ಸೃಜನಶೀಲ ಮನಸ್ಥಿತಿ, ಕ್ರಿಯಾಶೀಲ ಪ್ರವೃತ್ತಿ ,ಕರ್ತವ್ಯ ಬದ್ಧತೆಯಿರುವ ಶಿಕ್ಷಕರಿಂದ ಚೈತನ್ಯ, ನಲಿ-ಕಲಿ ಮಾದರಿ ಕೋಣೆಗಳು ಅತ್ಯಾಕರ್ಷಕವಾಗಿ ನಿರ್ಮಾಣಗೊಂಡು ಮಕ್ಕಳ, ಪಾಲಕರ ಮನಸ್ಸನ್ನು ಗೆದ್ದ ಅದೆಷ್ಟೋ ಶಿಕ್ಷಕರ ಬಗ್ಗೆ ನಾವು ಕೇಳಿದ್ದೇವೆ. ಅವರ ಕೆಲಸಗಳನ್ನು ಮೆಚ್ಚಿ ,ಹಾರೈಸಿ ಹುರಿದುಂಬಿಸಿದ್ದೇವೆ. ಆದರೆ ಸರಕಾರಿ ಕಚೇರಿಯನ್ನು ತನ್ನ ಕರ್ತವ್ಯ ನಿರ್ವಹಿಸುವ ದೇವಸ್ಥಾನವೆಂದೇ ಪರಿಭಾವಿಸಿ ಚಿತ್ರಕಲಾ ಶಿಕ್ಷಕರಿಂದ ಕಲಾತ್ಮಕವಾಗಿ ಮೆರಗು ಕೊಟ್ಟವರು ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಎಂ .ಮೊಗೇರವರು.
ಒಂದು ಕಾಲದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ ಒಬ್ಬಂಟಿಗರಾಗಿ ಹೋಗಲು ಹೆದರುವ ಶಿಕ್ಷಕಿಯರು ಇಂದು ತಮ್ಮ ಕಚೇರಿಯನ್ನು ದೇವಸ್ಥಾನವೆಂದೇ ಭಾವಿಸಿ ಹೆಬ್ಬಾಗಿಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ನವವಧುವಿನಂತೆ ಶೃಂಗಾರಗೊಂಡ ಭಟ್ಕಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸದ್ದಿಲ್ಲದೆ ಶಿಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.
ನಮ್ಮೂರು ,ನಮ್ಮ ಶಾಲೆ, ನಮ್ಮ ಮಕ್ಕಳು, ನಮ್ಮ ಕಚೇರಿ ಎಂಬ ದೂರದೃಷ್ಟಿತ್ವ ಅವರ ಸೃಜನಶೀಲ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇಲಾಖೆಯ ಆದೇಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕ ಸ್ನೇಹಿ ಅಧಿಕಾರಿಯಾಗಿ ತಾಲೂಕಿನಾದ್ಯಂತ ಚಿರಪರಿಚಿತರು .ಶಿಕ್ಷಣವಂಚಿತ ಮಕ್ಕಳ ಪಾಲಿನ ಆಶಾಕಿರಣ ದಂತಿರುವ ಡಿ.ಎಂ .ಮೊಗೇರ್ ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ವ್ಯತ್ಯಾಸವಾದರೆ ಯಾರನ್ನೂ ಕ್ಷಮಿಸದೆ, ಅವರ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ದಕ್ಷತೆ ಹೊಂದಿದ ಅಪರೂಪದ ವ್ಯಕ್ತಿಗಳು. ತನ್ನ ಹುಟ್ಟೂರಿನಲ್ಲಿ ಸೇವೆ ಸಲ್ಲಿಸುವ ಅವಕಾಶಗಳು ನನ್ನ ಪಾಲಿಗೆ ಇರುವಾಗ ಏನಾದರೊಂದು ಹೊಸತನ್ನು ನೀಡುವ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಶೃಂಗಾರಗೊಂಡ ಶಿಕ್ಷಣಾಧಿಕಾರಿಗಳ ಕಛೇರಿಯೇ ಸಾಕ್ಷಿಯಾಗಿದೆ. ಬೋಧನಾ ಪದ್ಧತಿಯಾದ ರಚನಾ, ನಲಿ-ಕಲಿಯ ಬಗ್ಗೆ ವಿಶೇಷ ಪರಿಣಿತರಾದ ಶ್ರೀಯುತರ ದೃಷ್ಟಿಯಂತೆ ಸೃಷ್ಟಿ. ದೃಷ್ಟಿಯ ಬಾಗಿಲು ಎಷ್ಟೆಷ್ಟು ತೆರೆದಿತೊ ಅಷ್ಟಷ್ಟು ಸೃಷ್ಟಿಯ ರೂಪ ಒಳ ನುಗ್ಗುತ್ತದೆ. ತಿಳಿಯುತ್ತದೆ. ಕಂಗೊಳಿಸುತ್ತದೆ.
ದೃಷ್ಟಿ, ಸೃಷ್ಟಿ ಇಲ್ಲದ ಅನೇಕರ ಮಧ್ಯೆ ಹೊಸ ಆಲೋಚನೆಯೊಂದಿಗೆ ಕಲಾ ಶಿಕ್ಷಕರ ಸಹಕಾರದಿಂದ ಕಚೇರಿ ಅತ್ಯಾಕರ್ಷಕವಾಗಿದೆ. ಸಮಸ್ಯೆಯನ್ನು ಹೊತ್ತು ತರುವ ಶಿಕ್ಷಕರಿಗೆ ಕಚೇರಿಯ ಒಳ ಪ್ರವೇಶವೇ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ. ಶಿಕ್ಷಣ ಇಲಾಖೆಯಲ್ಲಿಅದೆಷ್ಟೊ ಕಲಾ ಶಿಕ್ಷಕರಿದ್ದಾರೆ. ಆದರೆ ಶಾಲೆಗೆ ಮಾತ್ರ ಸೀಮಿತರನ್ನಾಗಿ ಮಾಡಿ ಅಂತರ ಕಾಯ್ದುಕೊಂಡ ಅಧಿಕಾರಿಗಳೇ ಬಹುಪಾಲು ಇರುವಾಗ ದೇವಿದಾಸರೆಂಬ ಶಿಕ್ಷಣ ಅಧಿಕಾರಿ ಕೋವಿಡ್ ಸಂದರ್ಭದಲ್ಲಿ ಮಕ್ಕಳಿಲ್ಲದೇ ಶಾಲೆಯಲ್ಲಿ ಕುಳಿತ ಪ್ರೌಢ ಶಾಲಾ ಕಲಾ ಶಿಕ್ಷಕರನ್ನು ಒಂದು ಕಡೆ ಸೇರಿಸಿ ಕಚೇರಿಯ ಶೃಂಗಾರಕ್ಕಾಗಿ ತಮ್ಮ ವಿಚಾರವನ್ನು ಹಂಚಿಕೊಂಡಾಗ ಶ್ರೀವಲಿ ಪ್ರೌಢಶಾಲೆಯ ಅದ್ಭುತ ಚಿತ್ರ ಕಲಾವಿದ ಸಂಜೀವ ಗುಡಿಗಾರರ ಕಲಾಕುಂಚ ತಲೆಯಾಡಿಸಿ ಒಪ್ಪಿಕೊಂಡಿತು.
ಅವರ ಸಂಗಾತಿಗಳಾದ ಸೋನಾರಕೇರಿ ಪ್ರೌಢಶಾಲೆಯ ಮಹೇಶ ನಾಯ್ಕ, ಬೈಲೂರು ಪ್ರೌಢಶಾಲೆಯ ಮಂಜುನಾಥ ದೇವಾಡಿಗ, ಮುಂಡಳ್ಳಿ ಪ್ರೌಢಶಾಲೆಯ ಚೆನ್ನವೀರ ಹೊಸಮನೆ, ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ನಾರಾಯಣ ಮೊಗೇರ, ಅಂಜುಮನ್ ಪ್ರೌಢಶಾಲೆಯ ಮಹಮ್ಮದ್ ಸಾಧಿಕ ಶೇಖ ಸಮ್ಮತಿ ವ್ಯಕ್ತಪಡಿಸಿ ಸುಮಾರು ಹತ್ತು ದಿನಗಳ ಕಾಲ ಸೇವಾ ಮನೋಭಾವನೆಯಿಂದ ಕುಂಚ ದೊಂದಿಗೆ ದುಡಿದುದರ ಫಲವಾಗಿ ಕಚೇರಿ ಪವಿತ್ರ ದೇವಸ್ಥಾನದಂತೆ ಶೃಂಗಾರಗೊಂಡಿದೆ. ಜನಪದ ಕಲೆ ವರ್ಲಿ ಮತ್ತು ಕಲಾವಿದರ ಕಲ್ಪನೆಯ ಚಿತ್ರಗಳು ಗೋಡೆಯ ತುಂಬೆಲ್ಲ ರಾರಾಜಿಸುತ್ತಿದೆ. ಕೇವಲ ಎರಡೇ ಬಣ್ಣದಿಂದ ಇಡೀ ಕಚೇರಿ ಶೃಂಗಾರಗೊಂಡಿರುವುದು ಕಲಾವಿದ ಕೈಚಳಕಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಚೇರಿಯ ಗೇಟನ್ನು ಪ್ರವೇಶಿಸಿದೊಡನೆಯೇ ಎದುರಿಗೆ ಕಾಣುವುದು “ಶಿಕ್ಷಣವೇ ಜೀವನ, ಜೀವನವೇ ಶಿಕ್ಷಣ ” ಎನ್ನುವ ಧ್ಯೇಯವಾಕ್ಯ. ಎದುರಿನ ಗೋಡೆಯಲ್ಲಿ ಯೋಗ, ಅಕ್ಷರ ದಾಸೋಹ,ಬಾಬಾಲೆ ಶಾಲೆಗೆ, ನಾಡಹಬ್ಬ ಮುಂತಾದ ಚಿತ್ರಗಳು ಮನೋಜ್ಞವಾಗಿ ಮೂಡಿಬಂದಿದೆ. ಭಟ್ಕಳಿಗರ ಪ್ರಮುಖ ಜೀವನಾಧಾರ ಬಿಂಬಿಸುವ ಚಿತ್ರ ಮೀನಿನ ದ್ದಾದರೆ ,ಕಂಬದ ಮೇಲೆ ಜನಪದ ಕಲೆಯನ್ನು ಚಿತ್ರಿಸಲಾಗಿದೆ. ಪ್ರಚಲಿತ ನಾಣ್ಣುಡಿಯನ್ನು ಪ್ರದರ್ಶಿಸಲಾಗಿದೆ. ಇವೆಲ್ಲವೂ ನಿರ್ಮಾಣಗೊಂಡಿರುವುದು ಶಿಕ್ಷಣಾಧಿಕಾರಿಗಳ ಪ್ರೀತಿಯ ಮಾತಿನಿಂದ ಆದದ್ದೆ ಹೊರತು ಕಚೇರಿಯ ಆದೇಶದಿಂದಲ್ಲ. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದವರು ಚಿತ್ರಕಲೆಗೆ ಬೇಕಾದ ಬಣ್ಣವನ್ನು ಪೂರೈಸಿ ಸಹಕರಿಸುತ್ತಾರೆ.
ಹೊರಗಡೆ ಶೃಂಗಾರಗೊಂಡರೆ ಸಾಲದು ಎಂಬುದನ್ನು ಅರಿತ ಶಿಕ್ಷಕ ಸದಾಶಿವ ದೇಶಭಂಡಾರಿ ತಮ್ಮ ಸ್ವಂತ ಖರ್ಚಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೊಠಡಿಯನ್ನು ಶೃಂಗಾರ ಗೊಳಿಸಲು ಮುಂದಾಗಿರುತ್ತಾರೆ. ತನ್ನೂರಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಹೊಸ ಆಲೋಚನೆಗಳಿಗೆ ,ಚಿಂತನೆಗಳಿಗೆ ಅವಕಾಶವಾಗಲಿ ಎಂದು ಅವರ ದಕ್ಷತೆ, ಕಾರ್ಯಕ್ಷಮತೆ, ದೃಢವಾದ ಕರ್ತವ್ಯ ನಿಷ್ಠೆಗೆ ಇಂಬು ನೀಡುವ ಪರಿಯಲ್ಲಿ ಚೇಂಬರ್ ನಿರ್ಮಾಣವಾಗುತ್ತಿರುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನೋಬಲ ಹಿಗ್ಗಿಸಿದೆ.
ಯಾವುದೇ ಗುಂಪುಗಳಿಲ್ಲದ, ಸಿರಿವಂತರ ಬೆಂಬಲವಿಲ್ಲದ, ಜಾತಿಯ ಗೊಂದಲವಿಲ್ಲದ, ಶಿಕ್ಷಕರ ಹಿತಚಿಂತಕರಾದ, ಶಿಕ್ಷಕ ಸ್ನೇಹಿ ಅಧಿಕಾರಿಯಾದ “ಆಹೋ ರೂಪಂ ಆಹೋ ಧ್ವನಿಗೆ” ಎದೆಗುಡದ ತಾಲೂಕಿನ ತುಂಬೆಲ್ಲ ಚಿರಪರಿಚಿತರಾದ ದೇವಿದಾಸ ಮೊಗೇರವರ ಸೇವೆ ಜನಸ್ನೇಹಿಯಾಗಿ ದೀಪದಂತೆ ಬೆಳಗಲಿ .ಅವರ ಸೇವಾವಧಿಯಲ್ಲಿ ಕಚೇರಿಯಲ್ಲಿ ಬಾಕಿ ಉಳಿದ ಕಡತಗಳಿಗೆಲ್ಲ ಮುಕ್ತಿ ಸಿಗಲಿ. ಹೊರಗಿನ ಶುಬ್ರ ಗೋಡೆಯಂತೆ ಸದಾಕಾಲ ಅವರ ವ್ಯಕ್ತಿತ್ವ ಪ್ರಜ್ವಲಿಸಲೆಂದು ಸಹೃದಯಿ ಶಿಕ್ಷಕ ಬಳಗದ ಆಶಯವಾಗಿದೆ.
ಸುದ್ದಿ ಮಾಹಿತಿ ಓದಿ ಖುಷಿ ಆಯ್ತು. ಇಂತಹ ಅಧಿಕಾರಿಗಳು ಅವರೊಂದಿಗೆ ಸಹಕರಿಸಿ ಕ್ರಿಯಾಶೀಲರಾಗುವ ಶಿಕ್ಷಕರು ನಿಜಕ್ಕೂ ಸಮಾಜಕ್ಕೆ ಅಗತ್ಯವಿದೆ. ಇವರ ಮಾದರಿಯ ಕಾರ್ಯವನ್ನು ಉಳಿದವರೂ ಅನುಸರಿಸಿದರೆ ಎಷ್ಟು ಚಂದ.ಅಭಿನಂದನೆಗಳು ಅವರಿಗೆ ಮತ್ತು ತಮಗೆ.🌹🙏🏻
ತುಂಬಾ ಸುಂದರವಾಗಿ ಕಾಣುತ್ತಿದೆ.