ಸರಳ ಬದುಕಿನ ಸರದಾರ ಭಟ್ಕಳದ ವಿ.ಡಿ. ಮೊಗೇರ

“ಶಾಲೆಗಳು ನಮಗಾಗಿ ಅಲ್ಲ ಶಾಲೆಗೆ ಹೋಗಿ ಉದ್ದಾರಾದವರು ಯಾರೂ ಇಲ್ಲ, ನಮಗೂ ಅದಕ್ಕೂ ಸಂಬಂಧವೇ ಇಲ್ಲ. “ಅಪ್ಪ ನೀರಿನಲ್ಲಿ, ಅಮ್ಮ ಕೇರಿಯಲ್ಲಿ, ಮಕ್ಕಳು ದಾರಿಯಲ್ಲಿ”ಈ ಮಾತು ಕಡಲಿಗರ ಬದುಕಿಗೆ ಅನ್ವಯಿಸಿ ಸುಮಾರು ಐದು ದಶಕಗಳ ಹಿಂದೆ ಆಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಅನ್ನಕ್ಕೂ ಅಕ್ಷರಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಸಾರಿ ಹೇಳುವ ಕಾಲಘಟ್ಟದಲ್ಲಿಯೂ, ಮಗನ ಶಿಕ್ಷಣದ ಬಗ್ಗೆ ಒಂದಿಷ್ಟು ಆಲೋಚಿಸಿ ಬದುಕು ಕಟ್ಟಿಕೊಳ್ಳಲು ಆಸರೆಯಾದವರು ತೆಂಗಿನ ಗುಂಡಿಯ ದುರ್ಗಪ್ಪ ಈರಾ ಮೊಗೇರವರು. “ಹುಟ್ಟಿಸಿದ ಶಿವ ಹುಲ್ಲು ಮೇಯಿಸಲಾರ”ಎಲ್ಲಾದರೂ ಹೋಟೆಲ್ ಮತ್ತು ಬೋಟಿನ ಕೆಲಸಕ್ಕೆ ಸೇರಿಸಿದರಾಯಿತು ಎಂದು ಆಲೋಚಿಸುವ ಕಡಲಿಗರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ತೋರುವ ನಿರ್ಲಕ್ಷ್ಯ ಧೋರಣೆ ಒಂದು ಕಡೆಯಾದರೆ, ಮೂರನೇ ತರಗತಿಯಲ್ಲಿ ಓದುತ್ತಿರುವಾಗಲೇ ನನ್ನ ಮಗನಿಗೆ “ಕಣ್ಗಂಗಳ”(ಚಸ್ಮ) ಹಾಕಿಕೊಳ್ಳಬೇಕಾದ ಪರಿಸ್ಥಿತಿ ಬಂತಲ್ಲ ಎಂಬ ಕೊರಗು ಒಂದು ಕಡೆಯಾದರೆ, ಬೋಟಿನ ಕೆಲಸಕ್ಕಾಗಲಿ, ಹೊಟೆಲಿನ ಕೆಲಸಕ್ಕಾಗಲಿ ಸೇರಿಸಿದರೆ ಆ ಕೆಲಸ ಇವನಿಂದ ಸಾಧ್ಯವಿಲ್ಲ. ಶಿಕ್ಷಣ ಕಲಿತು ಪ್ಯೂನ್ ನೌಕರಿ ಸಿಕ್ಕಿದರು ಸಾಕೆಂದು ತಾಯಿ ದುರ್ಗಾಪರಮೇಶ್ವರಿಯಲ್ಲಿ ಮೊರೆ ಹೋದ ದುರ್ಗಪ್ಪ ಮೊಗೇರವರು ಮಗನ ಶಿಕ್ಷಣಕ್ಕೆ ಮುಂದಾಗಿ ಅಕ್ಷರಕ್ಕೂ ಅನ್ನಕ್ಕೂ ಸಂಬಂಧ ಕಲ್ಪಿಸಿದ ಪುಣ್ಯಾತ್ಮರಾದರು. ಬದುಕಿನ ಜಂಜಾಟದಲ್ಲಿ ಕಮರಿ ಹೋದ ಬದುಕಿಗೆ ಆಸರೆಯಾಗಿ ಶಿಕ್ಷಣವೇ ಶಕ್ತಿ ಎಂದು ಇಡೀ ಸಮಾಜಕ್ಕೆ ಸಾರಿ ಹೇಳಿದವರು ತೆಂಗಿನಗುಂಡಿಯ ವೆಂಕಟ್ರಮಣ ದುರ್ಗಪ್ಪ ಮೊಗೇರವರು.

ಶಿಕ್ಷಣ ಇಲಾಖೆಯಲ್ಲಿ ಪ್ರೌಢಶಾಲಾ ಅಧ್ಯಾಪಕರಾಗಿ, ಮುಖ್ಯಾಧ್ಯಾಪಕರಾಗಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಯಾಗಿ, ಡಯಟ್ ಉಪನ್ಯಾಸಕರಾಗಿ, ಜಿಲ್ಲಾ ಯೋಜನಾಧಿಕಾರಿಯಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿ ಸುಮಾರು ಕಾಲು ಶತಮಾನಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದವರು ಶ್ರೀ ವೆಂಕಟರಮಣ ದುರ್ಗಪ್ಪ ಮೊಗೇರವರು.

ಕಡಲು ತನ್ನ ಒಡಲಲ್ಲಿ ಹುದುಗಿರುವ ಸಂಪತ್ತನ್ನು ಯಾರು ಪ್ರಾಮಾಣಿಕತನದಿಂದ ನಿಷ್ಠೆಯಿಂದ ತಮ್ಮದಾಗಿಸಿಕೊಳ್ಳುವರೊ ಅಂಥವರ ಪಾಲಿಗೆ ಕಾಮಧೇನು ಎನ್ನುತ್ತಾರೆ ನಿತ್ಯ ಕಡಲನ್ನಾಶ್ರಯಿಸಿದ ತಂದೆ ದುರ್ಗಪ್ಪ ಮೊಗೇರ ಒಂದು ಕಡೆಯಾದರೆ, “ಬಿರುಗಾಳಿಯೇ ಬೇಕು ನಮ್ಮ ಉದ್ದಾರಕ್ಕೆ, ಪೊಳ್ಳು ಮರಗಳನ್ನೆಲ್ಲ ಭೂಮಿಗುರುಳಿಸಲಿಕ್ಕೆ”ಎಂಬ ಕವಿವಾಣಿಯನ್ನು ಬೆನ್ನಿ ಗಂಟಿಸಿಕೊಂಡು ಶಿಕ್ಷಣ ಇಲಾಖೆಯ ಘನತೆ ಗೌರವ ಹೆಚ್ಚಿಸುವುದರ ಮೂಲಕ ನಿರಂತರವಾಗಿ ತಮ್ಮನ್ನು ತೆರೆದುಕೊಂಡು ತೊಡಗಿಸಿಕೊಂಡವರು ಮಗ ವೆಂಕಟ್ರಮಣ. “ರಕ್ತದೊಳಗಿನ ನೋವನ್ನು ಸಂವೇದನೆಯ ಹೂವನ್ನಾಗಿ ಪರಿವರ್ತಿಸಿ”ತಮ್ಮ ವೈಯಕ್ತಿಕ ನೆಲೆಯಲ್ಲಿ ಒಂದಿಷ್ಟು ಸಾಮಾಜಿಕ ಜಾಗೃತಿಗೂ, ಶೈಕ್ಷಣಿಕ ಪ್ರಗತಿಗೂ ಕಾರಣರಾದವರು ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇಂದು ನಿವೃತ್ತಿಯಾಗುತ್ತಿರುವವರು ವಿ.ಡಿ‌.ಮೊಗೇರವರು.

ತಂದೆ ದುರ್ಗಪ್ಪ ಈರಾ ಮೊಗೇರ, ತಾಯಿ ನಾಗಮ್ಮ ಮೊಗೇರವರ ಮಗನಾಗಿ ೧೯೬೪ ರಲ್ಲಿ ಭಟ್ಕಳದ ತೆಂಗಿನ ಗುಂಡಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಂಗಿನಗುಂಡಿಯಲ್ಲಿಯೂ, ಪ್ರೌಢ ಶಿಕ್ಷಣ ನ್ಯೂ ಇಂಗ್ಲಿಷ್ ಸ್ಕೂಲ್ ಭಟ್ಕಳದಲ್ಲಿಯೂ, ಪದವಿ ಪೂರ್ವ, ಪದವಿ ಶಿಕ್ಷಣವನ್ನು ಭಟ್ಕಳದ ಅಂಜುಮನ್ ಕಾಲೇಜಿನಲ್ಲಿಯೂ, ಕುಮಟಾದ ಡಾ. ಎ.ವಿ‌ ಬಾಳಿಗಾ ಕಾಲೇಜಿನಲ್ಲಿಯೂ ಬಿ.ಎಡ್. ಪದವಿ ಪೂರೈಸಿ ಭಟ್ಕಳದ ನೆಹರು ಯುವ ಕೇಂದ್ರದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಪ್ರೇರಣಾ ಶಕ್ತಿಯಾಗಿ ಸುಮಾರು ಹತ್ತು ತಿಂಗಳುಗಳ ಕಾಲ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರು. ನಂತರ ಕೈಗಾದ ಎನ್‌ಪಿಸಿಯಲ್ಲಿ ಬೆರಳುಚ್ಚುಗಾರರಾಗಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಹಿಂದೂ ಹೈ ಸ್ಕೂಲ್ ಕಾರವಾರದಲ್ಲಿ ಒಂದೂವರೆ ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ೧೯೯೯ ರಲ್ಲಿ ಯಲ್ಲಾಪುರದ ಸರಕಾರಿ ಪ್ರೌಢಶಾಲೆ ಮಳವಳ್ಳಿಯಲ್ಲಿ ಮುಖ್ಯಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು.

ಕಿಲುಬಿಲ್ಲದ ವೃತ್ತಿ ಬದುಕಿನ ಸರದಾರರಾಗಿ, ಸದ್ದು ಗದ್ದಲವಿಲ್ಲದ ಸಾಧಕರಾಗಿ, ಮಕ್ಕಳ ಬದುಕಿನ ಆರಾಧ್ಯ ಗುರುಗಳಾಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ,ತಮ್ಮ ಊರಿನ ಶಾಲೆಯಾದ ಸರಕಾರಿ ಪ್ರೌಢಶಾಲೆ ತೆಂಗನಗುಂಡಿಗೆ ವರ್ಗವಾಗಿ ಬಂದರು. ಅಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸುವಾಗ ಇವರ ಬದುಕಿನ ಪಯಣದ ದಿಕ್ಕೆ ಬದಲಾಯಿತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳ ಪಾಲಿನ ಆರಾಧಕರಾದರು. “ಬಾಳ ಗುಟ್ಟಿಗೆ, ಒಲಮೆ ಒಗಟಿಗೆ ಭಾಷ್ಯ ಬರೆದ ಬೋಧಕ”ರಾಗಿ ಊರಿಗೆ ಊರೇ ಹೆಮ್ಮೆಪಡುವ ವ್ಯಕ್ತಿಯಾಗಿ, ಶಕ್ತಿಯಾಗಿ ಅಕ್ಷರ ವಂಚಿತರ ಬಾಳಿಗೆ ಬೆಳಕಾದರು.

ನಂತರ ೨೦೦೭ ರಿಂದ ೨೦೧೧ ರವರೆಗೆ ಹೊನ್ನಾವರದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಯಾಗಿ ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ “ಮುಳ್ಳೊಳು ಮುಳ್ಳಂ ಪಾಟಿಸು” ಮುಳ್ಳನ್ನು ಮುಳ್ಳಿನಿಂದಲೇ ತೆಗೆದು ತಮ್ಮ ಕರ್ತವ್ಯ ನಿಷ್ಠೆಗೆ ಹೆಸರಾದರು. ಶಿಕ್ಷಕ ಸ್ನೇಹಿ ಅಧಿಕಾರಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾದರು. ನಂತರ ಕೋಟೆಬೈಲ್ ಸರಕಾರಿ ಪ್ರೌಢಶಾಲೆಗೆ ವರ್ಗವಾಗಿ ಆರು ತಿಂಗಳುಗಳ ಕಾಲ ಸೇವೆ ಸಲ್ಲಿಸಿ, ೨೦೧೨ ರಲ್ಲಿ ಭಟ್ಕಳದ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಪ್ರಗತಿಗೆ ಕಾರಣಿಕರ್ತರಾದರು.

ಕುಮಟಾದ ಡಯಟ್ ಕಾಲೇಜಿನಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ ಇಲಾಖೆಯ ಕಾರ್ಯಕ್ರಮದ ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡಿ,ಇಡೀ ಜಿಲ್ಲೆಯಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದೀರ್ಘಕಾಲದ ಇಂಗ್ಲೀಷ್ ತರಬೇತಿಯನ್ನು ಆಯೋಜಿಸಿ ನೋಡೆಲ್ ಅಧಿಕಾರಿಯಾಗಿ ಶಿಕ್ಷಕರ ಕಾರ್ಯತತ್ಪರತೆಗೆ ಕಣ್ಗಾವಲಿನಂತೆ ಕೆಲಸ ನಿರ್ವಹಿಸಿದರು. ತಮಗೆ ಒಪ್ಪಿಸಿದ ಕೆಲಸವನ್ನು ಅತ್ಯಂತ ಪ್ರೀತಿಯಿಂದ ಮತ್ತು ಪ್ರಾಮಾಣಿಕತನದಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ ೨೦೨೨ ರಲ್ಲಿ ಉಡುಪಿ ಜಿಲ್ಲೆಗೆ ಡಿವೈಪಿಸಿಯಾಗಿ ಬಡ್ತಿ ಹೊಂದಿ ಒಂದಿಷ್ಟು ದಿನಗಳ ಕಾಲ ಸೇವೆ ಸಲ್ಲಿಸಿದರು. ೨೦೨೩ ರಿಂದ ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ನಂತರ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿಯಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಾಲೆಗೆ ಬರುವಂತೆ ಮಾಡಿದರು. ಅನುದಾನ, ಅನುದಾನ ರಹಿತ ಶಾಲಾ ವಾಹನದ ಚಾಲಕರಿಗೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ತರಬೇತಿ ನಡೆಸಿದ ಹೆಗ್ಗಳಿಕೆ ಇವರದ್ದಾಗಿದೆ. ಅನುದಾನ,ಅನುದಾನ ರಹಿತ ಶಾಲಾ ಮುಖ್ಯಾಧ್ಯಾಪಕರಿಗೆ ಶಾಲೆಗಳಲ್ಲಿ ಇಡಬೇಕಾದ ದಾಖಲೆಗಳ ನಿರ್ವಹಣಾ ತರಬೇತಿ ನಡೆಸಿರುತ್ತಾರೆ ‌. ತಾಲೂಕಿನ ಯುವ ಶಿಕ್ಷಕರಿಗೆ ಪಿ ಎಚ್ ಡಿ ಮತ್ತು ಐಎಎಸ್ ಪರೀಕ್ಷೆ ಬರೆಯುವುದು ಮತ್ತು ಎದುರಿಸುವುದು ಹೇಗೆ? ಎಂದು ಪರಿಣಿತರಿಂದ ತರಬೇತಿ ನೀಡಿ ಅದರ ಸದುಪಯೋಗ ಮಕ್ಕಳು ಪಡೆದುಕೊಳ್ಳಲು ಅನುಕೂಲವಾಗುವ ಯೋಜನೆ ರೂಪಿಸಿ ಮಾದರಿಯಾಗಿರುತ್ತಾರೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶಕರಾಗಿ ತಾಲೂಕಿನ ೩೮ ಶಾಲೆಗಳಿಗೂ ಕನಿಷ್ಠ ಎರಡು ಬಾರಿ ಭೇಟಿ ನೀಡಿ ಫಲಿತಾಂಶ ಹೆಚ್ಚಿಸುವಲ್ಲಿ ಇವರ ಶ್ರಮ ಅಡಗಿದೆ.

ಬದುಕಿನಲ್ಲಿ ಸೋಲು- ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದ ವಿ.ಡಿ. ಮೊಗೇರವರು ಶಿರಡಿ ಮತ್ತು ಪುಟ್ಟಪರ್ತಿ ಸಾಯಿಬಾಬಾರ ಪರಮ ಭಕ್ತರು. ೨೦೧೧ರಲ್ಲಿ ಕೇದಾರ ದರ್ಶನಕ್ಕೆ ತೆರಳಿದಾಗ ನಡೆದ ಮೇಘಾ ಸ್ಫೋಟದಲ್ಲಿಯೂ ಇವರ ರಕ್ಷಣೆಯಾಗಿದೆ ಅಂದರೆ ಅವರು ದೇವರ ಮೇಲಿಟ್ಟ ಭಕ್ತಿ ,ನಂಬಿಕೆ ಮತ್ತು ಶ್ರದ್ಧೆಗೆ ಕಾರಣವೆಂದರೆ ತಪ್ಪಲ್ಲ. ಪ್ರಕೃತಿ ವಿಕೋಪಕ್ಕೆ ಸಿಲುಕಿದರು ಸಾವಿನ ದವಡೆಯಿಂದ ಪಾರಾಗಿ ಬಂದ ವೆಂಕಟ್ರಮಣ ಮೊಗೇರವರು “ಕೇದಾರ ವಿ.ಡಿ.”ಎಂದೇ ಒಂದಿಷ್ಟು ದಿನಗಳ ಕಾಲ ಜನರ ಬಾಯಲ್ಲಿ ಸ್ಥಾಯಿಯಾದ ಅಪರೂಪದ ವ್ಯಕ್ತಿತ್ವ ಹೊಂದಿದ ಶ್ರೀಯುತರು ಪತ್ನಿ ಸುಭದ್ರ ರವರೊಂದಿಗೆ ತುಂಬ ಜೀವನ ನಡೆಸುತ್ತಿದ್ದಾರೆ ‌. ಮಕ್ಕಳಾದ ವಿಭಾ, ಹರ್ಷಿತ ಎಂಜಿನೀಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

“ಕರೆದ ದಾರಿ ಬೇರೆ. ಮತ್ತೆ ತೆರೆದ ದಾರಿ ಬೇರೆಯೇ” ಆದರೂ ಎಲ್ಲವನ್ನು ಮೀರಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇತರರಿಗೆ ಮಾದರಿಯಾಗಿ ಶಿಕ್ಷಕ ಸ್ನೇಹಿ ಅಧಿಕಾರಿಯಾಗಿ ಶಿಕ್ಷಕರಿಗೆ ಸಿಗುವ ಸೌಲಭ್ಯಗಳಿಂದ ಸ್ವಲ್ಪವೂ ವಂಚಿತರಾಗದ ರೀತಿಯಲ್ಲಿ ಇವರ ಸೇವೆ ಅನನ್ಯವಾಗಿದೆ. ಸರಳ ಸಜ್ಜನರಾದ ವಿ.ಡಿ. ಮೊಗೇರವರು ನೂರ್ಕಾಲ ಬಾಳಿ ಬದುಕಲೆಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

✍️ಪಿ.ಆರ್.ನಾಯ್ಕ
ಹೊಳೆಗದ್ದೆ,ಕುಮಟಾ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*