ಅಕ್ಷರ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದ ಅಂಕೋಲೆಯ ಗಣೇಶ ಶಂಕರ ನಾಯ್ಕ

ನಾವಾಡುವ ಮಾತು ಹೀಗಿರಲಿ ಗೆಳೆಯ

ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ

ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ

ಮೂರು ಗಳಿಗೆಯ ಬಾಳು ಘಮಘಮಿಸುತ್ತಿರಲಿ...

ಕಣವಿಯವರ ಕವನದ ಸಾಲು ಅಕ್ಷರ ಲೋಕದ ಸಂಗಾತಿಯ ಬದುಕನ್ನೇ ಬದಲಾಯಿಸಿದೆ. ಮೃದು ವಚನದ ಮೂಲಕ ಇಡೀ ಶಿಕ್ಷಕ ಸಮುದಾಯದ ಮನಸ್ಸನ್ನು ಗೆದ್ದು, ಒಂದು ಮಾತು ಒಂದು ನಿರ್ದಿಷ್ಟ ಅರ್ಥವನ್ನು ಹೊರಹಾಕಿದರೆ, ಒಂದು ಮೌನವು ಹಲವು ಅರ್ಥವನ್ನು ಪ್ರತಿನಿಧಿಸುವುದರ ಮೂಲಕ ಮೂರು ಗಳಿಗೆಯ ಬಾಳನ್ನು ತಮ್ಮ ಕರ್ತವ್ಯದ ಮೂಲಕ ಹಸಿರಾಗಿಟ್ಟವರು ಅಂಕೋಲೆಯ ಗಣೇಶ ಶಂಕರ ನಾಯ್ಕರವರು.

“ಅಂಕೋಲೆಯೆಂದಿಗೂ ಸಂಕೋಲೆಯಲ್ಲ, ಸಕ್ಕರೆಗಿಂತ ಸವಿ ನಮ್ಮನೆಯ ಬೆಲ್ಲ” ದಿನಕರ ದೇಸಾಯಿ ಅವರ ಈ ಚುಟುಕಿನ ಸಾಲಿನಂತೆ ಶಿಕ್ಷಣ ಇಲಾಖೆಯ ಉನ್ನತ ಹುದ್ದೆಯನ್ನು ಅಲಂಕರಿಸಿ, ನಿವೃತ್ತರಾಗಿ ಮಾತು, ಮೌನದ ಮೂಲಕ ಎಲ್ಲರ ಮನಗೆದ್ದವರು ಶಿಕ್ಷಣ ಇಲಾಖೆಯ ಉನ್ನತ ಹುದ್ದೆ ಅಲಂಕರಿಸಿ,ನಿವೃತ್ತಿಯಾದವರು ಜಿ.ಎಸ್. ನಾಯ್ಕರವರು.

ಸುಮಾರು ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಅವಕಾಶ ಮತ್ತು ಯೋಗ್ಯತೆ ಎರಡನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣ ಇಲಾಖೆಯಲ್ಲಿ ಶಾಶ್ವತ ಹೆಜ್ಜೆ ಗುರುತು ಮೂಡಿಸಿದ ಗಣೇಶ ನಾಯ್ಕರವರು 1954 ರಲ್ಲಿ ತಂದೆ ಶಂಕರ ಗಣಪತಿ ನಾಯ್ಕ,ತಾಯಿ ಮನೋರಮಾ ನಾಯ್ಕರವರ ಮಗನಾಗಿ ಅಂಕೋಲಾದಲ್ಲಿ ಜನಿಸಿದರು.

ಜೀವನ ತಮಾಷೆಯೂ ಅಲ್ಲ, ಹಬ್ಬವೂ ಅಲ್ಲ. ಅದೊಂದು ಬಿಕ್ಕಟ್ಟು ಎಂದು ಜಾರ್ಜ್ ಸಾಂತಾಯನರವರ ಮಾತಿನಂತೆ ಬದುಕಿನಲ್ಲೇದುರಾದ ಎಲ್ಲಾ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಮಿತ ಭಾಷಿಕರಾಗಿ, ಹಿತವಾದ ಒಡನಾಟದ ಮೂಲಕ, ಇನ್ನೊಬ್ಬರ ಕಷ್ಟಕ್ಕೆ ಕರಗುವ ಮನಸ್ಸಿನ ಸಹಜ, ಸರಳವಾದ ನಡೆ-ನುಡಿ, ನಿಗವಿ೯ಯಾದ ಗಣೇಶ ನಾಯ್ಕರವರು 1978 ರಲ್ಲಿ ಪ್ರೌಢಶಾಲಾ ಮುಖ್ಯಾಧ್ಯಾಪಕರಾಗಿ ವೃತ್ತಿ ಬದಕನ್ನು ಆರಂಭಿಸಿದರು. “ಯಶಸ್ವಿ ಶಿಕ್ಷಕನೆಂದರೆ ತನಗಿಂತಲೂ ಕಿರಿಯವರಿಗೆ ನೆರವಾಗಲು ಕಾತರನಾಗಿರುವ ಹಿರಿಯ ವಿದ್ಯಾರ್ಥಿ” ಎಂಬ ಮಾತನ್ನು  ತಮ್ಮ ಬದುಕಿಗಂಟಿಸಿಕೊಂಡು ತಮ್ಮ ಇತಿಮಿತಿಯಲ್ಲಿ ಕಷ್ಟಕ್ಕೆ ನೆರವಾಗುತ್ತಾ ಓದು ಮತ್ತು ಜೀವನಾನುಭವದ ದೈತ್ಯ ಪ್ರತಿಭೆಯಾಗಿ ಶಿಕ್ಷಣ ಇಲಾಖೆಯಲ್ಲಿ ಒಂದೊಂದೇ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದವರು.

ಸರ್ವಜ್ಞನೆಂಬುವನು ಗರ್ವದಿಂದಾದವನೇ?

 ಸರ್ವರೊಳಗೊಂದೊಂದು

ನುಡಿಗಲಿತು ವಿದ್ಯದ

ಪರ್ವತವೇ ಆದ ಸರ್ವಜ್ಞ- ಎಂಬ ಸರ್ವಜ್ಞನ ವಚನದಂತೆ ಸರ್ವರೊಳಗೊಂದೊಂದು ವಿದ್ಯೆಯ ಕಲಿತು, ಮಕ್ಕಳಿಗೆ ಅದನ್ನು ಧಾರೆಎರೆಯುವುದರ ಮೂಲಕ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಅಧ್ಯಾಪಕರಾಗಿ, ಮುಖ್ಯಾಧ್ಯಾಪಕರಾಗಿ ಸಮಾಜಮುಖಿ ಚಿಂತನೆಯ ಮೂಲಕ ಜನಾನುರಾಗಿಯಾದರು.

ನಂತರ ಸಹಾಯಕ ಶಿಕ್ಷಣಾಧಿಕಾರಿಯಾಗಿ ಸಿರ್ಸಿ, ಹೊನ್ನಾವರ, ಕುಮಟಾ ತಾಲೂಕಿನ ಬಹುತೇಕ ಶಾಲೆಗಳಿಗೆ ಭೇಟಿ ನೀಡಿ ಉತ್ತಮ ಮಾರ್ಗದರ್ಶಕರೆನಿಸಿಕೊಂಡರು. “ಸಂತೋಷ ಒಂದು ಪರಿಮಳ ಇದ್ದಹಾಗೆ. ನಿಮ್ಮ ಮೇಲೂ ಒಂದಿಷ್ಟು ಚೆಲ್ಲಿಕೊಳ್ಳದೇ ಇನ್ನೊಬ್ಬರ ಮೇಲೆ ನೀವು ಚಿಮುಕಿಸಲಾರಿರಿ”. ಎಂಬ ಹಿರಿಯರ ಮಾತಿನಂತೆ ಕರ್ತವ್ಯದ ದಾರಿಯಲ್ಲಿ ಸಾಗುತ್ತಿರುವಾಗ ಹಲವರಿಗೆ ಸಂತೋಷವನ್ನುಂಟು ಮಾಡುವ  ಕಾರ್ಯವೆಸಗಿ ಹಿತವಾದ ಮಾತುಗಳನ್ನಾಡಿ, ಜಿಲ್ಲೆಯ ತುಂಬೆಲ್ಲ ಜಿ.ಎಸ್. ನಾಯ್ಕರೆಂದೇ ಪರಿಚಿತರಾದರು. ನಿಜದ ನೇರಕೆ ನಡೆವ, ಪ್ರೀತಿ ವಿಶ್ವಾಸದಿಂದ ಮಾಡಿದ ಕೆಲಸವೆಲ್ಲವೂ ಎಲ್ಲರ ಮನಸ್ಸನ್ನು ಗೆಲ್ಲುವುದರ ಮೂಲಕ ಅಧ್ಯಾಪಕ ವರ್ಗದವರಿಗೆ ಹತ್ತಿರವಾದ ಜಿ. ಎಸ್. ನಾಯ್ಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಆರ್. ಎನ್. ನಾಯ್ಕರವರ ಆಪ್ತ ಕಾರ್ಯದರ್ಶಿಯಾಗಿಯೂ, ಅಬಕಾರಿ ಸಚಿವರಾದ ಪಿ.ಎಸ್. ಜೈವಂತರವರ ಆಪ್ತ ಕಾರ್ಯದರ್ಶಿಯಾಗಿಯೂ ನೇಮಕರಾಗಿ ತಮ್ಮ ಕೆಲಸದ ಮೂಲಕ ಸಾಮಾನ್ಯ ಜನರ ಮನಸ್ಸನ್ನು ಗೆದ್ದು ಸಮಾಜಮುಖಿ ಕಾರ್ಯಕ್ರಮದಡೆಗೆ ತಮ್ಮನ್ನು ತಾವು ತೆರೆದುಕೊಂಡರು.

ಶಿಕ್ಷಣ ಇಲಾಖೆಯಲ್ಲಿ ಇವರು ಮುಟ್ಟದ ಕ್ಷೇತ್ರವಿಲ್ಲ. ಪ್ರೌಢಶಾಲಾ ಮುಖ್ಯಾಧ್ಯಾಪಕರಾಗಿ ವೃತ್ತಿ ಬದುಕನ್ನು ಆರಂಭಿಸಿ ಸಹಾಯಕ ಶಿಕ್ಷಣಾಧಿಕಾರಿಯಾಗಿ, ಮಂಗಳೂರು ಮತ್ತು ಕುಮಟಾ ಡಯಟಿನಲ್ಲಿ ಹಿರಿಯ ಉಪನ್ಯಾಸಕರಾಗಿ, ಕುಮಟಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಇವರದ್ದಾಗಿದೆ,ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿಯಾಗಿ, ಸರ್ವ ಶಿಕ್ಷಣ ಅಭಿಯಾನ ಯೋಜನಾ ಉಪಸಮನ್ವಯಾಧಿಕಾರಿಯಾಗಿಯೂ, ಉತ್ತರ ಕನ್ನಡ ಜಿಲ್ಲೆಯ ಉಪನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ ಜಿಲ್ಲೆಯ ಪ್ರತಿಯೊಬ್ಬ ಗುರು-ಗುರುಮಾತೆಯ ನಾಡಿಮಿಡಿತ  ಅರಿತ ಅಪರೂಪದ ಅಧಿಕಾರಿಯಾಗಿ ಜಿಲ್ಲೆಯ ತುಂಬೆಲ್ಲ ಜನಪ್ರಿಯತೆ ಗಳಿಸಿದರು.

“ಕುರ್ಚಿಯ ಮೇಲೆ ಕುಳಿತುಕೊಳ್ಳುವುದು

ಆಳುವುದಕಲ್ಲ, ಸೇವೆ ಮಾಡುವುದಕ್ಕೆ

ಅಧಿಕಾರದ ದರ್ಪ ತೋರಿಸುವುದಕಲ್ಲ

ಕರ್ತವ್ಯ ಪರಿಪಾಲನೆಗೆ”- ಎಂಬ ಪಾಟೀಲರ ಅನುಭವದ ನುಡಿಯಂತೆ ಶಿಕ್ಷಣ ಇಲಾಖೆಯಲ್ಲಿ ಒಂದೊಂದೇ ಹುದ್ದೆಯೆರುತ್ತಾ ಆ ಖುರ್ಚಿಯ ಘನತೆ ಗೌರವ ಹೆಚ್ಚಿಸಿದ ಸಜ್ಜನರು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಪಾಲಕರಲ್ಲಿ ಸದಾ ಜಾಗೃತಿ ಮೂಡಿಸುತ್ತಾ ನಿರಂತರ ಶ್ರಮವಹಿಸಿದ ಶ್ರೀಯುತರು 1985 ರಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇವರದ್ದಾಗಿದೆ. ಕುರ್ಚಿ ಒಂದೇ ಆದರೂ, ಅದನ್ನು ಅಲಂಕರಿಸುವವರು ಮಹತ್ತರ ಬದಲಾವಣೆಗಳನ್ನು ತರಬಲ್ಲರು ಎಂಬಂತೆ ತನ್ನನರಿಯಲು ತನ್ನ ತಿಳಿಯಲು ಹಲವು ಹುದ್ದೆಗಳನ್ನು ಅಲಂಕರಿಸಿದರೂ ಸಹ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ವೃತ್ತಿ ಬದುಕನ್ನು ಪ್ರೀತಿಸಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದರು.

2003 ರಲ್ಲಿ ರಾಜ್ಯದ ಅತ್ಯುತ್ತಮ ಉಪನಿರ್ದೇಶಕ ಪ್ರಶಸ್ತಿ ಪುರಸ್ಕೃತರಾಗಿ ನಾಡಿನ ತುಂಬೆಲ್ಲ ತನ್ನ ಕಾರ್ಯ ಚಟುವಟಿಕೆಯ ಮೂಲಕ ಶಿಕ್ಷಣ ಇಲಾಖೆಯಲ್ಲಿ ಗುರುತರ ಜವಾಬ್ದಾರಿಯನ್ನು ನಿರ್ವಹಿಸಿದವರು. ಆತ್ಮವಿಶ್ವಾಸ, ಪ್ರಯತ್ನಶೀಲತೆಗಳಿಂದ ಅಸಾಧ್ಯವನ್ನು ಸಾಧ್ಯವನ್ನಾಗಿಸಿ, ಸ್ವ ಪ್ರಯತ್ನದಿಂದ ಸರ್ವತೋಮುಖ ಏಳಿಗೆ ಸಾಧಿಸಿ ಸರ್ವ ಶಿಕ್ಷಣ ಅಭಿಯಾನ ಬೆಂಗಳೂರು ಇಲ್ಲಿಯ ಸಹ ನಿರ್ದೇಶಕರಾಗಿಯೂ, ಧಾರವಾಡದ ಆಫರ್ ಆಯುಕ್ತರ ಕಚೇರಿಯ ಸಹ ನಿರ್ದೇಶಕರಾಗಿಯೂ, ನಂತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ ಅಪಾರ ಅನುಭವದ ಗಣಿಯಾಗಿ, ಶಿಕ್ಷಣ ಇಲಾಖೆಯ ದೈತ್ಯ ಶಕ್ತಿಯಾಗಿ 2014ರಲ್ಲಿ ನಿವೃತ್ತಿಯಾಗಿರುತ್ತಾರೆ.

ನೋಡುವ ಕಣ್ಣುಗಳು, ಮಿಡಿಯುವ ಹೃದಯ

ಕೆಲಸ ಮಾಡುವ ಕೈಗಳು ಸಕಾರಾತ್ಮಕವಾಗಿದ್ದರೆ

ಭೂಮಿಯ ಮೇಲೆ ಸ್ವರ್ಗವನ್ನು ಕಾಣಬಹುದು- ಎಂಬ ಅನುಭವದ ಮಾತಿನಂತೆ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ತನ್ನ ಪ್ರಾಮಾಣಿಕ ಸೇವೆಯ ಮೂಲಕ ವೃತ್ತಿ ಬದುಕಿನಲ್ಲೆ ಸ್ವರ್ಗವನ್ನು ಕಂಡ ಜಿ.ಎಸ್. ನಾಯ್ಕರು ಶಿಸ್ತಿಗೆ ಹೆಸರಾದವರು. ಶಿಸ್ತು ಇಲ್ಲದ ಜೀವನ ಮನುಷ್ಯನ ಸೃಜನಶೀಲತೆಯನ್ನು ನಾಶ ಮಾಡುತ್ತದೆ ಎಂದು ಬಲವಾಗಿ ನಂಬಿದವರು. ಪತ್ನಿ ನಯನಾ ನಾಯ್ಕರವರು ಪ್ರೌಢಶಾಲಾ ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಮಗಳು ಅನುಷಾ ಎಂಟೆಕ್ ಪದವಿ ಪಡೆದು ಎಂಜಿನೀಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸುವುದರ ಮೂಲಕ ಇಡೀ ಶಿಕ್ಷಕ ಸಮುದಾಯದ ಪ್ರೀತಿಗೆ ಪಾತ್ರರಾದ ಜಿ.ಎಸ್.ನಾಯ್ಕ ರವರು ನೂರ್ಕಾಲ ಬದುಕಿ ಬಾಳಲೆಂದು ಸಮಸ್ತ ನಾಗರಿಕರ ಪರವಾಗಿ ಹಾರೈಸುತ್ತೇನೆ.

ಪಿ. ಆರ್. ನಾಯ್ಕ, ಹೊಳೆಗದ್ದೆ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*