ವಿದ್ಯಾರ್ಥಿ ಜೀವನಕ್ಕೆ ಮಾದರಿಯಾದ ಹೊನ್ನಾವರದ ಶ್ರೀನಿಧಿ ಮಹಾಬಲೇಶ್ವರ ನಾಯ್ಕ

ಕಟ್ಟದಿರಿ ಮಕ್ಕಳನು ದನದಂತೆ ಬಿಗಿದು
ಅಟ್ಟಿಬಿಡಿ ಆಡಲದು ಕರುಣೆಯನು ಬಗೆದು
ಪುಸ್ತಕವು ನೀಡಿದರೆ ಬಾಳಿಗದು ಜ್ಞಾನ
ಆಟ ಬದುಕಲು ಕಲಿಸಿ ಉಳಿಸುವುದು ಮಾನ

ಆಡಿದವರು ಮಾತ್ರ ಅರಿಯುತ್ತಾರೆ ಆಟದ ಬೆಲೆಯನ್ನು, ಓದಿದವರು ಮಾತ್ರ ಅರಿಯುತ್ತಾರೆ ಅರಿವಿನ ಜ್ಞಾನವನ್ನು-ಎಂಬ ಹಿರಿಯರ ಮಾತಿನಂತೆ ಆಟದಲ್ಲೂ, ಓಟದಲ್ಲೂ, ಪಾಠದಲ್ಲೂ, ಎಲ್ಲೆಲ್ಲೂ ಮಾದರಿಯಾದ ಬಹುಮುಖ ಪ್ರತಿಭಾವಂತೆ ಹೊನ್ನಾವರದ ಶ್ರೀನಿಧಿ.

“ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ”ಎಂಬ ಕಾಲಘಟ್ಟದಲ್ಲಿ ತನ್ನ ವಿದ್ಯಾರ್ಥಿ ಜೀವನದಲ್ಲಿ ಎಲ್ಲವನ್ನು ಕಲಿತು ಬಲ್ಲವರನ್ನು ಬೆರಗುಗೊಳಿಸಿದ ವಿಶಿಷ್ಟ ಸಾಧಕಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಕ್ಲಾಸಿಗೆ ಟೊಪರ್. ಶ್ರೀನಿಧಿ ಅಂದರೆ ಎಮ್. ಪಿ. ಇ. ಸೊಸೈಟಿಯ ನಿಧಿಯಂತೆ. ವಿದ್ಯಾರ್ಥಿಯೆಂದರೆ ಹೀಗಿರಬೇಕು ಎನ್ನುವುದಕ್ಕೆ ಇವಳ ಸಾಧನೆಯ ಹಾದಿಯೇ ವಿಶಿಷ್ಟ ಮೈಲಿಗಲ್ಲು. ಬೇಕು ಎನ್ನುವ ಬದುಕಿಗೆ ಸದಾ ತೆರೆದುಕೊಳ್ಳುವ ಇವಳು ಪ್ರಸಕ್ತ ಸಾಲಿನಲ್ಲಿ ಹೊನ್ನಾವರದ ಎಂ. ಪಿ. ಇ. ಸೊಸೈಟಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಸ್ಕೂಲ್ನಲ್ಲಿ ೧೦ನೇ ತರಗತಿಯಲ್ಲಿ ಶೇಕಡ ೯೫.೨೫ ಅಂಕ ಪಡೆದು ಹೊನ್ನಾವರ ತಾಲೂಕಿಗೆ ಪ್ರಥಮ ಸ್ಥಾನ ಗಿಟ್ಟಿಸಿದ ಹೆಗ್ಗಳಿಕೆ ಇವರದ್ದು. ಎನ್. ಸಿ. ಇ. ಆರ್. ಟಿ. ಪಠ್ಯಕ್ರಮವನ್ನು ಆಧರಿಸಿದ ರಾಷ್ಟ್ರೀಯ ಮಟ್ಟದ ಶಿಕ್ಷಣ ಮಂಡಳಿಯಾಗಿದ್ದು ಇಡೀ ದೇಶದ ವಿದ್ಯಾರ್ಥಿಗಳು ಏಕರೂಪದ ಶಿಕ್ಷಣವನ್ನು ಪಡೆಯುವಂತೆ ಭಾರತ ಸರಕಾರವು ಈ ಮಂಡಳಿಯನ್ನು ನಿಯಂತ್ರಿಸುತ್ತದೆ. ವಿಶ್ವದಲ್ಲಿಯೇ ಅತಿ ದೊಡ್ಡ ಪರೀಕ್ಷೆ ನಡೆಸುವ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ಶ್ರೀನಿಧಿ ಎಲ್ಲರೊಳಗೊಂದಾಗಿ ಬೆರೆತು, ಎಲ್ಲರಂತಾಗದೇ ತನ್ನ ಬಹುಮುಖ ಪ್ರತಿಭೆ ಪ್ರದರ್ಶಿಸಿದ ತಾಲೂಕಿನ ಹೆಮ್ಮೆಯ ಪ್ರತಿಭೆ.

ವಿದ್ಯಾರ್ಥಿ ಜೀವನವೆಂದರೆ ಬರಿ ಓದಿಗಾಗಿ ಮತ್ತು ಅಂಕಕ್ಕಾಗಿ ಎನ್ನುವ ಅದೆಷ್ಟೋ ಪಾಲಕರಿಗೆ ಶ್ರೀನಿಧಿಯ ಬಹುಮುಖ ಪ್ರತಿಭೆ ಅಚ್ಚರಿ ಮೂಡಿಸದಿರಲಾರದು.ಎಲ್ಲಾ ವಿದ್ಯಾರ್ಥಿಗಳಂತೆ ಬಾಲ್ಯದ ಶಿಕ್ಷಣವನ್ನು ಓದಿಗಷ್ಟೇ ಸೀಮಿತಗೊಳಿಸಿದರೆ ಅಥವಾ ಪುಸ್ತಕದ ಹುಳುಗಳಾಗಿದ್ದರೆ ಶ್ರೀನಿಧಿಯನ್ನು ಪರಿಚಯಿಸುವ ಅಗತ್ಯವಿರಲಿಲ್ಲ. ಕೆಲವರಿಗೆ ಬುದ್ಧಿವಂತಿಕೆ ಜಾಸ್ತಿ, ಕೆಲವರು ಲೆಕ್ಕದಲ್ಲಿ ಮುಂದೆ, ಕೆಲವರಿಗೆ ಚಿತ್ರಕಲೆ ಒಲಿಯುತ್ತದೆ, ಕೆಲವರು ಆಟದಲ್ಲಿ, ಇನ್ನೂ ಕೆಲವರು ಊಟದಲ್ಲಿ. ಒಂದೊಂದು ವಿದ್ಯಾರ್ಥಿಗಳಲ್ಲಿ ಒಂದೊಂದು ಕ್ಷೇತ್ರದ ಸಾಧನೆಯನ್ನು ಮಾತ್ರ ಗುರುತಿಸಬಹುದು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗದೆ ಆಟದಲ್ಲೂ,ಓಟದಲ್ಲೂ ಲೆಕ್ಕದಲ್ಲೂ, ಪಾಠದಲ್ಲೂ ಮುಂದೆ. ಪಠ್ಯ, ಸಹಪಠ್ಯ, ಸಾಂಸ್ಕೃತಿಕ, ಕ್ರೀಡೆ, ಸಂಗೀತ ಎಲ್ಲವನ್ನು ಒಂದೇ ಗುಚ್ಚದಲ್ಲಿ ಅರಳಿದ ವಿಶಿಷ್ಟ ಪ್ರತಿಭೆ ನಮ್ಮ ಶ್ರೀನಿಧಿಯವರದು.

ವಿದ್ಯೆ, ಬುದ್ಧಿ, ಗುಣ, ಸ್ವಭಾವ, ಪ್ರೀತಿ, ಕರುಣೆ ಎಲ್ಲದಕ್ಕೂ ಅದರದೇ ಆದ ಬೇರೆ ಬೇರೆಯಾದ ಅರ್ಥಗಳಿವೆ. ಕೆಲವು ಹುಟ್ಟಿನಿಂದಲೇ ಬರುವುದು‌. ಕೆಲವನ್ನು ನಾವೇ ಬೆಳೆಸಿಕೊಳ್ಳುವುದು. ಮಕ್ಕಳ ಮನಸ್ಸಿನಲ್ಲಿ ಬಣ್ಣ ಬಣ್ಣದ ನೂರಾರು ಕನಸುಗಳಿಗೆ ಹಾಲೆರೆದು ಪೋಷಿಸಿ ಅವಳ ಬದುಕಿನಲ್ಲಿ ಅದು ಗಟ್ಟಿಗೊಳ್ಳುವಂತೆ ಮಾಡಿದವರು ತಂದೆ ಮಹಾಬಲೇಶ್ವರ ನಾಯ್ಕ ಮತ್ತು ತಾಯಿ ಜಯಾ ನಾಯ್ಕ. ಯಾವುದೇ ಕೋಚಿಂಗ್ ಕ್ಲಾಸಿಗೆ ಹೋಗದೆ ತನ್ನ ಸ್ವ ಪ್ರತಿಭೆಯನ್ನು ಓರೆಗಲ್ಲಿಗೆ ಹಚ್ಚಿ ಎಲ್ಲೆಲ್ಲೂ ತನ್ನ ಹೆಜ್ಜೆ ಗುರುತನ್ನು ದಾಖಲಿಸಿದ ಅಪ್ರತಿಮ ಸಾಧಕಿ ಶ್ರೀನಿಧಿ ತನ್ನ ಬದುಕಿನಲ್ಲಿ ಬಚ್ಚಿಟ್ಟ ಪ್ರತಿಭೆಗೆ ಸಾಣೆ ಹಿಡಿದು ಅದು ಪ್ರಜ್ವಲಿಸುವಂತೆ, ಪ್ರಕಾಶಿಸುವಂತೆ ಸ್ವ ಪ್ರಯತ್ನದ ಮೂಲಕ ಸಾಧನೆಯ ಪಟ್ಟಕ್ಕೆರಿದ ಅಪರೂಪದ ಅಪ್ರತಿಮ ಸಾಧಕಿ. ಇವಳ ತಂದೆ ಎಂ.ಜಿ.ಶಿಕ್ಷಕ ಸಂಘದ ಅಧ್ಯಕ್ಷರಾದ ಮೇಲೆ ಬಿಡುವಿಲ್ಲದ ಕೆಲಸದ ಸರದಾರರಾದರೆ, ತಾಯಿ ಜಯಾ ನಾಯ್ಕರದು ಅಕ್ಕರದ ಮಾತೃವಾತ್ಸಲ್ಯದ ಜೊತೆಗೆ ಮಕ್ಕಳನ್ನು ಕಾಯುವ ಮಹಾತಾಯಿ ಇದ್ದಂತೆ. ಇಂತಹ ಸಂದರ್ಭದಲ್ಲಿ ಮನೆಯ ನಂದಾದೀಪದಂತೆ ಸದಾ ಚೈತನ್ಯದ ಚಿಲುಮೆಯಾದ ಶ್ರೀನಿಧಿ ಮತ್ತು ಶ್ರೇಯಾಸ್ ಆ ಮನೆ ಎಂಬ ಸಾಮ್ರಾಜ್ಯದ ರಾಜಕುಮಾರ, ರಾಜಕುಮಾರಿಯರಂತೆ ಎಲ್ಲವನ್ನು ಮೀರಿದ ಪ್ರತಿಭಾ ಸಂಪನ್ನರು.

ಶಾಲೆಯಲ್ಲಿ ನಡೆಯುವ ಯಾವುದೇ ಸ್ಪರ್ಧೆ ಇರಲಿ ಅಲ್ಲೆಲ್ಲ ಶ್ರೀನಿಧಿಯ ಭಾಗವಹಿಸುವಿಕೆಯೊಂದಿಗೆ ಮೊದಲ ಸ್ಥಾನದ ನಿಧಿ ಅವಳನ್ನರಸಿ ಬಂದಿರುವುದು ಅವಳ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಎರಡು ಬಾರಿ ಇವಳು ಪಂದ್ಯಾಟದಲ್ಲಿ ಚಾಂಪಿಯನ್ ಆದರೆ, ಎರಡು ಬಾರಿ ಸಾಂಸ್ಕೃತಿಕ ಸ್ಪರ್ಧೆಯಲ್ಲೂ ಚಾಂಪಿಯನ್. ಇವಳು ಇಟ್ಟ ಹೆಜ್ಜೆಯಲ್ಲೆಲ್ಲ ಗುರುತಿನ ಚುಕ್ಕಿ ಮೂಡಿಸಿ ಮುಡಿಗೊಂದು ಗರಿ ಗ್ಯಾರಂಟಿ ಎನ್ನುವಷ್ಟರ ಮಟ್ಟಿಗೆ ಇವಳ ಪ್ರತಿಭೆ ಮೆರೆದಿದೆ.

ಕಷ್ಟಪಟ್ಟು ಓದುವುದಕ್ಕೂ, ಇಷ್ಟಪಟ್ಟು ಓದುವುದಕ್ಕೂ ಇರುವ ವ್ಯತ್ಯಾಸ ಆಕಾಶ ಪಾತಾಳದಷ್ಟು. ಎಲ್ಲವನ್ನು ಇಷ್ಟಪಟ್ಟು ಕಲಿತ ಶ್ರೀನಿಧಿ ಭಾಷಣ ಸ್ಪರ್ಧೆಯಿರಲಿ, ಚಿತ್ರಕಲೆಯಿರಲಿ, ಕ್ವಿಜ್ ಇರಲಿ ಕ್ರೀಡೆ ಇರಲಿ, ಟೇಬಲ್ ಟೆನಿಸ್, ಚೆಸ್, ಸಂಸ್ಕೃತ ಪಠಣ ಅಲ್ಲೆಲ್ಲ ಮೊದಲ ಪ್ರಾಶಸ್ತ್ಯದ ಬಹುಮಾನ ಪಡೆದು ತನ್ನ ಹೆಜ್ಜೆ ಗುರುತು ಮೂಡಿಸಿರುವುದು ಅವಳ ವಿದ್ಯಾರ್ಥಿ ಜೀವನದಲ್ಲಿ ಮರೆಯಲಾಗದ ಮಾಣಿಕ್ಯದಂತೆ.

ಯಾವುದೇ ವಿದ್ಯಾರ್ಥಿ ಇರಲಿ ಶೈಕ್ಷಣಿಕವಾಗಿಯೋ, ಸಾಂಸ್ಕೃತಿಕವಾಗಿಯೋ ಅಥವಾ ಕ್ರೀಡೆಯಲ್ಲೋ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧಿಸಿದವರನ್ನು ಕೇಳಿದ್ದೇವೆ. ನೋಡಿ ಅಭಿನಂದಿಸಿದ್ದೇವೆ, ಆದರೆ ಇವಳು ವಿಜ್ಞಾನ ಮಾದರಿಯಲ್ಲೂ ಪ್ರಥಮ, ಎಸ್ಸೆ ರೈಟಿಂಗ್ ನಲ್ಲೂ ಪ್ರಥಮ, ವೆಜಿಟೇಬಲ್ ಕಾರ್ವಿಂಗ್ನಲ್ಲೂ ಪ್ರಥಮ, ಸ್ಟೋರಿ ಟೆಲ್ಲಿಂಗ್, ಮೆಮೊರಿ ಟೆಸ್ಟ್, ಶುದ್ಧ ಬರಹ, ರಿಲೇ, ಓಟ ಎಲ್ಲದರಲ್ಲಿಯೂ ಇವಳದೇ ಪಾರುಪತ್ಯ. ಅಂತರ್ ಶಾಲಾ ಸ್ಪರ್ಧೆಯಲ್ಲೂ ಮೂರು ಬಾರಿ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದ್ದು. ಪ್ರತಿಭಾ ಕಾರಂಜಿಯಲ್ಲಿ ಶ್ರೀನಿಧಿಯದೇ ಹೆಜ್ಜೆ ಗುರುತು. ಲಾಯನ್ಸ್, ರೋಟರಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಇವಳ ಕೊರಳಿಗೆ ಪ್ರಶಸ್ತಿಯ ಹಾರ. ಆನ್ಲೈನ ಭಾಷಣ ಸ್ಪರ್ಧೆಯಲ್ಲೂ ಇವಳದೇ ಮೇಲುಗೈ. ಸಂಗೀತದಲ್ಲೂ ವಿಶೇಷ ಆಸಕ್ತಿ. ಸಿಬಿಎಸ್ಇ ಸ್ಕೂಲ್ ನಲ್ಲಿ ಆದರ್ಶ ವಿದ್ಯಾರ್ಥಿ ಎಂಬ ಹಣೆಪಟ್ಟಿ. ಒಂದೇ.. ಎರಡೇ.. ಸಾಧನೆಯ ಬೆನ್ನೇರಿದ ಆಲ್-ರೌಂಡರ್ ಎನ್ನುವ ವಿದ್ಯಾರ್ಥಿ ಶ್ರೀನಿಧಿ ಸಾಧನೆ ಉಳಿದವರಿಗೆ ಮಾದರಿ. ಎಲ್ಲಾ ಕ್ಷೇತ್ರದಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡ ಶ್ರೀನಿಧಿಯ ಬದುಕು ಬಂಗಾರವಾಗಲಿ. ಅವಳ ಮೊದಲ ಯಶಸ್ಸಿನ ಹೆಜ್ಜೆ ಗುರುತು ಶಾಶ್ವತವಾಗಿದೆ. ಇನ್ನಷ್ಟು ಹೆಜ್ಜೆ ಗುರುತು ಸೃಷ್ಟಿಸುವಂತಾಗಲಿ. ತಾಲೂಕಿನ ಎಲ್ಲಾ ಪ್ರತಿಭಾವಂತರ, ಗುರು-ಹಿರಿಯರ ಆಶೀರ್ವಾದ ನಿನ್ನ ಮೇಲಿರಲಿ. ಎಂ.ಜಿ. ಮತ್ತು ಜಯಾರವರ ಕಾರ್ಯ ಸಾಧನೆಯ ಪ್ರತಿಫಲ ದಂತಿರುವ ಶ್ರೀನಿಧಿ ಸಾಧಕ ವಿದ್ಯಾರ್ಥಿಗಳ ಸಾಲಿನಲ್ಲಿ ಸೇರಿರುವ ನಿನ್ನ ಭವಿಷ್ಯ ಇನ್ನಷ್ಟು ಪ್ರಜ್ವಲಿಸಲಿ ಎಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ
ನಲಿ-ಕಲಿ ಶಿಕ್ಷಕ ಹೊನ್ನಾವರ.

About ಬಿ.ಎನ್‌. ವಾಸರೆ 622 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*