ಬೆಟ್ಕುಳಿ ರಾಜು ನಾಯ್ಕರಿಗೆ ಒಲಿದು ಬಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ…

ʼಶಕ್ತಿಶಾಲಿಗಳಿಗಾಗಿ, ಶ್ರದ್ಧಾವಂತರಾಗಿ ಆಗ ಎಲ್ಲವು ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ…ʼ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಈ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದವರು ಕುಮಟಾ ತಾಲೂಕಿನ ಮಿರ್ಜಾನ ಪ್ರೌಢಶಾಲೆಯ ಶಿಕ್ಷಕ ರಾಜು ರಾಮನಾಯ್ಕರು.

ಮೂಲತ: ಬೆಟ್ಕುಳಿಯವರಾದ ಇವರ ತಂದೆ ರಾಮ ನಾಯ್ಕ, ತಾಯಿ ಶಾಂತಿ ನಾಯ್ಕ. 19 65 ರಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ಓದಿನಲ್ಲಿ ತುಂಬಾ ಚುರುಕು. ಬಾಲ್ಯದ ಶಿಕ್ಷಣವನ್ನು ಬೆಟ್ಕುಳಿ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಜನತಾ ವಿದ್ಯಾಲಯ ಮಿರ್ಜಾನಿನಲ್ಲಿಯೂ ಪೂರೈಸಿದರು .ಕನ್ನಡ ಮತ್ತು ಹಿಂದಿಯಲ್ಲಿ ಎಂ.ಎ.ಶಿಕ್ಷಣ ಪಡೆದ ನಂತರ ಎಂ.ಎಡ್.ಎಂಪಿಲ್ ಪದವಿಯನ್ನು ಧಾರವಾಡದಲ್ಲಿ ಮುಗಿಸಿದರು. ಅಂಜುಮನ್ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ,ಅಂಜುಮನ್ ಬಿ.ಎಡ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ .ಇಸ್ಲಾಮಿಯ ಆಂಗ್ಲ ಉದು೯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವಾ ಅನುಭವ ಹೊಂದಿದ ರಾಜು ನಾಯ್ಕ ಬಹುಮುಖ ಪ್ರತಿಭಾವಂತರಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾದರು.

ತಂದೆ ರಾಮ ನಾಯ್ಕರು ಪ್ರಾಥಮಿಕ ಶಾಲಾ ಶಿಸ್ತಿನ ಶಿಕ್ಷಕರಾಗಿರುವುದರಿಂದ ಅವರ ಪ್ರಭಾವ ಮಗನ ಕಲಿಕೆಯಲ್ಲಿ, ಉತ್ತಮ ಸಂಸ್ಕಾರ ಪಡೆಯುವಲ್ಲಿ , ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈಯಲು ನೆರವಾಯಿತು. 2009ರಲ್ಲಿ ಜನತಾ ವಿದ್ಯಾಲಯ ಮಿರ್ಜಾನ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದಾಗಿನಿಂದ ಇವರ ಕ್ರಿಯಾಶೀಲತೆ ಇನ್ನಷ್ಟು ಪರಿಪಕ್ವಗೊಂಡು ಹಿಂದಿ ಮತ್ತು ಸಂಸ್ಕೃತ ವಿಷಯದಲ್ಲಿ ಪ್ರಭುತ್ವ ಮಟ್ಟದ ಕಲಿಕೆ ಪ್ರಾರಂಭಿಸಿ ಮಾನ್ಯ ಆಯುಕ್ತರಾದ ಮೇಜರ ಸಿದ್ದಲಿಂಗಯ್ಯನವರು ನಡೆಸಿದ ಇವರ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದ ವಿಶ್ಲೇಷಣೆ ನಡೆದು ಅತ್ಯುತ್ತಮ ಸಾಧನೆಯ ಪತ್ರ ನೀಡಿರುವುದು ಇವರ ಕರ್ತವ್ಯಕ್ಕೆ ಹಿಡಿದೆ ಕೈಗನ್ನಡಿಯಾಗಿದೆ.
ಅಧ್ಯಾಪಕನಾದವನು ನಾಲ್ಕು ಗೋಡೆಗೆ ಸೀಮಿತವಾಗಿರದೆ, ಸಾಮಾಜಿಕ ಬದಲಾವಣೆಗಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಹರಿಕಾರರಾಗಿ ಹಗಲಿರುಳು ಶ್ರಮಿಸಿದ ವಿಶಿಷ್ಟ ವ್ಯಕ್ತಿತ್ವ ರಾಜು ನಾಯ್ಕರದ್ದಾಗಿದೆ.

ವಿಷಯ ಬೋಧನೆಯ ಜೊತೆಗೆ ಸ್ಕೌಟ್ ಮತ್ತು ಗೈಡ್ಸ್ ದಳದ ಮಾರ್ಗದರ್ಶಕರಾಗಿ ಇವರು ಸಲ್ಲಿಸಿದ ಸೇವೆ ,ಮಕ್ಕಳಿಗೆ ಒದಗಿಸಿದ ಅವಕಾಶ ಅನನ್ಯವಾದದ್ದು .ದೇಶ ವಿದೇಶ ಸುತ್ತಿ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿದ ಅಪರೂಪದ ಸಾಧಕರು .2012ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 24ನೇ ಏಷ್ಯಾ ಮಟ್ಟದ ಪರಿಸರ ವಿಷಯದ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದರು. 2013ರಲ್ಲಿ ನೇಪಾಳ ದೇಶದ ಚಿತ್ವಾನ ಪ್ರದೇಶದಲ್ಲಿ ನಡೆದ ಎರಡನೇ ಅಂತರಾಷ್ಟ್ರೀಯ ಸಮ್ಮೇಳನ ಸಾಕ೯ ಹಾಗೂ ಇತರೇ ಗೌರವ 14 ದೇಶಗಳೊಂದಿಗೆ ಜನತಾ ವಿದ್ಯಾಲಯ ಮಿರ್ಜಾನ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಸ್ಕೌಟ್ಸ್ ಕರ ದೇವಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದು. 2015 ಮತ್ತು 2018ರಲ್ಲಿ ಜಪಾನ್ ದೇಶದ ಯಮಗುಚ್ಚಿಯಲ್ಲಿ ನಡೆದ 23ನೇ ಸ್ಕೌಟ್ಸ್ ವಿಶ್ವಮಟ್ಟದ ಸಮ್ಮೇಳನದಲ್ಲಿ ಭಾರತದ ಲೀಡರ್ ಆಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 2019ರಲ್ಲಿ 24ನೇ ವಿಶ್ವಮಟ್ಟದ ಸ್ಕೌಟ್ ಮತ್ತು ಗೈಡ್ಸ್ ಸಮ್ಮೇಳನ ಉತ್ತರ ಅಮೇರಿಕಾದ ವೆಸ್ಟ್ ವೇರಿ ಜನಿಯಾದಲ್ಲಿ ನಡೆದ ಭಗವದ್ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸೆಗೊಳ ಪಟ್ಟಿರುತ್ತಾರೆ. ಸ್ಕೌಟ್ಸ್
ಶಾಖೆಯ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪದಕ ಪಡೆದ ರಾಜು ನಾಯ್ಕ ರಾಷ್ಟ್ರೀಯ ಭಾವೈಕ್ಯತಾ ಸ್ಪರ್ಧಾ ಶಿಬಿರದಲ್ಲಿ ಭಾಗವಹಿಸಿದ್ದರು.ಪಂಜಾಬ್, ಜಾರ್ಖಂಡ್ ಮುಂತಾದ ದೇಶಗಳ ಸ್ಕೌಟ್ ಮತ್ತು ಗೈಡ್ಸ್ ಸಮ್ಮೇಳನದಲ್ಲಿ ಭಾಗವಹಿಸಿ ಅದ್ವಿತೀಯ ಸಾಧನೆ ಮೆರೆದಿದ್ದಾರೆ.

ಭಾರತ ಸಂಸ್ಕೃತಿ ಪ್ರತಿಷ್ಠಾನ ರಾಮಾಯಣ ಮಹಾಭಾರತಗಳಂತಹ ಮಹಾನ ಗ್ರಂಥಗಳ ಆದರ್ಶ ಚಿತ್ರಣವನ್ನು ಮಕ್ಕಳಿಗೆ ತಿಳಿಸಿರುವ ಕಾರಣಕ್ಕಾಗಿ ಅಭಿನಂದನಾ ಪತ್ರ ನೀಡಿ ಗೌರವಿಸಿದೆ. ರಾಜ್ಯಮಟ್ಟದ ಹಿಂದಿ ಕಾನ್ಫರೆನ್ಸ್ ನಲ್ಲಿ ಹಿಂದಿ ಶಿಕ್ಷಕರ ಸಂಘ ಇವರ ಸಾಧನೆಗೆ ಗೌರವಿಸಿ ಸನ್ಮಾನಿಸಿದೆ.ಪ್ರವಾಹ ಪೀಡಿತ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ನೀಡಿ ಮಕ್ಕಳ ಪಾಲಿನ ಆರಾಧ್ಯರೆನಿಸಿಕೊಂಡಿರುತ್ತಾರೆ. ಕೋವಿಡ್ 19 ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮಾಸ್ಕ ವಿತರಿಸಿದ ಹೃದಯವಂತ ಅಧ್ಯಾಪಕ ಕೆನರಾ ವೆಲ್ಫೇರ್ ಟ್ರಸ್ಟ್ ನಡೆಸುವ ಶೈಕ್ಷಣಿಕ ಪ್ರಗತಿ ಪರಿಶೀಲನಾ ತಂಡದಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ .

ಮಿರ್ಜಾನ ಪ್ರೌಢಶಾಲೆಯ ಒಬ್ಬ ಹಿಂದಿ ಶಿಕ್ಷಕನ ಆದರ್ಶದ ಒರತೆಯಲ್ಲಿ ಸಂಸ್ಕಾರದ ಹೊಳೆ ಹರಿದಿರುವ ದಂತೂ ಸತ್ಯ .ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳದೆ ಎಲ್ಲವೂ ತನ್ನ ಕರ್ತವ್ಯವೆಂದು ಭಾವಿಸಿ ಶೈಕ್ಷಣಿಕ, ಸಾಮಾಜಿಕವಾದ ಬದಲಾವಣೆಗಾಗಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಅಪರೂಪದ ಆದರ್ಶ ಶಿಕ್ಷಕರಿಗೆ ಈ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಬಂದಿರುವುದು ನಾಡಿಗೆ ನಾಡೇ ಹೆಮ್ಮೆ ಪಡುವಂತಾಗಿದೆ.ಇನ್ನಷ್ಟು ಪ್ರಶಸ್ತಿ ,ಪುರಸ್ಕಾರಗಳು ಅವರನ್ನರಸಿ ಬರಲಿ ಎಂದು ಹಾರೈಸೋಣ.


– ಪಿ.ಆರ್ ನಾಯ್ಕ. ಹೊಳೆಗದ್ದೆ. ಕುಮಟಾ

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*