ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಭಾಗವಾಗಿ ಹೊರಡುವ ಕನ್ನಡ ರಥಕ್ಕೆ ಸೆಪ್ಟಂಬರ್ 22ರಂದು ಸಿದ್ದಾಪುರದಲ್ಲಿ ಚಾಲನೆ

ಮಂಡ್ಯದಲ್ಲಿ ಡಿಸೆಂಬರ್ 20, 21, 22 ರಂದು ನಡೆಯುತ್ತಿರುವ 87ನೇ ಅಖಿಲ ಭಾರತ  ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ರಾಜ್ಯಾದ್ಯಂತ ಕನ್ನಡದ  ರಥ ಸಂಚರಿಸಲಿದ್ದು ಈ ಕನ್ನಡದ ರಥಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನ ಗಿರಿಯಲ್ಲಿರುವ ಭುವನೇಶ್ವರಿ  ದೇವಿಯ ಸನ್ನಿಧಿಯಲ್ಲಿ ಸೆಪ್ಟೆಂಬರ್ 22ರಂದು ಚಾಲನೆ ನೀಡಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ನಾಡೋಜ ಡಾ. ಮಹೇಶ ಜೋಶಿಯವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂತರದಲ್ಲಿ ಇಂಥಹದೊಂದು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಕಳೆದ ವರ್ಷ ಹಾವೇರಿಯಲ್ಲಿ ಸಮ್ಮೇಳನ ನಡೆದಾಗ ಕೂಡ ಕನ್ನಡ ರಥಕ್ಕೆ ಸಿದ್ದಾಪುರದಲ್ಲಿ ಚಾಲನೆ ನೀಡಲಾಗಿತ್ತು.   ಕಸಾಪ ರಾಜ್ಯಾಧ್ಯಕ್ಷ ನಾಡೋಜ  ಡಾ. ಮಹೇಶ ಜೋಶಿಯವರ ಪರಿಕಲ್ಪನೆಯಂತೆ ಈ ಬಾರಿ ಕೂಡ ಅದನ್ನೇ ಮುಂದುವರಿಸಲಾಗುತ್ತಿದೆ.  ನಮ್ಮ ನಾಡ ದೇವಿ ಭುವನೇಶ್ವರಿಯ ದೇಗುಲ ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ ಮಾತ್ರ.  ಹಾಗಾಗಿ ಈ  ಭುವನಗಿರಿಯ ನಾಡದೇವಿಯ ಸನ್ನಿಧಿಯಲ್ಲಿ ಕನ್ನಡ ರಥಕ್ಕೆ ಚಾಲನೆ ನೀಡುವ ಒಂದು ಪವಿತ್ರ ಕಾರ್ಯವನ್ನ ಮಾಡಲಾಗುತ್ತಿದೆ.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರು ಉದ್ಘಾಟಿಸಲಿದ್ದು,  ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ  ನಾಡೋಜ ಡಾ. ಮಹೇಶ ಜೋಶಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಭೀಮಣ್ಣ ನಾಯ್ಕ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು  ಭಾಗವಹಿಸಲಿದ್ದಾರೆ.

ಜೊತೆಗೆ ಜಿಲ್ಲೆಯ ಅನೇಕ  ಹಿರಿ-ಕಿರಿಯ ಸಾಹಿತಿಗಳು, ಬರಹಗಾರರು, ಕನ್ನಡಪರ ಸಂಘಟನೆಯ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು, ನಾಡು ನುಡಿ ಚಿಂತಕರು, ಹೋರಾಟಗಾರರು, ಸಾಹಿತ್ಯಾಸಕ್ತರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

*ರಥ ಸಂಚರಿಸುವ ಮಾರ್ಗ*

ಸೆ. 22 ರಂದು ಸಿದ್ದಾಪುರದಲ್ಲಿ ಉದ್ಘಾಟನೆಗೊಂಡು ಹೊರಡುವ ಕನ್ನಡ ರಥ ಮಧ್ಯಾಹ್ನ 3 ಗಂಟೆಗೆ ಹೊನ್ನಾವರಕ್ಕೆ ತಲುಪಿ,  ಅಲ್ಲಿಂದ  ಸಂಜೆ 5ಗಂಟೆಗೆ ಕುಮಟಾ ಸೇರಲಿದೆ.  ಸೆ. 23ರಂದು ಮುಂಜಾನೆ 10 ಗಂಟೆಗೆ ಅಂಕೋಲಾಕ್ಕೆ ತಲುಪುವ ರಥ  ಮಧ್ಯಾಹ್ನ 12 ಗಂಟೆಗೆ  ಕಾರವಾರಕ್ಕೆ ತಲುಪಲಿದೆ.  ಅಲ್ಲಿಂದ  ಮದ್ಯಾಹ್ನ 3 ಗಂಟೆಗೆ ಗೋವಾ ಗಡಿ ಕಾಣಕೋಣದವರೆಗೆ ರಥ ಮುಂದುವರೆದು ರಾತ್ರಿ  ಜೋಯಿಡಾದಲ್ಲಿ ವಾಸ್ತವ್ಯ ಮಾಡಲಿದೆ. ಸೆಪ್ಟೆಂಬರ್ 24ರಂದು ಜೋಯಿಡಾದಿಂದ ಮುಂದುವರೆದು ಮುಂಜಾನೆ 11.30 ಕ್ಕೆ ದಾಂಡೇಲಿ,  ಮಧ್ಯಾಹ್ನ  4 ಗಂಟೆಗೆ ಹಳಿಯಾಳಕ್ಕೆ ಸಾಗಲಿದೆ.  ಹಳಿಯಾಳದಲ್ಲಿ ವಾಸ್ತವ್ಯ ಮಾಡಿ ಸೆಪ್ಟೆಂಬರ್ 25 ರಂದು  ಮುಂಜಾನೆ 11 ಗಂಟೆಗೆ ಯಲ್ಲಾಪುರಕ್ಕೆ  ಮಧ್ಯಾಹ್ನ 3 ಗಂಟೆಗೆ ಶಿರಸಿಗೆ ರಥ ತಲುಪಿ ಉತ್ತರ ಕನ್ನಡ ಜಿಲ್ಲೆಯ ರಥ ಸಂಚಾರ ಸಂಪನ್ನವಾಗಲಿದೆ   ನಂತರ ಕನ್ನಡ ರಥ  ಹಾನಗಲ್ ಮಾರ್ಗವಾಗಿ  ಹಾವೇರಿ ಜಿಲ್ಲೆಗೆ ಮುಂದುವರೆಯಲಿದೆ ಎಂದು ಎಂದು ತಿಳಿಸಿರುವ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಪ್ರತೀ ತಾಲೂಕುಗಳಿಗೆ ಕನ್ನಡ ರಥ ಆಗಮಿಸಿದ ಸಂದರ್ಭದಲ್ಲಿ ಆಯಾ ತಾಲೂಕುಗಳ ತಹಶೀಲ್ದಾರರ ನೇತೃತ್ವದಲ್ಲಿ , ಅವರು ನಿಗದಿಗೊಳಿಸಿದ ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದ್ದು , ಈ ಸಂದರ್ಭದಲ್ಲಿ ತಾಲೂಕಿನ ಹಿರಿಕಿರಿಯ ಎಲ್ಲಾ ಸಾಹಿತಿಗಳು, ತಾಲೂಕು ಸಾಹಿತ್ಯ ಪರಿಷತ್ತಿನ   ಪದಾಧಿಕಾರಿಗಳು, ಆಜೀವ ಸದಸ್ಯರು ಎಲ್ಲ ಸಂಘ ಸಂಸ್ಥೆಗಳ ಪ್ರಮುಖರು, ಕನ್ನಡಪರ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*