ಬದುಕಿನ ಬಂಡಿಗೆ ಎಕ್ಸಲೇಟರ್ ನೀಡಲಾಗದ ಸ್ಥಿತಿಯಲ್ಲಿರುವ ಖಾಸಗಿ ವಾಹನಗಳ ಚಾಲಕರು

ಬಿ.ಎನ್. ವಾಸರೆ

ದಾಂಡೇಲಿ: ತಮ್ಮ ಬದುಕಿನ ಬಂಡಿಯ ನಿರ್ವಹಣೆಗಾಗಿ ತಮ್ಮ ಖಾಸಗಿ ವಾಹನಗಳ ಎಕ್ಸಲೇಟರ್ ತುಳಿಯುತ್ತ, ಗೇರ್ ಬದಲಾಯಿಸಿ ಗಾಡಿ ನಡೆಸುತ್ತಿದ್ದ ಹಲವು ವಿಭಾಗಗಳ ಚಾಲಕರು ಇದೀಗ ಕೊರೊನಾ ಕಾರಣದ ಲಾಕ್‍ಡೌನನಿಂದಾಗಿ ತಮ್ಮ ನಿಜ ಬದುಕೆಂಬ ಬಂಡಿಯ ಎಕ್ಸಲೇಟರ್ ತುಳಿಯಲಾಗದೇ, ನಾಳೆಯ ಬದುಕಿಗೆ ದಾಟುವ ಗೇರ್ ಬದಲಾಯಿಸಲಾಗದೇ ಜೀವನ ಸಂಕಷ್ಠದಲ್ಲಿದ್ದಾರೆ.

ಇದು ಎಲ್ಲ ಖಾಸಗಿ ( ಪ್ರಯಾಣಿಕರ ಹಾಗೂ ಸರಕು ಸಾಗಾಟದ) ವಾಹನ ಚಾಲಕರ ಪರಿಸ್ಥಿತಿ ಎಂದರೆ ತಪ್ಪಾಗಲಾರದು. ಹಾಗೆ ನೋಡಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಲಾರಿ ª ಚಾಲಕರು, ಕ್ಲೀನರ್‍ಗಳು, ಟ್ಯಾಕ್ಸಿ ಚಾಲಕರು, ರಿಕ್ಷಾ ಹಾಗೂ ಗೂಡ್ಸ್ ರಿಕ್ಷಾಚಾಲಕರು, ಪ್ರಯಾಣಿಕರ ಸಣ್ಣ ವಾಹನ (ಕೃಷರ್, ಟ್ರ್ಯಾಕ್ಸ್, ಟೆಂಪೋ, ಜೀಪ್) ಚಾಲಕರು, ಟಾಟಾ ಏಎಸ್ ಚಾಲಕರು ಸೇರಿದಂತೆ ಸರಿ ಸುಮಾರು 5000 ಕ್ಕೂ ಹೆಚ್ಚಿನ ಜನರು ಚಾಲಕ ವೃತ್ತಿಯನ್ನೇ ನೆಚ್ಚಿಕೊಂಡವರಿದ್ದಾರೆ. ಇವರೆಲ್ಲರೂ ಸಹ ಇದೀಗ ದಿನದ ದುಡಿಮೆಯಿಲ್ಲದೇ ಕಷ್ಠದ ಸ್ಥಿತಿಯಲ್ಲಿದ್ದಾರೆ.


ಲಾರಿ ಚಾಲಕರು: ದಾಂಡೇಲಿ ಇದು ಉದ್ಯಮ ನಗರವಾಗಿರುವುದರಿಂದ ಇಲ್ಲಿ ಲಾರಿಗಳ ಸಂಖ್ಯೆ ಒಂದಿಷ್ಟು ಹೆಚ್ಚೇ ಇದೆ ಎನ್ನಬಹುದು. ಇಲ್ಲಿ ಸರಿ ಸುಮಾರು 300ಕ್ಕೂ ಹೆಚ್ಚಿನ ಸ್ಥಳೀಯ ಲಾರಿ (ಹೆವಿ) ಚಾಲಕರಿದ್ದಾರೆ. ಕಂಪನಿ ತನ್ನ ಉತ್ಪಾದನೆಯ ಕಚ್ಚಾವಸ್ತು ತಂದರೆ, ಮತ್ತು ಉತ್ಪಾದನೆ ಬೇರೆಡೆ ಸಾಗಿಸಿದರೆ ಇವರಿಗೆ ಕೆಲಸ. ಆದರೆ ಸದ್ಯ ಈ ಸರಕು ಸಾಗಾಟ ಸ್ಥಗಿತವಾಗಿದ್ದರಿಂದ ಈ ಲಾರಿ ಚಾಲಕರು ಸಹ ತಮ್ಮ ದುಡಿಮೆಯಿಲ್ಲದೇ ಸೊರಗಿದ್ದಾರೆ.
ರಿಕ್ಷಾ ಚಾಲಕರು: ದಾಂಡೇಲಿಯಲ್ಲಿ ಒಟ್ಟೂ 360 ರಿಕ್ಷಾಗಳಿವೆ. ಲಾಕ್‍ಡೌನ್‍ನಿಂದ ಈಗ ಈ ರಿಕ್ಷಾಗಳು ನಿಂತು ತಿಂಗಳುಗಳೆ ಕಳೆದಿದೆ. ಇವರ ನಿತ್ಯದ ಅನ್ನಕ್ಕೆ ನಿತ್ಯದ ದುಡಿಮೆಯೇ ಆಧಾರವಾಗಿತ್ತು. ಹೀಗಿರುವಾಗ ತಿಂಗಳುಗಳ ಕಾಲ ದುಡಿಮೆಯಿಲ್ಲ ಎಂದರೆ ಈ ರಿಕ್ಷಾ ಚಾಲಕರ ಸ್ಥಿತಿ ಬಹಳ ಚಿಂತಾಜನಕವಾಗಿದೆ.


ಟ್ಯಾಕ್ಸಿಗಳು: ನಗರದಲ್ಲಿ ಪ್ರಯಾಣಿಕರನ್ನು ಸಾಗಿಸುವ (ಹಳದಿ ನಂಬರ್ ಪ್ಲೇಟ್‍ನ) ಟ್ಯಾಕ್ಸಿಗಳೂ 85 ಕ್ಕೂ ಹೆಚ್ಚಿವೆ. ಇದನ್ನು ಹೊರತು ಪಡಿಸಿ ವೈಟ್ ಬೋರ್ಡನಲ್ಲೇ ಬಾಡಿಗೆ ನಡೆಸುವವರೂ ಇದ್ದರು. ಈ ವಾಹನಗಳಿಗೆ ನಂಬಿಕೊಂಡ ಬದಲಿ ಚಾಲಕರು ಮತ್ತೆ ಬೇರೆ ಇದ್ದಾರೆ. ಇವರೆಲ್ಲರೂ ಸಹ ತಿಂಗಳಿಂದ ಮನೆಯಲ್ಲೇ ಇದ್ದಾರೆ.
ಟೆಂಪೋ, ಟ್ರಾಕ್ಸ್: ದಾಂಡೇಲಿಯಿಂದ ಧಾರವಾಡ, ಯಲ್ಲಾಪುರ, ಹಳಿಯಾಳ, ಜೋಯಿಡಾ ರಾಮನಗರಕ್ಕೆ ಪ್ರಯಾಣಿಕರ ಸಾಗಿಸುವ ಲಘು ವಾಹನಗಳು (ಕೃಷರ್, ಟ್ರ್ಯಾಕ್ಸ್, ಜೀಪ್ ಹಾಗೂ ಮಿನಿ ಬಸ್ ) 80ಕ್ಕೂ ಹೆಚ್ಚಿವೆ. ಇದನ್ನೇ ನಂಬಿಕೊಂಡಿರುವ ಚಾಲಕರು 100ರಷ್ಟಿದ್ದಾರೆ. ಈಗ ಇವರೆಲ್ಲರೂ ದಿನದ ಬದುಕಿಗಾಗಿ ಕಷ್ಠದಲ್ಲಿದ್ದಾರೆ.
ಇತರೆ ವಾಹನಗಳು: ಇನ್ನು ನಗರದಲ್ಲಿ ಸಣ್ಣ ಪುಟ್ಟ ಸರಕು ಸಾಗಿಸುವ ಟಾಟಾ ಏಎಸ್ ವಾಹನಗಳು 85ಕ್ಖೂ ಹೆಚ್ಚಿವೆ. ಗೂಡ್ಸ ರಿಕ್ಷಾಗಳು, ಮಿನಿ ಬಸ್‍ಗಳು ಸಾಕಷ್ಟಿವೆ. ಇದಲ್ಲದೇ ಚಾಲಕ ವೃತ್ತಿಯನ್ನೇ ಬದುಕನ್ನಾಗಿಸಿಕೊಂಡಿರುವ ಬದಲಿ ವ್ಯವಸ್ಥೆಯ ನೂರಾರು ಚಾಲಕರಿದ್ದಾರೆ. ಇವರೂ ಸಹ ಬದುಕಿನ ಸಂಕಷ್ಠದಲ್ಲಿದ್ದಾರೆ.


ಚಾಲಕರೇ ಮಾಲಕರು: ದಾಂಡೇಲಿಯಲ್ಲಿರುವ ಸಣ್ಣ ಹಾಗೂ ದೊಡ್ಡ ವಾಹನಗಳೂ ಸೇರಿ ಎಲ್ಲ ವಿಭಾಗಗಳ ಚಾಲಕರು ಸಾವಿರಕ್ಕೂ ಹೆಚ್ಚಾಗುತ್ತಾರೆ, ಈ ಸಾವಿರ ಚಾಲಕರ ಕುಟುಂಭ ಈ ಕೊರೊನಾ ಲಾಕ್‍ಡೌನ್ ಕಾರಣಕ್ಕೆ ಕಷ್ಠಕಾಲದಲ್ಲಿದೆ. ಇದಷ್ಟೇ ಅಲ್ಲದೇ ಕೆಲ ವಾಹನಗಳ ಮಾಲಕರೇ ಚಾಲಕರಿರುತ್ತಾರೆ. ಇವರಲ್ಲಿ ಕೆಲವರು ಮಾತ್ರ ಸಾಲದಿಂದ ಮುಕ್ತವಾಗಿರಬಹುದು. ಆದರೆ ಎಲ್ಲ ಸ್ಥರದ ಹಲವಾರು ವಾಹನಗಳ ಚಾಲಕರು ತಮ್ಮ ವಾಹನಗಳ ಸಾಲದ ಕಂತು ( ಒಂದೆರಡು ತಿಂಗಳು ರಿಯಾಯತಿ ಇದ್ದರೂ ) ಇಂದಲ್ಲಾ ನಾಳೆ ಬಡ್ಡಿ ಸಹಿತ ಭರಣ ಮಾಡಲೇ ಬೇಕಿದೆ. ಅದಷ್ಟೇ ಅಲ್ಲದೇ ತೆರಿಗೆ ಹಾಗೂ ವಿಮಾ ಹಣವನ್ನಂತೂ ಕಟ್ಟಲೇ ಬೇಕಿದೆ. ದುಡಿಮೆಯಿಲ್ಲದ ಬದುಕಿನ ಜೊತೆಗೆ ಈ ಎಲ್ಲ ಸಂಕಷ್ಠಗಳಿಂದ ಖಾಸಗಿ ವಾಹನಗಳ ಚಾಲಕರು ಕಂ ಮಾಲಕರು ಈಗಾಗಲೇ ಕಂಗಾಲಾಗಿದ್ದಾರೆ. ಈ ಲಾಕ್‍ಡೌನ್ ಇನ್ಣೂ ಮುಂದುವರೆದರೆ ತಮ್ಮ ಗತಿಯೇನಪ್ಪಾ ಎನ್ನುತ್ತ ಮುಗಿಲು ನೋಡುತ್ತಿದ್ದಾರೆ.
ಚಾಲಕರ ಅಸಹಾಯಕ ನುಡಿ ( ಬಾಕ್ಸ್)

• ನಾವು ಲಾರಿ ಚಾಲಕರು ಕೊರೊನಾ ಲಾಕ್‍ಡೌನ್‍ನಿಂದ ಬಹಳ ಸಂಕಿಷ್ಠದಲ್ಲಿದ್ದೇವೆ. ನಾವು ದುಡಿದರೆ ಮಾತ್ರ ನಮ್ಮ ನಮ್ಮ ಮನೆ ನಡೆಯುತ್ತದೆ. ಈಗ ಕೆಲಸವಿಲ್ಲದೇ ಒಂದು ತಿಂಗಳಾಗಿದೆ. ಇನ್ನೂ ಮುಂದುವರೆದರೆ ನಮ್ಮ ಕುಟುಂಭದ ನಿರ್ವಹಣೆ ಬಹಣ ಕಷ್ಠ. ಈಗಾಗಲೇ ನಮ್ಮ ಸಮಸ್ಯೆಯ ಬಗ್ಗೆ ಸರಕಾರಕ್ಕೆ ಮನವಿ ಮಾಡಿದ್ದೇವೆ. ಸರಕಾರ ಎಲ್ಲ ಚಾಲಕರ ಬಗ್ಗೆ ಗಮನ ಹರಿಸಬೇಕು.

-ರಮೇಶ ಅಧ್ಯಕ್ಷರು, ದಾಂಡೇಲಪ್ಪ ಹೆವಿ ಡ್ರೈವರ್ ಅಸೋಶಿಯೇಶನ್, ದಾಂಡೇಲಿ

ದಿನದ ದುಡಿಮೆಯೇ ನಮಗೆ ಆದಿನ ಬದುಕಿಗಾಗುತ್ತದೆ. ಆದರೆ ಈಗ ಲಾಕ್‍ಡೌನ್‍ನಿಂದಾಗಿ ಒಂದು ತಿಂಗಳು ಮನೆಯಲ್ಲಿದ್ದೇವೆ. ನಮ್ಮ ರಿಕ್ಷಾ ಮಾಲಕರ ಹಾಗೂ ಚಾಲಕರ ಬದುಕು ಬಹಳ ಕಷ್ಠವಾಗುತ್ತಿದೆ. ಈ ನಡುವೆ ತೆರಿಗೆ, ಸಾಲ, ವಿಮಾ ಹಣ ಭರಣ ಮಾಡಲೇ ಬೇಕು. ನಮ್ಮ ಎಲ್ಲ ಖಾಸಗಿ ವಹನಗಳ ಚಾಲಕರಿಗೆ ಸರಕಾರ ಸಹಾಯ ಮಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

-ಬಾಬಾಸಾಬ ಜಮಾದಾರ್, ಅಧ್ತಕ್ಷರು, ಆಟೋ ರಿಕ್ಷಾ ಚಾಲಕರ, ಮಾಲಕರ ಸಂಘ, ದಾಂಡೇಲಿ
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*