ಮಂಗಳೂರು ಒಡ್ಜೂರಿನ ಡಾ. ನಾಗೇಶ ಪ್ರಭುರವರು ನಾಡಿನ ಹೆಸರಾಂತ ಸಾಂಸ್ಕೃತಿಕ ಸಂಘಟನೆ ಕಲ್ಕಚ್ಚು ಪ್ರಕಾಶನ ಕೊಡ ಮಾಡುವ 2024 ನೇ ಸಾಲಿನ ‘ಕಲ್ಲಚ್ಚು ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ.
ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಯಲ್ಲಿ ಹಿರಿಯ ಪತ್ರಕರ್ತರು ಮತ್ತು ಲೇಖಕರಾಗಿರುವ ಡಾ. ನಾಗೇಶ್ ಪ್ರಭು ಅವರು ಮಂಗಳೂರಿನ ಕಲ್ಲಚ್ಚು ಪ್ರಕಾಶನದ 15ನೇ ಆವೃತ್ತಿಯ 2024ರ ಪ್ರತಿಷ್ಠಿತ “ಕಲ್ಲಚ್ಚು ಪ್ರಶಸ್ತಿ”ಗೆ ಆಯ್ಕೆ ಆಗಿದ್ದು, ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಗಣ್ಯ ಆತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುವುದೆಂದು ಪ್ರಕಾಶನದ ಮುಖ್ಯಸ್ಥ, ಸಾಹಿತಿ ಮಹೇಶ ಆರ್. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ ನಾಗೇಶ್ ಪ್ರಭು ಪ್ರಸ್ತುತ “ದಿ ಹಿಂದೂ” ಪತ್ರಿಕೆಯ ಬೆಂಗಳೂರು ಕಛೇರಿಯಲ್ಲಿ ಹಿರಿಯ ಉಪ ಸಂಪಾದಕರಾಗಿದ್ದು ಈವರೆಗೆ “ರಿಫ್ಲೆಕ್ಟಿವ್ ಶಾಡೋಸ್: ಪೊಲಿಟಿಕಲ್ ಎಕಾನಮಿ ಆಫ್ ವರ್ಲ್ಡ್ ಬ್ಯಾಂಕ್ ಲೆಂಡಿಂಗ್ ಟು ಇಂಡಿಯಾ” , “ಮಧ್ಯಮ ವರ್ಗ, ಮಾಧ್ಯಮ ಮತ್ತು ಮೋದಿ: ದಿ ಮೇಕಿಂಗ್ ಆಫ್ ಎ ನ್ಯೂ ಎಲೆಕ್ಟೋರಲ್ ಪಾಲಿಟಿಕ್ಸ್” ಮತ್ತು “ಧರ್ಮಸ್ಥಳ: ಅಭಿವೃದ್ಧಿಯ ಮಂತ್ರ” ಎಂಬ ಮೂರು ಪ್ರಮುಖ ಇಂಗ್ಲಿಷ್ ಪುಸ್ತಕಗಳನ್ನು ಬರೆದು ಪ್ರಕಟಿಸಿರುವರು.
ಮೂಲತಃ ಮಂಗಳೂರು ಬಳಿಯ ಒಡ್ಡೂರಿನವರಾದ ಡಾ.ಪ್ರಭು , ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ (JNU) ಎಂಎ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂಫಿಲ್ ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ಐಎಸ್‌ಇಸಿ), ಬೆಂಗಳೂರಿನಿಂದ ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದಿದ್ದು ಅವರ ಅಸಂಖ್ಯಾತ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ .ಅವರು ನೂರಾರು ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಮತ್ತು ಭಾರತದ ವಿವಿಧ ಕ್ಷೇತ್ರಗಳ ತಜ್ಞರನ್ನು ಸಂದರ್ಶಿಸಿದವರಾಗಿದ್ದಾರೆ.
ಪ್ರತಿಷ್ಠಿತ ಕಲ್ಲಚ್ಚು ಪ್ರಶಸ್ತಿಗೆ ಭಾಜನರಾಗಿರುವ ಡಾ. ನಾಗೇಶ ಪ್ರಭು ಅವರನ್ನು ಸಾಹಿತ್ಯ ವಲಯದ ಅನೇಕರು ಅಭಿನಂದಿಸಿದ್ದಾರೆ.
Be the first to comment