ಕನ್ನಡವನ್ನು ಹೃದಯದಿಂದ ಬಳಸಬೇಕು, ಬೆಳೆಸಬೇಕು – ಮೀನಾಕ್ಷಿ ಕನ್ಯಾಡಿ
ಕನ್ನಡ ಭಾಷೆಯಲ್ಲಿ ಸಿಗುವಷ್ಟು ಸ್ವಾದ ಬೇರೆಲ್ಲೂ ಸಿಗದು. ಈ ಭಾಷೆ ನಾಲಿಗೆಯಲ್ಲಿ ನಲಿದಾಡುವ ಜೊತೆಗೆ ಅದನ್ನು ಹೃದಯದಿಂದ ಬಳಸಬೇಕು. ಮತ್ತೆ ಬೆಳಸಬೇಕು ಎಂದು ಸಹೇಲಿ ಟ್ರಸ್ಟ್ ನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ ನುಡಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ವಿನೂತನ ಪರಿಕಲ್ಪನೆಯಲ್ಲಿ ಹಮ್ಮಿಕೊಂಡ ಸಾಹಿತ್ಯ ಜಗಲಿ ಎಂಬ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಲವು ಹೊಸ ಪ್ರಯೋಗಗಳ ಮೂಲಕ ಜನರ ಮನೆ -ಮನಗಳನ್ನು ತಲುಪುತ್ತಿದೆ. ಇದೀಗ ಸಾಹಿತ್ಯ ಜಗಲಿ ಎನ್ನುವ ಕಾರ್ಯಕ್ರಮದ ಮೂಲಕ ದಾಂಡೇಲಿಯ ಕನ್ನಡ ಸಾಹಿತ್ಯ ಪರಿಷತ್ತು ಜನರಿಗೆ ಇನ್ನೂ ಹತ್ತಿರವಾಗುತ್ತಿದೆ. ಈ ‘ಸಾಹಿತ್ಯ ಜಗಲಿ’ ದಾಂಡೇಲಿಯ ಪ್ರತಿ ಮನೆ ಮನೆಯಲ್ಲಿ ತನ್ನ ಸಾಹಿತ್ಯದ ಬೆಳಕನ್ನು ಚೆಲುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿದ್ದ ಜನತಾ ವಿದ್ಯಾಲಯದ ಅಧ್ಯಾಪಕ ಕಿಶೋರ ಕಿಂದಳ್ಕರರವರು ನನ್ನ ಮಾತ್ರ ಭಾಷೆ ಕೊಂಕಣಿಯಾದರೂ ಕೂಡ ಕನ್ನಡ ನಾನು ಅತಿಯಾಗಿ ಪ್ರೀತಿಸುವ ಮತ್ತು ಗೌರವಿಸುವ ಭಾಷೆ. ಕನ್ನಡಕ್ಕೆ ಕನ್ನಡವೇ ಸಾಟಿ ಎಂದರು.
‘ಸಾಹಿತ್ಯ ಜಗಲಿ’ ಯ ಮೊದಲ ಕಾರ್ಯಕ್ರಮ ‘ಕನ್ನಡ ಕವಿ – ಕಾವ್ಯ ಗಾನೋತ್ಸವ, ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಕಸಾಪ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕಲ್ಪನಾ ಪಾಟೀಲ್ ಮಾತನಾಡಿ ಇಂತಹದೊಂದು ಸರಣಿ ಕಾರ್ಯಕ್ರಮವನ್ನು ನಮ್ಮ ಮನೆಯ ಆವಾರದಲ್ಲಿ ನಡೆಸುವ ಅವಕಾಶ ಸಿಕ್ಕಿದ್ದು ನಮ್ಮ ಬದುಕಿನ ಭಾಗ್ಯ ಎಂದುಕೊಂಡಿದ್ದೇವೆ. ಇವತ್ತು ಪರಿಷತ್ತು ನಮ್ಮ ಮನೆಗೆ ಬರುವ ಮೂಲಕ ಕನ್ನಡದ ಸೇವೆಗೆ ಅವಕಾಶ ಸಿಕ್ಕಂತಾಗಿದೆ ಎಂದು ಸಂತಸ ಹಂಚಿಕೊಂಡರು. ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆಹೊಸೂರ ಪರಿಷತ್ತಿನ ಸಂಘಟನೆ ಮತ್ತು ಚಟುವಟಿಕೆಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿದಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಪ್ರತಿಯೊಂದು ಮನೆಗಳಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳಾಗಬೇಕೆಂಬುದೇ ಈ ‘ಸಾಹಿತ್ಯ ಜಗಲಿ’ ಸರಣಿ ಕಾರ್ಯಕ್ರಮದ ಮೂಲ ಆಶಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಪ್ರಾಸ್ತಾವಿಕ ಮಾತನಾಡುತ್ತ ‘ಸಾಹಿತ್ಯ ಜಗಲಿ ಸರಣಿ ಕಾರ್ಯಕ್ರಮದ ಮೂಲಕ ದಾಂಡೇಲಿಯ ಸಾಹಿತ್ಯಾಸಕ್ತರ ಮನೆ ಮನೆಗಳಲ್ಲಿ ಸಾಹಿತ್ಯದ ನಿತ್ಯೋತ್ಸವ ಮಾಡುವ ಪ್ರಯತ್ನ ಮಾಡಲಾಗುವುದು. ಈ ಕಾರ್ಯಕ್ರಮ ಸಂಘಟನೆಗೆ ಆಸಕ್ತರು ಸಂಪರ್ಕಿಸಬಹುದು ಎಂದರು.
ಕಾರ್ಯಕ್ರಮ ದಾಸೋಹಿ ಕಲ್ಪನಾ ಪಾಟೀಲ ಸ್ವಾಗತಿಸಿದರು. ಕಸಾಪ ಕೋಶಾಧ್ಯಕ್ಷ ಶ್ರೀಮಂತ ಮದರಿ ಸಾಹಿತ್ಯ ಜಗಲಿ ಸರಣಿ ಕಾರ್ಯಕ್ರಮಗಳ ವಿವರ ನೀಡಿದರು. ಕಾರ್ಯದರ್ಶಿ ಪ್ರವೀಣ ನಾಯ್ಕ ವಂದಿಸಿದರು. ಪದಾಧಿಕಾರಿಗಳಾದ ನರೇಶ ನಾಯ್ಕ, ಸುರೇಶ ಪಾಲನಕರ, ವೆಂಕಮ್ಮ ಗಾಂವಕರ, ಎಸ್.ಎಸ್. ಕುರ್ಡೇಕರ ಮುಂತಾದವರು ಹಾಗೂ ಕಲ್ಪನಾ ಪಾಟೀಲ ಕುಟುಂಬದವರು ಸಹಕರಿಸಿದರು.
ಕಾವ್ಯ ಗಾನೋತ್ಸವ
ಕಾವ್ಯ ಗಾನೋತ್ಸೋವದಲ್ಲಿ ಮಂಜುಳಾ ಹುಣಸಗಿ, ಪದ್ಮಶ್ರೀ ಜೈನ್, ದೀಪಾಲಿ ಸಾಮಂತ, ನಾಗೇಶ ನಾಯ್ಕ, ರಘುವೀರ ಗೌಡಾ, ಗಿರೀಶ ಶಿರೋಡ್ಕರ, ವಿಜಯ ಚೌಹಾಣ ಮೀನಾಕ್ಷಿ ಕನ್ಯಾಡಿ, ಇವರುಗಳು ಕವಿಗಳಾದ ಬಿ.ಆರ್. ಲಕ್ಷ್ಮಣರಾವವರ ಅಮ್ಮ ನಿನ್ನ ಎದೆಯಾಳದಲ್ಲಿ, ಕುವೆಂಪುರವರ ಓ ನನ್ನ ಚೇತನ, ಡಾ.ದಿನಕರ ದೇಸಾಯಿಯವರ ಸತ್ತರೂ ಬದುಕಿರಲಿ ಆತ್ಮ ವಿಶ್ವಾಸ, ದ.ರಾ.ಬೇಂದ್ರೆಯವರ ನೀ ಹಿಂಗ ನೋಡಬ್ಯಾಡ ನನ್ನ, ಮತ್ತು ಒಂದೇ ಒಂದು ಬಾರಿ ನನ್ನ ನೋಡಿ, ಜಿ.ಎಸ್ ಶಿವರುದ್ರಪ್ಪ ಅವರ ಕಾಣದ ಕಡಲಿಗೆ ಹಂಬಲಿಸಿದೆ ಮನ, ಋಷಿ ರಚನೆಯ ಒಳಿತು ಮಾಡು ಮನುಷ್ಯ ಇರೋದು ಮೂರು ದಿವಸ ಹಾಗೂ ಎಚ್.ಎಸ್. ವೆಂಕಟೇಶ ಮೂರ್ತಿಯವರ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಕವಿತೆಗಳ ಗಾಯನ ಮಾಡಿದರು.
Be the first to comment