ದಾಂಡೇಲಿ: ಅದೆಲ್ಲಿಯೋ ಹೇಗೋ ಗಾಯಮಾಡಿಕೊಂಡಿದ್ದ ಮಂಗವೊಂದು ನಗರದ ಖಾಸಗಿ ಆಸ್ಪತ್ರೆಗೆ ಬಂದು ಬಾಗಿಲಲ್ಲಿ ಬಹು ಸಮಯದವರೆಗೂ ನಿಂತು, ನಂತರ ಮುಲಾಮು ಹಚ್ಚಿದ ಬಳಿಕವೇ ವಾಪಸ್ಸಾದಂತಹ ಅಪರೂಪದ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ಇದು ನಡೆದಿದ್ದು ನಗರದ ಹೃದಯ ಭಾಗದಲ್ಲಿರುವ ನರ್ಸಿಂಗ್ ಹೋಮ್‍ನಲ್ಲಿ. ಅಲ್ಲಿ ಎಂದಿನಂತೆ ಚಿಕಿತ್ಸೆ ಪಡೆಯಲು ಬಹಳ ಜನ ಸಾಲು ಹಾಕಿದ್ದರು. ಅಷ್ಟು ಹೊತ್ತಿಗೆ ಎಲ್ಲಿಂದಲೋ ಬಂದ ಮಂಗವೊಂದು ಬಾಗಿಲಲ್ಲಿ ನಿಂತುಕೊಂಡಿತ್ತು. ಆಸ್ಪತ್ರೆಯ ಸಿಬ್ಬಂದಿಗಳು ಆ ಮಂಗವನ್ನು ಓಡಿಸಲು ಪ್ರಯತ್ನಿಸಿದರಾದರೂ ಅದು ಹೋಗದೇ ಆಸ್ಪತ್ರೆಯಳಗೆ ಹೋಗುವ ಪ್ರಯತ್ನ ಮಾಡುತ್ತಿತ್ತು.
ಆಸಂದರ್ಭದಲ್ಲಿ ಅಲ್ಲಿ ನಿಂತಿದ್ದ ಜನರು ಮಂಗ ಗಾಯಗೊಂಡಿರುವುದನ್ನು ಗಮನಿಸಿದ್ದಾರೆ. ಬಹುಶಹ ಅದು ನೋವಿನಿಂದ ನರಳುತ್ತಿರಬೇಕು. ನಿಜವಾಗಿಯೂ ತನ್ನ ಗಾಯ ಮತ್ತು ನೋವು ಪರಿಹಾರಕ್ಕೆ ಆಸ್ಪತ್ರೆಗೆ ಬಂದಿತ್ತೋ ಇಲ್ಲವೋ ತಿಳಿಯದು. ಆದರೆ ಅದು ಸುತಾರಾಂ ಆಸ್ಪತ್ರಯಿಂದ ಹೊರ ನಡೆಯಲಿಲ್ಲ. ಆಶ್ಪತ್ರೆಯ ಸಿಬ್ಬಂದಿಗಳು ಕೋಲು ಹಿಡಿದು ಮಂಗನನ್ನು ಓಡಿಸಲು ಪ್ರಯತ್ನಿಸಿದರಾದರೂ ಅದು ಜಾಗ ಬಿಟ್ಟು ಕದಲಲಿಲ್ಲ. ಅಲ್ಲಿ ಸೇರಿದ್ದ ಜನ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅದಕ್ಕೊಂದು ಔಷಧಿ ನೀಡುವಂತೆ ಕೇಳಿದ್ದಾರೆ. ಆಗ ಅಲ್ಲಿದ್ದವರು ‘ನಿಮ್ಮ ಹತ್ರ ಆಗದಿದ್ದರೆ ನಮಗೆ ಮುಲಾಂ ಕೊಡಿ ನಾವು ಹಚ್ಚುತ್ತೇವೆ’ ಎಂದಿದ್ದಾರೆ. ಇದನ್ನು ಕೇಳಿಸಿಕೊಂಡ ಮಂಗ ತನಗೆ ಅರ್ಥವಾಯಿತೆಂಬ ರೀತಿಯಲ್ಲಿ ಹಾಗೆ ಹೇಳಿದವರತ್ತ ತಿರುಗಿ ಧೈನ್ಯತೆಯಿಂದ ನೋಡಿದೆ.


ಅಷ್ಟು ಹೊತ್ತಿಗೆ ಬಂದಿಬ್ಬರು ಸೇರಿ ಮಂಗನನ್ನು ಎತ್ತಿಕೊಂಡು ನೋವು ನಿವಾರಕ ಮುಲಾಂ ತಂದು ಆ ಮಂಗನ ದೇಹದ ಮೇಲೆ ಗಾಯವಾದ ಸ್ಥಳದಲ್ಲಿ ಹಚ್ಚತೊಡಗಿದಾಗ ಮಂಗ ಯಾವ ಕಿರಿಕ್ ಮಾಡದೇ ಸಮಾಧಾನದಿಂದಲೇ ಹಚ್ಚಿಸಿಕೊಂಡಿತು. ಮುಲಾಮು ಹಚ್ಚುವಾಗ ಸಹಕರಿಸುತ್ತಿತ್ತು. ತನ್ನ ಮೈಮೇಲೆ ಗಾಯವಾಗಿದ್ದ ಜಾಗವನ್ನು ತೋರಿಸುತ್ತಿತ್ತು. ನಂತರ ಬಹಳ ಸಮಯದವರೆಗೆ ಅಲ್ಲಿಯೇ ಕುಳಿತಿದ್ದ ಮಂಗ ನೋವು ನಿವಾರಣೆಯಾಯೊತೋ ಏನೋ ಅಲ್ಲಿಂದ ಹೋಗಿ ಬಿಟ್ಟಿತ್ತು.
ಇದನ್ನು ನೋಡುತ್ತಿದ್ದರು ಇದೊಂದು ರೀತಿಯ ವಿಸ್ಮಯದಂತೆ ಅನುಭವಿಸಿದರು. ಮಂಗನಿಗೆ ಗಾಯವಾದರೆ ಅದು ನಿಜವಾಗಿಯೂ ಆಸ್ಪತ್ರೆಯನ್ನು ಹುಡುಕಿ ಚಿಕಿತ್ಸೆಗಾಗಿ ಬಂದಿತ್ತೇ ಎಂಬುದು ಕೊನೆಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿತ್ತು.
Be the first to comment