‘ರಾತ್ರಿಯೆಲ್ಲಾ ಮನೆಯಲ್ಲೇ ಇದ್ದು ಬಿಡ್ತಾರೆ… ಹೊಟ್ಟೆಗೆ ಏನ್ ತಿಂತೀರಾ ಕೇಳ್ತಾರೆ…’

ದಾಂಡೇಲಿಯಲ್ಲಿ ಮೈಕ್ರೋ ಪೈನಾನ್ಸ್  ಕಿರುಕುಳಕ್ಕೆ ಮನೆ ಮಾರುತ್ತಿರುವ ಬಡ ಜನರು

ದಾಂಡೇಲಿ :  ದಾಂಡೇಲಿಯ ಗಲ್ಲಿ ಗಲ್ಲಿಗಳಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆಯ ಹಾವಳಿ ಜೋರಾಗಿದ್ದು, ಸಾಲ ವಸೂಲಾತಿ ಸಂದರ್ಭದಲ್ಲಿ ಆಗುತ್ತಿರುವ ಕಿರುಕುಳಕ್ಕೆ ಬಡ ಜನರನೇಕರು ಬೇಸತ್ತು ಹೋಗಿರುವುದು ಬೆಳಕಿಗೆ ಬರುತ್ತಿದೆ.

ಇದೀಗ ಎಲ್ಲೆಂದರಲ್ಲಿ ಮೈಕ್ರೋ ಫೈನಾನ್ಸ್ ಸಾಲಗಳದ್ದೇ ಸುದ್ದಿ. ರಾಜ್ಯ ಸರ್ಕಾರವೇನೋ ಈ ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಸುಗ್ರೀವಾಜ್ಞೆ ತರಲು ಮುಂದಾಗಿರುವ ನಡುವೆಯೇ ದಾಂಡೇಲಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಜೋರಾಗಿ ಕೇಳಿ ಬರುತ್ತಿದೆ. ಈ ಮೈಕ್ರೋ ಫೈನಾನ್ಸ್ ನ ಸಾಲದ ಸುಳ್ಳಿಗೆ ಸಿಕ್ಕ ಬಡ ಮಹಿಳೆಯರನೇಕರು odanadi ಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಿರುಕುಳಕ್ಕೆ ಬೇಸತ್ತು ಕೆಲವರು ತಮ್ಮ ಸ್ವಂತ ಮನೆಗಳನ್ನ ಮಾರಾಟ ಮಾಡಿದರೆ,  ಕೆಲವರು ಇವರ ಕಾಟ ತಾಳಲಾರದೆ ಇದ್ದ ಸ್ಥಳವನ್ನೇ ಬದಲಾಯಿಸಿರುವ, ಊರು ಬಿಟ್ಟಿರುವ,  ಇನ್ನು ಕೆಲವರಿಗೆ ಬಾಡಿಗೆ ಮನೆಯವರು ಮನೆ ಬಿಡಿಸುತ್ತಿರುವ ಮತ್ತೆ ಕೆಲವು ಮನೆಗಳಲ್ಲಿ ಇವರ ಕಾಟದಿಂದಾಗಿ ಕೌಟುಂಬಿಕ ಕಲಹಗಳಾಗುತ್ತಿರುವ,  ಅತ್ತೆ ಸೊಸೆಯನ್ನ ತವರು ಮನೆಗೆ ಕಳುಹಿಸಿರುವ… ಇಂತಹ ಅನೇಕ ಘಟನೆಗಳು ನಡೆಯುತ್ತಿವೆ.

*ಏನಿದು ಮೈಕ್ರೋ ಫೈನಾನ್ಸ್ ಸಾಲ?* :
  ದಾಂಡೇಲಿಯಲ್ಲಿ ಭಾರತ್ ಫೈನಾನ್ಸ್,  ಎಸ್ ಕೆ ಎಸ್,  ಗ್ರಾಮೀಣ ಕೋಟ್,  ಚೈತನ್ಯ, ಹೀಗೆ ಹಲವು ಹೆಸರುಗಳಲ್ಲಿ ಸಾಲಗಳನ್ನು ನೀಡಲಾಗುತ್ತದೆ. ಮಹಿಳೆಯರ ಹೆಸರಿಗೆ ಮಾತ್ರ ಸಾಲ ನೀಡುವ ಇವರು ಕನಿಷ್ಠ ಐದು ಜನರ ಗುಂಪನ್ನು ಮಾಡಲು ಹೇಳಿ ಅವರಿಗೆ ಆರಂಭದಲ್ಲಿ ತಲಾ ರೂ.30 ಸಾವಿರ ಸಾಲ ನೀಡುತ್ತಾರೆ. ಕೆಲವು ಫೈನಾನ್ಸ್ ನವರು 55 ಸಾವಿರದ ವರೆಗೂ ನೀಡುತ್ತಾರೆ. 30 ಸಾವಿರ ಸಾಲ ಪಡೆದ ಮಹಿಳೆ ಒಂದು ಸಾವಿರ ರು. ವಿಮಾ ಹಾಗೂ ಠೇವಣಿ ಒಂದು ಸಾವಿರ ಎಂದು ಕೇವಲ 28 ಸಾವಿರ ಗಳನ್ನು ಮಾತ್ರ ಪಡೆಯುತ್ತಾಳೆ. ಈ ಸಾಲಕ್ಕೆ ಇವರು ಪ್ರತಿ ವಾರ 620 ರು.ಗಳಂತೆ,  ಅಂದರೆ ತಿಂಗಳಿಗೆ ಸುಮಾರು 2500 ಗಳಂತೆ ಎರಡು ವರ್ಷ ಪಾವತಿಸಬೇಕು. ಅಂದರೆ ಸುಮಾರು 60 ಸಾವಿರದಷ್ಟು ಹಣವನ್ನು ಅವರು ಮರುಪಾವತಿಸಬೇಕಾಗುತ್ತದೆ.  ಈ ಸಾಲ ತೀರುವ ಮುನ್ನವೇ ಮತ್ತೆ ನಿಮಗೆ ಸಾಲ ಮಂಜೂರಾಗಿದೆ ಎಂದು ಒತ್ತಾಯ ಪೂರಕವಾಗಿ ಸಾಲಗಳನ್ನು ನೀಡುತ್ತಾ ಇವರ ಸಾಲದ ಕಂತು ಮುಗಿಯದ ಹಾಗೆ ಇವರನ್ನ ಶೋಷಣೆ ಮಾಡುತ್ತಲೇ ಹೋಗುತ್ತಾರೆ.

*ಸಾಲ ವಸೂಲಿಗಾಗಿ ರಾತ್ರಿ ಠಿಕಾಣಿ*  
ದಾಂಡೇಲಿಯ ನಗರ ಹಾಗೂ ಗ್ರಾಮೀಣ ಪ್ರದೇಶವೂ ಸೇರಿದಂತೆ ಸಾವಿರಾರು ಜನರು ಈ ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆದಿದ್ದಾರೆ.  ಪ್ರತಿವಾರ ಹಣ ನೀಡದಿದ್ದರೆ ಇವರ ಕಿರುಕುಳ ಶುರು.  ಈ ಮೈಕ್ರೋ ಫೈನಾನ್ಸ್ ಗಳ ಸಿಬ್ಬಂದಿಗಳು ಸಾಲವಸೂತಿಗಾಗಿ ಗಲ್ಲಿ ಗಲ್ಲಿಗೆ ಬಂದು ಗಲಾಟೆ ಮಾಡುತ್ತಾರೆ. ಮಹಿಳೆಯರ ಮನೆಗೆ ಬಂದು ಕುಳಿತುಬಿಡುತ್ತಾರೆ. ತುಂಬಬೇಕಾದ ಕಂತನ್ನು ಕೊಡಿ ಎಂದು ಸತಾಯಿಸುತ್ತ ರಾತ್ರಿಯಿಡೀ ಅಲ್ಲೇ ಇದ್ದುಬಿಡುತ್ತಾರೆ.  ‘ಹಣ ಇಲ್ಲ ಮುಂದಿನ ವಾರ ಕೊಡುತ್ತೇವೆ’ ಎಂದರೆ ‘ನೀವು ಹೊಟ್ಟೆಗೆ ಏನ್ ತಿಂತೀರಿ… ಸಗಣಿ ತಿಂತಿರೋ… ಅನ್ನ ತಿಂತಿರೋ…?’ ಎಂಬೆಲ್ಲಾ ಅವಾಚ್ಯ ಶಬ್ದಗಳಿಂದ ಬೈಯ್ಯುವ ಇವರು  ಅಲ್ಲಿಯೇ ಮಲಗಿಬಿಡುತ್ತಾರೆ. (ಅವರ ಮಾತಿನ ವಿಡಿಯೋ ಮುಂಜಾವುಗೆ ಲಭ್ಯವಾಗಿದೆ) ಇನ್ನೂ ಮಹಿಳೆಯರ ವಯಕ್ತಿಕ ವಿಚಾರವಾಗಿ ನಿಂದಿಸಿದ  ವಿದ್ಯಾಮಾನವೂ ನಡೆದಿದೆ. ಬಹಳ ದಿನ ಕಳೆದರೆ ಫೈನಾನ್ಸನ ಹತ್ತಾರು ಜನರು ಮನೆಯ ಹತ್ತಿರ ಬಂದು ಸಾಲ ತುಂಬುವಂತೆ ಗಲಾಟೆ ಮಾಡುತ್ತಾರೆ. ಗಲ್ಲಿಯಲ್ಲಿ ಅವರ ಮರ್ಯಾದೆ ತೆಗೆಯುತ್ತಾರೆ.  ಈ ಘಟನೆಯಿಂದ ಆ ಮನೆಯವರ ಸ್ವಾಸ್ಥ್ಯವೇ ಕೆಡುತ್ತದೆ. ಗಂಡ ಹೆಂಡತಿಗೆ  ಹೊಡೆಯುತ್ತಾನೆ… ಅತ್ತೆ ಸೊಸೆಯನ್ನ ಪೀಡಿಸುತ್ತಾಳೆ…. ಶಾಲೆಗೆ ಹೋಗುವ ಮಕ್ಕಳ ಮೇಲೆಯೂ ಇದು ದುಷ್ಪರಿಣಾಮ ಬೀರುತ್ತದೆ.

ಭಾಗ್ಯಲಕ್ಷ್ಮಿ ಹಣವು ಸಿಗುತ್ತಿಲ್ಲ.
ಒಂದೊಮ್ಮೆ ಈ ಮಹಿಳೆಯರು ಮೈಕ್ರೋ ಫೈನಾನ್ಸ್ ಗಳ ಸಾಲ ಮಾಡಿಕೊಂಡಿದ್ದರೆ ಆ ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಇವರ ಖಾತೆಯನ್ನು ತಮ್ಮ ಖಾತೆಗೆ ಲಿಂಕ್ ಮಾಡಿಕೊಂಡರೆ ಮಹಿಳೆಯರಿಗೆ ಬಂದ ಭಾಗ್ಯಲಕ್ಷ್ಮಿ ಹಣ ಮಹಿಳೆಯರ ಕೈ ಸೇರುವುದರೊಳಗೆ ತಮ್ಮ ಖಾತೆಗೆ  ವರ್ಗಾಯಿಸಿಕೊಳ್ಳುತ್ತಾರೆ. ಸುಮ್ಮತಿ ಇಲ್ಲದೆ ಮಹಿಳೆಯೊಬ್ಬಳ ಹಣ ವರ್ಗಾವಣೆ ಮಾಡಿಕೊಳ್ಳುವುದು ನಿಯಮ ಬಾಹಿರ.

*ಸಾಲ ತೀರಿಸಲು ಮನೆ ಮಾರಾಟ*
ಅಜಾದ್ ನಗರದ ಮಹಿಳೆಯೋರ್ವಳು ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದಿರುತ್ತಾಳೆ. ಪ್ರತಿದಿನ ಫೈನಾನ್ಸ್ ನವರು ಬಂದು ಕಾಡಿಸುವ ಸಂದರ್ಭದಲ್ಲಿ ಆಕೆ ಮತ್ತೆ ಬೇರೆಯವರಿಂದ ಮೀಟರ್ ಬಡ್ಡಿ ಸಾಲ ಪಡೆದಿರುತ್ತಾಳೆ ಕೊನೆಗೆ ಈ ಎಲ್ಲ ಸಾಲಗಳನ್ನು ತೀರಿಸಲು ಆಕೆ ತನ್ನ ಸ್ವಂತ ಮನೆಯನ್ನೇ ಮಾರಾಟ ಮಾಡಿದ ಘಟನೆ ನಡೆದಿದೆ.

*‘ನಿಮ್ಮ ಸಾಲ ತಹಶೀಲ್ದಾರರು ತುಂಬ್ತಾರೇನು…?’*

ಈ ಮೈಕ್ರೋ ಫೈನಾನ್ಸ್ ನ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯರನೇಕರು  ಸಂಘಟನೆಯೊಂದರ ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರರಿಗೆ ಮನವಿ ನೀಡಿದ್ದರು. ಇದನ್ನರಿತ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಆ ಮಹಿಳೆಯರನ್ನ ಕರೆಯಿಸಿ ‘ನೀವು ಪ್ರತಿಭಟನೆ, ಮಾಡಿದರೆ ಮನವಿ ನೀಡಿದರೆ ನಿಮ್ಮ ಸಾಲವನ್ನು ತಹಶೀಲ್ದಾರರು ತೀರಿಸ್ತಾರೇನು? ಸಂಘಟನೆಯವರು ತುಂಬುತ್ತಾರೇನು?  ಸುದ್ದಿ ಮಾಡಿದ ಪತ್ರಕರ್ತರು ತುಂಬುತ್ತಾರೇನು ಎಂದು ಉದ್ಧಟತನದ  ಪ್ರಶ್ನೆ ಹಾಕುತ್ತಾರಂತೆ. ಈ ಬಗ್ಗೆ ನೊಂದ ಮಹಿಳೆಯರೇ ಹೇಳಿಕೊಂಡಿದ್ದಾರೆ.

*ಸಾಲ ತುಂಬುತ್ತೇವೆ,  ಸಮಯ ಕೊಡಿ*
ಅಜಾದ್ ನಗರ ಸೇರಿದಂತೆ ವಿವಿದೆಡೆಯ ಮಹಿಳೆಯರನೇಕರು ಮೈಕ್ರೋ ಫೈನಾನ್ಸ್ ನಿಂದ ತಮಗಾಗುತ್ತಿರುವ ಶೋಷಣೆಯ  ಬಗ್ಗೆ  ಅಳಲು ತೋಡಿಕೊಂಡಿದ್ದಾರೆ. ಫೈನಾನ್ಸಿನ ಸಿಬ್ಬಂದಿಗಳ ಕಿರುಕುಳದ ಬಗ್ಗೆ ತಿಳಿಸಿದ ಅವರು ‘ನಾವು ನಮ್ಮ ಕಷ್ಟಕ್ಕೆ ಸಾಲವನ್ನು ಪಡೆದಿದ್ದೇವೆ. ಪಡೆದ ಸಾಲವನ್ನು ತುಂಬುತ್ತೇವೆ. ಆದರೆ ಇವರು ಪ್ರತಿದಿನ,  ಪ್ರತಿವಾರ ಬಂದು ನಮಗೆ ಕಿರುಕುಳ ನೀಡಬಾರದು. ಅನಗತ್ಯ ಬೈಗುಳ ಮಾಡಬಾರದು. ತಿಂಗಳಿಗೆ ಒಮ್ಮೆ ಸಾಲ ಮರುಪಾವತಿಸುವ ನಿಯಮವನ್ನು ಮಾಡಬೇಕು. ಸಮಯ ಕೊಟ್ಟರೆ ನಾವು ಸಾಲ ತುಂಬೇ ತುಂಬುತ್ತೇವೆ ಎನ್ನುತ್ತಾರೆ ಶಾರುನ್ ಕೊಟ್ಟೆ,  ರಜಿಯಾ ಕಳ್ಸು,  ಶಮಿನಾ ಭಾನು,  ರೂಪಾ ವಡ್ಡರ್,  ಶೈಲಜಾ,  ಬಿಬಿ ಜಾಹಿರಾ, ಶೈನಾಜ್,  ಮಮ್ತಾಜ್,  ಹಿನಾ ತಪಸ್ ಮುಂತಾದವರು.

ಮೈಕ್ರೋ ಫೈನಾನ್ಸನವರಿಂದ ನೊಂದ ಮಹಿಳೆಯರೇನೆಂದರು…? ಈ ವಿಡಿಯೋ ನೋಡಿ….

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*