ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ತಂಗಳ ಇನ್ನಿಲ್ಲ


ದಾಂಡೇಲಿ: ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಉದ್ಯಮಿ ಸೈಯ್ಯದ್ ತಂಗಳ (57) ಬುಧವಾರ ಬೆಳಗಾವಿಯ ಕೆ.ಎಲ್. ಇ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.


ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಪಂಡಿತ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಯೂ ಆಕ್ಸಿಜನ್ ಸಮಸ್ಯೆಯಾದಾಗ ಬೆಳಗಾವಿಯ ಕೆ.ಎಲ್.ಇ.ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸುಮಾರು ಒಂದು ವಾರದಿಂದ ಕೆ.ಎಲ್.ಇ. ತುರ್ತು ನಿಗಾ ಘಟಕದಲ್ಲಿದ್ದ ಸೈಯ್ಯದ್ ತಂಗಳ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಇಹಲೋಕ ತ್ಯಜಿಸಿದರು.

ಮೃತರು ಮಡದಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗ ಹಾಗೂ ಸ್ನೇಹಿತರ ಬಳಗವನ್ನು ಅಗಲಿದ್ದಾರೆ.

ಉತ್ತಮ ಸಂಘಟಕರಾಗಿದ್ದರು : ಡಿಪ್ಲೊಮೊ & ಸಿವಿಲ್ ಎಂಜಿನಿಯರ ಪದವೀಧರರಾಗಿದ್ದ ಸೈಯ್ಯದ್ ತಂಗಳರವರು ಮೂಲತಹ ಗುತ್ತಿಗೆದಾರರು. ಯುವ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಇವರು ಯುವ ಕಾಂಗ್ರೆಸ್ ದಾಂಡೇಲಿ ಘಟಕದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. 2004 ರಲ್ಲಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇತೃತ್ವ ವಹಿಸಿಕೊಂಡ ತಂಗಳ ಅಲ್ಲಿಂದ ಇಲ್ಲಿಯವರೆಗೂ ಸತತ 17 ವರ್ಷಗಳ ಕಾಲ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದವರು. ಆರ್.ವಿ. ದೇಶಪಾಂಡೆಯವರ ಅತ್ಯಂತ ಆಪ್ತರೊಬ್ಬರಲ್ಲಾಗಿದ್ದ ಸೈಯ್ಯದ್ ತಂಗಳ್ ದೇಶಪಾಂಡೆಯವರ ಹಲವು ಗೆಲುವಿನಲ್ಲಿ ತಮ್ಮದೇ ಅದ ಶ್ರಮದ ಕೊಡುಗೆ ನೀಡಿದವರು. ಕ್ರಿಯಾಶೀಲ ವ್ಯಕ್ತಿತ್ವದ ತಂಗಳ ಒಬ್ಬ ಯಶಸ್ವೀ ಸಂಘಟಕರಾಗಿಯೂ, ಚತುರ ರಾಜಕಾರಣಿಯಾಗಿಯೂ ಗಮನ ಸೆಳೆದಿದ್ದರು. ಧಾರ್ಮಿಕವಾಗಿಯೂ, ಸಾಮಾಜಿಕವಾಗಿಯೂ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಿದ್ದ ಸೈಯ್ಯದ ತಂಗಳ ಜನಾನುರಾಗಿಯಾಗಿದ್ದರು. ಶೈಕ್ಷಣಿಕವಾಗಿಯೂ ಹಲವಾರು ಬಡ ಜನರಿಗೆ ಸಹಾಯ ಮಾಡುತ್ತಿದ್ದರು.


ಹಲವಾರು ವರ್ಷಗಳಿಂದ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದ ತಂಗಳ ಗುತ್ತಿಗೆದಾರರ ಸಮಸ್ಯೆಗಳ ಪರ ಹೋರಾಟ ನಡೆಸಿದ್ದರು.

ಕ್ಲಾಸ್ ಒನ್ ಗುತ್ತಿಗೆದಾರರಾಗಿ ರಾಜ್ಯದೆಲ್ಲಡೆ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದ ಇವರು ಇತ್ತೀಚೆಗೆ ಪ್ರವಾಸೋದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದರು.

ಸಂತಾಪ: ಅಗಲಿದ ಸಯ್ಯದ್ ತಂಗಳ ಅವರ ನಿಧನಕ್ಕೆ ಮಾಜಿ ಸಚಿವ’ ಶಾಸಕ ಆರ್.ವಿ. ದೇಶಪಾಂಡೆ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ, ಮಾಜಿ ಶಾಸಕ ಸುನೀಲ ಹೆಗಡೆ, ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ. ಹೆಗಡೆ, ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಸ್ಥಾಯಿ ಸಮಿತಿ ಅಧ್ಯಕ್ಷ ಆದಂ ದೇಸೂರ ಹಾಗೂ ಸದಸ್ಯರು , ಕಾಂಗ್ರೆಸ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಗರದ ಗಣ್ಯರನೇಕರು ಶೋಕ ವ್ಯಕ್ತಪಡಿಸಿದ್ದಾರೆ.

ದೆಹಲಿಯಿಂದ ಆರ್ವಿಡಿ ಔಷಧಿ ತರಿಸಿದ್ದರು
ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಸೈಯ್ಯದ್ ತಂಗಳರವರು ಗಂಭೀರ ಸ್ಥಿತಿಯಲ್ಲಿರುವುದನ್ನು ಆಸ್ಪತ್ರೆಯ ವೈದ್ಯರಿಂದ ತಿಳಿದುಕೊಂಡ ಶಾಸಕ ಆರ್.ವಿ. ದೇಶಪಾಂಡೆಯವರು ದೆಹಲಿಯಿಂದ ಬಯೋಟೆಕ್ ನ ನಿರ್ದೇಶಕರಾದ ಕಿರಣ ಮೋಜುಮದಾರ ಅವರಿಗೆ ಖುದ್ದಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಅಗತ್ಯ ಔಷಧಿಯನ್ನು ದೆಹಲಿಯಿಂದ ಬೆಳಗಾವಿಗೆ ವಿಮಾನದ ಮೂಲಕ ತರಿಸಿಕೊಟ್ಟು ಸಹಕರಿಸಿದ್ದರು. ಆದರೆ ದೇಶಪಾಂಡೆಯವರ ಪ್ರಯತ್ನ ಕೂಡಾ ಫಲ ಕಾಣಲಿಲ್ಲ. ಕೊನೆಗೂ ಸೈಯ್ಯದ್ ತಂಗಳ ಎಂಬ ಸಶಕ್ತ ನಾಯಕನನ್ನು ದಾಂಡೇಲಿ ಕಳೆದುಕೊಂಡಿದೆ.

About ಬಿ.ಎನ್‌. ವಾಸರೆ 704 Articles
ಬಿ.ಎನ್‌. ವಾಸರೆ (ಮೊ-9480043450)

2 Comments

  1. ಕೇಳಬಾರದ ಸಂಗತಿ ಇದು.ಆದರೂ ಘಟಿಸಿಹೋಯ್ತು!😢
    ನಿಜಕ್ಕೂ ತಂಗಳ ಅವರು ತಮ್ಮ ವ್ಯಕ್ತಿತ್ವದ ವರ್ಚಸ್ಸಿಗೆ ತಕ್ಕಂತೆ ಜನಾನುರಾಗಿ ಆಗಿದ್ದರು. ಭಾವೈಕ್ಯದ ಅವರ ನಡೆ ನುಡಿ ಗೌರವದಿಂದ ಕೂಡಿರುತ್ತಿದ್ದವು.ನಗರಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರ ಪರಿವಾರಕ್ಕೆ ಧೈರ್ಯ, ಅವರ ಆತ್ಮಕ್ಕೆ ಶಾಂತಿಯನ್ನು ಆ ಭಗವಂತ ನೀಡಲಿ.😪🙏

Leave a Reply

Your email address will not be published.


*