ನವಗ್ರಾಮ ರಸ್ತೆಯಲ್ಲಿ ಕೆರೆಯಂತಹ ಹೊಂಡಗಳು: ಕಂಡು ಕಾಣದಂತಿರುವ ಜಿಲ್ಲಾ ಪಂಚಾಯತ್ ಅಧಿಕಾರಿಗಳು

ಅಮಮಾ! ಇದೇನು ರಸ್ತೆಯೋ… ಸರಕಾರ ಪ್ರಾಯೋಜಿತ ಕೆರೆಯೋ…

ದಾಂಡೇಲಿ : ತಾಲೂಕಿನ ಅಂಬೇವಾಡಿ ರೈಲ್ವೆ ನಿಲ್ದಾಣದಿಂದ ಮೌಳಂಗಿಗೆ ಹೋಗುವ ರಸ್ತೆಯ ನಡುವಿನ ನವಗ್ರಾಮ ದಿಂದ ಮೌಳಂಗಿ ಬ್ರಿಜ್ ವರೆಗಿನ ರಸ್ತೆಯಲ್ಲಿ ಕೆರೆಯಂತಹ ಬೃಹದ್ದಾಕಾರದ ಹೊಂಡಗಳು ಬಿದ್ದಿದ್ದು,  ಈ ಭಾಗದ ಜನ ನಿತ್ಯ ನರಕಾಯಾತನೆ ಅನುಭವಿಸುತ್ತಿದ್ದರೂ ಸಹ  ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮಾತ್ರ ಕಂಡು ಕಾಣದಂತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಅಂಬೇವಾಡಿ ರೈಲು ನಿಲ್ದಾಣದಿಂದ ಮೌಳಂಗಿ ಇಕೋ ಪಾರ್ಕ್ ಸಂಪರ್ಕಿಸುವ ರಸ್ತೆ.  ಮೌಳಂಗಿ ಇಕೋ ಪಾರ್ಕ ದಾಂಡೇಲಿಯ ಪ್ರವಾಸೋದ್ಯಮದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಇಲ್ಲಿಯ ನಿಸರ್ಗ ಸೌಂದರ್ಯ, ಇಲ್ಲಿಯ ನದಿ ದಂಡೆ, ಇಲ್ಲಿಯ ಜಲ ಸಾಹಸ ಕ್ರೀಡೆಗಳು,  ಇಲ್ಲಿಯ ಬಗೆ ಬಗೆಯ ರೆಸಾರ್ಟ್, ಹೋಂ ಸ್ಟೇ ಗಳನ್ನು ನೋಡಲೆಂದೇ ಹಾಗೂ ವಸತಿ ಉಳಿಯಲೆಂದೇ ನಿತ್ಯ ಸಾಕಷ್ಟು ಜನ ಈ ದಾರಿಯಲ್ಲಿ ಬಂದು ಹೋಗುತ್ತಾರೆ. ಇದರ ಜೊತೆಗೆ ಈ ರಸ್ತೆ ಮೌಳಂಗಿ,  ಕೊಣಪ, ಗೌಳಿವಾಡ, ಹಳೆ ಕೊಣಪ ಸೇರಿದಂತೆ ಹಲವು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ. ಈ ನಾಲ್ಕಾರು ಗ್ರಾಮಗಳ ಜನರು ನಿತ್ಯ ಇದೇ ರಸ್ತೆಯಲ್ಲಿ ತಮ್ಮ ದೈನಂದಿನ ವ್ಯವಹಾರಕ್ಕಾಗಿ ಸೇರಿದಂತೆ ಬೇರೆಬೇರೆ ಪ್ರದೇಶಗಳಿಗೆ ಪ್ರಯಾಣಿಸಬೇಕು. ಆದರೆ ಇಂದು ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಸಾಧ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ಜೋಯಿಡಾ ತಾಲೂಕಿಗೊಳಪಟ್ಟ ಮೌಳಂಗಿ ಇಕೋ ಪಾರ್ಕಿನಿಂದ ಮೌಳಂಗಿ ಬ್ರಿಜ್ ವರೆಗೆ ಈಗಾಗಲೇ ಕಾಂಕ್ರೆಟ್ ರಸ್ತೆಯಾಗಿದೆ. ಇನ್ನು ದಾಂಡೇಲಿ ತಾಲೂಕಿಗೊಳಪಟ್ಟ ಅಂಬೇವಾಡಿ ರೈಲ್ವೆ ನಿಲ್ದಾಣದ ಕ್ರಾಸ್ ನಿಂದ ನವಗ್ರಾಮದವರೆಗೂ ಕಾಂಕ್ರೀಟ್ ರಸ್ತೆಯಾಗಿದೆ. ಈ ಎರಡು ರಸ್ತೆಗಳ ನಡುವಿನ ಸುಮಾರು 2 ಕಿ.ಮಿ ರಸ್ತೆ ಮಾತ್ರ ಅದ್ಯಾಕೋ ಕಾಂಕ್ರೀಟ ರಸ್ತೆಯೂ  ಆಗದೆ ಡಾಂಬರೀಕರಣವೂ ಆಗದೆ ಹಾಳು ಬಿದ್ದಿದೆ. ವರ್ಷಗಳಿಂದ ರಿಪೇರಿಯಾದರು ಆಗಬಹುದೆಂದು ಜನ ಕಾಯುತ್ತಿದ್ದಾರೆ. ಆದರೆ ಜನರ ನಿರೀಕ್ಷೆ ಮಾತ್ರ ಹುಸಿಯಾಗುತ್ತಿದೆ.

ಕರಾವಳಿ ಮುಂಜಾವಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ರಸ್ತೆಯ  ಕಾಂಕ್ರೀಟೀಕರಣಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಆದರೆ ಟೆಂಡರ್ ಪಡೆದ ಗುತ್ತಿಗೆದಾರ ಅದನ್ನು ಮಾಡಲು ಮುಂದಾಗುತ್ತಿಲ್ಲವಂತೆ,. ಬಹುಶಃ ಮತ್ತೆ ಹೊಸ ಪ್ರಕ್ರಿಯೆ ಆಗಬೇಕು. ಅದು ಈ ಮಳೆಗಾಲದಲ್ಲಿ ಸಾಧ್ಯವಿಲ್ಲದ ಮಾತು. ಈಗಾಗಲೇ ಸಂಪೂರ್ಣ ಹೊಂಡ ಬಿದ್ದಿರುವ ಈ ರಸ್ತೆ ಇನ್ನು ಮಳೆಗಾಲದವರೆಗೂ  ರಿಪೇರಿಯಾಗಿಲ್ಲ ಎಂದರೆ ಜನರ ಪಾಡು ಹೇಳತೀರದು. ಹಾಗಾಗಿ ಈ ರಸ್ತೆಗೆ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಅಧಿಕಾರಿಗಳು ತುರ್ತು ರಿಪೇರಿ ಕಾರ್ಯವನ್ನಾದರೂ ಮಾಡಿ ಜನರ ಪ್ರಯಾಣಕ್ಕೆ, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ.

ಈ ರಸ್ತೆ ಅದೆಷ್ಟರ ಮಟ್ಟಿಗೆ ಕೆಟ್ಟಿದೆ ಅಂದರೆ ಈ ರಸ್ತೆಯಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್  ಚಾಲಕರು ಸಹ ಬಸ್ಸುಗಳನ್ನು ತರಲು ಅನುಮಾನಿಸುತ್ತಾರೆ. ಒಮ್ಮೆ ಈ ಹೊಂಡ ಬಿದ್ದ ರಸ್ತೆಯಲ್ಲಿ ಬಸ್ ಹೋದರೆ ಪಾಟಾ ಮುರಿಯುವುದು ಖಚಿತ ಅನ್ನುತ್ತಾರೆ. ಇನ್ನು ಇದೇ ರಸ್ತೆಯಲ್ಲಿ ನಿತ್ಯ ಶಾಲಾ ಕಾಲೇಜುಗಳಿಗೆ ಸೈಕಲ್ ಮೇಲೆ ಹೋಗಿ ಬರುವ ವಿದ್ಯಾರ್ಥಿಗಳಂತೂ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಕೆಲವು ಬೈಕ್,  ಸೈಕಲ ಸವಾರ ಮರು ಇದೇ  ಈ ಹೊಂಡ ಬಿದ್ದ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ.

ಸ್ಥಳೀಯ ನಾಗರಿಕರು ಹೇಳುವ ಪ್ರಕಾರ ಸುಮಾರು 1985 ರಲ್ಲಿ  ಈ ರಸ್ತೆ ನಿರ್ಮಾಣವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ರಸ್ತೆಯನ್ನು ಪ್ಯಾಚ್ ವರ್ಕ್ ಮಾಡಲಾಗಿದೆಯೇ ಹೊರತು ಡಾಂಬರೀಕರಣವಾಗಲಿ,  ಸಿಮೆಂಟೀಕರಣವಾಗಲಿ ಆಗಲೇ ಇಲ್ಲ. ನಮ್ಮ ಈ ಭಾಗವನ್ನ ಅದ್ಯಾಕೆ ಇಲಾಖೆಯವರು ನಿರ್ಲಕ್ಷಿಸುತ್ತಾರೆ ತಮಗೆ ತಿಳಿಯದು ಎನ್ನುತ್ತಾರೆ.

ಈ ರಸ್ತೆಯಲ್ಲಿ ನಿತ್ಯವೂ ಹತ್ತಾರು ಪ್ರವಾಸಿಗರ ವಾಹನಗಳು ಸಂಚರಿಸುತ್ತವೆ. ಈ ಭಾಗದಲ್ಲಿ ಹತ್ತಾರು ಹೋಮ್ ಸ್ಟೇಗಗಳಿವೆ. ಇಕೋ ಪಾರ್ಕ್ ಇದೆ. ಇದನ್ನು ನೋಡಲಂತೆ ಬರುವ ನಾಗರಿಕರಿಗೆ ಈ ರಸ್ತೆ ನರಕಯಾತನೆಯಂತೆ ಆಗುತ್ತಿದೆ.  ಇನ್ನು ಇಲ್ಲಿ ಇಟ್ಟಂಗಿ ತಯಾರಿಸುವವರು ತಮ್ಮ ವಾಹನಗಳನ್ನ,  ಟ್ರ್ಯಾಕ್ಟರ್ ಗಳನ್ನ ಇದೇ ರಸ್ತೆಯಲ್ಲಿ  ಓಡಿಸುತ್ತಾರೆ.  ಅವರಿಗೆ ಈ ರಸ್ತೆಯ ಹೊಂಡ ಸಮಸ್ಯೆಯಾಗದು. ಟ್ರ್ಯಾಕ್ಟರ್ ಗಳು ಎಂತಹ ರಸ್ತೆಯಲ್ಲಾದರೂ ಕೂಡ ದಾಟಿಕೊಂಡು ಹೋಗುತ್ತವೆ.  ವರ್ಷವಿಡೀ ತಮ್ ಇಟ್ಟಂಗಿ ಸಾಗಾಟಕ್ಕಾಗಿ ಈ ರಸ್ತೆ ಬಳಸುವ ಮಾಲಕರುಗಳು ಮನಸ್ಸು ಮಾಡಿದರೆ ತಮ್ಮ ಹಾಳಾದ ಇಟ್ಟಂಗಿಗಳನ್ನು ತುಂಬಿ  ತಾತ್ಕಾಲಿಕ ದುರಸ್ತಿ ಪಡಿಸಬಹುದು.  ಆದರೆ ಅವರ್ಯಾಕೋ ಜಾಣ ಕುರುಡರಾಗಿದ್ದಾರೆ.

ಈ ರಸ್ತೆಯ  ಅವ್ಯವಸ್ಥೆಯಿಂದಾಗಿ  ಮೌಳಂಗಿ,  ಕೊಣಪ,  ಗೌಳಿವಾಡ,  ಹಳೆ ಕೊಣಪ ಭಾಗದ ನೂರಾರು ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದು,  ಈ ಭಾಗದ ಜನಪ್ರತಿನಿಧಿಗಳು ಹಾಗೂ ಶಾಸಕರು ಒಮ್ಮೆ ಗಮನ ಹರಿಸಬೇಕು ಎನ್ನುವುದು ಈ ಭಾಗದ ಪ್ರಮುಖರಾದ ಮಲ್ಲಪ್ಪ ತುಕಾರಾಂ ಮಾಳಗೆ, ಅರ್ಜುನ್ ಯಲ್ಲಪ್ಪ ಬೆಳವಡಿ,  ತುಕಾರಾಮ ಮಲ್ಲಪ್ಪ ಮಾಳಗೆ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

ಎರಡು ದಿನದೊಳಗೆ ಸರಿಪಡಿಸದಿದ್ದರೆ ರಸ್ತೆ ತಡೆ

ನವಗ್ರಾಮದ ಎರಡು ಕಿಲೋಮೀಟರ್ ರಸ್ತೆ ಸಂಪೂರ್ಣವಾಗಿ ಕೆಟ್ಟು ಹೋಗಿದೆ, ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ಅಪಘಾತಗಳು ಸಂಭವಿಸುತ್ತಿವೆ. ಬೈಕ್ ಸೈಕಲ ಹಾಗೂ ಸಣ್ಣ ಪುಟ್ಟ ವಾಹನಗಳು ಸಂಚರಿಸಲಾಗದ ಸ್ಥಿತಿಯಾಗಿದೆ. ಶಾಲಾ ಮಕ್ಕಳಿಗೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ನಾವು ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರಿಗೆ ಮೌಖಿಕವಾಗಿ ಹೇಳಿದರೂ ಸಹ ಸಮಸ್ಯೆ ಪರಿಹಾರವಾಗಿಲ್ಲ. ಇನ್ನೆರಡು ದಿನದಲ್ಲಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸದಿದ್ದರೆ ರಸ್ತೆ ತಡೆ ನಡೆಸಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ .

  • ಮಲ್ಲಪ್ಪ ತುಕಾರಾಮ ಮಾಳಗೆ
    ಗ್ರಾಮದ ಹಿರಿಯರು

ತುರ್ತು ಕ್ರಮ ಕೈಗೊಳ್ಳುತ್ತೇವೆ

ನವಗ್ರಾಮದ ಈ ರಸ್ತೆ ಕೆಟ್ಟು ಹೋಗಿರುವುದು ನಿಜ. ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದೇವೆ. ಈ ರಸ್ತೆ ನಿರ್ಮಾಣಕ್ಕಾಗಿ ಟೆಂಡರ್ ಕೂಡ ಆಗಿದೆ. ಕೆಲ ತಾಂತ್ರಿಕ ಸಮಸ್ಯೆ ಇದೆ.  ಸದ್ಯಕ್ಕೆ ಈ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗುವುದು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.

  • ಮೋಹಿನ್ ಖಾನ್
    ಜಿಲ್ಲಾ ಪಂಚಾಯತ್ ಅಭಿಯಂತರರು
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*