದ, ಸರಳ ಸಂಪನ್ನ, ಭಾವಜೀವಿ ಮಕ್ಕಳ ಜ್ಞಾನದಾಹ ಹೆಚ್ಚಿಸುವಲ್ಲಿ ಶ್ರಮಿಸಿದ ಒಬ್ಬ ಮೌನ ಸಾಧಕ . ಮೂರುದಶಕಗಳಿಗೂ ಹೆಚ್ಚು ಕಾಲ ಶಿಕ್ಷಕ ವೃತ್ತಿಯನ್ನು ತನ್ನ ಬದುಕಿನ ಒಂದು ಭಾಗವನ್ನಾಗಿ ಸಿಕೊಂಡು ದುಡಿದು ದಣಿವರಿಯದ ಇವರ ಸೇವಾ ಬದುಕು ಸದಾ ಹಸಿರಾಗಿರಲಿ. ಧರ್ಮಪತ್ನಿ ಸುಜಾತ ನಾಯ್ಕ ಮತ್ತು ಮಕ್ಕಳಾದ ಆಕಾಶ, ಅಭಿಯವರೊಂದಿಗೆ ತುಂಬು ಜೀವನ ನಡೆಸುತ್ತಿದ್ದಾರೆ. ಇವರು ನೂರ್ಕಾಲ ನಮ್ಮಂದಿಗೆ ಬದುಕಲಿ ಎಂದು ಹಾರೈಸೋಣ.

– ಪಿ.ಆರ್.ನಾಯ್ಕ ಹೊಳೆಗದ್ದೆ.ಕುಮಟಾ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

2 Comments

Leave a Reply

Your email address will not be published.


*