ಎಲ್ಲರೊಳಗೊಂದಾಗಿ ಬೆರೆಯುವ ನಮ್ಮ ನಡುವಿನ ರಾಜಕುಮಾರ…

ವರನಟನಾಗದಿದ್ದರೇನಂತೆ
ಹೆಸರಿನಲಿ ರಾಜಕುಮಾರ!
ಎಲ್ಲರೊಳಗೊಂದಾಗಿ ಸವ೯ರ
ಹಿತ ಬಯಸುವ ಸರದಾರ!
ಒಂದು ಕಟ್ಟುವ ಬದಲು
ಹತ್ತು ಕಟ್ಟಿ ಬೆಳೆಸಿದ ಧೀರ!
ನೌಕರರ ಹಿತಕ್ಕಾಗಿ ಹಗಲಿರುಳು
ದುಡಿದು, ದಣಿವರಿಯದ ಶೂರ!
ಮಿತ ಮಾತು, ಹಿತ ಸ್ನೇಹ
ಕಷ್ಟಕ್ಕೆ ಕೈಚಾಚಿ ಮುನ್ನಡೆಸುವ ಮೋಹ!
ಬೊಗಳುವವರ ಲೆಕ್ಕಿಸದೇ
ಕೆಂಗಣ್ಣಿನಿಂದ ಕೆರಳದೇ!
ಮುನ್ನಡೆವ ಹಿರಿಯಾನೆ ಜಾತಿ
ನಮ್ಮ ರಾಜಕುಮಾರ!

ತಮ್ಮ ವ್ಯಕ್ತಿತ್ವವನ್ನು ಹದವಾಗಿ ರೂಪಿಸಿಕೊಂಡು ‘ಆರಕ್ಕೆರದೇ ಮೂರಕ್ಕಿಳಿಯದೇ ಎಲ್ಲವನ್ನು ಸಮಚಿತ್ತದಿಂದ ಆಲಿಸಿ, ಆಲೋಚಿಸಿ ಸೂಕ್ತ ನಿರ್ಧಾರದೊಂದಿಗೆ ತಮ್ಮ ಸ್ಪಷ್ಟ ನಿಲುವನ್ನು ಮೃದು ಮಾತಿನಿಂದ ಎಲ್ಲರ ಚಿತ್ತಕ್ಕೆ ಹಿತವೆನಿಸುವಂತೆ ಬಿತ್ತರಿಸಿ ಎಲ್ಲರ ಪ್ರೀತಿಗೆ ಪಾತ್ರರಾದವರು ಹೊನ್ನಾವರ ತಾಲೂಕಾ ನೌಕರರ ಸಂಘದ ಅಧ್ಯಕ್ಷರಾದ ರಾಜಕುಮಾರ ತಿಮ್ಮಪ್ಪ ನಾಯ್ಕರವರು. ಶಿಸ್ತು, ಅಚ್ಚು ಕಟ್ಟುತನಕ್ಕೆ ಇನ್ನೊಂದು ಹೆಸರಾಗಿ ನಿಂತವರು. ತಮ್ಮ ಪರಿಸರದಲ್ಲಿ ಸದಾ ಕ್ರಿಯಾಶೀಲತೆಯಿಂದ, ಚುರುಕುತನದಿಂದ ಕೆಲಸ ನಿರ್ವಹಿಸಿ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಮಾರ್ಗದರ್ಶನ ಮಾಡಿದ ಪ್ರೌಢಶಾಲಾ ಮುಖ್ಯ ಗುರುಗಳು ಕೂಡ. ಮಕ್ಕಳಿಗೆ ಕಬ್ಬಿಣದ ಕಡಲೆಯಂತಿರುವ ಗಣಿತವನ್ನು ಸುಲಿದ ಬಾಳೆಹಣ್ಣಿನಂದದಿ ರಸವತ್ತಾಗಿ ಅರ್ಥೈಸಿದ ಅಧ್ಯಾಪಕರಾದ ರಾಜಕುಮಾರ ನಾಯ್ಕರವರು ಮೂಲತಹ ಅಂಕೋಲಾ ತಾಲೂಕಿನ ಅಂಬಾರಕೊಡ್ಲದವರು. ತಂದೆ ತಿಮ್ಮಪ್ಪ ನಾಯ್ಕ ,ತಾಯಿ ಸಾವಿತ್ರಿ ನಾಯ್ಕರವರ ಆರು ಮಕ್ಕಳಲ್ಲಿ ಮೂರನೇ ಮಗನಾಗಿ 1964 ರಲ್ಲಿ ಜನಿಸಿದರು. ತಂದೆ ತಿಮ್ಮಪ್ಪ ನಾಯ್ಕರು ಆ ಕಾಲದಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕರು. ಅವರಿಗೆ ಸಿಗುವ ಸಂಬಳದಲ್ಲಿ ತುಂಬು ಸಂಸಾರ ನಡೆಸಲು ಕಷ್ಟವಾದರೂ ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ತಿಮ್ಮಪ್ಪ ಮಾಸ್ತರರ ಮನೆಯಲ್ಲಿ ಸದಾ ಮಕ್ಕಳ ಕಲರವ. ಆರ್ಥಿಕ ಪರಿಸ್ಥಿತಿ ತುಂಬಾ ದುಃಸ್ತರ. ಆದರೂ” ಕಟ್ಟೆ ಕಟ್ಟುವೆ ನಾನು ತುಳಸಿ ಕಂಡಲೆಲ್ಲ: ನಿಷ್ಠೆ ಕಟ್ಟಿದ ಕಟ್ಟೆ ವ್ಯರ್ಥವಾಗುವುದಿಲ್ಲ” ಎಂಬ ಕವಿ ವಾಣಿಯನ್ನು ಬದುಕಿಗೆ ಅಂಟಿಸಿಕೊಂಡ ತಿಮ್ಮಪ್ಪ ಮಾಸ್ತರರು ನಿಷ್ಠೆಯಿಂದ ಮಕ್ಕಳಿಗೆ ಕಲಿಸಿದ ವಿದ್ಯೆಯಿಂದಾಗಿ ಇಡೀ ಕುಟುಂಬವೇ ಅಕ್ಷರವಂತರ ಕುಟುಂಬವಾಗಿ, ನೌಕರಸ್ಥರಾಗಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜಕುಮಾರ ತಿಮ್ಮಪ್ಪ ನಾಯ್ಕರವರ ಪ್ರಾಥಮಿಕ ಶಿಕ್ಷಣ ಅಂಬಾರಕೊಡ್ಲದಲ್ಲೂ, ಪಿಎಂ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣವನ್ನು, ಅಂಕೋಲಾದ ಜಿ.ಸಿ. ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು, ಬಿಎಡ್ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿಯೂ, ಎಂ.ಎ. ಎಂ.ಎಡ್. ಪದವಿಯನ್ನು ಧಾರವಾಡದಲ್ಲಿ ಪೂರೈಸಿ 1987ರಲ್ಲಿ ಹುಬ್ಬಳ್ಳಿಯ ದುರ್ಗಾದೇವಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಸುಮಾರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ, 1994 ರಂದು ಹೊನ್ನಾವರ ತಾಲೂಕಿನ ಹಡಿನಬಾಳ ಪ್ರೌಢಶಾಲೆಗೆ ಗಣಿತ ಶಿಕ್ಷಕರಾಗಿ ನೇಮಕರಾದರು. ಸುಮಾರು 26 ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಮಕ್ಕಳಿಗೆ ಅಚ್ಚುಮೆಚ್ಚಿನ ಗಣಿತ ಶಿಕ್ಷಕರಾಗಿ, ಮಕ್ಕಳಿದ್ದರೆ ನಗುವು ಮಕ್ಕಳಿದ್ದರೆ ಮಾತು
ಮಕ್ಕಳೆಂಬ ಹೂವು
ಬಾಡದಿದ್ದರೆ ಸಾಕು! ಎಂಬ ಕವಿವಾಣಿಯಂತೆ ಇಡೀ ಊರಿಗೆ ಊರೇ ಹೆಮ್ಮೆಪಡುವ ಅಧ್ಯಾಪಕರಾಗಿ ವೃತ್ತಿ ಬದುಕನ್ನು ಪ್ರೀತಿಸ ತೊಡಗಿದರು. ನಂತರ 2019 ರಲ್ಲಿ ಅದೇ ಪ್ರೌಢಶಾಲಾ ಮುಖ್ಯಾಧ್ಯಾಪಕರಾಗಿ ನೇಮಕರಾಗಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

“ಶಿಕ್ಷಕ ವಿದ್ಯಾರ್ಥಿಗಳಲ್ಲಿ ಜ್ಞಾನ ಬೆಳೆಸುವ ವ್ಯಕ್ತಿ ಮಾತ್ರವಲ್ಲ. ಆತ ತನ್ನ ಸುತ್ತಲಿನ ಸಮಾಜವನ್ನು ಸುಧಾರಿಸುವ ಸಮಾಜ ಸೇವಕನು ಆಗಿರಬೇಕು” ಎಂಬ ಅನುಭವ ವಾಣಿಯಂತೆ ತಮ್ಮ ಅಧ್ಯಾಪಕ ವೃತ್ತಿಯು ಬೇರಾವುದೇ ಉದ್ಯೋಗಕ್ಕಿಂತಲೂ ಶ್ರೇಷ್ಠವೆಂದು ಭಾವಿಸಿ ಶ್ರದ್ಧೆಯಿಂದ ದುಡಿದು 2010ರಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಅವರನ್ನರಸಿ ಬಂದಿತು. 2012ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿ ಒಬ್ಬ ಆದರ್ಶ ಶಿಕ್ಷಕರಾಗಿ ಇಲಾಖೆಯ ಘನತೆ ಗೌರವ ಹೆಚ್ಚಿಸಿದರು.

ರಾಜಕುಮಾರ ನಾಯ್ಕರದು ಪ್ರಗತಿಪರ ನಿಲುವು. ಸದಾ ಮಕ್ಕಳ ಒಳಿತಿಗಾಗಿ ಏನನ್ನಾದರೂ ಮಾಡುವ ಹಂಬಲ. ಜೊತೆಗೆ ವೃತ್ತಿ ಬಂಧುಗಳಿಗೂ ಆಸರೆಯಾಗುವ ಆಸೆ. ಸಂಘಟನೆಯಲ್ಲಿ ಸದಾ ಚುರುಕು. ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ನಂತರ ಒಂದು ಅವಧಿಗಳ ಕಾಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ನಂತರ ಜಿಲ್ಲಾ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ. ನಾಮಧಾರಿ ನೌಕರರ ಸಂಘದ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿ ವಿವಿಧ ಸಂಘಟನೆಯಲ್ಲಿಯೂ ಅವರ ಚುರುಕುತನ ಮೆರೆದಿದೆ.

ಸುಮಾರು 20 ವರ್ಷಗಳ ಕಾಲ ನೌಕರರ ಸಂಘದಲ್ಲಿ ನಿರ್ದೇಶಕರಾಗಿ, ಕಾರ್ಯದರ್ಶಿಯಾಗಿ ಹಲವು ಕಾರ್ಯಕ್ರಮ ಸಂಘಟಿಸಿದ ಹೆಗ್ಗಳಿಕೆ ಇವರದ್ದು. 2018ರಲ್ಲಿ ಹೊನ್ನಾವರ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿ ಸಂಘಕ್ಕೆ ಹೊಸ ಭಾಷ್ಯ ಬರೆದರು. ನೌಕರರ ಭವನದ ಸ್ಥಾಪನೆಗೆ ಕಾರಣಿಕರ್ತರಾದರು. 2023 ರಲ್ಲಿ ಜಿಲ್ಲಾಮಟ್ಟದಲ್ಲಿ ಜಿಲ್ಲೆಯಲ್ಲಿಯೇ, ಉತ್ತಮ ಅಧ್ಯಕ್ಷ ಎನ್ನುವ ಪಟ್ಟ ಮುಡಿಗೇರಿಸಿಕೊಂಡರು.

ಏನೇನೇ ಅರಳಿದರೂ, ಉರುಳಿದರೂ
ಆಳದಾಳದ ಕಲ್ಲು ಮಾತ್ರ
ಎಂದು ಕರಗುವುದೇ ಇಲ್ಲ! ಎಂಬ ಕವಿವಾಣಿಯ ಕಟು ವಾಸ್ತವ ಅಂಶ ಅರಿತ ರಾಜಕುಮಾರ ನಾಯ್ಕರು ತಮ್ಮ ಮೃದು ಮಾತಿನ ಮೂಲಕ ಕಲ್ಲನ್ನು ಕರಗಿಸುವ ಛಾತಿಯೊಂದಿಗೆ ತಾಲೂಕಿನಾದ್ಯಂತ ಆರ್ .ಟಿ.ಎಂದೇ ಚಿರಪರಿಚಿತರಾದರು.

ಒಬ್ಬ ಆದರ್ಶ ಶಿಕ್ಷಕರಾಗಿ, ಅತ್ಯುತ್ತಮ ಸಂಘಟಕರಾಗಿ, ಪ್ರವೃತ್ತಿಯಲ್ಲಿ ಹತ್ತು ಹಲವು ವ್ಯಕ್ತಿತ್ವವನ್ನು ಸಂಪಾದಿಸಿರುವ ರಾಜಕುಮಾರ ಅವರು ಪತ್ನಿ ಮಮತಾ ನಾಯ್ಕ ಮಕ್ಕಳಾದ ರಾಹುಲ್ ಮತ್ತು ವಿಶಾಲ್ ರವರೊಂದಿಗೆ ತುಂಬು ಜೀವನ ನಡೆಸುತ್ತಿದ್ದಾರೆ. ಸಾರ್ವಜನಿಕ ವ್ಯಕ್ತಿತ್ವಕ್ಕೆ ಅವರ ಅಂತರಂಗದ ಅಪ್ಪಟ ಸಂವೇದನೆಯ ಸಂಪರ್ಕ ಸದಾ ಹಸಿರಾಗಿ, ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.

  • ಪಿ.ಆರ್.ನಾಯ್ಕ
    ಹೊಳೆಗದ್ದೆ, ಕುಮಟಾ
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*